ಮೂಲಭೂತ ಹಕ್ಕುಗಳು (article 25–35): ಸಂವಿಧಾನ ಹಕ್ಕುಗಳ ಸಂಪೂರ್ಣ ವಿವರಣೆ. “Ultimate Guide to FUNDAMENTAL RIGHTS (Articles 25–35): Know Your Powerful Constitutional Rights”

ಧರ್ಮ ಸ್ವಾತಂತ್ರ್ಯದ ಹಕ್ಕು. RIGHTS TO FREEDOM OF RELIGION.

25 . ಅಂತಃಸಾಕ್ಷಿ ಸ್ವಾತಂತ್ರ್ಯ ಮತ್ತು ಧರ್ಮದ ಅಬಾಧಿತ ಅವಲಂಬನೆ, ಆಚರಣೆ ಮತ್ತು ಪ್ರಚಾರ

1 . ಸಾರ್ವಜನಿಕ ಸುವ್ಯವಸ್ಥೆಗೆ, ನೈತಿಕತೆಗೆ ಮತ್ತು ಆರೋಗ್ಯಕ್ಕೆ ಹಾಗೂ ಈ ಭಾಗದ ಇತರ ಉಪಬಂಧಗಳಿಗೆ ಒಳಪಟ್ಟು ಎಲ್ಲಾ ವ್ಯಕ್ತಿಗಳು ಅಂತಃಸಾಕ್ಷಿ ಸ್ವಾತಂತ್ರ್ಯಕ್ಕೆ ಸಮಾನ ರೀತಿಯಲ್ಲಿ ಹಕ್ಕುಳ್ಳವರಾಗಿರುತ್ತಾರೆ ಹಾಗೂ ಅಬಾಧಿತವಾಗಿ ಧರ್ಮವನ್ನು ಅವಲಂಬಿಸುವುದಕ್ಕೆ, ಆಚರಿಸುವುದಕ್ಕೆ ಮತ್ತು ಪ್ರಚಾರ ಮಾಡುವುದಕ್ಕೆ ಹಕ್ಕುಳ್ಳವರಾಗಿರುತ್ತಾರೆ.
2 . ಈ ಅನುಚ್ಛೇದದಲ್ಲಿ ಇರುವುದು ಯಾವುದೂ.-
(a) ಧಾರ್ಮಿಕ ಆಚರಣೆಯೊಂದಿಗೆ ಸಂಬಂಧ ಹೊಂದಿರಬಹುದಾದ ಯಾವುದೇ ಆರ್ಥಿಕ, ಹಣಕಾಸಿನ ರಾಜಕೀಯ ಅಥವಾ ಇತರ ಲೌಕಿಕ ಚಟುವಟಿಕೆಯನ್ನು ನಿಯಂತ್ರಿಸುವ ಅಥವಾ ನಿರ್ಬಂಧಿಸುವ;
(b) ಸಮಾಜ ಕಲ್ಯಾಣಕ್ಕಾಗಿ ಮತ್ತು ಸುಧಾರಣೆಗಾಗಿ ವ್ಯವಸ್ಥೆ ಮಾಡಲು ಅಥವಾ ಸಾರ್ವಜನಿಕ ಸ್ವರೂಪದ ಹಿಂದೂ ಧಾರ್ಮಿಕ ಸಂಸ್ಥೆಗಳಲ್ಲಿ ಹಿಂದೂಗಳ ಎಲ್ಲ ವರ್ಗಗಳಿಗೆ ಮತ್ತು ವಿಭಾಗಗಳಿಗೆ ಪ್ರವೇಶಾವಕಾಶ ಮಾಡಿಕೊಡುವ ಸಲುವಾಗಿ ಅಸ್ತಿತ್ವದಲ್ಲಿರುವ ಯಾವುದೇ ಕಾನೂನಿನ ಜಾರಿಯ ಮೇಲೆ ಪರಿಣಾಮ ಬೀರತಕ್ಕದ್ದಲ್ಲ ಅಥವಾ ಅಂಥ ಯಾವುದೇ ಕಾನೂನನ್ನು ಮಾಡದಂತೆ ರಾಜ್ಯವನ್ನು ಪ್ರತಿಬಂಧಿಸತಕ್ಕದ್ದಲ್ಲ.
ವಿವರಣೆ I– ಕೃಪಾಣವನ್ನು ಧರಿಸುವುದು ಮತ್ತು ಅದನ್ನು ಒಯ್ಯುವುದು ಸಿಖ್ ಧರ್ಮಾವಲಂಬನೆಯ ಒಂದು ಭಾಗವಾಗಿರುವುದಾಗಿ ಸೇರಿರುವುದೆಂದು ಭಾವಿಸತಕ್ಕದ್ದು.
ವಿವರಣೆ II. – (2)ನೆಯ ಖಂಡದ (b) ಉಪಖಂಡದಲ್ಲಿನ ಹಿಂದುಗಳನ್ನು ಕುರಿತ ಉಲ್ಲೇಖದಲ್ಲಿ ಸಿಖ್, ಜೈನ ಅಥವಾ ಬೌದ್ಧ ಧರ್ಮಾವಲಂಬಿಗಳು ಸೇರಿರುವರೆಂದು ಅರ್ಥೈಸತಕ್ಕದ್ದು ಮತ್ತು ಹಿಂದೂ ಧಾರ್ಮಿಕ ಸಂಸ್ಥೆಗಳನ್ನು ಕುರಿತ ಉಲ್ಲೇಖವನ್ನು ತದನುಸಾರವಾಗಿ ಅರ್ಥೈಸತಕ್ಕದ್ದು.

26 . ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸಲು ಸ್ವಾತಂತ್ರ್ಯ-

● ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯ -ಇವುಗಳಿಗೆ ಒಳಪಟ್ಟು ಪ್ರತಿಯೊಂದು ಧಾರ್ಮಿಕ ಸಂಪ್ರದಾಯದವರಿಗೆ ಅಥವಾ ಅದರ ಯಾವುದೇ ವಿಭಾಗದವರಿಗೆ.-
(a) ಧಾರ್ಮಿಕ ಮತ್ತು ಧರ್ಮಾರ್ಥ ಉದ್ದೇಶಗಳಿಗಾಗಿ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ;
(b) ಧರ್ಮಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ತಮ್ಮದೇ ಆದ ವ್ಯವಹಾರಗಳನ್ನು ನಿರ್ವಹಿಸುವ;
(c) ಚರ ಮತ್ತು ಸ್ಥಿರ ಸ್ವತ್ತುಗಳ ಒಡೆತನವನ್ನು ಹೊಂದುವ ಮತ್ತು ಅವುಗಳನ್ನು ಆರ್ಜಿಸುವ; ಮತ್ತು
(d) ಅಂಥ ಸ್ವತ್ತಿನ ಆಡಳಿತವನ್ನು ಕಾನೂನಿಗನುಸಾರವಾಗಿ ನಡೆಸುವ ಹಕ್ಕು ಇರತಕ್ಕದ್ದು

27 . ಯಾವುದೇ ನಿರ್ದಿಷ್ಟ ಧರ್ಮದ ಉನ್ನತಿಗಾಗಿ ತೆರಿಗೆಗಳ ಸಂದಾಯದ ಬಗ್ಗೆ ಸ್ವಾತಂತ್ರ್ಯ.

ಯಾವ ತೆರಿಗೆಗಳ ಉತ್ಪತ್ತಿಗಳನ್ನು ಯಾವುದೇ ಒಂದು ನಿರ್ದಿಷ್ಟ ಧರ್ಮದ ಅಥವಾ ಧಾರ್ಮಿಕ ಸಂಪ್ರದಾಯದ ಉನ್ನತಿಯ ಅಥವಾ ನಿರ್ವಹಣೆಯ ವೆಚ್ಚಗಳ ಸಂದಾಯಕ್ಕಾಗಿ ನಿರ್ದಿಷ್ಟವಾಗಿ ವಿನಿಯೋಗಿಸಲಾಗುವುದೋ ಅಂಥ ಯಾವುದೇ ತೆರಿಗೆಗಳನ್ನು ಸಂದಾಯ ಮಾಡುವಂತೆ ಯಾರೇ ವ್ಯಕ್ತಿಯನ್ನು ಒತ್ತಾಯಿಸತಕ್ಕದ್ದಲ್ಲ.

28 . ಕೆಲವು ಶೈಕ್ಷಣಿಕ ಸಂಸ್ಥೆಗಳಲ್ಲಿ ನಡೆಯುವ ಧಾರ್ಮಿಕ ಶಿಕ್ಷಣದಲ್ಲಿ ಅಥವಾ ಧಾರ್ಮಿಕ ಉಪಾಸನೆಯಲ್ಲಿ ಹಾಜರಾಗುವ ಸ್ವಾತಂತ್ರ್ಯ.

1 . ರಾಜ್ಯನಿಧಿಗಳಿಂದ ಸಂಪೂರ್ಣವಾಗಿ ನಿರ್ವಹಿಸಲಾಗುತ್ತಿರುವ ಯಾವುದೇ ಶೈಕ್ಷಣಿಕ ಸಂಸ್ಥೆಯಲ್ಲಿ ಯಾವುದೇ ಧಾರ್ಮಿಕ ಶಿಕ್ಷಣವನ್ನು ನೀಡತಕ್ಕದ್ದಲ್ಲ.
2 . (1)ನೇ ಖಂಡದಲ್ಲಿ ಇರುವುದು ಯಾವುದೂ, ಯಾವ ಶಿಕ್ಷಣ ಸಂಸ್ಥೆಯಲ್ಲಿ ಧಾರ್ಮಿಕ ಶಿಕ್ಷಣ ಕೊಡತಕ್ಕದ್ದೆಂದು ಅಗತ್ಯಪಡಿಸುವ ಯಾವುದೇ ದತ್ತಿ ಅಥವಾ ನ್ಯಾಸದ ಮೇರೆಗೆ ಸ್ಥಾಪಿತವಾಗಿರುವ, ಯಾವ ಶಿಕ್ಷಣ ಸಂಸ್ಥೆಯ ಆಡಳಿತವನ್ನು ರಾಜ್ಯವು ನಡೆಸುತ್ತಿದೆಯೋ, ಅಂಥ ಶಿಕ್ಷಣ ಸಂಸ್ಥೆಗೆ ಅನ್ವಯಿಸತಕ್ಕದ್ದಲ್ಲ.
3 . ರಾಜ್ಯದ ಮನ್ನಣೆ ಪಡೆದ ಅಥವಾ ರಾಜ್ಯನಿಧಿಗಳಿಂದ ನೆರವನ್ನು ಪಡೆಯುವ ಯಾವುದೇ ಶೈಕ್ಷಣಿಕ ಸಂಸ್ಥೆಗೆ ಹಾಜರಾಗುವ ಯಾರೇ ವ್ಯಕ್ತಿಯು ಆ ಶೈಕ್ಷಣಿಕ ಸಂಸ್ಥೆಯಲ್ಲಿ ಕೊಡಬಹುದಾದ ಯಾವುದೇ ಧಾರ್ಮಿಕ ಶಿಕ್ಷಣದಲ್ಲಿ ಭಾಗವಹಿಸಲು ಅಥವಾ ಆ ಶೈಕ್ಷಣಿಕ ಸಂಸ್ಥೆಯಲ್ಲಿ ಅಥವಾ ಅದಕ್ಕೆ ಸೇರಿದ ಯಾವುದೇ ಆವರಣದಲ್ಲಿ ನಡೆಯಬಹುದಾದ ಯಾವುದೇ ಧಾರ್ಮಿಕ ಉಪಾಸನೆಗೆ ಹಾಜರಾಗಲು ತನ್ನ ಸಮ್ಮತಿಯನ್ನು ಕೊಟ್ಟಿದ್ದ ಹೊರತು ಅಥವಾ ಅವನು ಅಪ್ರಾಪ್ತ ವಯಸ್ಕನಾಗಿದ್ದರೆ, ಅವನ ಪಾಲಕನು ಅದಕ್ಕೆ ಸಮ್ಮತಿಯನ್ನು ಕೊಟ್ಟಿದ್ದ ಹೊರತು. ಹಾಗೆ ಭಾಗವಹಿಸುವಂತೆ ಅಥವಾ ಹಾಜರಾಗುವಂತೆ ಅವನನ್ನು ಅಗತ್ಯಪಡಿಸತಕ್ಕದ್ದಲ್ಲ.
FUNDAMENTAL RIGHTS (Articles 25–35): Know Your Powerful Constitutional Rights

ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳು . CULTURAL AND EDUCATIONAL RIGHTS

29 . ಅಲ್ಪಸಂಖ್ಯಾತರ ಹಿತಾಸಕ್ತಿಗಳ ರಕ್ಷಣೆ.-

1 . ಭಾರತದ ರಾಜ್ಯಕ್ಷೇತ್ರದಲ್ಲಿ ಅಥವಾ ಅದರ ಯಾವುದೇ ಭಾಗದಲ್ಲಿ ವಾಸವಾಗಿರುವ ನಾಗರಿಕರ ಯಾವುದೇ ವಿಭಾಗವು ತನ್ನದೇ ಆದ ಯಾವುದೇ ವಿಭಿನ್ನ ಭಾಷೆ, ಲಿಪಿ ಅಥವಾ ಸಂಸ್ಕೃತಿಯನ್ನು ಹೊಂದಿದ್ದರೆ, ಆ ವಿಭಾಗವು ಅವುಗಳನ್ನು ಸಂರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿರತಕ್ಕದ್ದು.
2 . ರಾಜ್ಯವು ನಿರ್ವಹಿಸುವ ಅಥವಾ ರಾಜ್ಯನಿಧಿಗಳಿಂದ ನೆರವನ್ನು ಪಡೆಯುವ ಯಾವುದೇ ಶೈಕ್ಷಣಿಕ ಸಂಸ್ಥೆಗೆ ಧರ್ಮ, ಮೂಲವಂಶ, ಜಾತಿ, ಭಾಷೆ, ಅಥವಾ ಅವುಗಳಲ್ಲಿ ಯಾವುದೇ ಒಂದರ ಆಧಾರದ ಮೇಲೆ ಮಾತ್ರವೇ ಯಾರೇ ನಾಗರಿಕನಿಗೆ ಪ್ರವೇಶಾವಕಾಶವನ್ನು ನಿರಾಕರಿಸತಕ್ಕದ್ದಲ್ಲ.

30 . ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವುದಕ್ಕೆ ಮತ್ತು ಅವುಗಳ ಆಡಳಿತ ನಡೆಸುವುದಕ್ಕೆ ಅಲ್ಪಸಂಖ್ಯಾತರ ಹಕ್ಕು.

1 . ಧರ್ಮದ ಅಥವಾ ಭಾಷೆಯ ಮೇಲೆ ಆಧಾರಿತವಾದ ಎಲ್ಲಾ ಅಲ್ಪಸಂಖ್ಯಾತ ವರ್ಗಗಳವರೂ ತಮ್ಮ ಇಷ್ಟಕ್ಕನುಗುಣವಾಗಿ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲು ಮತ್ತು ಅವುಗಳ ಆಡಳಿತವನ್ನು ನಡೆಸಲು ಹಕ್ಕುಳ್ಳವರಾಗಿರತಕ್ಕದ್ದು.
[(1ಎ) (1)ನೇ ಖಂಡದಲ್ಲಿ ಉಲ್ಲೇಖಿಸಲಾದ ಅಲ್ಪಸಂಖ್ಯಾತ ವರ್ಗವು ಸ್ಥಾಪಿಸಿದ ಮತ್ತು ಆಡಳಿತ ನಡೆಸುತ್ತಿರುವ ಯಾವುದೇ ಶೈಕ್ಷಣಿಕ ಸಂಸ್ಥೆಯ ಯಾವುದೇ ಸ್ವತ್ತನ್ನು ಕಡ್ಡಾಯವಾಗಿ ಅರ್ಜನೆ ಮಾಡುವುದಕ್ಕಾಗಿ ಉಪಬಂಧ ಕಲ್ಪಿಸುವ ಯಾವುದೇ ಕಾನೂನನ್ನು ಮಾಡುವಾಗ ರಾಜ್ಯವು, ಅಂಥ ಸ್ವತ್ತಿನ ಆರ್ಜನೆಗಾಗಿ ಅಂಥ ಕಾನೂನಿನ ಮೂಲಕ ನಿಗದಿಪಡಿಸಿದ ಅಥವಾ ಅದರ ಮೇರೆಗೆ ನಿರ್ಧರಿಸಿದ ಮೊಬಲಗು ಆ ಖಂಡದ ಮೇರೆಗೆ ಖಾತ್ರಿಗೊಳಿಸಿದ ಹಕ್ಕನ್ನು ನಿರ್ಬಂಧಿಸುವುದಿಲ್ಲವೆಂದು ಅಥವಾ ಅಂಥ ಹಕ್ಕನ್ನು ರದ್ದುಪಡಿಸುವುದಿಲ್ಲವೆಂದು ಸುನಿಶ್ಚಿತಪಡಿಸಿಕೊಳ್ಳತಕ್ಕದ್ದು.]
2 . ಶೈಕ್ಷಣಿಕ ಸಂಸ್ಥೆಗಳಿಗೆ ನೆರವನ್ನು ನೀಡುವಲ್ಲಿ, ರಾಜ್ಯವು ಯಾವುದೇ ಶೈಕ್ಷಣಿಕ ಸಂಸ್ಥೆಯು ಧರ್ಮದ ಅಥವಾ ಭಾಷೆಯ ಮೇಲೆ ಆಧಾರಿತವಾದ ಅಲ್ಪಸಂಖ್ಯಾತ ವರ್ಗದವರ ಆಡಳಿತದಲ್ಲಿ ಇದೆ ಎಂಬ ಕಾರಣದ ಮೇಲೆ ಅಂಥ ಸಂಸ್ಥೆಯ ವಿರುದ್ಧ ಯಾವುದೇ ತಾರತಮ್ಯ ಮಾಡತಕ್ಕದ್ದಲ್ಲ.
31 . (ಸ್ವತ್ತಿನ ಕಡ್ಡಾಯ ಅರ್ಜನೆ.)- ಸಂವಿಧಾನ (ನಲವತ್ತನಾಲ್ಕನೆಯ ತಿದ್ದುಪಡಿ) ಅಧಿನಿಯಮ, 1978ರ 6ನೆಯ ಪ್ರಕರಣದ ಮೂಲಕ (20-6-1979ರಿಂದ ಜಾರಿಗೆ ಬರುವಂತೆ) ಬಿಟ್ಟುಬಿಡಲಾಗಿದೆ.

[ಕೆಲವು ಕಾನೂನುಗಳನ್ನು ಉಳಿಸುವುದು]

31a . ಎಸ್ಟೇಟು, ಮುಂತಾದವುಗಳ ಆರ್ಜನೆಗೆ ಉಪಬಂಧಿಸುವ ಕಾನೂನುಗಳನ್ನು ಉಳಿಸುವುದು.

1 . 13ನೆಯ ಅನುಚ್ಛೇದದಲ್ಲಿ ಏನೇ ಒಳಗೊಂಡಿದ್ದಾಗ್ಯೂ.-
(a) ರಾಜ್ಯವು ಯಾವುದೇ ಎಸ್ಟೇಟನ್ನು ಅಥವಾ ಅದರಲ್ಲಿನ ಯಾವುದೇ ಹಕ್ಕುಗಳನ್ನು ಅರ್ಜಿಸುವುದಕ್ಕೆ ಅಥವಾ ಅಂಥ ಯಾವುದೇ ಹಕ್ಕುಗಳನ್ನು ಅಂತ್ಯಗೊಳಿಸುವುದಕ್ಕೆ ಅಥವಾ ಮಾರ್ಪಡಿಸುವುದಕ್ಕೆ; ಅಥವಾ
(b) ಸಾರ್ವಜನಿಕ ಹಿತದೃಷ್ಟಿಯಿಂದ ಅಥವಾ ಸ್ವತ್ತಿನ ಸರಿಯಾದ ವ್ಯವಸ್ಥಾಪನೆಯನ್ನು ಸುನಿಶ್ಚಿತಗೊಳಿಸುವ ಉದ್ದೇಶದಿಂದ, ರಾಜ್ಯವು ಆ ಸ್ವತ್ತಿನ ವ್ಯವಸ್ಥಾಪನೆಯನ್ನು ಪರಿಮಿತ ಅವಧಿಯವರೆಗೆ ವಹಿಸಿಕೊಳ್ಳುವುದಕ್ಕೆ; ಅಥವಾ
(c) ಎರಡು ಅಥವಾ ಹೆಚ್ಚು ನಿಗಮಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಅಥವಾ ಆ ನಿಗಮಗಳಲ್ಲಿ ಯಾವುದೇ ಒಂದರ ಸರಿಯಾದ ವ್ಯವಸ್ಥಾಪನೆಯನ್ನು ಸುನಿಶ್ಚಿತಗೊಳಿಸುವ ಉದ್ದೇಶದಿಂದ ಅವುಗಳನ್ನು ಸಮ್ಮಿಲನಗೊಳಿಸುವುದಕ್ಕೆ; ಅಥವಾ
(d) ನಿಗಮಗಳ ವ್ಯವಸ್ಥಾಪಕ ಏಜೆಂಟರ, ಕಾರ್ಯದರ್ಶಿಗಳ ಮತ್ತು ಕೋಶಾಧಿಕಾರಿಗಳ, ವ್ಯವಸ್ಥಾಪಕ ನಿರ್ದೆಶಕರ, ನಿರ್ದೇಶಕರ ಅಥವಾ ವ್ಯವಸ್ಥಾಪಕರ ಯಾವುದೇ ಹಕ್ಕುಗಳನ್ನು ಅಥವಾ ಅಂಥ ನಿಗಮದ ಷೇರುದಾರರ ಯಾವುದೇ ಮತದಾನದ ಹಕ್ಕುಗಳನ್ನು ಅಂತ್ಯಗೊಳಿಸುವುದಕ್ಕೆ ಅಥವಾ ಮಾರ್ಪಡಿಸುವುದಕ್ಕೆ; ಅಥವಾ
(e) ಯಾವುದೇ ಖನಿಜವನ್ನು ಅಥವಾ ಖನಿಜ ತೈಲವನ್ನು ಪತ್ತೆಹಚ್ಚುವ ಅಥವಾ ಪಡೆದುಕೊಳ್ಳುವ ಉದ್ದೇಶಕ್ಕಾಗಿ ಯಾವುದೇ ಒಪ್ಪಂದದ, ಗುತ್ತಿಗೆಯ ಅಥವಾ ಲೈಸೆನ್ಸಿನ ಕಾರಣದಿಂದ ಪ್ರಾಪ್ತವಾಗುವ ಯಾವುದೇ ಹಕ್ಕುಗಳನ್ನು ಅಂತ್ಯಗೊಳಿಸುವುದಕ್ಕೆ ಅಥವಾ ಮಾರ್ಪಡಿಸುವುದಕ್ಕೆ ಅಥವಾ ಅಂಥ ಯಾವುದೇ ಒಪ್ಪಂದವನ್ನು, ಗುತ್ತಿಗೆಯನ್ನು ಅಥವಾ ಲೈಸೆನ್ಸನ್ನು ಅವಧಿಗೆ ಮುಂಚಿತವಾಗಿ ಸಮಾಪ್ತಿಗೊಳಿಸುವುದಕ್ಕೆ ಅಥವಾ ರದ್ದುಗೊಳಿಸುವುದಕ್ಕೆಉಪಬಂಧಿಸುವ ಯಾವುದೇ ಕಾನೂನು [14ನೆಯ ಅನುಚ್ಛೇದದಿಂದ ಅಥವಾ 19ನೆಯ ಅನುಚ್ಛೇದದಿಂದ ಪ್ರದತ್ತವಾಗಿರುವ ಹಕ್ಕುಗಳಲ್ಲಿ ಯಾವುದೇ ಹಕ್ಕಿಗೆ ಅಸಂಗತವಾಗಿದೆ ಅಥವಾ ಅದನ್ನು ಕಸಿದುಕೊಳ್ಳುತ್ತದೆ ಅಥವಾ ಮೊಟಕುಗೊಳಿಸುತ್ತದೆ ಎಂಬ ಕಾರಣದ ಮೇಲೆ ಅನೂರ್ಜಿತವಾಗುವುದೆಂದು ಭಾವಿಸತಕ್ಕದ್ದಲ್ಲ. ಅಂಥ ಕಾನೂನು ಒಂದು ರಾಜ್ಯದ ವಿಧಾನಮಂಡಲವು ಮಾಡಿದ ಕಾನೂನಾಗಿರುವಲ್ಲಿ, ಅಂಥ ಕಾನೂನನ್ನು ರಾಷ್ಟ್ರಪತಿಯ ಪರ್ಯಾಲೋಚನೆಗಾಗಿ ಕಾಯ್ದಿರಿಸಿದ್ದು ಅದಕ್ಕೆ ಅವನ ಅನುಮತಿ ದೊರಕಿದ್ದ ಹೊರತು, ಈ ಅನುಚ್ಛೇದದ ಉಪಬಂಧಗಳು ಅದಕ್ಕೆ ಅನ್ವಯವಾಗತಕ್ಕದ್ದಲ್ಲ:
[ಮತ್ತು, ಯಾವುದೇ ಕಾನೂನು, ರಾಜ್ಯವು ಯಾವುದೇ ಎಸ್ಟೇಟನ್ನು ಅರ್ಜಿಸುವ ಬಗ್ಗೆ ಯಾವುದೇ ಉಪಬಂಧವನ್ನು ಮಾಡಿರುವಲ್ಲಿ ಮತ್ತು ಆ ಎಸ್ಟೇಟಿನಲ್ಲಿ ಅಡಕವಾದ ಯಾವುದೇ ಭೂಮಿಯನ್ನು ಯಾರೇ ವ್ಯಕ್ತಿಯು ಸ್ವಂತ ಸಾಗುವಳಿಯಲ್ಲಿಟ್ಟುಕೊಂಡಿದ್ದು, ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೇರೆಗೆ ಅವನಿಗೆ ಅನ್ವಯಿಸುವ ಪರಮಾವಧಿ ಮಿತಿಯೊಳಗಿರುವಂಥ ಆ ಭೂಮಿಯ ಯಾವುದೇ ಭಾಗವನ್ನು ಅಥವಾ ಅದರ ಮೇಲಿರುವ ಅಥವಾ ಅದಕ್ಕೆ ಲಗತ್ತಾಗಿರುವ ಯಾವುದೇ ಕಟ್ಟಡ ಅಥವಾ ರಚನೆಯನ್ನು ಅಂಥ ಭೂಮಿಯ, ಕಟ್ಟಡದ ಅಥವಾ ರಚನೆಯ ಅರ್ಜನೆಗೆ ಸಂಬಂಧಿಸಿದ ಕಾನೂನಿನಲ್ಲಿ ಆ ಭೂಮಿಯ, ಕಟ್ಟಡದ ಅಥವಾ ರಚನೆಯ ಮಾರುಕಟ್ಟೆಯ ಮೌಲ್ಯಕ್ಕೆ ಕಡಿಮೆಯಿಲ್ಲದ ದರದಲ್ಲಿ ನಷ್ಟ ಪರಿಹಾರವನ್ನು ಸಂದಾಯ ಮಾಡುವುದಕ್ಕಾಗಿ ಉಪಬಂಧಿಸಿದ್ದ ಹೊರತು ರಾಜ್ಯವು ಅದನ್ನು ಆರ್ಜಿಸುವುದು ಕಾನೂನುಸಮ್ಮತವಾಗತಕ್ಕದ್ದಲ್ಲ.]
2 . ಈ ಅನುಚ್ಛೇದದಲ್ಲಿ.-
[(a) ಯಾವುದೇ ಸ್ಥಳೀಯ ಪ್ರದೇಶಕ್ಕೆ ಸಂಬಂಧಪಟ್ಟಂತೆ, “ಎಸ್ಟೇಟ್” ಎಂಬ ಪದಕ್ಕೆ. ಆ ಪ್ರದೇಶದಲ್ಲಿ ಭೂ ಹಿಡುವಳಿ ಪದ್ಧತಿಗಳಿಗೆ ಸಂಬಂಧಪಟ್ಟಂತೆ ಅಸ್ತಿತ್ವದಲ್ಲಿರುವ ಕಾನೂನಿನಲ್ಲಿ ಆ ಪದಕ್ಕೆ ಅಥವಾ ಅದರ ಸ್ಥಳೀಯ ಸಮಾನಾರ್ಥ ಪದಕ್ಕೆ ಯಾವ ಅರ್ಥವಿದೆಯೋ ಅದೇ ಅರ್ಥವೇ ಇರತಕ್ಕದ್ದು ಮತ್ತು ಆ ಪದದಲ್ಲಿ.-
(i) ಯಾವುದೇ ಜಹಗೀರು, ಇನಾಂ ಅಥವಾ ಮುವಾಫೀ ಅಥವಾ ಅದೇ ಬಗೆಯ ಇತರ ಅನುದಾನವು ಮತ್ತು [ತಮಿಳುನಾಡು] ಹಾಗೂ ಕೇರಳ ರಾಜ್ಯಗಳಲ್ಲಿನ ಯಾವುದೇ ಜನ್ಮಂ ಹಕ್ಕು;
(ii) ರೈತವಾರೀ ಪದ್ಧತಿಯ ಮೇರೆಗೆ ಹೊಂದಿರುವ ಯಾವುದೇ ಭೂಮಿ:
(iii) ಬಂಜರು ಭೂಮಿ, ಅರಣ್ಯ ಭೂಮಿ, ಗೋಮಾಳ ಅಥವಾ ಭೂ ಸಾಗುವಳಿದಾರರ, ಕೃಷಿ ಕಾರ್ಮಿಕರ ಮತ್ತು ಗ್ರಾಮೀಣ ಕುಶಲಕರ್ಮಿಗಳ ಅಧಿಭೋಗದಲ್ಲಿರುವ ಕಟ್ಟಡಗಳ ಮತ್ತು ಇತರ ರಚನೆಗಳ ನಿವೇಶನಗಳನ್ನು ಒಳಗೊಂಡು, ಕೃಷಿಯ ಉದ್ದೇಶಗಳಿಗಾಗಿ ಅಥವಾ ಅದಕ್ಕೆ ಸಹಾಯಕವಾದ ಉದ್ದೇಶಗಳಿಗಾಗಿ ಹೊಂದಿರುವ ಅಥವಾ ಗುತ್ತಿಗೆಗೆ ಕೊಟ್ಟಿರುವ ಯಾವುದೇ ಭೂಮಿ ಸಹ ಒಳಗೊಂಡಿರತಕ್ಕದ್ದು;
(b) ಎಸ್ಟೇಟಿಗೆ ಸಂಬಂಧಿಸಿದಂತೆ “ಹಕ್ಕುಗಳು” ಎಂಬ ಪದದಲ್ಲಿ ಒಬ್ಬ ಮಾಲೀಕನಲ್ಲಿ, ಉಪ-ಮಾಲೀಕನಲ್ಲಿ, ಅಧೀನ ಮಾಲೀಕನಲ್ಲಿ, ಹಿಡುವಳಿದಾರನಲ್ಲಿ, [ರೈತನಲ್ಲಿ, ಅಧೀನ ರೈತನಲ್ಲಿ) ಅಥವಾ ಇತರ ಮಧ್ಯವರ್ತಿಯಲ್ಲಿ ನಿಹಿತವಾಗಿರುವ ಯಾವುದೇ ಹಕ್ಕುಗಳು ಮತ್ತು ಭೂಕಂದಾಯಕ್ಕೆ ಸಂಬಂಧಿಸಿದ ಯಾವುದೇ ಹಕ್ಕುಗಳು ಅಥವಾ ವಿಶೇಷಾಧಿಕಾರಗಳು ಒಳಗೊಂಡಿರತಕ್ಕದ್ದು.

[31b . ಕೆಲವು ಅಧಿನಿಯಮಗಳನ್ನು ಮತ್ತು ರೆಗ್ಯುಲೇಷನ್‌ಗಳನ್ನು ಮಾನ್ಯಮಾಡುವುದು.-

31a ಅನುಚ್ಛೇದದಲ್ಲಿ ಅಡಕವಾಗಿರುವ ಉಪಬಂಧಗಳ ಸಾಮಾನ್ಯ ಅನ್ವಯಕ್ಕೆ ಬಾಧಕವಾಗದಂತೆ, ಒಂಬತ್ತನೆಯ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಯಾವುದೇ ಅಧಿನಿಯಮವು ಮತ್ತು ರೆಗ್ಯುಲೇಷನ್ ಅಥವಾ ಅದರ ಯಾವುದೇ ಉಪಬಂಧವು ಈ ಭಾಗದ ಯಾವುದೇ ಉಪಬಂಧಗಳಿಂದ ಪ್ರದತ್ತವಾದ ಹಕ್ಕುಗಳಲ್ಲಿ ಯಾವುದಕ್ಕಾದರೂ ಅಸಂಗತವಾಗಿದೆ ಎಂಬ ಅಥವಾ ಆ ಹಕ್ಕುಗಳಲ್ಲಿ ಯಾವುದನ್ನಾದರೂ ಕಸಿದುಕೊಳ್ಳುತ್ತದೆ ఎంబ ಅಥವಾ ಮೊಟಕುಗೊಳಿಸುತ್ತದೆ ಕಾರಣದ ಮೇಲೆ ಅನೂರ್ಜಿತವಾಗುವುದಾಗಿ ಅಥವಾ ಎಂದಾದರೂ ಅನೂರ್ಜಿತವಾಗಿದ್ದುದಾಗಿ ಭಾವಿಸತಕ್ಕದ್ದಲ್ಲ ಮತ್ತು ಯಾವುದೇ ನ್ಯಾಯಾಲಯದ ಅಥವಾ ನ್ಯಾಯಾಧಿಕರಣದ ಯಾವುದೇ ತೀರ್ಪು, ಡಿಕ್ರಿ ಅಥವಾ ಆದೇಶವು ತದ್ವಿರುದ್ಧವಾಗಿ ಇದ್ದಾಗ್ಯೂ, ಆ ಪ್ರತಿಯೊಂದು ಅಧಿನಿಯಮವನ್ನು ಮತ್ತು ರೆಗ್ಯುಲೇಷನ್ ಅನ್ನು ನಿರಸನಗೊಳಿಸುವುದಕ್ಕೆ ಅಥವಾ ತಿದ್ದುಪಡಿ ಮಾಡುವುದಕ್ಕೆ ಸಕ್ಷಮವಾದ ಯಾವುದೇ ವಿಧಾನಮಂಡಲಕ್ಕೆ ಇರುವ ಅಧಿಕಾರಕ್ಕೆ ಒಳಪಟ್ಟು ಅವು ಜಾರಿಯಲ್ಲಿರುವುದು ಮುಂದುವರಿಯತಕ್ಕದ್ದು.]

[31ಸಿ . ಕೆಲವು ನಿರ್ದೇಶಕ ತತ್ವಗಳನ್ನು ಜಾರಿಗೆ ತರುವ ಕಾನೂನುಗಳನ್ನು ಉಳಿಸುವುದು.

13ನೆಯ ಅನುಚ್ಛೇದದಲ್ಲಿ ಏನೇ ಒಳಗೊಂಡಿದ್ದಾಗ್ಯೂ [ಭಾಗ IV ರಲ್ಲಿ ಹೇಳಲಾದ ಎಲ್ಲ ತತ್ವಗಳ ಅಥವಾ ಆ ಪೈಕಿ ಯಾವುದೇ ತತ್ವದ ಅನ್ವಯವನ್ನು ಸುನಿಶ್ಚಿತಗೊಳಿಸುವ ರಾಜ್ಯನೀತಿಯನ್ನು ಜಾರಿಗೆ ತರುವ ಯಾವುದೇ ಕಾನೂನು, [14ನೆಯ ಅನುಚ್ಛೇದದಿಂದ ಅಥವಾ 19ನೆಯ ಅನುಚ್ಛೇದದಿಂದ ಪ್ರದತ್ತವಾಗಿರುವ ಹಕ್ಕುಗಳಲ್ಲಿ ಯಾವುದಕ್ಕಾದರೂ ಅಸಂಗತವಾಗಿದೆಯೆಂಬ ಅಥವಾ ಯಾವುದನ್ನಾದರೂ ಕಸಿದುಕೊಳ್ಳುತ್ತದೆ ಅಥವಾ ಮೊಟಕುಗೊಳಿಸುತ್ತದೆ ಎಂಬ ಕಾರಣದ ಮೇಲೆ ಅನೂರ್ಜಿತವಾಗುವುದೆಂದು ಭಾವಿಸತಕ್ಕದ್ದಲ್ಲ; [ಮತ್ತು ಅಂಥ ನೀತಿಯನ್ನು ಜಾರಿಗೊಳಿಸುವ ಉದ್ದೇಶವನ್ನು ಹೊಂದಿದೆ ಎಂಬ ಘೋಷಣೆಯನ್ನೊಳಗೊಂಡಿರುವ ಯಾವುದೇ ಕಾನೂನು ಅಂಥ ನೀತಿಯನ್ನು ಜಾರಿಗೆ ತರುವುದಿಲ್ಲವೆಂಬ ಆಧಾರದ ಮೇಲೆ ಅದನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸತಕ್ಕದ್ದಲ್ಲ. ಒಂದು ರಾಜ್ಯದ ವಿಧಾನಮಂಡಲವು ಅಂಥ ಕಾನೂನನ್ನು ಮಾಡಿರುವಲ್ಲಿ ಮತ್ತು ಆ ಕಾನೂನನ್ನು ರಾಷ್ಟ್ರಪತಿಯ ಪರ್ಯಾಲೋಚನೆಗಾಗಿ ಕಾಯ್ದಿರಿಸಿದ್ದು ಅದಕ್ಕೆ ಅವನ ಅನುಮತಿಯನ್ನು ಪಡೆದಿದ್ದ ಹೊರತು, ಈ ಅನುಚ್ಛೇದದ ಉಪಬಂಧಗಳು ಆ ಕಾನೂನಿಗೆ ಅನ್ವಯವಾಗತಕ್ಕದ್ದಲ್ಲ.

[31d . ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕಾನೂನುಗಳನ್ನು ಉಳಿಸುವುದು)-

ಸಂವಿಧಾನ (ನಲವತ್ತೂರನೇ ತಿದ್ದುಪಡಿ) ಅಧಿನಿಯಮ, 1977ರ 2ನೇ ಪ್ರಕರಣದ ಮೂಲಕ (13-4-1978ರಿಂದ ಜಾರಿಗೆ ಬರುವಂತೆ) ಬಿಟ್ಟುಬಿಡಲಾಗಿದೆ.
Ultimate Guide to FUNDAMENTAL RIGHTS (Articles 25–35):Constitutional Rights

ಸಂವಿಧಾನಾತ್ಮಕ ಪರಿಹಾರೋಪಾಯಗಳ ಹಕ್ಕು Right to Constitutional Remedies

32 . ಈ ಭಾಗದಿಂದ ಪ್ರದತ್ತವಾಗಿರುವ ಹಕ್ಕುಗಳ ಜಾರಿಗಾಗಿ ಪರಿಹಾರೋಪಾಯಗಳು.

1 . ಈ ಭಾಗದಿಂದ ಪ್ರದತ್ತವಾಗಿರುವ ಹಕ್ಕುಗಳನ್ನು ಜಾರಿಗೊಳಿಸುವುದಕ್ಕಾಗಿ ಸಮುಚಿತ ವ್ಯವಹರಣೆಗಳ ಮೂಲಕ ಸರ್ವೋಚ್ಚ ನ್ಯಾಯಾಲಯವನ್ನು ಕೋರುವ ಹಕ್ಕನ್ನು ಖಾತ್ರಿಗೊಳಿಸಲಾಗಿದೆ.
2 . ಈ ಭಾಗದಿಂದ ಪ್ರದತ್ತವಾಗಿರುವ ಹಕ್ಕುಗಳಲ್ಲಿ ಯಾವುದೇ ಹಕ್ಕನ್ನು ಜಾರಿಗೊಳಿಸುವುದಕ್ಕಾಗಿ ಸರ್ವೋಚ್ಚ ನ್ಯಾಯಾಲಯವು ನಿರ್ದೇಶನಗಳು, ಆದೇಶಗಳು ಅಥವಾ ಹೇಬಿಯಸ್ ಕಾರ್ಪಸ್, ಮ್ಯಾಂಡಮಸ್, ಪ್ರೊಹಿಬಿಷನ್, ಕೊ ವಾರಂಟೋ ಮತ್ತು ಸರ್‌ಶಿಯೋರರಿ ಸ್ವರೂಪದ ರಿಟ್‌ ಗಳೂ ಸೇರಿ ರಿಟ್‌ಗಳಲ್ಲಿ ಯಾವುದು ಸಮುಚಿತವೋ ಅದನ್ನು ಹೊರಡಿಸಲು ಅಧಿಕಾರವನ್ನು ಹೊಂದಿರತಕ್ಕದ್ದು.
3 . (1)ನೆಯ ಮತ್ತು (2)ನೆಯ ಖಂಡಗಳ ಮೂಲಕ ಸರ್ವೋಚ್ಚ ನ್ಯಾಯಾಲಯಕ್ಕೆ ಪ್ರದತ್ತವಾಗಿರುವ ಅಧಿಕಾರಗಳಿಗೆ ಬಾಧಕವಾಗದಂತೆ, (2)ನೆಯ ಖಂಡದ ಮೇರೆಗೆ ಸರ್ವೋಚ್ಚ ನ್ಯಾಯಾಲಯವು ಚಲಾಯಿಸಬಹುದಾದ ಎಲ್ಲ ಅಧಿಕಾರಗಳನ್ನು ಅಥವಾ ಆ ಪೈಕಿ ಯಾವುದೇ ಅಧಿಕಾರವನ್ನು ಇತರ ಯಾವುದೇ ನ್ಯಾಯಾಲಯವು ತನ್ನ ಅಧಿಕಾರವ್ಯಾಪ್ತಿಯ ಸ್ಥಳೀಯ ಪರಿಮಿತಿಗಳೊಳಗೆ ಚಲಾಯಿಸುವಂತೆ, ಆ ಇತರ ನ್ಯಾಯಾಲಯಕ್ಕೆ ಸಂಸತ್ತು ಕಾನೂನಿನ ಮೂಲಕ ಅಧಿಕಾರ ನೀಡಬಹುದು.
4 . ಈ ಸಂವಿಧಾನದ ಮೂಲಕ ಅನ್ಯಥಾ ಉಪಬಂಧಿಸಿದಂತೆ ಹೊರತು ಈ ಅನುಚ್ಛೇದವು ಖಾತ್ರಿಗೊಳಿಸಿರುವ ಹಕ್ಕನ್ನು ಅಮಾನತುಗೊಳಿಸತಕ್ಕದ್ದಲ್ಲ.
32a . [32ನೇ ಅನುಚ್ಛೇದದ ಮೇರೆಗಿನ ವ್ಯವಹರಣೆಗಳಲ್ಲಿ, ರಾಜ್ಯದ ಕಾನೂನುಗಳ ಸಂವಿಧಾನಾತ್ಮಕ ಸಿಂಧುತ್ವವನ್ನು ಪರ್ಯಾಲೋಚಿಸತಕ್ಕದ್ದಲ್ಲ). ಸಂವಿಧಾನ (ನಲವತ್ತಮೂರನೇ ತಿದ್ದುಪಡಿ) ಅಧಿನಿಯಮ, 1977ರ 3ನೇ ಪ್ರಕರಣದ ಮೂಲಕ (13-4-1978 ರಿಂದ ಜಾರಿಗೆ ಬರುವಂತೆ) ಬಿಟ್ಟುಬಿಡಲಾಗಿದೆ.

33 . ಈ ಭಾಗದಿಂದ ಪ್ರದತ್ತವಾದ ಹಕ್ಕುಗಳನ್ನು ಸಶಸ್ತ್ರ ಬಲಗಳು, ಮುಂತಾದವುಗಳಿಗೆ ಅನ್ವಯಿಸುವಲ್ಲಿ ಅವುಗಳನ್ನು ಮಾರ್ಪಡಿಸಲು ಸಂಸತ್ತಿಗಿರುವ ಅಧಿಕಾರ.

ಸಂಸತ್ತು ಈ ಭಾಗದಿಂದ ಪ್ರದತ್ತವಾದ ಯಾವುದೇ ಹಕ್ಕುಗಳನ್ನು,
a . ಸಶಸ್ತ್ರ ಬಲಗಳ ಸದಸ್ಯರಿಗೆ; ಅಥವಾ
b . ಸಾರ್ವಜನಿಕ ಸುವ್ಯವಸ್ಥೆಯ ಜವಾಬ್ದಾರಿಯನ್ನು ವಹಿಸಲಾಗಿರುವ ಬಲಗಳ ಸದಸ್ಯರಿಗೆ; ಅಥವಾ
c . ಗುಪ್ತವಾರ್ತೆ ಅಥವಾ ಪ್ರತಿಗುಪ್ತವಾರ್ತೆಯ ಉದ್ದೇಶಗಳಿಗಾಗಿ ರಾಜ್ಯವು ಸ್ಥಾಪಿಸಿರುವ ಯಾವುದೇ ಬ್ಯೂರೋ ಅಥವಾ ಇತರ ಸಂಸ್ಥೆಯಲ್ಲಿ ನಿಯೋಜಿತರಾಗಿರುವ ವ್ಯಕ್ತಿಗಳಿಗೆ; ಅಥವಾ
d . (a) ಯಿಂದ (c) ಖಂಡಗಳಲ್ಲಿ ಉಲ್ಲೇಖಿಸಿದ ಯಾವುದೇ ಬಲಗಳ, ಬ್ಯೂರೋದ ಅಥವಾ ಸಂಸ್ಥೆಯ ಉದ್ದೇಶಗಳಿಗಾಗಿ ಸ್ಥಾಪಿಸಿದ ದೂರ ಸಂಪರ್ಕ ವ್ಯವಸ್ಥೆಯಲ್ಲಿ ನಿಯೋಜಿತರಾದ ಅಥವಾ ಆ ವ್ಯವಸ್ಥೆಗೆ ಸಂಬಂಧಿಸಿದ ವ್ಯಕ್ತಿಗಳಿಗೆ ಅನ್ವಯಿಸುವಲ್ಲಿ, ಅವರ ಕರ್ತವ್ಯಗಳ ಸೂಕ್ತ ನಿರ್ವಹಣೆಯನ್ನು ಮತ್ತು ಅವರಲ್ಲಿ ಶಿಸ್ತುಪಾಲನೆಯನ್ನು ಸುನಿಶ್ಚಿತಗೊಳಿಸಲು ಅವುಗಳನ್ನು ಎಷ್ಟರಮಟ್ಟಿಗೆ ನಿರ್ಬಂಧಿಸತಕ್ಕದ್ದು ಅಥವಾ ನಿರಾಕರಿಸತಕ್ಕದ್ದು ಎಂಬುದನ್ನು ಕಾನೂನಿನ ಮೂಲಕ ನಿರ್ಧರಿಸಬಹುದು.]

34 . ಯಾವುದೇ ಪ್ರದೇಶದಲ್ಲಿ ಲಷ್ಕರಿ ಕಾನೂನು ಜಾರಿಯಲ್ಲಿರುವಾಗ ಈ ಭಾಗದಿಂದ ಪ್ರದತ್ತವಾದ ಹಕ್ಕುಗಳ ಮೇಲೆ ನಿರ್ಬಂಧ.-

ಈ ಭಾಗದ ಹಿಂದೆ ಹೇಳಿದ ಉಪಬಂಧಗಳಲ್ಲಿ ಏನೇ ಇದ್ದಾಗ್ಯೂ, ಸಂಸತ್ತು ಕಾನೂನಿನ ಮೂಲಕ ಒಕ್ಕೂಟದ ಅಥವಾ ಒಂದು ರಾಜ್ಯದ ಸೇವೆಯಲ್ಲಿರುವ ಯಾರೇ ವ್ಯಕ್ತಿ ಅಥವಾ ಇತರ ಯಾರೇ ವ್ಯಕ್ತಿಯು ಭಾರತದ ರಾಜ್ಯಕ್ಷೇತ್ರದೊಳಗೆ ಲಷ್ಕರಿ ಕಾನೂನು ಜಾರಿಯಲ್ಲಿದ್ದ ಯಾವುದೇ ಪ್ರದೇಶದಲ್ಲಿ ಸುವ್ಯವಸ್ಥೆಯ ನಿರ್ವಹಣೆ ಅಥವಾ ಅದರ ಮರುಸ್ಥಾಪನೆಗಾಗಿ ಮಾಡಿದ ಯಾವುದೇ ಕಾರ್ಯಕ್ಕೆ ಸಂಬಂಧಿಸಿದಂತೆ ಅವನಿಗೆ ರಕ್ಷಣೆ ನೀಡಬಹುದು ಅಥವಾ ಅಂಥ ಪ್ರದೇಶದಲ್ಲಿ ಲಷ್ಕರೀ ಕಾನೂನಿನ ಮೇರೆಗೆ ವಿಧಿಸಿದ ಯಾವುದೇ ಶಿಕ್ಷೆಯನ್ನು ವಿಧಿಸಿದ ದಂಡನೆಯನ್ನು, ಆದೇಶಿಸಿದ ಮುಟ್ಟುಗೋಲನ್ನು ಅಥವಾ ಮಾಡಿದ ಇತರ ಕಾರ್ಯವನ್ನು ಸಿಂಧುಗೊಳಿಸಬಹುದು.

35 . ಈ ಭಾಗದ ಉಪಬಂಧಗಳನ್ನು ಜಾರಿಗೆ ತರುವುದಕ್ಕಾಗಿ ಕಾನೂನು ರಚನೆ.-

ಈ ಸಂವಿಧಾನದಲ್ಲಿ ಏನೇ ಇದ್ದಾಗ್ಯೂ.

(a) (i) 16ನೆಯ ಅನುಚ್ಛೇದದ (3)ನೆಯ ಖಂಡದ ಮೇರೆಗೆ, 32ನೆಯ ಅನುಚ್ಛೇದದ (3)ನೆಯ ಖಂಡದ ಮೇರೆಗೆ, 33ನೆಯ ಅನುಚ್ಛೇದದ ಮತ್ತು 34ನೆಯ ಅನುಚ್ಛೇದದ ಮೇರೆಗೆ. ಯಾವ ವಿಷಯಗಳಿಗೆ ಸಂಬಂಧಿಸಿದಂತೆ ಸಂಸತ್ತು ಮಾಡಿದ ಕಾನೂನಿನ ಮೂಲಕ ಉಪಬಂಧಿಸಬಹುದೋ ಆ ವಿಷಯಗಳ ಪೈಕಿ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ; ಮತ್ತು
(ii) ಈ ಭಾಗದ ಮೇರೆಗೆ ಅಪರಾಧಗಳೆಂದು ಘೋಷಿಸಿರುವ ಕೃತ್ಯಗಳಿಗೆ ದಂಡನೆಯನ್ನು ಗೊತ್ತುಪಡಿಸುವುದಕ್ಕಾಗಿ ಕಾನೂನುಗಳನ್ನು ಮಾಡಲು ಸಂಸತ್ತಿಗೆ ಅಧಿಕಾರವಿರತಕ್ಕದ್ದು,

ಆದರೆ ರಾಜ್ಯದ ವಿಧಾನಮಂಡಲಕ್ಕೆ ಅಂಥ ಅಧಿಕಾರವಿರತಕ್ಕದ್ದಲ್ಲ ಮತ್ತು ಸಂಸತ್ತು ಈ ಸಂವಿಧಾನವು ಪ್ರಾರಂಭವಾದ ಮೇಲೆ ಆದಷ್ಟು ಬೇಗನೆ (ii)ನೆಯ ಉಪಖಂಡದಲ್ಲಿ ಉಲ್ಲೇಖಿಸಿರುವ ಕೃತ್ಯಗಳಿಗೆ ದಂಡನೆಯನ್ನು ಗೊತ್ತುಪಡಿಸುವ ಕಾನೂನುಗಳನ್ನು ಮಾಡತಕ್ಕದ್ದು.

(b) ಭಾರತದ ರಾಜ್ಯಕ್ಷೇತ್ರದಲ್ಲಿ, ಈ ಸಂವಿಧಾನದ ಪ್ರಾರಂಭಕ್ಕೆ ನಿಕಟಪೂರ್ವದಲ್ಲಿ (ಎ) ಖಂಡದ
(i)ನೆಯ ಉಪಖಂಡದಲ್ಲಿ ಉಲ್ಲೇಖಿಸಿರುವ ವಿಷಯಗಳ ಪೈಕಿ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಅಥವಾ
ಆ ಖಂಡದ (ii)ನೆಯ ಉಪಖಂಡದಲ್ಲಿ ಉಲ್ಲೇಖಿಸಿರುವ ಯಾವುದೇ ಕೃತ್ಯಕ್ಕೆ ದಂಡನೆಯನ್ನು ಗೊತ್ತುಪಡಿಸುವುದಕ್ಕೆ ಸಂಬಂಧಿಸಿದಂತೆ ಜಾರಿಯಲ್ಲಿರುವ ಯಾವುದೇ ಕಾನೂನು, ಅದರ ನಿಬಂಧನೆಗಳಿಗೆ ಮತ್ತು 372ನೆಯ ಅನುಚ್ಛೇದದ ಮೇರೆಗೆ ಅದರಲ್ಲಿ ಮಾಡಬಹುದಾದ ಯಾವುದೇ ಆಳವಡಿಕೆಗಳಿಗೆ ಮತ್ತು ಮಾರ್ಪಾಟುಗಳಿಗೆ ಒಳಪಟ್ಟು, ಸಂಸತ್ತು ಅದನ್ನು ಬದಲಾಯಿಸುವವರೆಗೆ ಅಥವಾ ನಿರಸನಗೊಳಿಸುವವರೆಗೆ ಅಥವಾ ತಿದ್ದುಪಡಿ ಮಾಡುವವರೆಗೆ ಜಾರಿಯಲ್ಲಿರುವುದು ಮುಂದುವರಿಯತಕ್ಕದ್ದು.

ವಿವರಣೆ.- ಈ ಅನುಚ್ಛೇದದಲ್ಲಿ “ಜಾರಿಯಲ್ಲಿರುವ ಕಾನೂನು” ಎಂಬ ಪದಗಳಿಗೆ 372ನೆಯ ಅನುಚ್ಛೇದದಲ್ಲಿ ಇರುವ ಅರ್ಥವೇ ಇರುತ್ತದೆ.

constitution of india.in

Fundamental Rights : Importance of Articles 19 to 24

1 thought on “ಮೂಲಭೂತ ಹಕ್ಕುಗಳು (article 25–35): ಸಂವಿಧಾನ ಹಕ್ಕುಗಳ ಸಂಪೂರ್ಣ ವಿವರಣೆ. “Ultimate Guide to FUNDAMENTAL RIGHTS (Articles 25–35): Know Your Powerful Constitutional Rights””

Leave a Comment