ಭಾಗ VI ರಾಜ್ಯಗಳು: ರಾಜ್ಯಪಾಲ, ಮಂತ್ರಿಮಂಡಲ ಮತ್ತು ಆಡಳಿತ ಕಾರ್ಯಪದ್ಧತಿಗಳು ” . Powerful Insights into State Executive: Governor, Council of Ministers & Advocate General Explained . Articles 152–167 .

ಭಾಗ Ⅴ – ರಾಜ್ಯಗಳು . THE STATES

ಅಧ್ಯಾಯ Ⅰ- ಸಾಮಾನ್ಯ .

CHAPTER Ⅰ – GENEREL .

152 . ಪರಿಭಾಷೆ.-

ಈ ಭಾಗದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು “ರಾಜ್ಯ” ಎಂಬ ಪದವು [ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಒಳಗೊಳ್ಳುವುದಿಲ್ಲ.]

ಅಧ್ಯಾಯ Ⅱ – ಕಾರ್ಯಾಂಗ . CHAPTER Ⅱ – THE EXECUTIVE

ರಾಜ್ಯಪಾಲ The State Governor

153 . ರಾಜ್ಯಗಳ ರಾಜ್ಯಪಾಲರು.

ಪ್ರತಿಯೊಂದು ರಾಜ್ಯಕ್ಕೂ ಒಬ್ಬ ರಾಜ್ಯಪಾಲನಿರತಕ್ಕದ್ದು: ಈ ಅನುಚ್ಛೇದದಲ್ಲಿ ಇರುವುದು ಯಾವುದೂ, ಒಬ್ಬನೇ ವ್ಯಕ್ತಿಯನ್ನು ಎರಡು ಅಥವಾ ಹೆಚ್ಚು ರಾಜ್ಯಗಳಿಗೆ ರಾಜ್ಯಪಾಲನನ್ನಾಗಿ ನೇಮಿಸುವುದನ್ನು ಪ್ರತಿಬಂಧಿಸತಕ್ಕದ್ದಲ್ಲ.]

154 . ರಾಜ್ಯದ ಕಾರ್ಯಾಂಗ ಅಧಿಕಾರ.-

1 . ರಾಜ್ಯದ ಕಾರ್ಯಾಂಗ ಅಧಿಕಾರವು ರಾಜ್ಯಪಾಲನಲ್ಲಿ ನಿಹಿತವಾಗಿರತಕ್ಕದ್ದು ಮತ್ತು ಅವನು ಅದನ್ನು ನೇರವಾಗಿ ಅಥವಾ ತನಗೆ ಅಧೀನರಾದ ಅಧಿಕಾರಿಗಳ ಮೂಲಕ ಈ ಸಂವಿಧಾನಕ್ಕನುಸಾರವಾಗಿ ಚಲಾಯಿಸತಕ್ಕದ್ದು.

2 . ಈ ಅನುಚ್ಛೇದದಲ್ಲಿ ಇರುವುದು ಯಾವುದೂ.-

(a) ಅಸ್ತಿತ್ವದಲ್ಲಿರುವ ಯಾವುದೇ ಕಾನೂನಿನ ಮೂಲಕ ಇತರ ಯಾವುದೇ ಪ್ರಾಧಿಕಾರಕ್ಕೆ ಪ್ರದಾನ ಮಾಡಿರುವ ಯಾವುದೇ ಪ್ರಕಾರ್ಯಗಳನ್ನು ರಾಜ್ಯಪಾಲನಿಗೆ ವರ್ಗಾಯಿಸುತ್ತದೆಂದು ಭಾವಿಸತಕ್ಕದ್ದಲ್ಲ; ಅಥವಾ

(b) ರಾಜ್ಯಪಾಲನಿಗೆ ಅಧೀನವಾಗಿರುವ ಯಾವುದೇ ಪ್ರಾಧಿಕಾರಕ್ಕೆ ಸಂಸತ್ತು ಅಥವಾ ರಾಜ್ಯದ ವಿಧಾನಮಂಡಲವು ಕಾನೂನಿನ ಮೂಲಕ ಪ್ರಕಾರ್ಯಗಳನ್ನು ಪ್ರದಾನ ಮಾಡುವುದನ್ನು ಪ್ರತಿಬಂಧಿಸತಕ್ಕದ್ದಲ್ಲ.

155 . ರಾಜ್ಯಪಾಲನ ನೇಮಕ-

ರಾಷ್ಟ್ರಪತಿಯು ಒಂದು ರಾಜ್ಯದ ರಾಜ್ಯಪಾಲನನ್ನು ತಾನು ಸಹಿ ಮಾಡಿ ಮೊಹರು ಹಾಕಿದ ವಾರಂಟಿನ ಮೂಲಕ ನೇಮಕ ಮಾಡತಕ್ಕದ್ದು.

156 . ರಾಜ್ಯಪಾಲನ ಪದಾವಧಿ.-

1 . ರಾಜ್ಯಪಾಲನು ರಾಷ್ಟ್ರಪತಿಯ ಇಷ್ಟಪರ್ಯಂತ ಪದದಲ್ಲಿರತಕ್ಕದ್ದು.

2 . ರಾಜ್ಯಪಾಲನು ತಾನು ಸಹಿ ಮಾಡಿದ ಪತ್ರವನ್ನು ರಾಷ್ಟ್ರಪತಿಗೆ ಬರೆದು ತನ್ನ ಪದಕ್ಕೆ ರಾಜೀನಾಮೆ ಕೊಡಬಹುದು.

3 . ಈ ಅನುಚ್ಛೇದದಲ್ಲಿ ಹಿಂದೆ ಹೇಳಿದ ಉಪಬಂಧಗಳಿಗೊಳಪಟ್ಟು, ರಾಜ್ಯಪಾಲನು, ತನ್ನ ಪದವನ್ನು ವಹಿಸಿಕೊಂಡ ದಿನಾಂಕದಿಂದ ಐದು ವರ್ಷಗಳ ಅವಧಿಯವರೆಗೆ ಪದದಲ್ಲಿರತಕ್ಕದ್ದು: ರಾಜ್ಯಪಾಲನು ತನ್ನ ಅವಧಿಯು ಮುಕ್ತಾಯವಾದಾಗ್ಯೂ, ತನ್ನ ಉತ್ತರಾಧಿಕಾರಿಯು ಪದವನ್ನು ವಹಿಸಿಕೊಳ್ಳುವವರೆಗೆ ಆ ಪದದಲ್ಲಿ ಮುಂದುವರಿಯತಕ್ಕದ್ದು.

157 . ರಾಜ್ಯಪಾಲನಾಗಿ ನೇಮಕಗೊಳ್ಳಲು ಅರ್ಹತೆಗಳು.

ಯಾರೇ ವ್ಯಕ್ತಿಯು ಭಾರತದ ನಾಗರಿಕನಾಗಿರುವ ಹೊರತು ಮತ್ತು ಅವನಿಗೆ ಮೂವತ್ತೈದು ವರ್ಷ ವಯಸ್ಸು ಪೂರ್ತಿಯಾಗಿರುವ ಹೊರತು ರಾಜ್ಯಪಾಲನಾಗಿ ನೇಮಕಗೊಳ್ಳಲು ಅರ್ಹನಾಗಿರತಕ್ಕದ್ದಲ್ಲ.

158 . ರಾಜ್ಯಪಾಲನ ಪದದ ಷರತ್ತುಗಳು.

1 . ರಾಜ್ಯಪಾಲನು ಸಂಸತ್ತಿನ ಯಾವುದೇ ಒಂದು ಸದನದ ಅಥವಾ ಮೊದಲನೆಯ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವ ಯಾವುದೇ ರಾಜ್ಯದ ವಿಧಾನಮಂಡಲದ ಯಾವುದೇ ಒಂದು ಸದನದ ಸದಸ್ಯನೊಬ್ಬನು ರಾಜ್ಯಪಾಲನಾಗಿ ನೇಮಕಗೊಂಡರೆ, ಅವನು ರಾಜ್ಯಪಾಲನಾಗಿ ಪದವನ್ನು ವಹಿಸಿಕೊಂಡ ದಿನಾಂಕದಂದು ಆ ಸದನದಲ್ಲಿನ ತನ್ನ ಸ್ಥಾನವನ್ನು ಖಾಲಿ ಮಾಡಿರುವುದಾಗಿ ಭಾವಿಸತಕ್ಕದ್ದು.

2 . ರಾಜ್ಯಪಾಲನು ಇತರ ಯಾವುದೇ ಲಾಭದಾಯಕ ಪದವನ್ನು ಧಾರಣ ಮಾಡತಕ್ಕದ್ದಲ್ಲ.

3 . ರಾಜ್ಯಪಾಲನು ಬಾಡಿಗೆಯನ್ನು ಸಂದಾಯ ಮಾಡದೆ ತನ್ನ ಅಧಿಕೃತ ನಿವಾಸಗಳನ್ನು ಬಳಸುವುದಕ್ಕೆ ಹಕ್ಕುಳ್ಳವನಾಗಿರತಕ್ಕದ್ದು ಮತ್ತು ಸಂಸತ್ತು ಕಾನೂನಿನ ಮೂಲಕ ನಿರ್ಧರಿಸಬಹುದಾದಂಥ ಉಪಲಬ್ಬಿಗಳಿಗೆ, ಭತ್ಯೆಗಳಿಗೆ ಮತ್ತು ವಿಶೇಷಾಧಿಕಾರಗಳಿಗೆ ಸಹ ಹಕ್ಕುಳ್ಳವನಾಗಿರತಕ್ಕದ್ದು ಮತ್ತು ಆ ಬಗ್ಗೆ ಹಾಗೆ ಉಪಬಂಧಿಸುವವರೆಗೆ ಎರಡನೆಯ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವಂಥ ಉಪಲಬ್ಬಿಗಳಿಗೆ, ಭತ್ಯೆಗಳಿಗೆ ಮತ್ತು ವಿಶೇಷಾಧಿಕಾರಗಳಿಗೆ ಹಕ್ಕುಳ್ಳವನಾಗಿರತಕ್ಕದ್ದು.

[(3a) ಒಬ್ಬನೇ ವ್ಯಕ್ತಿಯನ್ನು ಎರಡು ಅಥವಾ ಹೆಚ್ಚು ರಾಜ್ಯಗಳಿಗೆ ರಾಜ್ಯಪಾಲನಾಗಿ ನೇಮಕ ಮಾಡಿರುವಲ್ಲಿ, ಆ ರಾಜ್ಯಪಾಲನಿಗೆ ಸಂದಾಯ ಮಾಡಬೇಕಾದ ಉಪಲಬ್ಬಿಗಳನ್ನು ಮತ್ತು ಭತ್ಯೆಗಳನ್ನು ರಾಷ್ಟ್ರಪತಿಯು ಆದೇಶದ ಮೂಲಕ, ನಿರ್ಧರಿಸಬಹುದಾದಂಥ ಪ್ರಮಾಣದಲ್ಲಿ ಆ ರಾಜ್ಯಗಳೊಳಗೆ ಹಂಚಿಕೆ ಮಾಡತಕ್ಕದ್ದು.]

4 . ರಾಜ್ಯಪಾಲನ ಪದಾವಧಿಯಲ್ಲಿ ಅವನ ಉಪಲಬ್ಬಿಗಳನ್ನು ಮತ್ತು ಭತ್ಯೆಗಳನ್ನು ಕಡಿಮೆ ಮಾಡತಕ್ಕದ್ದಲ್ಲ.

159 . ರಾಜ್ಯಪಾಲನಿಂದ ಪ್ರಮಾಣ ವಚನ ಅಥವಾ ಪ್ರತಿಜ್ಞಾ ವಚನ .

ಪ್ರತಿಯೊಬ್ಬ ರಾಜ್ಯಪಾಲನು ಮತ್ತು ರಾಜ್ಯಪಾಲನಾಗಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ಪದವನ್ನು ವಹಿಸಿಕೊಳ್ಳುವುದಕ್ಕೆ ಮುಂಚೆ ಆ ರಾಜ್ಯದ ಸಂಬಂಧದಲ್ಲಿ ಅಧಿಕಾರವ್ಯಾಪ್ತಿಯುಳ್ಳ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯ ಅಥವಾ ಅವನ ಗೈರುಹಾಜರಿಯಲ್ಲಿ ಆ ನ್ಯಾಯಾಲಯದ ನ್ಯಾಯಾಧೀಶರ ಪೈಕಿ ಲಭ್ಯವಿರುವ ಜೇಷ್ಠ ನ್ಯಾಯಾಧೀಶನ ಸಮಕ್ಷಮದಲ್ಲಿ ಈ ಕೆಳಕಂಡ ನಮೂನೆಯಲ್ಲಿ ಪ್ರಮಾಣ ಅಥವಾ ಪ್ರತಿಜ್ಞೆ ಮಾಡತಕ್ಕದ್ದು ಮತ್ತು ಅದಕ್ಕೆ ತನ್ನ ರುಜು ಹಾಕತಕ್ಕದ್ದು;

ಎಂದರೆ:-

“….. ಎಂಬ ಹೆಸರಿನ ನಾನು ನಿಷ್ಠಾಪೂರ್ವಕವಾಗಿ (ರಾಜ್ಯದ ಹೆಸರು) ರಾಜ್ಯಪಾಲನ ಪದದ ಕಾರ್ಯಪಾಲನೆಯನ್ನು (ಅಥವಾ ರಾಜ್ಯಪಾಲನ ಪ್ರಕಾರ್ಯಗಳ ನಿರ್ವಹಣೆಯನ್ನು) ಮಾಡುತ್ತೇನೆಂದೂ ಮತ್ತು ನನಗೆ ಸಾಮರ್ಥ್ಯವಿದ್ದಷ್ಟೂ ಭಾರತ ಸಂವಿಧಾನದ ಮತ್ತು ಕಾನೂನಿನ ಪರಿರಕ್ಷಣೆ, ಸಂರಕ್ಷಣೆ ಮತ್ತು ಪ್ರತಿರಕ್ಷಣೆ ಮಾಡುತ್ತೇನೆಂದೂ……ರಾಜ್ಯದ ಹೆಸರು) ರಾಜ್ಯದ ಜನತೆಯ ಸೇವೆಯಲ್ಲಿ ಮತ್ತು ಯೋಗಕ್ಷೇಮ ಸಾಧನೆಯಲ್ಲಿ ನಿರತನಾಗಿರುತ್ತೇನೆಂದೂ, ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ

ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡುತ್ತೇನೆ”.

160 . ಕೆಲವು ಆಕಸ್ಮಿಕ ಸಂದರ್ಭಗಳಲ್ಲಿ ರಾಜ್ಯಪಾಲನ ಪ್ರಕಾರ್ಯಗಳ ನಿರ್ವಹಣೆ.-

ಈ ಅಧ್ಯಾಯದಲ್ಲಿ ಉಪಬಂಧಿಸಿರದ ಯಾವುದೇ ಆಕಸ್ಮಿಕ ಸಂದರ್ಭದಲ್ಲಿ ರಾಜ್ಯದ ರಾಜ್ಯಪಾಲನ ಪ್ರಕಾರ್ಯಗಳ ನಿರ್ವಹಣೆಗಾಗಿ ರಾಷ್ಟ್ರಪತಿಯು ತಾನು ಸೂಕ್ತವೆಂದು ಭಾವಿಸುವಂಥ ಉಪಬಂಧವನ್ನು ಮಾಡಬಹುದು.

161 . ಕೆಲವು ಪ್ರಕರಣಗಳಲ್ಲಿ ಕ್ಷಮಾದಾನ, ಮುಂತಾದವುಗಳನ್ನು ಮಾಡಲು, ಶಿಕ್ಷೆಯನ್ನು ಅಮಾನತ್ತಿನಲ್ಲಿಡಲು,ಮಾಫಿ ಮಾಡಲು ಅಥವಾ ಕಡಿಮೆ ಮಾಡಲು ರಾಜ್ಯಪಾಲನ ಅಧಿಕಾರ.-

ರಾಜ್ಯದ ಕಾರ್ಯಾಂಗ ಅಧಿಕಾರವು ವ್ಯಾಪ್ತವಾಗುವ ಯಾವುದೇ ವಿಷಯಕ್ಕೆ ಸಂಬಂಧಿಸಿದ ಯಾವುದೇ ಕಾನೂನಿಗೆ ಸಂಬಂಧಿಸಿದಂತೆ ಯಾವುದೇ ಅಪರಾಧದ ಅಪರಾಧಿಯೆಂದು ನಿರ್ಣಿತನಾದ ಯಾರೇ ವ್ಯಕ್ತಿಗೆ ವಿಧಿಸಿರುವ ದಂಡನೆಯ ಬಗ್ಗೆ ಕ್ಷಮಾದಾನವನ್ನು, ಪ್ರವಿಲಂಬನವನ್ನು, ಮುಂದೂಡಿಕೆ ಅಥವಾ ಮಾಫಿಯನ್ನು ಮಾಡಲು ಅಥವಾ ಶಿಕ್ಷೆಯನ್ನು ಅಮಾನತ್ತಿನಲ್ಲಿಡಲು, ಮಾಫಿ ಮಾಡಲು ಅಥವಾ ಪರಿವರ್ತನೆ ಮಾಡಲು ರಾಜ್ಯದ ರಾಜ್ಯಪಾಲನಿಗೆ ಅಧಿಕಾರವಿರತಕ್ಕದ್ದು

162 . ರಾಜ್ಯದ ಕಾರ್ಯಾಂಗ ಅಧಿಕಾರವ್ಯಾಪ್ತಿ.-

ಈ ಸಂವಿಧಾನದ ಉಪಬಂಧಗಳಿಗೊಳಪಟ್ಟು, ರಾಜ್ಯದ ಕಾರ್ಯಾಂಗ ಅಧಿಕಾರವು, ಯಾವ ವಿಷಯಗಳ ಬಗ್ಗೆ ಆ ರಾಜ್ಯದ ವಿಧಾನಮಂಡಲವು ಕಾನೂನುಗಳನ್ನು ಮಾಡಲು ಅಧಿಕಾರವನ್ನು ಹೊಂದಿದೆಯೋ ಆ ವಿಷಯಗಳಿಗೆ ವ್ಯಾಪ್ತವಾಗತಕ್ಕದ್ದು:

ರಾಜ್ಯದ ವಿಧಾನಮಂಡಲ ಮತ್ತು ಸಂಸತ್ತು ಯಾವ ವಿಷಯದ ಬಗ್ಗೆ ಕಾನೂನುಗಳನ್ನು ಮಾಡಲು ಅಧಿಕಾರವನ್ನು ಹೊಂದಿವೆಯೋ, ಆ ಯಾವುದೇ ವಿಷಯದ ಬಗ್ಗೆ ಆ ರಾಜ್ಯದ ಕಾರ್ಯಾಂಗ ಅಧಿಕಾರವು, ಈ ಸಂವಿಧಾನದ ಮೂಲಕ ಅಥವಾ ಸಂಸತ್ತು ಮಾಡಿದ ಯಾವುದೇ ಕಾನೂನಿನ ಮೂಲಕ ಒಕ್ಕೂಟಕ್ಕೆ ಅಥವಾ ಅದರ ಪ್ರಾಧಿಕಾರಗಳಿಗೆ ವ್ಯಕ್ತವಾಗಿ ಪ್ರದಾನ ಮಾಡಲಾಗಿರುವ ಕಾರ್ಯಾಂಗ ಅಧಿಕಾರಕ್ಕೆ ಒಳಪಟ್ಟಿರತಕ್ಕದ್ದು ಮತ್ತು ಅಷ್ಟಕ್ಕೇ ಸೀಮಿತವಾಗಿರತಕ್ಕದ್ದು.

ಭಾಗ VI ರಾಜ್ಯಗಳು: ರಾಜ್ಯಪಾಲ, ಮಂತ್ರಿಮಂಡಲ ಮತ್ತು ಆಡಳಿತ ಕಾರ್ಯಪದ್ಧತಿಗಳು ” . Powerful Insights into State Executive: Governor, Council of Ministers & Advocate General
ಭಾಗ VI ರಾಜ್ಯಗಳು: ರಾಜ್ಯಪಾಲ, ಮಂತ್ರಿಮಂಡಲ ಮತ್ತು ಆಡಳಿತ ಕಾರ್ಯಪದ್ಧತಿಗಳು ” . Powerful Insights into State Executive: Governor, Council of Ministers & Advocate General . Articles 152–167

ರಾಜ್ಯ ಮಂತ್ರಿಮಂಡಲ State council of minister

163 . ರಾಜ್ಯಪಾಲನಿಗೆ ನೆರವು ಮತ್ತು ಸಲಹೆ ನೀಡಲು ಮಂತ್ರಿಮಂಡಲ.-

1 . ಈ ಸಂವಿಧಾನದ ಮೂಲಕ ಅಥವಾ ಅದರ ಮೇರೆಗೆ ರಾಜ್ಯಪಾಲನು, ತನ್ನ ಎಲ್ಲ ಪ್ರಕಾರ್ಯಗಳನ್ನು ಅಥವಾ ಅವುಗಳಲ್ಲಿ ಯಾವುದೇ ಪ್ರಕಾರ್ಯವನ್ನು ತನ್ನ ವಿವೇಚನಾನುಸಾರ ಚಲಾಯಿಸಲು ಅವನನ್ನು ಅಗತ್ಯಪಡಿಸಿರುವಷ್ಟರ ಮಟ್ಟಿಗೆ ಹೊರತು. ತನ್ನ ಪ್ರಕಾರ್ಯಗಳನ್ನು ನಿರ್ವಹಿಸುವಲ್ಲಿ ಅವನಿಗೆ ನೆರವು ಮತ್ತು ಸಲಹೆಯನ್ನು ನೀಡಲು ಮುಖ್ಯಮಂತ್ರಿಯ ನೇತೃತ್ವದಲ್ಲಿ ಒಂದು ಮಂತ್ರಿಮಂಡಲ ಇರತಕ್ಕದ್ದು.

2 . ಯಾವುದೇ ವಿಷಯವು ಈ ಸಂವಿಧಾನದ ಮೂಲಕ ಅಥವಾ ಅದರ ಮೇರೆಗೆ ರಾಜ್ಯಪಾಲನು ತನ್ನ ವಿವೇಚನಾನುಸಾರ ಕಾರ್ಯನಿರ್ವಹಿಸಬೇಕೆಂದು ಅವನನ್ನು ಅಗತ್ಯಪಡಿಸಿರುವ ವಿಷಯವೆ ಅಥವಾ ಅಲ್ಲವೆ ಎಂಬ ಯಾವುದೇ ಪ್ರಶ್ನೆಯು ಉದ್ಭವಿಸಿದರೆ, ರಾಜ್ಯಪಾಲನು ತನ್ನ ವಿವೇಚನಾನುಸಾರ ಕೈಗೊಂಡ ತೀರ್ಮಾನವೇ ಅಂತಿಮವಾದುದಾಗಿರತಕ್ಕದ್ದು ಮತ್ತು ರಾಜ್ಯಪಾಲನು ಕೈಗೊಂಡ ಯಾವುದೇ ಕಾರ್ಯದ ಸಿಂಧುತ್ವವನ್ನು ಅವನು ತನ್ನ ವಿವೇಚನಾನುಸಾರವಾಗಿ ಕಾರ್ಯನಿರ್ವಹಿಸಬೇಕಾಗಿತ್ತು ಅಥವಾ ಕಾರ್ಯನಿರ್ವಹಿಸಬಾರದಾಗಿತ್ತು ಎಂಬ ಕಾರಣದ ಮೇಲೆ ಪ್ರಶ್ನಿಸತಕ್ಕದ್ದಲ್ಲ.

3 . ಮಂತ್ರಿಗಳು ರಾಜ್ಯಪಾಲನಿಗೆ ಯಾವುದೇ ಸಲಹೆಯನ್ನು ನೀಡಿದ್ದರೇ ಮತ್ತು ಹಾಗೆ ನೀಡಿದ್ದರೆ ಯಾವ ಸಲಹೆಯನ್ನು ನೀಡಿದ್ದರು ಎಂಬ ಪ್ರಶ್ನೆಯನ್ನು ಕುರಿತು ಯಾವುದೇ ನ್ಯಾಯಾಲಯವು ವಿಚಾರಣೆ ಮಾಡತಕ್ಕದ್ದಲ್ಲ.

164 . ಮಂತ್ರಿಗಳಿಗೆ ಸಂಬಂಧಿಸಿದ ಇತರ ಉಪಬಂಧಗಳು.-

1 . ರಾಜ್ಯಪಾಲನು ಮುಖ್ಯಮಂತ್ರಿಯನ್ನು ನೇಮಕ ಮಾಡತಕ್ಕದ್ದು ಮತ್ತು ಮುಖ್ಯಮಂತ್ರಿಯ ಸಲಹೆಗನುಸಾರ ಇತರ ಮಂತ್ರಿಗಳನ್ನು ರಾಜ್ಯಪಾಲನು ನೇಮಕ ಮಾಡತಕ್ಕದ್ದು ಮತ್ತು ಮಂತ್ರಿಗಳು ರಾಜ್ಯಪಾಲನ ಇಷ್ಟಪರ್ಯಂತ ಪದಧಾರಣ ಮಾಡತಕ್ಕದ್ದು: [ಛತ್ತಿಸ್‌ಘಡ, ಝಾರ್ಖಂಡ,] ಮಧ್ಯಪ್ರದೇಶ ಮತ್ತು [ಒಡಿಶಾ] ರಾಜ್ಯಗಳಲ್ಲಿ ಬುಡಕಟ್ಟು ಜನಾಂಗಗಳ ಕಲ್ಯಾಣಕ್ಕೆ ಸಂಬಂಧಪಟ್ಟಂತೆ ಒಬ್ಬ ಮಂತ್ರಿಯಿರತಕ್ಕದ್ದು ಮತ್ತು ಅವನು ಅದರ ಜೊತೆಗೆ ಅನುಸೂಚಿತ ಜಾತಿಗಳ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಅಥವಾ ಇತರ ಯಾವುದೇ ಕಾರ್ಯವನ್ನು ನೋಡಿಕೊಳ್ಳಬಹುದು.

[(1a) ಒಂದು ರಾಜ್ಯದ ಮಂತ್ರಿಮಂಡಲದಲ್ಲಿ, ಮುಖ್ಯಮಂತ್ರಿಯೂ ಸೇರಿದಂತೆ ಮಂತ್ರಿಗಳ ಒಟ್ಟು ಸಂಖ್ಯೆಯು ಆ ರಾಜ್ಯದ ವಿಧಾನಸಭೆಯ ಸದಸ್ಯರುಗಳ ಒಟ್ಟು ಸಂಖ್ಯೆಯ ಶೇಕಡ ಹದಿನೈದನ್ನು ಮೀರತಕ್ಕದ್ದಲ್ಲ: ಒಂದು ರಾಜ್ಯದಲ್ಲಿ ಮುಖ್ಯಮಂತ್ರಿಯೂ ಸೇರಿದಂತೆ ಮಂತ್ರಿಗಳ ಸಂಖ್ಯೆಯು ಹನ್ನೆರಡಕ್ಕಿಂತ ಕಡಿಮೆಯಿರತಕ್ಕದ್ದಲ್ಲ:

ಮತ್ತು ಸಂವಿಧಾನ (ತೊಂಬತ್ತೊಂದನೇ ತಿದ್ದುಪಡಿ) ಅಧಿನಿಯಮ, 2003ರ ಪ್ರಾರಂಭದಲ್ಲಿ ಯಾವುದೇ ರಾಜ್ಯದ ಮಂತ್ರಿ ಮಂಡಲದಲ್ಲಿ ಮುಖ್ಯಮಂತ್ರಿಯೂ ಸೇರಿದಂತೆ ಮಂತ್ರಿಗಳ ಒಟ್ಟು ಸಂಖ್ಯೆಯನ್ನು ಸಂದರ್ಭಾನುಸಾರ ಸದರಿ ಶೇಕಡ ಹದಿನೈದನ್ನು ಅಥವಾ ಮೊದಲನೇ ಪರಂತುಕದಲ್ಲಿ ನಿರ್ದಿಷ್ಟಪಡಿಸಿದ ಸಂಖ್ಯೆಯನ್ನು ಮೀರಿದ್ದರೆ, ಆಗ, ಆ ರಾಜ್ಯದಲ್ಲಿ ಮಂತ್ರಿಗಳ ಒಟ್ಟು ಸಂಖ್ಯೆಯು, ರಾಷ್ಟ್ರಪತಿಯು ಸಾರ್ವಜನಿಕ ಅಧಿಸೂಚನೆಯ ಮೂಲಕ ಗೊತ್ತುಪಡಿಸಬಹುದಾದಂಥ ‘ದಿನಾಂಕದಿಂದ ಆರು ತಿಂಗಳುಗಳ ಒಳಗಾಗಿ ಈ ಖಂಡದ ಉಪಬಂಧಗಳಿಗೆ ಅನುಗುಣವಾಗಿರುವಂತೆ ಮಾಡತಕ್ಕದ್ದು.

(b) ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿರುವ ರಾಜ್ಯದ ವಿಧಾನಸಭೆಯ ಅಥವಾ ವಿಧಾನಪರಿಷತ್ತನ್ನು ಹೊಂದಿರುವ ರಾಜ್ಯದ ವಿಧಾನಮಂಡಲದ ಎರಡೂ ಸದನಗಳಲ್ಲಿ ಯಾವುದೇ ಸದನದ ಸದಸ್ಯನು, ಹತ್ತನೇ ಅನುಸೂಚಿಯ 2ನೇ ಕಂಡಿಕೆಯಡಿಯಲ್ಲಿ ಆ ಸದನದ ಸದಸ್ಯನಾಗಲು ಅನರ್ಹನಾಗಿದ್ದಲ್ಲಿ, ಸಂದರ್ಭಾನುಸಾರ ಆತನು ಅನರ್ಹತೆ ಹೊಂದಿದ ದಿನಾಂಕದಿಂದ ಪ್ರಾರಂಭವಾಗಿ ಆತನು ಹಾಗೆ ಸದಸ್ಯನಾಗಿರುವ ಪದಾವಧಿಯು ಮುಕ್ತಾಯಗೊಳ್ಳುವ ದಿನಾಂಕದವರೆಗೆ ಅಥವಾ ಅಂಥ ಅವಧಿಯು ಮುಕ್ತಾಯವಾಗುವ ಮೊದಲು ಆತನು ರಾಜ್ಯದ ವಿಧಾನಸಭೆಯ ಅಥವಾ ವಿಧಾನ ಪರಿಷತ್ತನ್ನು ಹೊಂದಿರುವ ರಾಜ್ಯದ ವಿಧಾನಮಂಡಲದ ಎರಡು ಸದನಗಳಲ್ಲಿ ಯಾವುದೇ ಸದನದ ಚುನಾವಣೆಯಲ್ಲಿ ಸ್ಪರ್ಧಿಸಿದರೆ, ಆತನು ಚುನಾಯಿತನಾಗಿದ್ದಾನೆ ಎಂದು ಘೋಷಿಸುವ ದಿನಾಂಕದವರೆಗೆ, ಅವೆರಡರಲ್ಲಿ ಯಾವುದು ಮುಂಚೆಯೋ ಅಲ್ಲಿಯವರೆಗಿನ ಅವಧಿಯಲ್ಲಿ ಆತನು ಮಂತ್ರಿಯಾಗಿ ನೇಮಕಗೊಳ್ಳುವುದಕ್ಕೂ ಅನರ್ಹನಾಗತಕ್ಕದ್ದು.]

2 . ಮಂತ್ರಿ ಮಂಡಲವು ಆ ರಾಜ್ಯದ ವಿಧಾನಸಭೆಗೆ ಸಾಮೂಹಿಕವಾಗಿ ಜವಾಬ್ದಾರಿಯಾಗಿರತಕ್ಕದ್ದು.

3 . ಯಾರೇ ಮಂತ್ರಿಯು ತನ್ನ ಪದವನ್ನು ವಹಿಸಿಕೊಳ್ಳುವುದಕ್ಕೆ ಮುಂಚೆ ರಾಜ್ಯಪಾಲನು ಅವನಿಗೆ ಪದದ ಮತ್ತು ಗೋಪ್ಯತಾ ಪಾಲನೆಯ ಪ್ರಮಾಣವಚನಗಳನ್ನು ಮೂರನೆಯ ಅನುಸೂಚಿಯಲ್ಲಿ ಆ ಉದ್ದೇಶಕ್ಕಾಗಿ ಕೊಡಲಾದ ನಮೂನೆಗಳಿಗೆ ಅನುಸಾರವಾಗಿ ಬೋಧಿಸತಕ್ಕದ್ದು.

4 . ಯಾರೇ ಮಂತ್ರಿಯು ನಿರಂತರವಾಗಿ ಆರು ತಿಂಗಳ ಅವಧಿಯವರೆಗೆ ರಾಜ್ಯದ ವಿಧಾನಮಂಡಲದ ಸದಸ್ಯನಾಗದಿದ್ದರೆ ಆ ಅವಧಿಯು ಮುಕ್ತಾಯವಾದ ಮೇಲೆ ಅವನು ಮಂತ್ರಿಯಾಗಿರುವುದು ನಿಂತುಹೋಗತಕ್ಕದ್ದು.

5 . ಮಂತ್ರಿಗಳ ಸಂಬಳಗಳು ಹಾಗೂ ಭತ್ಯೆಗಳು ಕಾಲಕಾಲಕ್ಕೆ ರಾಜ್ಯದ ವಿಧಾನಮಂಡಲವು ಕಾನೂನಿನ ಮೂಲಕ ನಿರ್ಧರಿಸಬಹುದಾದಂತೆ ಇರತಕ್ಕದ್ದು ಮತ್ತು ವಿಧಾನಮಂಡಲವು ಆ ರೀತಿ ನಿರ್ಧರಿಸುವವರೆಗೆ ಅವು ಎರಡನೆಯ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವಂತೆ ಇರತಕ್ಕದ್ದು.

ರಾಜ್ಯದ ಅಡ್ವಕೇಟ್ ಜನರಲ್ The Advocate-General for the State

165 . ರಾಜ್ಯದ ಅಡ್ವಕೇಟ್ ಜನರಲ್ –

1 . ಪ್ರತಿಯೊಂದು ರಾಜ್ಯದ ರಾಜ್ಯಪಾಲನು ಉಚ್ಚ ನ್ಯಾಯಾಲಯದ ನ್ಯಾಯಾಧೀಶನಾಗಿ ನೇಮಕಗೊಳ್ಳಲು ಅರ್ಹತೆಯುಳ್ಳ ವ್ಯಕ್ತಿಯನ್ನು ಆ ರಾಜ್ಯದ ಅಡ್ವಕೇಟ್ ಜನರಲ್ ಆಗಿ ನೇಮಕ ಮಾಡತಕ್ಕದ್ದು.

2 . ಅಡ್ವಕೇಟ್ ಜನರಲ್‌ು. ರಾಜ್ಯಪಾಲನು ಕಾಲಕಾಲಕ್ಕೆ ತನಗೆ ಕಳುಹಿಸಬಹುದಾದಂಥ ಅಥವಾ ಒಪ್ಪಿಸಬಹುದಾದಂಥ ಕಾನೂನು ವಿಷಯಗಳ ಮೇಲೆ ರಾಜ್ಯಸರ್ಕಾರಕ್ಕೆ ಸಲಹೆ ಕೊಡುವುದು ಮತ್ತು ಕಾನೂನು ಸ್ವರೂಪದಂಥ ಇತರ ಕರ್ತವ್ಯಗಳನ್ನು ನೆರವೇರಿಸುವುದು ಹಾಗೂ ಈ ಸಂವಿಧಾನದ ಮೂಲಕ ಅಥವಾ ಅದರ ಮೇರೆಗೆ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಇತರ ಯಾವುದೇ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ತನಗೆ ಪ್ರದಾನ ಮಾಡಿದ ಪ್ರಕಾರ್ಯಗಳನ್ನು ನಿರ್ವಹಿಸುವುದು ಅವನ ಕರ್ತವ್ಯವಾಗಿರತಕ್ಕದ್ದು.

3 . ಅಡ್ವಕೇಟ್ ಜನರಲ್‌ನು ರಾಜ್ಯಪಾಲನ ಇಷ್ಟಪರ್ಯಂತ ಪದಧಾರಣ ಮಾಡತಕ್ಕದ್ದು; ಮತ್ತು ರಾಜ್ಯಪಾಲನು ನಿರ್ಧರಿಸಬಹುದಾದ ಸಂಭಾವನೆಯನ್ನು ಪಡೆಯತಕ್ಕದ್ದು.

ರಾಜ್ಯ ಸರ್ಕಾರದ ವ್ಯವಹಾರ ನಿರ್ವಹಣೆ State Conduct of Government Business

166 . ರಾಜ್ಯ ಸರ್ಕಾರದ ವ್ಯವಹಾರ ನಿರ್ವಹಣೆ,-

1 . ರಾಜ್ಯ ಸರ್ಕಾರದ ಕಾರ್ಯಾಂಗದ ಸಮಸ್ತ ಕಾರ್ಯವು ರಾಜ್ಯಪಾಲನ ಹೆಸರಿನಲ್ಲಿ ನಡೆಯುತ್ತದೆಂದು ವ್ಯಕ್ತವಾಗತಕ್ಕದ್ದು.

2 . ರಾಜ್ಯಪಾಲನ ಹೆಸರಿನಲ್ಲಿ ಮಾಡಿದ ಆದೇಶಗಳನ್ನು ಮತ್ತು ಬರೆದುಕೊಟ್ಟ ಇತರ ಲಿಖಿತಗಳನ್ನು ರಾಜ್ಯಪಾಲನು ರಚಿಸಬೇಕಾದ ನಿಯಮಗಳಲ್ಲಿ ನಿರ್ದಿಷ್ಟಪಡಿಸಬಹುದಾದಂಥ ರೀತಿಯಲ್ಲಿ ಆಧಿಪ್ರಮಾಣನ ಮಾಡತಕ್ಕದ್ದು ಮತ್ತು ಹಾಗೆ ಅಧಿಪ್ರಮಾಣನ ಮಾಡಿದ ಆದೇಶದ ಅಥವಾ ಲಿಖಿತದ ಸಿಂಧುತ್ವವನ್ನು, ಅದು ರಾಜ್ಯಪಾಲನು ಮಾಡಿದ ಆದೇಶವಲ್ಲವೆಂಬ ಅಥವಾ ಬರೆದುಕೊಟ್ಟ ಲಿಖಿತವಲ್ಲವೆಂಬ ಕಾರಣದ ಮೇಲೆ ಪ್ರಶ್ನಿಸತಕ್ಕದ್ದಲ್ಲ.

3 . ರಾಜ್ಯ ಸರ್ಕಾರದ ವ್ಯವಹಾರವನ್ನು ಹೆಚ್ಚು ಅನುಕೂಲಕರವಾಗಿ ನಿರ್ವಹಿಸಲು ಮತ್ತು ಈ ಸಂವಿಧಾನದ ಮೂಲಕ ಅಥವಾ ಅದರ ಮೇರೆಗೆ ರಾಜ್ಯಪಾಲನು ತನ್ನ ವಿವೇಚನಾನುಸಾರ ನಿರ್ವಹಿಸಬೇಕಾಗಿರುವ ವ್ಯವಹಾರವಾಗಿಲ್ಲದಿರುವಷ್ಟರ ಮಟ್ಟಿಗೆ ಸದರಿ ವ್ಯವಹಾರವನ್ನು ಮಂತ್ರಿಗಳಿಗೆ ಹಂಚಿಕೆ ಮಾಡಲು ರಾಜ್ಯಪಾಲನು ನಿಯಮಗಳನ್ನು ರಚಿಸತಕ್ಕದ್ದು.

167 . ರಾಜ್ಯಪಾಲನಿಗೆ ಮಾಹಿತಿ, ಇತ್ಯಾದಿಗಳನ್ನು ಒದಗಿಸುವ ವಿಚಾರದಲ್ಲಿ ಮುಖ್ಯಮಂತ್ರಿಯ ಕರ್ತವ್ಯಗಳು.

ಪ್ರತಿಯೊಂದು ರಾಜ್ಯದ ಮುಖ್ಯ ಮಂತ್ರಿಯು,

(a) ರಾಜ್ಯದ ವ್ಯವಹಾರಗಳ ಆಡಳಿತಕ್ಕೆ ಮತ್ತು ಕಾನೂನು ರಚನೆಯ ಪ್ರಸ್ತಾವಗಳಿಗೆ ಸಂಬಂಧಿಸಿದಂತೆ ಮಂತ್ರಿಮಂಡಲದ ಎಲ್ಲ ತೀರ್ಮಾನಗಳನ್ನು ರಾಜ್ಯದ ರಾಜ್ಯಪಾಲನಿಗೆ ತಿಳಿಸುವುದು;

(b) ರಾಜ್ಯದ ವ್ಯವಹಾರಗಳ ಆಡಳಿತಕ್ಕೆ ಮತ್ತು ಕಾನೂನು ರಚನೆಯ ಪ್ರಸ್ತಾವಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲನು ಕೇಳಬಹುದಾದಂಥ ಮಾಹಿತಿಯನ್ನು ಒದಗಿಸುವುದು; ಮತ್ತು

(c) ಒಬ್ಬ ಮಂತ್ರಿಯು ತೀರ್ಮಾನ ಕೈಗೊಂಡಿರುವ, ಆದರೆ ಮಂತ್ರಿ ಮಂಡಲವು ಪರ್ಯಾಲೋಚಿಸದಿರುವ ಯಾವುದೇ ವಿಷಯವನ್ನು ಮಂತ್ರಿಮಂಡಲದ ಪರ್ಯಾಲೋಚನೆಗೆ ಒಪ್ಪಿಸಬೇಕೆಂದು ರಾಜ್ಯಪಾಲನು ಅಗತ್ಯಪಡಿಸಿದಲ್ಲಿ ಅದನ್ನು ಹಾಗೆ ಒಪ್ಪಿಸುವುದು ಅವನ ಕರ್ತವ್ಯವಾಗಿರತಕ್ಕದ್ದು.

constitution of india.govt.in

ಭಾರತದ ಲೆಕ್ಕನಿಯಂತ್ರಕ ಮತ್ತು ಮಹಾ-ಲೆಕ್ಕಪರಿಶೋಧಕ (CAG) ಸಂಪೂರ್ಣ ಮಾಹಿತಿ (Articles 148–151)

1 thought on “ಭಾಗ VI ರಾಜ್ಯಗಳು: ರಾಜ್ಯಪಾಲ, ಮಂತ್ರಿಮಂಡಲ ಮತ್ತು ಆಡಳಿತ ಕಾರ್ಯಪದ್ಧತಿಗಳು ” . Powerful Insights into State Executive: Governor, Council of Ministers & Advocate General Explained . Articles 152–167 .”

Leave a Comment