ರಾಜ್ಯ ವಿಧಾನಮಂಡಲದ ಅಧಿಕಾರ, ಕಾರ್ಯಕಲಾಪ ಮತ್ತು ಸದಸ್ಯರ ಅನರ್ಹತೆಗಳು (Article 168–195) .Powerful Guide to The State Legislature, Conduct of Business & Member Disqualification .

ಅಧ್ಯಾಯ III – ರಾಜ್ಯ ವಿಧಾನಮಂಡಲ . Chapter III – The State Legislature

ರಾಜ್ಯ ವಿಧಾನಮಂಡಲ – ಸಾಮಾನ್ಯ The State Legislature – General

168 . ರಾಜ್ಯಗಳ ವಿಧಾನಮಂಡಲಗಳ ರಚನೆ.

1 . ಪ್ರತಿಯೊಂದು ರಾಜ್ಯಕ್ಕೂ ಒಂದು ವಿಧಾನಮಂಡಲ ಇರತಕ್ಕದ್ದು ಮತ್ತು ಅದು ರಾಜ್ಯಪಾಲನನ್ನು, ಮತ್ತು-

(a) [ಆಂಧ್ರಪ್ರದೇಶ], ಬಿಹಾರ, , [ಮಧ್ಯಪ್ರದೇಶ], [ಮಹಾರಾಷ್ಟ್ರ), [ಕರ್ನಾಟಕ], [ತಮಿಳುನಾಡು, ತೆಲಂಗಾಣ]] [ಮತ್ತು ಉತ್ತರ ಪ್ರದೇಶ] ಈ ರಾಜ್ಯಗಳಲ್ಲಿ ಎರಡು ಸದನಗಳನ್ನೂ;

(b) ಇತರ ರಾಜ್ಯಗಳಲ್ಲಿ ಒಂದು ಸದನವನ್ನು ಒಳಗೊಂಡಿರತಕ್ಕದ್ದು.

2 . ಒಂದು ರಾಜ್ಯದ ವಿಧಾನಮಂಡಲವು ಎರಡು ಸದನಗಳನ್ನು ಹೊಂದಿರುವಲ್ಲಿ, ಒಂದನ್ನು ವಿಧಾನಪರಿಷತ್ತು ಎಂದು ಮತ್ತು ಇನ್ನೊಂದನ್ನು ವಿಧಾನಸಭೆ ಎಂದು ಮತ್ತು ಒಂದೇ ಸದನವನ್ನು ಹೊಂದಿರುವಲ್ಲಿ ಅದನ್ನು ವಿಧಾನಸಭೆ ಎಂದು ಕರೆಯತಕ್ಕದ್ದು.

169 . ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು.-

1 . 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ ಅದನ್ನು ರದ್ದುಗೊಳಿಸಬೇಕೆಂದು ಅಥವಾ ಅಂಥ ಪರಿಷತ್ತು ಇಲ್ಲದ ರಾಜ್ಯದಲ್ಲಿ ಅಂಥ ಪರಿಷತ್ತನ್ನು ಸೃಜಿಸಬೇಕೆಂದು ಆ ರಾಜ್ಯದ ವಿಧಾನಸಭೆಯು ಆ ಸಭೆಯ ಒಟ್ಟು ಸದಸ್ಯರ ಬಹುಮತದ ಮೂಲಕ ಮತ್ತು ಸಭೆಯಲ್ಲಿ ಹಾಜರಿದ್ದು ಮತ ಕೊಡುವ ಸದಸ್ಯರ ಮೂರನೆಯ ಎರಡು ಭಾಗಕ್ಕೆ ಕಡಿಮೆಯಿಲ್ಲದಷ್ಟು ಸದಸ್ಯರ ಬಹುಮತದ ಮೂಲಕ ಆ ಬಗ್ಗೆ ನಿರ್ಣಯವನ್ನು ಅಂಗೀಕರಿಸಿದರೆ ಸಂಸತ್ತು ಕಾನೂನಿನ ಮೂಲಕ ಆ ಬಗ್ಗೆ ಉಪಬಂಧಿಸಬಹುದು.

2 . (1)ನೆಯ ಖಂಡದಲ್ಲಿ ಉಲ್ಲೇಖಿಸಲಾದ ಯಾವುದೇ ಕಾನೂನು, ಆ ಕಾನೂನಿನ ಉಪಬಂಧಗಳನ್ನು ಜಾರಿಗೊಳಿಸಲು ಅವಶ್ಯವಾಗಬಹುದಾದಂತೆ ಈ ಸಂವಿಧಾನವನ್ನು ತಿದ್ದುಪಡಿ ಮಾಡುವಂಥ ಉಪಬಂಧಗಳನ್ನು ಒಳಗೊಂಡಿರತಕ್ಕದ್ದು ಮತ್ತು ಸಂಸತ್ತು ಅವಶ್ಯವೆಂದು ಭಾವಿಸಬಹುದಾದಂಥ ಪೂರಕ, ಪ್ರಾಸಂಗಿಕ ಮತ್ತು ಆನುಷಂಗಿಕ ಉಪಬಂಧಗಳನ್ನೂ ಸಹ ಒಳಗೊಂಡಿರಬಹುದು.

3 . ಹಿಂದೆ ಹೇಳಿದ ಅಂಥ ಯಾವುದೇ ಕಾನೂನನ್ನು 368ನೆಯ ಅನುಚ್ಛೇದದ ಉದ್ದೇಶಗಳಿಗಾಗಿ ಈ ಸಂವಿಧಾನದ ಒಂದು ತಿದ್ದುಪಡಿಯೆಂದು ಭಾವಿಸತಕ್ಕದ್ದಲ್ಲ.

170. ವಿಧಾನಸಭೆಗಳ ಸಂರಚನೆ.-

1 . 333ನೆಯ ಅನುಚ್ಛೇದದ ಉಪಬಂಧಗಳಿಗೊಳಪಟ್ಟು, ಪ್ರತಿಯೊಂದು ರಾಜ್ಯದ ವಿಧಾನಸಭೆಯು ಆ ರಾಜ್ಯದಲ್ಲಿನ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಂದ ನೇರ ಚುನಾವಣೆಯ ಮೂಲಕ ಆಯ್ಕೆಯಾದ ಐದುನೂರಕ್ಕಿಂತಲೂ ಹೆಚ್ಚಾಗಿಲ್ಲದಷ್ಟು ಆದರೆ ಅರವತ್ತಕ್ಕಿಂತ ಕಡಿಮೆ ಇಲ್ಲದಷ್ಟು ಸದಸ್ಯರನ್ನು ಒಳಗೊಂಡಿರತಕ್ಕದ್ದು.

2 . (1)ನೆಯ ಖಂಡದ ಉದ್ದೇಶಗಳಿಗಾಗಿ ಪ್ರತಿಯೊಂದು ರಾಜ್ಯವನ್ನು ಪ್ರತಿಯೊಂದು ಚುನಾವಣಾ ಕ್ಷೇತ್ರದ ಜನಸಂಖ್ಯೆ ಮತ್ತು ಅದಕ್ಕೆ ಹಂಚಲಾದ ಸ್ಥಾನಗಳ ಸಂಖ್ಯೆ ಇವೆರಡರ ನಡುವಣ ಅನುಪಾತವು ಕಾರ್ಯಸಾಧ್ಯವಾಗುವಷ್ಟರ ಮಟ್ಟಿಗೆ, ರಾಜ್ಯದಾದ್ಯಂತ ಒಂದೇ ಆಗಿರುವಂಥ ರೀತಿಯಲ್ಲಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಾಗಿ ವಿಭಾಗಿಸತಕ್ಕದ್ದು.

ವಿವರಣೆ.- ಈ ಖಂಡದಲ್ಲಿ “ಜನಸಂಖ್ಯೆ” ಎಂದರೆ, ಯಾವ ಹಿಂದಿನ ಕೊನೆಯ ಜನಗಣತಿಯ ಸುಸಂಗತ ಅಂಕಿಗಳನ್ನು ಪ್ರಕಟಿಸಲಾಗಿದೆಯೋ ಆ ಹಿಂದಿನ ಕೊನೆಯ ಜನಗಣತಿಯಲ್ಲಿ ಖಚಿತಪಡಿಸಿಕೊಂಡ ಜನಸಂಖ್ಯೆ:

ಈ ವಿವರಣೆಯಲ್ಲಿ ಯಾವ ಹಿಂದಿನ ಕೊನೆಯ ಜನಗಣತಿಯ ಸುಸಂಗತ ಅಂಕಿಗಳನ್ನು ಪ್ರಕಟಿಸಲಾಗಿದೆಯೋ ಆ ಜನಗಣತಿಗೆ ಮಾಡಿದ ಉಲ್ಲೇಖವನ್ನು [2026 ನೆಯ] ಇಸವಿಯ ತರುವಾಯ ಮೊದಲನೆಯ ಸಲ ನಡೆಸಲಾಗುವ ಜನಗಣತಿಯ ಸುಸಂಗತ ಅಂಕಿಗಳು ಪ್ರಕಟವಾಗುವವರೆಗೆ, [2001 ರ] ಜನಗಣತಿಗೆ ಮಾಡಿದ ಉಲ್ಲೇಖವೆಂದು ಅರ್ಥೈಸತಕ್ಕದ್ದು.

3 . ಪ್ರತಿಯೊಂದು ಜನಗಣತಿಯು ಪೂರ್ಣಗೊಂಡ ಮೇಲೆ, ಪ್ರತಿಯೊಂದು ರಾಜ್ಯದ ವಿಧಾನಸಭೆಯಲ್ಲಿನ ಒಟ್ಟು ಸ್ಥಾನಗಳನ್ನು ಮತ್ತು ಪ್ರತಿಯೊಂದು ರಾಜ್ಯವನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಾಗಿ ವಿಭಾಗಿಸಿರುವುದನ್ನು ಸಂಸತ್ತು ಕಾನೂನಿನ ಮೂಲಕ ನಿರ್ಧರಿಸಬಹುದಾದಂಥ ಪ್ರಾಧಿಕಾರವು ಮತ್ತು ಅಂಥ ರೀತಿಯಲ್ಲಿ ಮರು ಹೊಂದಾಣಿಕೆ ಮಾಡತಕ್ಕದ್ದು: ಅಂಥ ಮರುಹೊಂದಾಣಿಕೆಯು ಆಗ ಅಸ್ತಿತ್ವದಲ್ಲಿರುವ ವಿಧಾನಸಭೆಯ ವಿಸರ್ಜನೆ ಆಗುವವರೆಗೆ ಆ ಸಭೆಯಲ್ಲಿನ ಪ್ರಾತಿನಿಧ್ಯಕ್ಕೆ ಬಾಧಕವನ್ನುಂಟುಮಾಡತಕ್ಕದ್ದಲ್ಲ:

ಮತ್ತು ಮರುಹೊಂದಾಣಿಕೆಯು ರಾಷ್ಟ್ರಪತಿಯು ಆದೇಶದ ನಿರ್ದಿಷ್ಟಪಡಿಸಬಹುದಾದಂಥ ದಿನಾಂಕದಿಂದ ಜಾರಿಗೆ ಬರತಕ್ಕದ್ದು ಮತ್ತು ಅಂಥ ಮರುಹೊಂದಾಣಿಕೆಯು ಜಾರಿಗೆ ಬರುವವರೆಗೆ ವಿಧಾನಸಭೆಗೆ ಯಾವುದೇ ಚುನಾವಣೆಯನ್ನು ಅಂಥ ಮರುಹೊಂದಾಣಿಕೆಗೆ ಮೊದಲು ಅಸ್ತಿತ್ವದಲ್ಲಿರುವ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಆಧಾರದ ಮೇಲೆ ನಡೆಸಬಹುದು:

[2026 ನೆಯ] ಇಸವಿಯ ತರುವಾಯ ಮೊದಲನೆಯ ಸಲ ನಡೆಸಲಾಗುವ ಜನಗಣತಿಯ ಸುಸಂಗತ ಅಂಕಿಗಳು ಪ್ರಕಟವಾಗುವವರೆಗೆ, ಈ ಖಂಡದ ಮೇರೆಗೆ,

(i) 1971ರ ಜನಗಣತಿ ಆಧಾರದ ಮೇಲೆ ಮರುಹೊಂದಾಣಿಕೆ ಮಾಡಿರುವಂತೆ ಪ್ರತಿಯೊಂದು ರಾಜ್ಯದ ವಿಧಾನಸಭೆಯಲ್ಲಿನ ಸ್ಥಾನಗಳ ಒಟ್ಟು ಸಂಖ್ಯೆಯನ್ನು; ಮತ್ತು

(ii) [2001ರ] ಜನಗಣತಿ ಆಧಾರದ ಮೇಲೆ ಮರುಹೊಂದಾಣಿಕೆ ಮಾಡಬಹುದಾದಂತೆ ಅಂಥ ರಾಜ್ಯವನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಾಗಿ ವಿಭಾಗಿಸುವುದನ್ನು ಮರುಹೊಂದಾಣಿಕೆ ಮಾಡುವುದು ಅವಶ್ಯಕವಾಗಿರತಕ್ಕದ್ದಲ್ಲ.]

171 . ವಿಧಾನ ಪರಿಷತ್ತುಗಳ ಸಂರಚನೆ.

1 . ವಿಧಾನ ಪರಿಷತ್ತು ಇರುವ ರಾಜ್ಯದಲ್ಲಿ ವಿಧಾನ ಪರಿಷತ್ತಿನ ಸದಸ್ಯರ ಒಟ್ಟು ಸಂಖ್ಯೆಯು, ಆ ರಾಜ್ಯದ ವಿಧಾನಸಭೆಯ ಸದಸ್ಯರ ಒಟ್ಟು ಸಂಖ್ಯೆಯ [ಮೂರನೆಯ ಒಂದು ಭಾಗವನ್ನು] ಮೀರತಕ್ಕದ್ದಲ್ಲ:

ಒಂದು ರಾಜ್ಯದ ವಿಧಾನ ಪರಿಷತ್ತಿನ ಸದಸ್ಯರ ಒಟ್ಟು ಸಂಖ್ಯೆಯು ಯಾವುದೇ ಸಂದರ್ಭದಲ್ಲಿ ನಲವತ್ತಕ್ಕಿಂತಲೂ ಕಡಿಮೆಯಾಗಿರತಕ್ಕದ್ದಲ್ಲ.

2 . ಸಂಸತ್ತು ಕಾನೂನಿನ ಮೂಲಕ ಅನ್ಯಥಾ ಉಪಬಂಧಿಸುವವರೆಗೆ, ಒಂದು ರಾಜ್ಯದ ವಿಧಾನ ಪರಿಷತ್ತಿನ ರಚನೆಯು (3)ನೆಯ ಖಂಡದಲ್ಲಿ ಉಪಬಂಧಿಸಿರುವಂತೆ ಇರತಕ್ಕದ್ದು.

3 . ಒಂದು ರಾಜ್ಯದ ವಿಧಾನ ಪರಿಷತ್ತಿನ ಸದಸ್ಯರ ಒಟ್ಟು ಸಂಖ್ಯೆಯಲ್ಲಿ,-

(a) ಆದಷ್ಟು ಮಟ್ಟಿಗೆ ಮೂರನೆಯ ಒಂದು ಭಾಗದಷ್ಟು ಸದಸ್ಯರು ಆ ರಾಜ್ಯದಲ್ಲಿನ ಪೌರಸಭೆಗಳ, ಜಿಲ್ಲಾ ಮಂಡಳಿಗಳ ಮತ್ತು ಸಂಸತ್ತು ಕಾನೂನಿನ ಮೂಲಕ ನಿರ್ದಿಷ್ಟಪಡಿಸಬಹುದಾದಂಥ ಇತರ ಸ್ಥಳೀಯ ಪ್ರಾಧಿಕಾರಗಳ ಸದಸ್ಯರನ್ನು ಒಳಗೊಂಡಿರುವ ಮತದಾರರ ಗಣಗಳಿಂದ ಚುನಾಯಿತರಾಗತಕ್ಕದ್ದು;

(b) ಆದಷ್ಟುಮಟ್ಟಿಗೆ ಹನ್ನೆರಡನೆಯ ಒಂದು ಭಾಗದಷ್ಟು ಸದಸ್ಯರು ಭಾರತದ ರಾಜ್ಯಕ್ಷೇತ್ರದಲ್ಲಿನ ಯಾವುದೇ ವಿಶ್ವವಿದ್ಯಾನಿಲಯದ ಪದವೀಧರರಾಗಿ ಕನಿಷ್ಠ ಪಕ್ಷ ಮೂರು ವರ್ಷಗಳಾದರೂ ಆಗಿರುವ ಅಥವಾ ಅಂಥ ಯಾವುದೇ ವಿಶ್ವವಿದ್ಯಾನಿಲಯದ ಪದವೀಧರನಿಗೆ ಸಮಾನವಾದ ಅರ್ಹತೆಗಳೆಂದು ಸಂಸತ್ತು ಯಾವುದೇ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ನಿಯಮಿಸಿದ ಅರ್ಹತೆಗಳನ್ನು ಪಡೆದು ಕನಿಷ್ಠಪಕ್ಷ ಮೂರು ವರ್ಷಗಳಾದರೂ ಆಗಿರುವ ಮತ್ತು ಆ ರಾಜ್ಯದಲ್ಲಿ ವಾಸಿಸುತ್ತಿರುವ ವ್ಯಕ್ತಿಗಳನ್ನು ಒಳಗೊಂಡಿರುವ ಮತದಾರರ ಗಣಗಳಿಂದ ಚುನಾಯಿತರಾಗತಕ್ಕದ್ದು;

(c) ಆದಷ್ಟು ಮಟ್ಟಿಗೆ ಹನ್ನೆರಡನೆಯ ಒಂದು ಭಾಗದಷ್ಟು ಸದಸ್ಯರು ಸಂಸತ್ತು ಮಾಡಿದ ಯಾವುದೇ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ನಿಯಮಿಸಬಹುದಾದಂತೆ ರಾಜ್ಯದಲ್ಲಿನ ಪ್ರೌಢಶಾಲೆಯ ದರ್ಜೆಗೆ ಕಡಿಮೆ ಇಲ್ಲದಂತಹ ದರ್ಜೆಯ ಶಿಕ್ಷಣ ಸಂಸ್ಥೆಗಳಲ್ಲಿ ಕನಿಷ್ಠಪಕ್ಷ ಮೂರು ವರ್ಷಗಳಿಂದಾದರೂ ಬೋಧನೆಯಲ್ಲಿ ತೊಡಗಿರುವ ವ್ಯಕ್ತಿಗಳನ್ನೊಳಗೊಂಡಿರುವ ಮತದಾರರ ಸಮುದಾಯಗಳಿಂದ ಚುನಾಯಿತರಾಗತಕ್ಕದ್ದು;

(d) ಆದಷ್ಟು ಮಟ್ಟಿಗೆ ಮೂರನೆಯ ಒಂದು ಭಾಗದಷ್ಟು ಸದಸ್ಯರನ್ನು, ಆ ರಾಜ್ಯದ ವಿಧಾನಸಭೆಯ ಸದಸ್ಯರು ಆ ಸಭೆಯ ಸದಸ್ಯರಲ್ಲದ ವ್ಯಕ್ತಿಗಳಿಂದ ಚುನಾಯಿಸತಕ್ಕದ್ದು;

(e) ಉಳಿದ ಸದಸ್ಯರು (5)ನೆಯ ಖಂಡದ ಉಪಬಂಧಗಳಿಗೆ ಅನುಸಾರವಾಗಿ ಆ ರಾಜ್ಯದ ರಾಜ್ಯಪಾಲನಿಂದ ನಾಮನಿರ್ದೇಶಿತರಾಗತಕ್ಕದ್ದು.

4 . (3)ನೆಯ ಖಂಡದ (a), (b) ಮತ್ತು (c) ಉಪಖಂಡಗಳ ಮೇರೆಗೆ ಚುನಾಯಿತರಾಗಬೇಕಾದ ಸದಸ್ಯರು ಸಂಸತ್ತು ಮಾಡಿದ ಯಾವುದೇ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ನಿಯಮಿಸಬಹುದಾದಂಥ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಂದ ಆಯ್ಕೆಯಾಗತಕ್ಕದ್ದು ಮತ್ತು ಸದರಿ ಉಪಖಂಡಗಳ ಮೇರೆಗೆ ಮತ್ತು ಸದರಿ ಖಂಡದ (d) ಉಪಖಂಡದ ಮೇರೆಗೆ ನಡೆಯುವ ಚುನಾವಣೆಗಳು ಪ್ರಮಾಣಾನುಸಾರ ಪ್ರಾತಿನಿಧ್ಯ ಪದ್ಧತಿಗನುಸಾರ ಏಕವರ್ಗಾವಣೀಯ ಮತದ ಮೂಲಕ ನಡೆಯತಕ್ಕದ್ದು.

5 . ರಾಜ್ಯಪಾಲನಿಂದ (3)ನೆಯ ಖಂಡದ (e) ಉಪಖಂಡದ ಮೇರೆಗೆ ನಾಮನಿರ್ದೇಶಿತರಾಗಬೇಕಾದ ಸದಸ್ಯರು ಕೆಳಕಂಡ ವಿಷಯಗಳಿಗೆ ಸಂಬಂಧಿಸಿದಂತೆ ಎಂದರೆ,-

ಸಾಹಿತ್ಯ, ವಿಜ್ಞಾನ, ಕಲೆ, ಸಹಕಾರ ಚಳವಳಿ ಮತ್ತು ಸಮಾಜ ಸೇವೆಗಳಲ್ಲಿ ವಿಶೇಷ ಜ್ಞಾನವನ್ನು ಅಥವಾ ವ್ಯಾವಹಾರಿಕ ಅನುಭವವನ್ನು ಪಡೆದವರಾಗಿರತಕ್ಕದ್ದು.

172 . ರಾಜ್ಯ ವಿಧಾನಮಂಡಲಗಳ ಅವಧಿ.-

1 . ಪ್ರತಿಯೊಂದು ರಾಜ್ಯದ ಪ್ರತಿಯೊಂದು ವಿಧಾನಸಭೆಯು ಮುಂಚಿತವಾಗಿಯೇ ವಿಸರ್ಜನೆಯಾದ ಹೊರತು ಅದು ತನ್ನ ಮೊದಲ ಸಭೆಗೆ ಗೊತ್ತುಪಡಿಸಿದ ದಿನಾಂಕದಿಂದ [ಐದು ವರ್ಷಗಳು ಅವಧಿಯವರೆಗೆ ಮುಂದುವರಿಯತಕ್ಕದ್ದು. ಆದರೆ ಅದಕ್ಕಿಂತ ಹೆಚ್ಚು ಕಾಲ ಮುಂದುವರಿಯತಕ್ಕದ್ದಲ್ಲ ಮತ್ತು ಸದರಿ [ಐದು ವರ್ಷಗಳ) ಅವಧಿಯ ಮುಕ್ತಾಯವು ಆ ಸದನದ ವಿಸರ್ಜನೆಯು ಪರಿಣಾಮವುಳ್ಳದ್ದಾಗಿರತಕ್ಕದ್ದು:

ಸದರಿ ಅವಧಿಯನ್ನು ತುರ್ತು ಪರಿಸ್ಥಿಯ ಉದ್ಯೋಷಣೆಯು ಜಾರಿಯಲ್ಲಿರುವಾಗ, ಸಂಸತ್ತು ಕಾನೂನಿನ ಮೂಲಕ ಒಂದು ಸಲಕ್ಕೆ ಒಂದು ವರ್ಷಕ್ಕೆ ಮೀರದ ಅವಧಿಯವರೆಗೆ ವಿಸ್ತರಿಸಬಹುದು ಮತ್ತು ಆ ಉದ್ವೇಷಣೆಯು ಜಾರಿಯಲ್ಲಿರುವುದು ನಿಂತುಹೋದ ತರುವಾಯ ಯಾವುದೇ ಸಂದರ್ಭದಲ್ಲಿ ಆರು ತಿಂಗಳ ಅವಧಿಗೆ ಮೀರಿ ವಿಸ್ತರಿಸತಕ್ಕದ್ದಲ್ಲ.

2 . ಒಂದು ರಾಜ್ಯದ ವಿಧಾನಪರಿಷತ್ತು ವಿಸರ್ಜನೆಗೊಳಪಡತಕ್ಕದ್ದಲ್ಲ. ಆದರೆ ಅದರ ಸದಸ್ಯರಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಮೂರನೆಯ ಒಂದು ಭಾಗದಷ್ಟು ಸದಸ್ಯರು ಸಂಸತ್ತು ಕಾನೂನಿನ ಮೂಲಕ ಆ ಬಗ್ಗೆ ಮಾಡಿದ ಉಪಬಂಧಗಳಿಗನುಸಾರವಾಗಿ ಪ್ರತಿ ಎರಡನೇ ವರ್ಷ ಮುಕ್ತಾಯವಾದ ಮೇಲೆ ಆದಷ್ಟು ಬೇಗನೆ ನಿವೃತ್ತರಾಗತಕ್ಕದ್ದು.

173 . ರಾಜ್ಯ ವಿಧಾನಮಂಡಲದ ಸದಸ್ಯತ್ವಕ್ಕೆ ಅರ್ಹತೆ.-

1 . ಯಾರೇ ವ್ಯಕ್ತಿಯು

(a) ಭಾರತದ ನಾಗರಿಕನಾಗಿರುವ ಹೊರತು ಮತ್ತು ಚುನಾವಣಾ ಆಯೋಗವು ಆ ಬಗ್ಗೆ ಅಧಿಕೃತಗೊಳಿಸಿರುವ ಯಾರೇ ವ್ಯಕ್ತಿಯ ಮುಂದೆ ಮೂರನೆಯ ಅನುಸೂಚಿಯಲ್ಲಿ ಆ ಉದ್ದೇಶಕ್ಕಾಗಿ ಕೊಟ್ಟಿರುವ ನಮೂನೆಯಲ್ಲಿ ಪ್ರಮಾಣ ಅಥವಾ ಪ್ರತಿಜ್ಞೆ ಮಾಡಿ ಅದಕ್ಕೆ ರುಜು ಮಾಡಿರುವ ಹೊರತು;

(b) ವಿಧಾನಸಭೆಯ ಸ್ಥಾನದ ಸಂದರ್ಭದಲ್ಲಿ ಇಪ್ಪತ್ತೈದು ವರ್ಷಗಳಿಗಿಂತ ಕಡಿಮೆಯಿಲ್ಲದಷ್ಟು ವಯಸ್ಸಿನವನಾಗಿರುವ ಹೊರತು ಮತ್ತು ವಿಧಾನಪರಿಷತ್ತಿನ ಸ್ಥಾನದ ಸಂದರ್ಭದಲ್ಲಿ ಮೂವತ್ತು ವರ್ಷಗಳಿಗಿಂತ ಕಡಿಮೆಯಿಲ್ಲದಷ್ಟು ವಯಸ್ಸಿನವನಾಗಿರುವ ಹೊರತು; ಮತ್ತು

(c) ಸಂಸತ್ತು ಮಾಡಿದ ಯಾವುದೇ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ನಿಯಮಿಸಬಹುದಾದಂಥ ಇತರ ಅರ್ಹತೆಗಳನ್ನು ಹೊಂದಿದ್ದ ಹೊರತು ರಾಜ್ಯದ ವಿಧಾನಮಂಡಲದಲ್ಲಿನ ಒಂದು ಸ್ಥಾನವನ್ನು ಭರ್ತಿ ಮಾಡುವುದಕ್ಕಾಗಿ ಆಯ್ಕೆಯಾಗಲು ಅರ್ಹನಾಗಿರತಕ್ಕದ್ದಲ್ಲ.

174 . ರಾಜ್ಯ ವಿಧಾನಮಂಡಲದ ಅಧಿವೇಶನಗಳು, ಅಧಿವೇಶನದ ಮುಕ್ತಾಯ ಮತ್ತು ವಿಸರ್ಜನೆ.-

1 . ರಾಜ್ಯಪಾಲನು ತಾನು ಸೂಕ್ತವೆಂದು ಭಾವಿಸತಕ್ಕಂಥ ಕಾಲದಲ್ಲಿ ಮತ್ತು ಸ್ಥಳದಲ್ಲಿ ರಾಜ್ಯದ ವಿಧಾನಮಂಡಲದ ಸದನವನ್ನು ಅಥವಾ ಪ್ರತಿಯೊಂದು ಸದನವನ್ನು ಕಾಲಕಾಲಕ್ಕೆ ಕರೆಯತಕ್ಕದ್ದು; ಆದರೆ ಒಂದು ಅಧಿವೇಶನದ ಕೊನೆಯ ಉಪವೇಶನದ ಮತ್ತು ಮುಂದಿನ ಅಧಿವೇಶನದ ಮೊದಲನೆಯ ಉಪವೇಶನಕ್ಕೆ ಗೊತ್ತುಮಾಡಿರುವ ದಿನಾಂಕದ ನಡುವೆ ಆರು ತಿಂಗಳ ಅಂತರವಿರತಕ್ಕದ್ದಲ್ಲ.

2 . ರಾಜ್ಯಪಾಲನು ಕಾಲಕಾಲಕ್ಕೆ.

(a) ಸದನದ ಅಧಿವೇಶನವನ್ನು ಅಥವಾ ಎರಡು ಸದನಗಳಲ್ಲಿ ಯಾವುದೇ ಒಂದು ಸದನದ ಅಧಿವೇಶನವನ್ನು ಮುಕ್ತಾಯಗೊಳಿಸಬಹುದು;

(b) ವಿಧಾನಸಭೆಯನ್ನು ವಿಸರ್ಜಿಸಬಹುದು.

175 . ಸದನವನ್ನು ಅಥವಾ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲು ಮತ್ತು ಅವುಗಳಿಗೆ ಸಂದೇಶಗಳನ್ನು ಕಳುಹಿಸಲು ರಾಜ್ಯಪಾಲನಿಗೆ ಇರುವ ಹಕ್ಕು.-

1 . ರಾಜ್ಯಪಾಲನು, ವಿಧಾನಸಭೆಯನ್ನು ಅಥವಾ ರಾಜ್ಯವು ವಿಧಾನಪರಿಷತ್ತನ್ನು ಹೊಂದಿರುವ ಸಂದರ್ಭದಲ್ಲಿ ಆ ರಾಜ್ಯದ ವಿಧಾನಮಂಡಲದ ಎರಡರಲ್ಲಿ ಒಂದು ಸದನವನ್ನು ಅಥವಾ ಒಟ್ಟಿಗೆ ಸಭೆ ಸೇರಿರುವ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಬಹುದು ಮತ್ತು ಆ ಉದ್ದೇಶಕ್ಕಾಗಿ ಸದಸ್ಯರ ಹಾಜರಾತಿಯನ್ನು ಅಗತ್ಯಪಡಿಸಬಹುದು.

2 . ರಾಜ್ಯದ ವಿಧಾನಮಂಡಲದಲ್ಲಿ ಆಗ ಇತ್ಯರ್ಥವಾಗದೆ ಉಳಿದಿರುವ ಯಾವುದೇ ವಿಧೇಯಕಕ್ಕೆ ಸಂಬಂಧಿಸಿದ ಅಥವಾ ಬೇರೆ ವಿಷಯಕ್ಕೆ ಸಂಬಂಧಿಸಿದ ಸಂದೇಶಗಳನ್ನು, ರಾಜ್ಯಪಾಲನು, ರಾಜ್ಯದ ವಿಧಾನಮಂಡಲದ ಸದನಕ್ಕೆ ಅಥವಾ ಸದನಗಳಿಗೆ ಕಳುಹಿಸಬಹುದು ಮತ್ತು ಯಾವ ಸದನಕ್ಕೆ ಯಾವುದೇ ಸಂದೇಶವನ್ನು, ಹಾಗೆ ಕಳುಹಿಸಲಾಗಿದೆಯೋ ಆ ಸದನವು ಪರ್ಯಾಲೋಚನೆಗೆ ತೆಗೆದುಕೊಳ್ಳಬೇಕೆಂದು ಆ ಸಂದೇಶದ ಮೂಲಕ ಅಗತ್ಯಪಡಿಸಿರುವ ಯಾವುದೇ ವಿಷಯವನ್ನು ಅನುಕೂಲವಾದಷ್ಟು ಬೇಗನೆ ಆ ಸದನವು ಪರ್ಯಾಲೋಚಿಸತಕ್ಕದ್ದು.

176 . ರಾಜ್ಯಪಾಲನಿಂದ ವಿಶೇಷ ಭಾಷಣ.-

1 . ವಿಧಾನಸಭೆಯ ಪ್ರತಿಯೊಂದು ಸಾರ್ವತ್ರಿಕ ಚುನಾವಣೆಯ ತರುವಾಯ ಮೊದಲನೆಯ ಅಧಿವೇಶನದ ಪ್ರಾರಂಭದಲ್ಲಿ ಮತ್ತು ಪ್ರತಿವರ್ಷದ ಮೊದಲನೆಯ ಅಧಿವೇಶನದ ಪ್ರಾರಂಭದಲ್ಲಿ ರಾಜ್ಯಪಾಲನು, ವಿಧಾನಸಭೆಯನ್ನು ಅಥವಾ ರಾಜ್ಯವು ವಿಧಾನಪರಿಷತ್ತನ್ನು ಹೊಂದಿರುವ ಸಂದರ್ಭದಲ್ಲಿ ಒಟ್ಟಿಗೆ ಸಭೆ ಸೇರಿರುವ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡತಕ್ಕದ್ದು ಮತ್ತು ವಿಧಾನಮಂಡಲವನ್ನು ಕರೆದಿರುವುದರ ಕಾರಣಗಳನ್ನು ಅದಕ್ಕೆ ತಿಳಿಸತಕ್ಕದ್ದು.

2 . ಅಂಥ ಭಾಷಣದಲ್ಲಿ ಉಲ್ಲೇಖಿಸಿದ ವಿಷಯಗಳ ಚರ್ಚೆಗಾಗಿ ಕಾಲವನ್ನು ನಿಗದಿಪಡಿಸುವುದಕ್ಕಾಗಿ ಸದನದ ಅಥವಾ ಎರಡೂ ಸದನಗಳ ಕಾರ್ಯವಿಧಾನವನ್ನು ವಿನಿಯಮಗೊಳಿಸುವಂಥ ನಿಯಮಗಳ ಮೂಲಕ ಉಪಬಂಧವನ್ನು ಕಲ್ಪಿಸತಕ್ಕದ್ದು.

177 . ಸದನಗಳ ಸಂಬಂಧದಲ್ಲಿ ಮಂತ್ರಿಗಳ ಮತ್ತು ಅಡ್ವಕೇಟ್ ಜನರಲ್‌ನ ಹಕ್ಕುಗಳು.

ರಾಜ್ಯದ ಪ್ರತಿಯೊಬ್ಬ ಮಂತ್ರಿಯು ಮತ್ತು ಅಡ್ವಕೇಟ್ ಜನರಲ್‌ನು ರಾಜ್ಯದ ವಿಧಾನಸಭೆಯ ವ್ಯವಹರಣೆಗಳಲ್ಲಿ ಅಥವಾ ಆ ರಾಜ್ಯವು ವಿಧಾನಪರಿಷತ್ತನ್ನು ಹೊಂದಿರುವ ಸಂದರ್ಭದಲ್ಲಿ ಉಭಯ ಸದನಗಳ ವ್ಯವಹರಣೆಗಳಲ್ಲಿ ಮಾತನಾಡಲು ಮತ್ತು ಅನ್ಯಥಾ ಭಾಗವಹಿಸಲು ಹಾಗೂ ಅವನನ್ನು ಸದಸ್ಯನಾಗಿ ಹೆಸರಿಸಿರಬಹುದಾದಂಥ ವಿಧಾನಮಂಡಲದ ಯಾವುದೇ ಸಮಿತಿಯಲ್ಲಿ ಮಾತನಾಡಲು ಮತ್ತು ಅನ್ಯಥಾ ಅವುಗಳ ವ್ಯವಹರಣೆಗಳಲ್ಲಿ ಭಾಗವಹಿಸಲು ಹಕ್ಕನ್ನು ಹೊಂದಿರತಕ್ಕದ್ದು. ಆದರೆ ಈ ಅನುಚ್ಛೇದದ ಕಾರಣದಿಂದಲೇ ಮತದಾನ ಮಾಡಲು ಅವನು ಹಕ್ಕುಳ್ಳವನಾಗಿರತಕ್ಕದ್ದಲ್ಲ.

ರಾಜ್ಯ ವಿಧಾನಮಂಡಲದ ಅಧಿಕಾರಿಗಳು Officers of the State Legislature

178 . ವಿಧಾನಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ –

ರಾಜ್ಯದ ಪ್ರತಿಯೊಂದು ವಿಧಾನಸಭೆಯು ತನ್ನ ಸದಸ್ಯರಲ್ಲಿ ಇಬ್ಬರನ್ನು ಅನುಕ್ರಮವಾಗಿ ಅದರ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆದಷ್ಟು ಬೇಗ ಆಯ್ಕೆ ಮಾಡತಕ್ಕದ್ದು ಮತ್ತು ಅಧ್ಯಕ್ಷನ ಅಥವಾ ಉಪಾಧ್ಯಕ್ಷನ ಪದವು ಖಾಲಿ ಆದಾಗಲೆಲ್ಲಾ, ಅಧ್ಯಕ್ಷನನ್ನಾಗಿ ಅಥವಾ ಸಂದರ್ಭಾನುಸಾರ, ಉಪಾಧ್ಯಕ್ಷನನ್ನಾಗಿ ಮತ್ತೊಬ್ಬ ಸದಸ್ಯನನ್ನು ಆಯ್ಕೆಮಾಡತಕ್ಕದ್ದು.

179 . ಅಧ್ಯಕ್ಷನು ಮತ್ತು ಉಪಾಧ್ಯಕ್ಷನು ಪದಗಳನ್ನು ಖಾಲಿ ಮಾಡುವುದು, ಅವುಗಳಿಗೆ ರಾಜೀನಾಮೆ ನೀಡುವುದು ಮತ್ತು ಆ ಪದಗಳಿಂದ ಅವರನ್ನು ತೆಗೆದುಹಾಕುವುದು.

ಸಭೆಯ ಅಧ್ಯಕ್ಷನಾಗಿ ಅಥವಾ ಉಪಾಧ್ಯಕ್ಷನಾಗಿ ಪದಧಾರಣ ಮಾಡಿರುವ ಸದಸ್ಯನು,

(a) ಆ ಸಭೆಯ ಸದಸ್ಯನಾಗಿರುವುದು ನಿಂತುಹೋದರೆ ತನ್ನ ಪದವನ್ನು ಖಾಲಿ ಮಾಡತಕ್ಕದ್ದು;

(b) ಅಂಥ ಸದಸ್ಯನು ಅಧ್ಯಕ್ಷನಾಗಿದ್ದರೆ ಉಪಾಧ್ಯಕ್ಷನಿಗೆ ಮತ್ತು ಉಪಾಧ್ಯಕ್ಷನಾಗಿದ್ದರೆ ಅಧ್ಯಕ್ಷನಿಗೆ ಯಾವುದೇ ಕಾಲದಲ್ಲಿ ತಾನು ಸಹಿ ಮಾಡಿದ ಪತ್ರವನ್ನು ಬರೆದು ತನ್ನ ಪದಕ್ಕೆ ರಾಜೀನಾಮೆ ಕೊಡಬಹುದು; ಮತ್ತು

(c) ವಿಧಾನಸಭೆಯ ಆಗಿನ ಎಲ್ಲ ಸದಸ್ಯರ ಬಹುಮತದಿಂದ ಅಂಗೀಕೃತವಾದ ನಿರ್ಣಯದ ಮೂಲಕ ಅವನನ್ನು ಪದದಿಂದ ತೆಗೆದುಹಾಕಬಹುದು:

[ (c) ಖಂಡದ ಉದ್ದೇಶಕ್ಕಾಗಿ ಯಾವುದೇ ನಿರ್ಣಯವನ್ನು ಮಂಡಿಸುವ ಆಶಯದ ನೋಟೀಸನ್ನು ಕನಿಷ್ಠಪಕ್ಷ ಹದಿನಾಲ್ಕು ದಿನಗಳ ಮುಂಚಿತವಾಗಿ ಕೊಟ್ಟಿದ್ದ ಹೊರತು ಅಂಥ ನಿರ್ಣಯವನ್ನು ಮಂಡಿಸತಕ್ಕದ್ದಲ್ಲ: ]

ಮತ್ತು , ವಿಧಾನಸಭೆಯು ವಿಸರ್ಜನೆಯಾದಾಗಲೆಲ್ಲ, ವಿಸರ್ಜನೆಯಾದ ತರುವಾಯ ನಡೆಯುವ ವಿಧಾನಸಭೆಯ ಮೊದಲನೆಯ ಅಧಿವೇಶನದ ನಿಕಟಪೂರ್ವದ ಸಮಯದವರೆಗೆ ಅಧ್ಯಕ್ಷನು ತನ್ನ ಪದವನ್ನು ಖಾಲಿ ಮಾಡತಕ್ಕದ್ದಲ್ಲ.

180 . ಅಧ್ಯಕ್ಷನಾಗಿ ಕಾರ್ಯನಿರ್ವಹಿಸಲು ಅಥವಾ ಅಧ್ಯಕ್ಷ ಪದದ ಕರ್ತವ್ಯಗಳನ್ನು ನೆರವೇರಿಸಲು ಉಪಾಧ್ಯಕ್ಷನ ಅಥವಾ ಇತರ ವ್ಯಕ್ತಿಯ ಅಧಿಕಾರ.

1 . ಅಧ್ಯಕ್ಷನ ಪದವು ಖಾಲಿಯಾಗಿರುವಾಗ ಆ ಪದದ ಕರ್ತವ್ಯಗಳನ್ನು ಉಪಾಧ್ಯಕ್ಷನು ನೆರವೇರಿಸತಕ್ಕದ್ದು ಅಥವಾ ಉಪಾಧ್ಯಕ್ಷನ ಪದವೂ ಖಾಲಿಯಾಗಿರುವಾಗ ಆ ಉದ್ದೇಶಕ್ಕಾಗಿ ರಾಜ್ಯಪಾಲನು ನೇಮಕ ಮಾಡಬಹುದಾದಂಥ ಸಭೆಯ ಸದಸ್ಯನು ಅಧ್ಯಕ್ಷನ ಪದದ ಕರ್ತವ್ಯಗಳನ್ನು ನೆರವೇರಿಸತಕ್ಕದ್ದು.

2 . ಸಭೆಯ ಯಾವುದೇ ಉಪವೇಶನದಲ್ಲಿ ಅಧ್ಯಕ್ಷನು ಗೈರುಹಾಜರಾಗಿರುವಾಗ, ಉಪಾಧ್ಯಕ್ಷನು ಅಥವಾ ಅವನೂ ಗೈರುಹಾಜರಾಗಿರುವಾಗ ಸಭೆಯ ಪ್ರಕ್ರಿಯಾ ನಿಯಮಗಳ ಮೂಲಕ ನಿರ್ಧರಿಸಬಹುದಾದಂಥ ವ್ಯಕ್ತಿಯು ಅಥವಾ ಅಂಥ ಯಾವ ವ್ಯಕ್ತಿಯೂ ಹಾಜರಿಲ್ಲದಿದ್ದರೆ ಸಭೆಯು ನಿರ್ಧರಿಸಬಹುದಾದಂಥ ಇತರೆ ಯಾರೇ ವ್ಯಕ್ತಿಯು ಅಧ್ಯಕ್ಷನಾಗಿ ಕಾರ್ಯನಿರ್ವಹಿಸತಕ್ಕದ್ದು.

181 . ಅಧ್ಯಕ್ಷನನ್ನು ಅಥವಾ ಉಪಾಧ್ಯಕ್ಷನನ್ನು ಪದದಿಂದ ತೆಗೆದುಹಾಕುವ ನಿರ್ಣಯವು ಪರ್ಯಾಲೋಚನೆಯಲ್ಲಿರುವಾಗ ಅವನು ಅಧ್ಯಕ್ಷತೆ ವಹಿಸತಕ್ಕದ್ದಲ್ಲ.-

1 . ವಿಧಾನಸಭೆಯ ಯಾವುದೇ ಉಪವೇಶನದಲ್ಲಿ ಅಧ್ಯಕ್ಷನನ್ನು ಅವನ ಪದದಿಂದ ತೆಗೆದುಹಾಕುವ ಯಾವುದೇ ನಿರ್ಣಯವು ಪರ್ಯಾಲೋಚನೆಯಲ್ಲಿರುವಾಗ, ಅಧ್ಯಕ್ಷನು ಹಾಜರಿದ್ದರೂ ಅವನು. ಅಥವಾ ಉಪಾಧ್ಯಕ್ಷನನ್ನು ಅವನ ಪದದಿಂದ ತೆಗೆದುಹಾಕುವ ಯಾವುದೇ ನಿರ್ಣಯವು ಪರ್ಯಾಲೋಚನೆಯಲ್ಲಿರುವಾಗ, ಉಪಾಧ್ಯಕ್ಷನು ಹಾಜರಿದ್ದರೂ ಅವನು ಅಧ್ಯಕ್ಷತೆ ವಹಿಸತಕ್ಕದ್ದಲ್ಲ. 180ನೆಯ ಅನುಚ್ಛೇದದ (2)ನೆಯ ಖಂಡದ ಉಪಬಂಧಗಳು, ಅಧ್ಯಕ್ಷನು ಅಥವಾ ಸಂದರ್ಭಾನುಸಾರ ಉಪಾಧ್ಯಕ್ಷನು ಗೈರುಹಾಜರಾಗಿರುವ ಉಪವೇಶನದ ಸಂಬಂಧದಲ್ಲಿ ಅನ್ವಯವಾಗುವಂತೆಯೇ ಅಂಥ ಪ್ರತಿಯೊಂದು ಉಪವೇಶನದ ಸಂಬಂಧದಲ್ಲಿಯೂ ಅನ್ವಯವಾಗತಕ್ಕದ್ದು.

2 . ಅಧ್ಯಕ್ಷನನ್ನು ಪದದಿಂದ ತೆಗೆದುಹಾಕುವ ಯಾವುದೇ ನಿರ್ಣಯವು ವಿಧಾನಸಭೆಯ ಪರ್ಯಾಲೋಚನೆಯಲ್ಲಿರುವಾಗ ಅಧ್ಯಕ್ಷನು ವಿಧಾನಸಭೆಯಲ್ಲಿ ಮಾತನಾಡುವ ಮತ್ತು ಅದರ ವ್ಯವಹರಣೆಗಳಲ್ಲಿ ಅನ್ಯಥಾ ಭಾಗವಹಿಸುವ ಹಕ್ಕನ್ನು ಹೊಂದಿರತಕ್ಕದ್ದು ಮತ್ತು 189ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ಅಂಥ ನಿರ್ಣಯದ ಮೇಲೆ ಅಥವಾ ಅಂಥ ವ್ಯವಹರಣೆಗಳಲ್ಲಿ ಇತರ ಯಾವುದೇ ವಿಷಯದ ಮೇಲೆ ಪ್ರಥಮತಃ ಮಾತ್ರ ಮತಕೊಡುವ ಹಕ್ಕು ಅವನಿಗಿರತಕ್ಕದ್ದು, ಆದರೆ, ಮತಗಳು ಸಮವಾಗಿರುವ ಸಂದರ್ಭದಲ್ಲಿ ಮತ ಕೊಡಲು ಅವನು ಹಕ್ಕುಳ್ಳವನಾಗಿರತಕ್ಕದ್ದಲ್ಲ.

182 . ವಿಧಾನ ಪರಿಷತ್ತಿನ ಸಭಾಪತಿ ಮತ್ತು ಉಪಸಭಾಪತಿ-

ವಿಧಾನಪರಿಷತ್ತನ್ನು ಹೊಂದಿರುವ ಪ್ರತಿಯೊಂದು ರಾಜ್ಯದ ವಿಧಾನ ಪರಿಷತ್ತು, ತನ್ನ ಇಬ್ಬರು ಸದಸ್ಯರನ್ನು ಅನುಕ್ರಮವಾಗಿ ಅದರ ಸಭಾಪತಿಯಾಗಿ ಮತ್ತು ಉಪಸಭಾಪತಿಯಾಗಿ ಆದಷ್ಟು ಬೇಗ ಆಯ್ಕೆ ಮಾಡತಕ್ಕದ್ದು ಮತ್ತು ಸಭಾಪತಿಯ ಪದವು ಮತ್ತು ಉಪಸಭಾಪತಿಯ ಪದವು ಖಾಲಿ ಆದಾಗಲೆಲ್ಲ ಸಭಾಪತಿಯಾಗಿ ಅಥವಾ ಸಂದರ್ಭಾನುಸಾರ ಉಪಸಭಾಪತಿಯಾಗಿ ಮತ್ತೊಬ್ಬ ಸದಸ್ಯನನ್ನು ಆಯ್ಕೆ ಮಾಡತಕ್ಕದ್ದು.

183 . ಸಭಾಪತಿಯು ಮತ್ತು ಉಪಸಭಾಪತಿಯು ಪದಗಳನ್ನು ಖಾಲಿ ಮಾಡುವುದು, ಪದಗಳಿಗೆ ರಾಜೀನಾಮೆ ನೀಡುವುದು ಮತ್ತು ಪದಗಳಿಂದ ಅವರನ್ನು ತೆಗೆದುಹಾಕುವುದು.

ವಿಧಾನಪರಿಷತ್ತಿನ ಸಭಾಪತಿಯಾಗಿ ಅಥವಾ ಉಪಸಭಾಪತಿಯಾಗಿ ಪದಧಾರಣ ಮಾಡಿರುವ ಸದಸ್ಯನು.

(a) ಆ ಪರಿಷತ್ತಿನ ಸದಸ್ಯನಾಗಿರುವುದು ನಿಂತುಹೋದಲ್ಲಿ ತನ್ನ ಪದವನ್ನು ಖಾಲಿ ಮಾಡತಕ್ಕದ್ದು;

(b) ಅಂಥ ಸದಸ್ಯನು ಸಭಾಪತಿಯಾಗಿದ್ದರೆ ಉಪಸಭಾಪತಿಗೆ ಅಥವಾ ಉಪಸಭಾಪತಿಯಾಗಿದ್ದರೆ ಸಭಾಪತಿಗೆ ಯಾವುದೇ ಕಾಲದಲ್ಲಿ ತಾನು ಸಹಿ ಮಾಡಿದ ಪತ್ರವನ್ನು ಬರೆದು ತನ್ನ ಪದಕ್ಕೆ ರಾಜೀನಾಮೆ ಕೊಡಬಹುದು; ಮತ್ತು

(c) ಆ ಪರಿಷತ್ತಿನ ಆಗಿನ ಎಲ್ಲ ಸದಸ್ಯರ ಬಹುಮತದಿಂದ ಅಂಗೀಕೃತವಾದ ನಿರ್ಣಯದ ಮೂಲಕ ಅವನನ್ನು ಪದದಿಂದ ತೆಗೆದುಹಾಕಬಹುದು:

[, (ಸಿ) ಖಂಡದ ಉದ್ದೇಶಕ್ಕಾಗಿ ಯಾವುದೇ ನಿರ್ಣಯವನ್ನು ಮಂಡಿಸುವ ಆಶಯದ ನೋಟೀಸನ್ನು ಕನಿಷ್ಠಪಕ್ಷ ಹದಿನಾಲ್ಕು ದಿನಗಳ ಮುಂಚಿತವಾಗಿ ಕೊಟ್ಟಿದ್ದ ಹೊರತು ಅಂಥ ನಿರ್ಣಯವನ್ನು ಮಂಡಿಸತಕ್ಕದ್ದಲ್ಲ. ]

184 . ಸಭಾಪತಿಯಾಗಿ ಕಾರ್ಯನಿರ್ವಹಿಸಲು ಅಥವಾ ಸಭಾಪತಿಯ ಪದದ ಕರ್ತವ್ಯಗಳನ್ನು ನೆರವೇರಿಸಲು ಉಪಸಭಾಪತಿಯ ಅಥವಾ ಇತರ ವ್ಯಕ್ತಿಯ ಅಧಿಕಾರ.-

1 . ಸಭಾಪತಿಯ ಪದವು ಖಾಲಿಯಾಗಿರುವಾಗ ಆ ಪದದ ಕರ್ತವ್ಯಗಳನ್ನು ಉಪಸಭಾಪತಿಯು ನೆರವೇರಿಸತಕ್ಕದ್ದು ಅಥವಾ ಉಪಸಭಾಪತಿಯ ಪದವೂ ಖಾಲಿಯಾಗಿರುವಲ್ಲಿ ಆ ಉದ್ದೇಶಕ್ಕಾಗಿ ರಾಜ್ಯಪಾಲನು ನೇಮಕ ಮಾಡಬಹುದಾದಂಥ ಪರಿಷತ್ತಿನ ಸದಸ್ಯನು ಸಭಾಪತಿಯ ಪದದ ಕರ್ತವ್ಯಗಳನ್ನು ನೆರವೇರಿಸತಕ್ಕದ್ದು.

2 . ಪರಿಷತ್ತಿನ ಯಾವುದೇ ಉಪವೇಶನದಲ್ಲಿ ಸಭಾಪತಿಯು ಗೈರುಹಾಜರಾಗಿರುವಾಗ ಉಪಸಭಾಪತಿಯು, ಅಥವಾ ಅವನೂ ಗೈರುಹಾಜರಿರುವಾಗ ಆ ಪರಿಷತ್ತಿನ ಪ್ರಕ್ರಿಯಾ ನಿಯಮಗಳ ಮೂಲಕ ನಿರ್ಧರಿಸಬಹುದಾದಂಥ ವ್ಯಕ್ತಿಯು ಅಥವಾ ಅಂಥ ಯಾವ ವ್ಯಕ್ತಿಯೂ ಹಾಜರಿಲ್ಲದಿದ್ದರೆ, ಆ ಪರಿಷತ್ತು ನಿರ್ಧರಿಸಬಹುದಾದಂಥ ಇತರ ಯಾರೇ ವ್ಯಕ್ತಿಯು ಸಭಾಪತಿಯಾಗಿ ಕಾರ್ಯನಿರ್ವಹಿಸತಕ್ಕದ್ದು.

185 . ಸಭಾಪತಿಯನ್ನು ಅಥವಾ ಉಪಸಭಾಪತಿಯನ್ನು ಪದದಿಂದ ತೆಗೆದುಹಾಕುವ ನಿರ್ಣಯವು ಪರ್ಯಾಲೋಚನೆಯಲ್ಲಿರುವಾಗ ಅವನು ಅಧ್ಯಕ್ಷತೆ ವಹಿಸತಕ್ಕದ್ದಲ್ಲ.-

1 . ವಿಧಾನಪರಿಷತ್ತಿನ ಯಾವುದೇ ಉಪವೇಶನದಲ್ಲಿ ಸಭಾಪತಿಯನ್ನು ಅವನ ಪದದಿಂದ ತೆಗೆದುಹಾಕುವ ಯಾವುದೇ ನಿರ್ಣಯವು ಪರ್ಯಾಲೋಚನೆಯಲ್ಲಿರುವಾಗ ಸಭಾಪತಿಯು ಹಾಜರಿದ್ದರೂ ಅವನು, ಅಥವಾ ಉಪಸಭಾಪತಿಯನ್ನು ಅವನ ಪದದಿಂದ ತೆಗೆದುಹಾಕುವ ಯಾವುದೇ ನಿರ್ಣಯವು ಪರ್ಯಾಲೋಚನೆಯಲ್ಲಿರುವಾಗ ಉಪಸಭಾಪತಿಯು ಹಾಜರಿದ್ದರೂ ಅವನು ಅಧ್ಯಕ್ಷತೆ ವಹಿಸತಕ್ಕದ್ದಲ್ಲ ಮತ್ತು 184ನೆಯ ಅನುಚ್ಛೇದದ (2)ನೆಯ ಖಂಡದ ಉಪಬಂಧಗಳು, ಸಭಾಪತಿಯು ಅಥವಾ ಸಂದರ್ಭಾನುಸಾರ ಉಪಸಭಾಪತಿಯು ಗೈರುಹಾಜರಾಗಿರುವ ಉಪವೇಶನದ ಸಂಬಂಧದಲ್ಲಿ ಅನ್ವಯವಾಗುವಂತೆಯೇ ಅಂಥ ಪ್ರತಿಯೊಂದು ಉಪವೇಶನದ ಸಂಬಂಧದಲ್ಲಿಯೂ ಅನ್ವಯವಾಗತಕ್ಕದ್ದು.

2 . ಸಭಾಪತಿಯನ್ನು ಅವನ ಪದದಿಂದ ತೆಗೆದುಹಾಕುವ ಯಾವುದೇ ನಿರ್ಣಯವು ವಿಧಾನ ಪರಿಷತ್ತಿನಲ್ಲಿ ಪರ್ಯಾಲೋಚನೆಯಲ್ಲಿರುವಾಗ ಸಭಾಪತಿಯು ವಿಧಾನಪರಿಷತ್ತಿನಲ್ಲಿ ಮಾತನಾಡುವ ಮತ್ತು ಅದರ ವ್ಯವಹರಣೆಗಳಲ್ಲಿ ಅನ್ಯಥಾ ಭಾಗವಹಿಸುವ ಹಕ್ಕನ್ನು ಹೊಂದಿರತಕ್ಕದ್ದು; ಮತ್ತು 189ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ಅಂಥ ನಿರ್ಣಯದ ಮೇಲೆ ಅಥವಾ ವ್ಯವಹರಣೆಗಳ ಇತರ ಯಾವುದೇ ವಿಷಯದ ಮೇಲೆ ಪ್ರಥಮತಃ ಮತ ಕೊಡಲು ಹಕ್ಕುಳ್ಳವನಾಗಿರತಕ್ಕದ್ದು, ಆದರೆ, ಮತಗಳು ಸಮನಾಗಿರುವ ಸಂದರ್ಭದಲ್ಲಿ ಮತ ಕೊಡುವ ಹಕ್ಕು ಅವನಿಗಿರತಕ್ಕದ್ದಲ್ಲ.

186 . ಅಧ್ಯಕ್ಷನ ಮತ್ತು ಉಪಾಧ್ಯಕ್ಷನ ಹಾಗೂ ಸಭಾಪತಿಯ ಮತ್ತು ಉಪಸಭಾಪತಿಯ ಸಂಬಳಗಳು ಮತ್ತು ಭತ್ಯೆಗಳು.

ವಿಧಾನಸಭೆಯ ಅಧ್ಯಕ್ಷನಿಗೆ ಮತ್ತು ಉಪಾಧ್ಯಕ್ಷನಿಗೆ ಹಾಗೂ ವಿಧಾನ ಪರಿಷತ್ತಿನ ಸಭಾಪತಿಗೆ ಮತ್ತು ಉಪಸಭಾಪತಿಗೆ ರಾಜ್ಯದ ವಿಧಾನಮಂಡಲವು ಕಾನೂನಿನ ಮೂಲಕ ಅನುಕ್ರಮವಾಗಿ ನಿಗದಿಪಡಿಸಬಹುದಾದಂಥ ಸಂಬಳಗಳು ಮತ್ತು ಭತ್ಯೆಗಳು ಸಂದಾಯವಾಗತಕ್ಕದ್ದು ಮತ್ತು ಈ ಬಗ್ಗೆ ಉಪಬಂಧವನ್ನು ಹಾಗೆ ಮಾಡುವವರೆಗೆ ಎರಡನೆಯ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಲಾದ ಸಂಬಳಗಳು ಮತ್ತು ಭತ್ಯೆಗಳು ಅವರಿಗೆ ಸಂದಾಯವಾಗತಕ್ಕದ್ದು.

187 . ರಾಜ್ಯವಿಧಾನಮಂಡಲದ ಸಚಿವಾಲಯ.- secretariat of state legislative

1 . ಒಂದು ರಾಜ್ಯದ ವಿಧಾನಮಂಡಲದ ಸದನಕ್ಕೆ ಅಥವಾ ಉಭಯ ಸದನಗಳಿಗೆ ಪ್ರತ್ಯೇಕ ಸಚಿವಾಲಯ ಸಿಬ್ಬಂದಿ ಇರತಕ್ಕದ್ದು:

[. ಈ ಖಂಡದಲ್ಲಿ ಇರುವುದು ಯಾವುದೂ ವಿಧಾನಪರಿಷತ್ತನ್ನು ಹೊಂದಿರುವ ರಾಜ್ಯದ ವಿಧಾನಮಂಡಲದ ಸಂದರ್ಭದಲ್ಲಿ ಅಂಥ ವಿಧಾನಮಂಡಲದ ಉಭಯ ಸದನಗಳಿಗೆ ಸಾಮಾನ್ಯವಾಗಿರುವ ಹುದ್ದೆಗಳನ್ನು ಸೃಜಿಸುವುದಕ್ಕೆ ಅಡ್ಡಿಯನ್ನುಂಟುಮಾಡುವುದಾಗಿ ಅರ್ಥೈಸತಕ್ಕದ್ದಲ್ಲ. ]

2 . ರಾಜ್ಯದ ವಿಧಾನಮಂಡಲದ ಸದನದ ಅಥವಾ ಉಭಯ ಸದನಗಳ ಸಚಿವಾಲಯ ಸಿಬ್ಬಂದಿಯ ನೇಮಕಾತಿಯನ್ನು ಮತ್ತು ನೇಮಕಗೊಂಡ ವ್ಯಕ್ತಿಗಳ ಸೇವಾ ಷರತ್ತುಗಳನ್ನು ರಾಜ್ಯದ ವಿಧಾನಮಂಡಲವು ಕಾನೂನಿನ ಮೂಲಕ ವಿನಿಯಮಿಸಬಹುದು.

3 . (2)ನೆಯ ಖಂಡದ ಮೇರೆಗೆ ರಾಜ್ಯದ ವಿಧಾನಮಂಡಲವು ಉಪಬಂಧವನ್ನು ಮಾಡುವವರೆಗೆ, ರಾಜ್ಯಪಾಲನು ವಿಧಾನಸಭೆಯ ಅಧ್ಯಕ್ಷನೊಂದಿಗೆ ಅಥವಾ ಸಂದರ್ಭಾನುಸಾರ, ವಿಧಾನಪರಿಷತ್ತಿನ ಸಭಾಪತಿಯೊಂದಿಗೆ ಸಮಾಲೋಚಿಸಿ ಆ ಸಭೆಯ ಅಥವಾ ಆ ಪರಿಷತ್ತಿನ ಸಚಿವಾಲಯ ಸಿಬ್ಬಂದಿ ನೇಮಕಾತಿಯನ್ನು ಮತ್ತು ನೇಮಕಗೊಂಡ ವ್ಯಕ್ತಿಗಳ ಸೇವಾ ಷರತ್ತುಗಳನ್ನು ವಿನಿಯಮಿಸುವ ನಿಯಮಗಳನ್ನು ರಚಿಸಬಹುದು ಮತ್ತು ಹಾಗೆ ರಚಿತವಾದ ಯಾವುದೇ ನಿಯಮಗಳು ಸದರಿ ಖಂಡದ ಮೇರೆಗೆ ರಚಿತವಾದ ಕಾನೂನಿನ ಯಾವುದೇ ಉಪಬಂಧಗಳಿಗೆ ಒಳಪಟ್ಟು ಪರಿಣಾಮಕಾರಿಯಾಗತಕ್ಕದ್ದು.

ರಾಜ್ಯ ವಿಧಾನಮಂಡಲದ ಅಧಿಕಾರ, ಕಾರ್ಯಕಲಾಪ ಮತ್ತು ಸದಸ್ಯರ ಅನರ್ಹತೆಗಳು (Article 168–195) . The State Legislature, Conduct of Business & Member Disqualification .
ರಾಜ್ಯ ವಿಧಾನಮಂಡಲದ ಅಧಿಕಾರ, ಕಾರ್ಯಕಲಾಪ ಮತ್ತು ಸದಸ್ಯರ ಅನರ್ಹತೆಗಳು (Article 168–195) .Powerful Guide to The State Legislature, Conduct of Business & Member Disqualification .

ರಾಜ್ಯ ಕಾರ್ಯಕಲಾಪ ನಿರ್ವಹಣೆ Conduct of State Business

188 . ಸದಸ್ಯರಿಂದ ಪ್ರಮಾಣ ವಚನ ಅಥವಾ ಪ್ರತಿಜ್ಞಾ ವಚನ –

ಒಂದು ರಾಜ್ಯದ ವಿಧಾನಸಭೆಯ ಅಥವಾ ವಿಧಾನಪರಿಷತ್ತಿನ ಪ್ರತಿಯೊಬ್ಬ ಸದಸ್ಯನು, ತನ್ನ ಸ್ಥಾನವನ್ನು ವಹಿಸಿಕೊಳ್ಳುವುದಕ್ಕೆ ಮುಂಚೆ ರಾಜ್ಯಪಾಲನ ಸಮಕ್ಷಮ ಅಥವಾ ರಾಜ್ಯಪಾಲನಿಂದ ಆ ಬಗ್ಗೆ ನೇಮಕಗೊಂಡ ವ್ಯಕ್ತಿಯ ಸಮಕ್ಷಮ ಆ ಉದ್ದೇಶಕ್ಕಾಗಿ ಮೂರನೆಯ ಅನುಸೂಚಿಯಲ್ಲಿ ಕೊಡಲಾಗಿರುವ ನಮೂನೆಗೆ ಅನುಸಾರ ಪ್ರಮಾಣ ಅಥವಾ ಪ್ರತಿಜ್ಞೆ ಮಾಡತಕ್ಕದ್ದು ಮತ್ತು ಅದಕ್ಕೆ ತನ್ನ ರುಜು ಹಾಕತಕ್ಕದ್ದು.

189 . ಸದನಗಳಲ್ಲಿ ಮತದಾನ, ಖಾಲಿಸ್ಥಾನಗಳು ಏನೇ ಇದ್ದಾಗ್ಯೂ ಕಾರ್ಯನಿರ್ವಹಿಸಲು ಸದನಗಳ ಅಧಿಕಾರ ಮತ್ತು ಕೋರಂ.-

1 . ಈ ಸಂವಿಧಾನದಲ್ಲಿ ಅನ್ಯಥಾ ಉಪಬಂಧಿಸಿರುವುದನ್ನು ಹೊರತುಪಡಿಸಿ ಒಂದು ರಾಜ್ಯದ ವಿಧಾನಮಂಡಲದ ಒಂದು ಸದನದ ಯಾವುದೇ ಉಪವೇಶನದಲ್ಲಿ ಅಧ್ಯಕ್ಷನನ್ನು ಅಥವಾ ಸಭಾಪತಿಯನ್ನು ಅಥವಾ ಅಧ್ಯಕ್ಷನಾಗಿ ಅಥವಾ ಸಭಾಪತಿಯಾಗಿ ಕಾರ್ಯವನ್ನು ನಿರ್ವಹಿಸುವ ವ್ಯಕ್ತಿಯನ್ನು ಹೊರತುಪಡಿಸಿ ಹಾಜರಿದ್ದು ಮತಕೊಡುವ ಸದಸ್ಯರ ಬಹುಮತದ ಮೂಲಕ ಎಲ್ಲ ಪ್ರಶ್ನೆಗಳನ್ನು ನಿರ್ಧರಿಸತಕ್ಕದ್ದು.

ಅಧ್ಯಕ್ಷನು ಅಥವಾ ಸಭಾಪತಿಯು ಅಥವಾ ಅಧ್ಯಕ್ಷನಾಗಿ ಅಥವಾ ಸಭಾಪತಿಯಾಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಯು ಪ್ರಥಮತಃ ಮತ ಕೊಡತಕ್ಕದ್ದಲ್ಲ, ಆದರೆ ಮತಗಳು ಸಮನಾಗಿರುವ ಸಂದರ್ಭದಲ್ಲಿ ನಿರ್ಣಾಯಕ ಮತವನ್ನು ಹೊಂದಿರತಕ್ಕದ್ದು ಮತ್ತು ಅದನ್ನು ಅವನು ಚಲಾಯಿಸತಕ್ಕದ್ದು.

2 . ಒಂದು ರಾಜ್ಯದ ವಿಧಾನಮಂಡಲದ ಸದನದಲ್ಲಿ ಯಾವುದೇ ಸದಸ್ಯ ಸ್ಥಾನವು ಖಾಲಿ ಆಗಿದ್ದಾಗ್ಯೂ ಆ ಸದನವು ಕಾರ್ಯನಿರ್ವಹಿಸಲು ಅಧಿಕಾರ ಹೊಂದಿರತಕ್ಕದ್ದು ಮತ್ತು ಒಂದು ರಾಜ್ಯದ ವಿಧಾನಮಂಡಲದಲ್ಲಿ ಯಾವುದೇ ವ್ಯವಹರಣೆಗಳು ನಡೆಯುತ್ತಿರುವಾಗ ಅಲ್ಲಿ ಕುಳಿತಿರಲು, ಮತ ಕೊಡಲು ಅಥವಾ ಅನ್ಯಥಾ ಅದರ ವ್ಯವಹರಣೆಗಳಲ್ಲಿ ಭಾಗವಹಿಸಲು ಹಕ್ಕಿಲ್ಲದ ಯಾರೇ ವ್ಯಕ್ತಿಯು ಹಾಗೆ ಮಾಡಿರುವುದು ಆ ತರುವಾಯ ಕಂಡು ಬಂದಾಗ್ಯೂ, ಆ ವ್ಯವಹರಣೆಗಳು ಸಿಂಧುವಾಗಿರತಕ್ಕದ್ದು.

3 . ಒಂದು ರಾಜ್ಯದ ವಿಧಾನಮಂಡಲವು ಕಾನೂನಿನ ಮೂಲಕ ಅನ್ಯಥಾ ಉಪಬಂಧಿಸುವವರೆಗೆ. ಆ ರಾಜ್ಯದ ವಿಧಾನಮಂಡಲದ ಸದನದ ಸಭೆಯು ನಡೆಯಲು ಒಂದು ಸದನದ ಹತ್ತು ಮಂದಿ ಸದಸ್ಯರು ಅಥವಾ ಆ ಸದನದ ಸದಸ್ಯರ ಒಟ್ಟು ಸಂಖ್ಯೆಯ ಹತ್ತನೆಯ ಒಂದು ಭಾಗದಷ್ಟು ಸದಸ್ಯರು – ಇವುಗಳಲ್ಲಿ ಯಾವುದು ಹೆಚ್ಚೇ ಅದು ಆ ಸದನದ ಸಭೆಗೆ ಬೇಕಾದ ಕೋರಂ ಆಗಿರತಕ್ಕದ್ದು.

4 . ಒಂದು ರಾಜ್ಯದ ವಿಧಾನಸಭೆಯ ಅಥವಾ ವಿಧಾನಪರಿಷತ್ತಿನ ಸಭೆಯು ನಡೆಯುತ್ತಿರುವ ಯಾವುದೇ ಕಾಲದಲ್ಲಿ ಕೋರಂ ಇಲ್ಲದಿದ್ದರೆ, ಕೋರಂ ಆಗುವವರೆಗೆ ಸದನವನ್ನು ಮುಂದೂಡುವುದು ಅಥವಾ ಸಭೆಯನ್ನು ಸ್ಥಗಿತಗೊಳಿಸುವುದು ಅಧ್ಯಕ್ಷನ ಅಥವಾ ಸಭಾಪತಿಯ ಅಥವಾ ಅಧ್ಯಕ್ಷನಾಗಿ ಅಥವಾ ಸಭಾಪತಿಯಾಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಯ ಕರ್ತವ್ಯವಾಗಿರತಕ್ಕದ್ದು.

ರಾಜ್ಯ ಸದಸ್ಯರ ಅನರ್ಹತೆಗಳು . Disqualifications of State Member

190 . ಸ್ಥಾನಗಳನ್ನು ಖಾಲಿ ಮಾಡುವುದು.

1 . ಯಾರೇ ವ್ಯಕ್ತಿಯು ಒಂದು ರಾಜ್ಯದ ವಿಧಾನಮಂಡಲದ ಉಭಯ ಸದನಗಳ ಸದಸ್ಯನಾಗಿರತಕ್ಕದ್ದಲ್ಲ ಮತ್ತು ಉಭಯ ಸದನಗಳ ಸದಸ್ಯನಾಗಿ ಆಯ್ಕೆಯಾದರೆ, ಯಾರೇ ವ್ಯಕ್ತಿಯು ಅವನು ಉಭಯ ಸದನಗಳಲ್ಲಿ ಯಾವುದಾದರೂ ಒಂದು ಸದನದ ತನ್ನ ಸ್ಥಾನವನ್ನು ಖಾಲಿ ಮಾಡುವಂತೆ ಆ ರಾಜ್ಯದ ವಿಧಾನಮಂಡಲವು ಕಾನೂನಿನ ಮೂಲಕ ಉಪಬಂಧವನ್ನು ಮಾಡತಕ್ಕದ್ದು.

2 . ಯಾರೇ ವ್ಯಕ್ತಿಯು ಮೊದಲನೆಯ ಅನುಸೂಚಿಯಲ್ಲಿ ಉಲ್ಲೇಖಿತವಾಗಿರುವ ಎರಡು ಅಥವಾ ಹೆಚ್ಚು ರಾಜ್ಯಗಳ ವಿಧಾನಮಂಡಲಗಳ ಸದಸ್ಯನಾಗಿರತಕ್ಕದ್ದಲ್ಲ ಮತ್ತು ಯಾರೇ ವ್ಯಕ್ತಿಯು ಅಂಥ ಎರಡು ಅಥವಾ ಹೆಚ್ಚು ರಾಜ್ಯಗಳ ವಿಧಾನಮಂಡಲಗಳ ಸದಸ್ಯನಾಗಿ ಆಯ್ಕೆಯಾದರೆ, ರಾಷ್ಟ್ರಪತಿಯು ರಚಿಸಿದ ‘ನಿಯಮಗಳಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಅವಧಿಯು ಮುಕ್ತಾಯವಾಗುವುದಕ್ಕಿಂತ ಮುಂಚಿತವಾಗಿ ಅವನು ಆ ರಾಜ್ಯಗಳಲ್ಲಿ ಒಂದು ರಾಜ್ಯದ ಹೊರತು ಉಳಿದ ರಾಜ್ಯಗಳ ವಿಧಾನಮಂಡಲಗಳಲ್ಲಿನ ತನ್ನ ಸ್ಥಾನಕ್ಕೆ ಆ ಮೊದಲೇ ರಾಜೀನಾಮೆ ಕೊಟ್ಟಿರದಿದ್ದರೆ ಆ ಅವಧಿಯು ಮುಕ್ತಾಯವಾದ ಮೇಲೆ ಆ ಎಲ್ಲ ರಾಜ್ಯಗಳ ವಿಧಾನಮಂಡಲಗಳಲ್ಲಿ ಅವನ ಸ್ಥಾನವು ಖಾಲಿ ಆಗತಕ್ಕದ್ದು.

3 . ಒಂದು ರಾಜ್ಯದ ವಿಧಾನಮಂಡಲದ ಯಾವುದೇ ಸದನದ ಸದಸ್ಯನು.

(a) [191ನೆಯ ಅನುಚ್ಛೇದದ (1)ನೆಯ ಖಂಡದಲ್ಲಿ ಅಥವಾ 2ನೆಯ ಖಂಡದಲ್ಲಿ] ನಮೂದಿಸಿರುವ ಅನರ್ಹತೆಗಳಲ್ಲಿ ಯಾವುದೇ ಆನರ್ಹತೆಗೆ ಒಳಗಾದರೆ; ಅಥವಾ

[(b) ಅಧ್ಯಕ್ಷನಿಗೆ ಅಥವಾ ಸಂದರ್ಭಾನುಸಾರ ಸಭಾಪತಿಗೆ ತಾನು ಸಹಿ ಮಾಡಿದ ಪತ್ರವನ್ನು ಬರೆದು ತನ್ನ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಮತ್ತು ಅವನ ರಾಜೀನಾಮೆಯನ್ನು ಅಧ್ಯಕ್ಷನು ಅಥವಾ ಸಂದರ್ಭಾನುಸಾರ ಸಭಾಪತಿಯು ಅಂಗೀಕರಿಸಿದರೆ] ಆ ನಂತರ ಅವನ ಸ್ಥಾನವು ಖಾಲಿಯಾಗತಕ್ಕದ್ದು:

[ (ಬಿ) ಉಪಖಂಡದಲ್ಲಿ ಉಲ್ಲಿಖಿತವಾದ ಯಾವುದೇ ರಾಜೀನಾಮೆಯ ಸಂದರ್ಭದಲ್ಲಿ, ಅಧ್ಯಕ್ಷನು ಅಥವಾ ಸಂದರ್ಭಾನುಸಾರ ಸಭಾಪತಿಯು ತನಗೆ ದೊರೆತಿರುವ ಮಾಹಿತಿಯ ಮೇಲೆ ಅಥವಾ ಅನ್ಯಥಾ ಮತ್ತು ತನಗೆ ಸೂಕ್ತವೆಂದು ತೋರುವಂಥ ವಿಚಾರಣೆಯನ್ನು ನಡೆಸಿದ ಬಳಿಕ, ಆ ರಾಜೀನಾಮೆಯನ್ನು ಸ್ವಯಿಚ್ಛೆಯಿಂದ ಕೊಟ್ಟಿಲ್ಲವೆಂದು ಅಥವಾ ಅದು ನೈಜವಾದುದಲ್ಲ ಎಂದು ಮನಗಂಡರೆ, ಅವನು ಅಂಥ ರಾಜೀನಾಮೆಯನ್ನು ಅಂಗೀಕರಿಸತಕ್ಕದ್ದಲ್ಲ.]

4 . ಒಂದು ರಾಜ್ಯದ ವಿಧಾನಮಂಡಲದ ಯಾವುದೇ ಸದನದ ಸದಸ್ಯನು ಆ ಸದನದ ಅನುಮತಿ ಇಲ್ಲದೆ ಅರವತ್ತು ದಿನಗಳ ಅವಧಿಯವರೆಗೆ ಅದರ ಎಲ್ಲ ಸಭೆಗಳಿಗೂ ಗೈರುಹಾಜರಾದರೆ, ಅವನ ಸ್ಥಾನವು ಖಾಲಿಯಾಗಿದೆಯೆಂದು ಆ ಸದನವು ಘೋಷಿಸಬಹುದು:

[ . ಸದರಿ ಅರವತ್ತು ದಿನಗಳ ಅವಧಿಯನ್ನು ಲೆಕ್ಕಹಾಕುವಲ್ಲಿ ಆ ಸದನದ ಅಧಿವೇಶನವನ್ನು ಮುಕ್ತಾಯಗೊಳಿಸಲಾದ ಅವಧಿಯನ್ನು ಅಥವಾ ನಿರಂತರ ನಾಲ್ಕು ದಿನಗಳಿಗಿಂತ ಹೆಚ್ಚು ಕಾಲ ಮುಂದೂಡಲಾದ ಯಾವುದೇ ಅವಧಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳತಕ್ಕದ್ದಲ್ಲ. ]

191 . ಸದಸ್ಯತ್ವಕ್ಕೆ ಅನರ್ಹತೆಗಳು.

1 . ಯಾರೇ ವ್ಯಕ್ತಿಯು,

[(a) ಭಾರತ ಸರ್ಕಾರದ ಅಥವಾ ಮೊದಲನೆಯ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವ ಯಾವುದೇ ರಾಜ್ಯಸರ್ಕಾರದ ಅಧೀನದಲ್ಲಿರುವ ಯಾವ ಹುದ್ದೆಯನ್ನು ಧಾರಣ ಮಾಡಿದವನು ಹಾಗೆ ಅನರ್ಹನಾಗುವುದಿಲ್ಲವೆಂದು ರಾಜ್ಯದ ವಿಧಾನಮಂಡಲವು ಕಾನೂನು ಮೂಲಕ ಘೋಷಿಸಿದೆಯೋ ಅಂಥ ಹುದ್ದೆಯನ್ನು ಹೊರತುಪಡಿಸಿ. ಇತರ ಯಾವುದೇ ಲಾಭದಾಯಕ ಹುದ್ದೆಯನ್ನು ಧಾರಣ ಮಾಡಿದ್ದರೆ;]

(b) ಅಸ್ವಸ್ಥಚಿತ್ತನಾಗಿದ್ದರೆ ಮತ್ತು ಸಕ್ಷಮ ನ್ಯಾಯಾಲಯವು ಹಾಗೆಂದು ಘೋಷಿಸಿದ್ದರೆ;

(c) ಅವಿಮುಕ್ತ ದಿವಾಳಿಯಾಗಿದ್ದರೆ;

(d) ಭಾರತದ ನಾಗರಿಕನಾಗಿಲ್ಲದಿದ್ದರೆ ಅಥವಾ ಯಾವುದೇ ವಿದೇಶಿ ರಾಜ್ಯದ ನಾಗರಿಕತ್ವವನ್ನು ಸ್ವಇಚ್ಛೆಯಿಂದ ಆರ್ಜಿಸಿದರೆ ಅಥವಾ ಒಂದು ವಿದೇಶಿ ರಾಜ್ಯಕ್ಕೆ ನಿಷ್ಠೆ ಅಥವಾ ಅನುಸಕ್ತಿ ಹೊಂದಿರುವುದನ್ನು ಒಪ್ಪಿಕೊಂಡಿದ್ದರೆ;

(e) ಸಂಸತ್ತು ಮಾಡಿದ ಯಾವುದೇ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ಅವನನ್ನು ಹಾಗೆಂದು ಅನರ್ಹಗೊಳಿಸಿದ್ದರೆ, ಅವನು ರಾಜ್ಯದ ವಿಧಾನಸಭೆಯ ಅಥವಾ ವಿಧಾನಪರಿಷತ್ತಿನ ಸದಸ್ಯನಾಗಿ ಆಯ್ಕೆಯಾಗಲು ಅಥವಾ ಅದರ ಸದಸ್ಯನಾಗಿರಲು ಅನರ್ಹನಾಗಿರತಕ್ಕದ್ದು.

[ವಿವರಣೆ.- ಈ ಖಂಡದ ಉದ್ದೇಶಗಳಿಗಾಗಿ, ಯಾರೇ ವ್ಯಕ್ತಿಯು ಒಕ್ಕೂಟದ ಅಥವಾ ಮೊದಲನೆಯ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಯಾವುದೇ ರಾಜ್ಯದ ಮಂತ್ರಿಯಾಗಿರುವ ಕಾರಣಮಾತ್ರದಿಂದಲೇ, ಅವನು ಭಾರತ ಸರ್ಕಾರದ ಅಥವಾ ಯಾವುದೇ ರಾಜ್ಯ ಸರ್ಕಾರದ ಅಧೀನದಲ್ಲಿ ಒಂದು ಲಾಭದಾಯಕ ಹುದ್ದೆಯನ್ನು ಧಾರಣ ಮಾಡಿರುವುದಾಗಿ ಭಾವಿಸತಕ್ಕದ್ದಲ್ಲ.]

2 . ಹತ್ತನೆಯ ಅನುಸೂಚಿಯ ಮೇರೆಗೆ ಯಾರೇ ವ್ಯಕ್ತಿಯನ್ನು ಅನರ್ಹಗೊಳಿಸಲಾಗಿದ್ದರೆ ಅವನು ರಾಜ್ಯದ ವಿಧಾನಸಭೆಯ ಅಥವಾ ವಿಧಾನಪರಿಷತ್ತಿನ ಸದಸ್ಯನಾಗಿರಲು ಆನರ್ಹನಾಗತಕ್ಕದ್ದು.

192 . ಸದಸ್ಯರ ಅನರ್ಹತೆಗಳನ್ನು ಕುರಿತ ಪ್ರಶ್ನೆಗಳ ತೀರ್ಮಾನ-

1 . ಒಂದು ರಾಜ್ಯ ವಿಧಾನಮಂಡಲದ ಸದನದ ಯಾರೇ ಸದಸ್ಯನು 191ನೆಯ ಅನುಚ್ಛೇದದ (1)ನೆಯ ಖಂಡದಲ್ಲಿ ನಮೂದಾಗಿರುವ ಯಾವುದೇ ಆನರ್ಹತೆಗಳಿಗೆ ಒಳಪಟ್ಟಿದ್ದಾನೆಯೇ ಹೇಗೆ ಎಂಬ ಯಾವುದೇ ಪ್ರಶ್ನೆಯು ಉದ್ಭವಿಸಿದರೆ, ಆ ಪ್ರಶ್ನೆಯನ್ನು ರಾಜ್ಯಪಾಲನ ತೀರ್ಮಾನಕ್ಕೆ ಒಪ್ಪಿಸತಕ್ಕದ್ದು ಮತ್ತು ಆ ಬಗ್ಗೆ ಅವನ ತೀರ್ಮಾನವೇ ಅಂತಿಮವಾಗಿರತಕ್ಕದ್ದು.

2 . ಅಂಥ ಯಾವುದೇ ಪ್ರಶ್ನೆಯ ಮೇಲೆ ಯಾವುದೇ ತೀರ್ಮಾನವನ್ನು ಕೊಡುವುದಕ್ಕೆ ಮುಂಚಿತವಾಗಿ ರಾಜ್ಯಪಾಲನು ಚುನಾವಣಾ ಆಯೋಗದ ಅಭಿಪ್ರಾಯವನ್ನು ಪಡೆಯತಕ್ಕದ್ದು ಮತ್ತು ಆ ಅಭಿಪ್ರಾಯಕ್ಕನುಸಾರವಾಗಿ ಕಾರ್ಯ ಪ್ರವೃತ್ತನಾಗತಕ್ಕದ್ದು.

193 . 188ನೇ ಅನುಚ್ಛೇದದ ಮೇರೆಗೆ ಪ್ರಮಾಣ ಅಥವಾ ಪ್ರತಿಜ್ಞೆ ಮಾಡುವುದಕ್ಕೆ ಮುಂಚೆ ಅಥವಾ ಅರ್ಹನಾಗಿಲ್ಲದಿರುವಾಗ ಅಥವಾ ಅನರ್ಹತೆಗೊಳಿಸಿರುವಾಗ ಸದಸ್ಯನಾಗಿ ಕುಳಿತರೆ ಮತ್ತು ಮತ ಕೊಟ್ಟರೆ ದಂಡ.-

ಯಾರೇ ವ್ಯಕ್ತಿಯು, ಒಂದು ರಾಜ್ಯದ ವಿಧಾನಸಭೆಯ ಅಥವಾ ವಿಧಾನಪರಿಷತ್ತಿನ ಸದಸ್ಯನಾಗಿ 188ನೆಯ ಅನುಚ್ಛೇದದ ಅಗತ್ಯತೆಗಳನ್ನು ಪಾಲಿಸುವುದಕ್ಕೆ ಮುಂಚೆ, ಅಥವಾ ಅದರ ಸದಸ್ಯತ್ವಕ್ಕೆ ತಾನು ಅರ್ಹನಾಗಿಲ್ಲವೆಂದು ತಿಳಿದೂ ಅಥವಾ ಸದಸ್ಯತ್ವಕ್ಕೆ ತಾನು ಅನರ್ಹನಾಗಿರುವೆನೆಂದು ತಿಳಿದೂ ಅಥವಾ ಸಂಸತ್ತು ಅಥವಾ ರಾಜ್ಯದ ವಿಧಾನಮಂಡಲವು ಮಾಡಿದ ಯಾವುದೇ ಕಾನೂನಿನ ಉಪಬಂಧಗಳು ತಾನು ಸದನದಲ್ಲಿ ಕುಳಿತುಕೊಳ್ಳುವುದನ್ನು ಅಥವಾ ಮತ ಕೊಡುವುದನ್ನು ನಿಷೇಧಿಸಿರುವುದು ಅವನಿಗೆ ತಿಳಿದಿದ್ದೂ, ಅವನು ಸದನದಲ್ಲಿ ಕುಳಿತರೆ ಅಥವಾ ಮತ ಕೊಟ್ಟರೆ, ಅವನು ಹಾಗೆ ಕುಳಿತ ಅಥವಾ ಮತ ಕೊಟ್ಟ ಪ್ರತಿದಿನಕ್ಕೂ ಐನೂರು ರೂಪಾಯಿಗಳ ದಂಡವನ್ನು ಕೊಡಲು ಬದ್ಧನಾಗಿರತಕ್ಕದ್ದು ಮತ್ತು ಆ ದಂಡವನ್ನು ಆ ರಾಜ್ಯಕ್ಕೆ ಬರಬೇಕಾದ ಸಾಲದಂತೆ ವಸೂಲಿ ಮಾಡತಕ್ಕದ್ದು,

ರಾಜ್ಯವಿಧಾನಮಂಡಲಗಳ ಮತ್ತು ಅವುಗಳ ಸದಸ್ಯರ ಅಧಿಕಾರಗಳು, ವಿಶೇಷಾಧಿಕಾರಗಳು ಮತ್ತು ಉದ್ಭುಕ್ತಿಗಳು

Powers, Privileges and Immunities of state Legislatures and their Members

194 . ವಿಧಾನಮಂಡಲದ ಸದನಗಳ ಮತ್ತು ಅದರ ಸದಸ್ಯರ ಮತ್ತು ಸಮಿತಿಗಳ ಅಧಿಕಾರಗಳು, ವಿಶೇಷಾಧಿಕಾರಗಳು, ಇತ್ಯಾದಿ.-

1 . ಈ ಸಂವಿಧಾನದ ಉಪಬಂಧಗಳಿಗೆ ಮತ್ತು ವಿಧಾನಮಂಡಲದ ಪ್ರಕ್ರಿಯೆಯನ್ನು ವಿನಿಯಮಗೊಳಿಸುವ ನಿಯಮಗಳಿಗೆ ಮತ್ತು ಸ್ಥಾಯೀ ಆದೇಶಗಳಿಗೆ ಒಳಪಟ್ಟು, ಪ್ರತಿಯೊಂದು ರಾಜ್ಯದ ವಿಧಾನಮಂಡಲದಲ್ಲಿ ವಾಕ್ ಸ್ವಾತಂತ್ರ್ಯ ವಿರತಕ್ಕದ್ದು.

2 . ಒಂದು ರಾಜ್ಯದ ವಿಧಾನಮಂಡಲದ ಯಾರೇ ಸದಸ್ಯನು ಆ ವಿಧಾನಮಂಡಲದಲ್ಲಿ ಅಥವಾ ಅದರ ಯಾವುದೇ ಸಮಿತಿಯಲ್ಲಿ ತಾನು ಹೇಳಿದ ಯಾವುದೇ ವಿಚಾರಕ್ಕೆ ಅಥವಾ ತಾನು ಕೊಟ್ಟ ಯಾವುದೇ ಮತಕ್ಕೆ ಸಂಬಂಧಿಸಿದಂತೆ ಯಾವುದೇ ನ್ಯಾಯಾಲಯದಲ್ಲಿ ಯಾವುದೇ ವ್ಯವಹರಣೆಗಳಿಗೆ ಗುರಿಯಾಗತಕ್ಕದ್ದಲ್ಲ ಮತ್ತು ಯಾರೇ ವ್ಯಕ್ತಿಯು ಅಂಥ ವಿಧಾನಮಂಡಲದ ಸದನದ ಅಧಿಕಾರದ ಮೂಲಕ ಅಥವಾ ಅದರ ಮೇರೆಗೆ ಪ್ರಕಟವಾದ ಯಾವುದೇ ವರದಿಗೆ, ಪತ್ರಕ್ಕೆ, ಮತಗಳಿಗೆ ಅಥವಾ ನಡವಳಿಗಳಿಗೆ ಸಂಬಂಧಿಸಿದಂತೆ ಹಾಗೆ ಗುರಿಯಾಗತಕ್ಕದ್ದಲ್ಲ.

3 . ಇತರ ವಿಚಾರಗಳಿಗೆ ಸಂಬಂಧಪಟ್ಟಂತೆ ಒಂದು ರಾಜ್ಯದ ವಿಧಾನಮಂಡಲದ ಸದನದ ಮತ್ತು ಅಂಥ ವಿಧಾನಮಂಡಲದ ಸದನದ ಸದಸ್ಯರ ಮತ್ತು ಸಮಿತಿಗಳ ಅಧಿಕಾರಗಳು, ವಿಶೇಷಾಧಿಕಾರಗಳು ಮತ್ತು ಉನ್ಮುಕ್ತಿಗಳು ವಿಧಾನಮಂಡಲವು ಕಾನೂನಿನ ಮೂಲಕ ಕಾಲಕಾಲಕ್ಕೆ ಪರಿಭಾಷಿಸಬಹುದಾದಂತೆ ಇರತಕ್ಕದ್ದು ಮತ್ತು ಹಾಗೆ ಪರಿಭಾಷಿಸುವವರೆಗೆ, [1978ರ ಸಂವಿಧಾನ (ನಲವತ್ನಾಲ್ಕನೇ ತಿದ್ದುಪಡಿ) ಅಧಿನಿಯಮದ 26ನೆಯ ಪ್ರಕರಣವು ಜಾರಿಗೆ ಬರುವ ನಿಕಟಪೂರ್ವದಲ್ಲಿ ಆ ಸಭೆಗೆ. ಅದರ ಸದಸ್ಯರಿಗೆ ಮತ್ತು ಸಮಿತಿಗಳಿಗೆ ಇದ್ದಂತಹ ಅವೇ ಅಧಿಕಾರಗಳು, ವಿಶೇಷಾಧಿಕಾರಗಳು ಮತ್ತು ಉನ್ಮುಕ್ತಿಗಳು ಇರತಕ್ಕದ್ದು.

4 . (1)ನೆಯ, (2)ನೆಯ ಮತ್ತು (3)ನೆಯ ಖಂಡಗಳ ಉಪಬಂಧಗಳು ಒಂದು ರಾಜ್ಯದ ವಿಧಾನಮಂಡಲದ ಸದಸ್ಯರ ಸಂಬಂಧದಲ್ಲಿ ಅನ್ವಯವಾಗುವಂತೆಯೇ ಈ ಸಂವಿಧಾನದ ಕಾರಣದಿಂದಾಗಿ, ಆ ರಾಜ್ಯದ ವಿಧಾನಮಂಡಲದ ಸದನದಲ್ಲಿ ಅಥವಾ ಅದರ ಯಾವುದೇ ಸಮಿತಿಯಲ್ಲಿ ಮಾತನಾಡಲು ಮತ್ತು ಅದರ ವ್ಯವಹರಣೆಗಳಲ್ಲಿ ಅನ್ಯಥಾ ಭಾಗವಹಿಸಲು ಹಕ್ಕು ಹೊಂದಿರುವವರ ಸಂಬಂಧದಲ್ಲಿಯೂ ಅನ್ವಯವಾಗತಕ್ಕದ್ದು.

195 . ಸದಸ್ಯರ ಸಂಬಳಗಳು ಮತ್ತು ಭತ್ಯೆಗಳು.

ಒಂದು ರಾಜ್ಯದ ವಿಧಾನಸಭೆಯ ಮತ್ತು ವಿಧಾನಪರಿಷತ್ತಿನ ಸದಸ್ಯರು ಆ ರಾಜ್ಯದ ವಿಧಾನಮಂಡಲವು ಕಾನೂನಿನ ಮೂಲಕ ಕಾಲಕಾಲಕ್ಕೆ ನಿರ್ಧರಿಸಬಹುದಾದಂಥ ಸಂಬಳಗಳನ್ನು ಮತ್ತು ಭತ್ಯೆಗಳನ್ನು ಪಡೆಯಲು ಹಕ್ಕುಳ್ಳವರಾಗತಕ್ಕದ್ದು ಮತ್ತು ಆ ಬಗ್ಗೆ ಉಪಬಂಧವನ್ನು ಮಾಡುವವರೆಗೆ, ಸದಸ್ಯರು ಈ ಸಂವಿಧಾನವು ಪ್ರಾರಂಭವಾಗುವ ನಿಕಟಪೂರ್ವದಲ್ಲಿ ಆಯಾಯ ಪ್ರಾಂತೀಯ ವಿಧಾನಸಭೆಯ ಸದಸ್ಯರ ಸಂಬಂಧದಲ್ಲಿ ಅನ್ವಯಿಸುತ್ತಿದ್ದಂಥ ದರಗಳಲ್ಲಿ ಮತ್ತು ಷರತ್ತುಗಳ ಮೇಲೆ ಸಂಬಳಗಳನ್ನು ಮತ್ತು ಭತ್ಯೆಗಳನ್ನು ಪಡೆಯಲು ಹಕ್ಕುಳ್ಳವರಾಗಿರತಕ್ಕದ್ದು.

constitution of india.govt.in

ಭಾಗ VI ರಾಜ್ಯಗಳು: ರಾಜ್ಯಪಾಲ, ಮಂತ್ರಿಮಂಡಲ ಮತ್ತು ಆಡಳಿತ ಕಾರ್ಯಪದ್ಧತಿಗಳು Articles 152–167 .

Leave a Comment