ಮೂಲಭೂತ ಹಕ್ಕುಗಳು : 19 ರಿಂದ 24ನೇ ವಿಧಿಗಳ ಮಹತ್ವ FUNDAMENTAL RIGHTS : Importance of Articles 19 to 24

ಸ್ವಾತಂತ್ರ್ಯದ ಹಕ್ಕು ( RIGHTS TO FREEDOM )

19 . ವಾಕ್ ಸ್ವಾತಂತ್ರ್ಯ, ಮುಂತಾದವುಗಳ ಬಗ್ಗೆ ಕೆಲವು ಹಕ್ಕುಗಳ ಸಂರಕ್ಷಣೆ.

1 . ಸಮಸ್ತ ನಾಗರಿಕರೂ.

(a) ವಾಕ್ ಸ್ವಾತಂತ್ರ್ಯದ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು
(b) ಶಾಂತಿಯಿಂದ ಹಾಗೂ ನಿರಾಯುಧರಾಗಿ ಸಭೆ ಸೇರುವ ಹಕ್ಕು
(c) ಸಂಸ್ಥೆಗಳನ್ನು ಅಥವಾ ಸಂಘಗಳನ್ನು [ಅಥವಾ ಸಹಕಾರ ಸಂಘಗಳನ್ನು ರಚಿಸುವ ಹಕ್ಕು
(d) ಭಾರತದ ರಾಜ್ಯಕ್ಷೇತ್ರದಲ್ಲಿ ಅಬಾಧಿತವಾಗಿ ಸರ್ವತ್ರಸಂಚಾರ ಮಾಡುವ ಹಕ್ಕು
(e) ಭಾರತದ ರಾಜ್ಯಕ್ಷೇತ್ರದ ಯಾವುದೇ ಭಾಗದಲ್ಲಿ ವಾಸ ಮಾಡುವ ಮತ್ತು ನೆಲೆಸುವ ಹಕ್ಕು
(f) ಯಾವುದೇ ವೃತ್ತಿಯನ್ನು ನಡೆಸುವ ಅಥವಾ ಕಸುಬನ್ನು, ವ್ಯಾಪಾರವನ್ನು ಅಥವಾ ವ್ಯವಹಾರವನ್ನು ನಡೆಸುವ ಹಕ್ಕು
[ (2) (1)ನೆಯ ಖಂಡದ (a) ಉಪಖಂಡದಲ್ಲಿ ಇರುವುದು ಯಾವುದೂ, ‘[ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆಯ, ರಾಜ್ಯದ ಭದ್ರತೆಯ, ವಿದೇಶಿ ರಾಜ್ಯಗಳೊಡನೆ ಸ್ನೇಹಯುತ ಸಂಬಂಧಗಳ, ಸಾರ್ವಜನಿಕ ಸುವ್ಯವಸ್ಥೆಯ, ಸಭ್ಯತೆಯ ಅಥವಾ ನೈತಿಕತೆಯ ಹಿತದೃಷ್ಟಿಯಿಂದ ಅಥವಾ ನ್ಯಾಯಾಲಯದ ನಿಂದನೆಯ, ಮಾನನಷ್ಟದ ಅಥವಾ ಒಂದು ಅಪರಾಧದ ಚಿತಾವಣೆಯ ಸಂಬಂಧದಲ್ಲಿ ಅಸ್ತಿತ್ವದಲ್ಲಿರುವ ಯಾವುದೇ ಕಾನೂನು ಸದರಿ ಉಪಖಂಡದಿಂದ ಪ್ರದಾನ ಮಾಡಲಾಗಿರುವ ಹಕ್ಕನ್ನು ಚಲಾಯಿಸುವುದರ ಮೇಲೆ ಯುಕ್ತ ನಿರ್ಬಂಧಗಳನ್ನು ವಿಧಿಸುವಷ್ಟರ ಮಟ್ಟಿಗೆ ಅಂಥ ಕಾನೂನಿನ ಜಾರಿಯ ಮೇಲೆ ಪರಿಣಾಮ ಬೀರತಕ್ಕದ್ದಲ್ಲ ಅಥವಾ ಅಂಥ ಯುಕ್ತ ನಿರ್ಬಂಧಗಳನ್ನು ವಿಧಿಸುವ ಯಾವುದೇ ಕಾನೂನನ್ನು ಮಾಡದಂತೆ ರಾಜ್ಯವನ್ನು ಪ್ರತಿಬಂಧಿಸತಕ್ಕದ್ದಲ್ಲ.]
(3) ಸದರಿ ಖಂಡದ (b) ಉಪಖಂಡದಲ್ಲಿರುವುದು ಯಾವುದೂ, [ಭಾರತದ ಸಾರ್ವಭೌಮತ್ವ ಮತ್ತುಅಖಂಡತೆಯ ಅಥವಾ] ಸಾರ್ವಜನಿಕ ಸುವ್ಯವಸ್ಥೆಯ ಹಿತದೃಷ್ಟಿಯಿಂದ ಸದರಿ ಉಪಖಂಡದಿಂದ ಪ್ರದಾನ ಮಾಡಲಾದ ಹಕ್ಕನ್ನು ಚಲಾಯಿಸುವುದರ ಮೇಲೆ ಅಸ್ತಿತ್ವದಲ್ಲಿರುವ ಯಾವುದೇ ಕಾನೂನು ಯುಕ್ತ ನಿರ್ಬಂಧಗಳನ್ನು ವಿಧಿಸುವಷ್ಟರ ಮಟ್ಟಿಗೆ ಅಂಥ ಕಾನೂನಿನ ಜಾರಿಯ ಮೇಲೆ ಯಾವುದೇ ಪರಿಣಾಮ ಬೀರತಕ್ಕದ್ದಲ್ಲ ಅಥವಾ ಅಂಥ ಯುಕ್ತ ನಿರ್ಬಂಧಗಳನ್ನು ವಿಧಿಸುವ ಯಾವುದೇ ಕಾನೂನನ್ನು ಮಾಡದಂತೆ ರಾಜ್ಯವನ್ನು ಪ್ರತಿಬಂಧಿಸತಕ್ಕದ್ದಲ್ಲ].
(4) ಸದರಿ ಖಂಡದ (c) ಉಪಖಂಡದಲ್ಲಿರುವುದು ಯಾವುದೂ, [ಭಾರತದ ಸಾರ್ವಭೌಮತ್ವ ಮತ್ತುಅಖಂಡತೆಯ ಅಥವಾ] ಸಾರ್ವಜನಿಕ ಸುವ್ಯವಸ್ಥೆಯ ಅಥವಾ ನೈತಿಕತೆಯ ಹಿತದೃಷ್ಟಿಯಿಂದ ಸದರಿ ಉಪಖಂಡದಿಂದ ಪ್ರದಾನ ಮಾಡಲಾದ ಹಕ್ಕನ್ನು ಚಲಾಯಿಸುವುದರ ಮೇಲೆ ಅಸ್ತಿತ್ವದಲ್ಲಿರುವ ಯಾವುದೇ ಕಾನೂನು ಯುಕ್ತ ನಿರ್ಬಂಧಗಳನ್ನು ವಿಧಿಸುವಷ್ಟರ ಮಟ್ಟಿಗೆ ಅಂಥ ಕಾನೂನಿನ ಜಾರಿಯ ಮೇಲೆ ಪರಿಣಾಮ ಬೀರತಕ್ಕದ್ದಲ್ಲ ಅಥವಾ ಅಂಥ ಯುಕ್ತ ನಿರ್ಬಂಧಗಳನ್ನು ವಿಧಿಸುವ ಯಾವುದೇ ಕಾನೂನನ್ನು ಮಾಡದಂತೆ ರಾಜ್ಯವನ್ನು ಪ್ರತಿಬಂಧಿಸತಕ್ಕದ್ದಲ್ಲ.
(5) ಸದರಿ ಖಂಡದ [(d) ಮತ್ತು (e) ಖಂಡಗಳಲ್ಲಿ) ಇರುವುದು ಯಾವುದೂ, ಸಾರ್ವಜನಿಕಹಿತದೃಷ್ಟಿಯಿಂದ ಅಥವಾ ಯಾವುದೇ ಅನುಸೂಚಿತ ಬುಡಕಟ್ಟುಗಳ ಹಿತರಕ್ಷಣೆಗಾಗಿ ಸದರಿ ಉಪಖಂಡಗಳಿಂದ ಪ್ರದಾನ ಮಾಡಲಾದ ಯಾವುದೇ ಹಕ್ಕುಗಳನ್ನು ಚಲಾಯಿಸುವುದರ ಮೇಲೆ ಅಸ್ತಿತ್ವದಲ್ಲಿರುವ ಯಾವುದೇ ಕಾನೂನು ಯುಕ್ತ ನಿರ್ಬಂಧಗಳನ್ನು ವಿಧಿಸುವಷ್ಟರ ಮಟ್ಟಿಗೆ ಅಂಥ ಕಾನೂನಿನ ಜಾರಿಯ ಮೇಲೆ ಪರಿಣಾಮ ಬೀರತಕ್ಕದ್ದಲ್ಲ ಅಥವಾ ಅಂಥ ಯುಕ್ತ ನಿರ್ಬಂಧಗಳನ್ನು ವಿಧಿಸುವ ಯಾವುದೇ ಕಾನೂನನ್ನು ಮಾಡದಂತೆ ರಾಜ್ಯವನ್ನು ಪ್ರತಿಬಂಧಿಸತಕ್ಕದ್ದಲ್ಲ.
(6) ಸದರಿ ಖಂಡದ (f) ಉಪಖಂಡದಲ್ಲಿರುವುದು ಯಾವುದೂ, ಸಾರ್ವಜನಿಕ ಹಿತದೃಷ್ಟಿಯಿಂದ ಸದರಿ ಉಪಖಂಡದಿಂದ ಪ್ರದಾನ ಮಾಡಲಾದ ಹಕ್ಕನ್ನು ಚಲಾಯಿಸುವುದರ ಮೇಲೆ ಅಸ್ತಿತ್ವದಲ್ಲಿರುವ ಯಾವುದೇ ಕಾನೂನು ಯುಕ್ತ ನಿರ್ಬಂಧಗಳನ್ನು ವಿಧಿಸುವಷ್ಟರ ಮಟ್ಟಿಗೆ ಅಂಥ ಕಾನೂನಿನ ಜಾರಿಯ ಮೇಲೆ ಪರಿಣಾಮ ಬೀರತಕ್ಕದ್ದಲ್ಲ ಅಥವಾ ಅಂಥ ಯುಕ್ತ ನಿರ್ಬಂಧಗಳನ್ನು ವಿಧಿಸುವ ಯಾವುದೇ ಕಾನೂನನ್ನು ಮಾಡದಂತೆ ರಾಜ್ಯವನ್ನು ಪ್ರತಿಬಂಧಿಸತಕ್ಕದ್ದಲ್ಲ ಮತ್ತು ವಿಶೇಷವಾಗಿ ಸದರಿ ಉಪಖಂಡದಲ್ಲಿರುವುದು ಯಾವುದೂ.-
(i) ಯಾವುದೇ ವೃತ್ತಿಯನ್ನು, ಕಸುಬನ್ನು, ವ್ಯಾಪಾರವನ್ನು ಅಥವಾ ವ್ಯವಹಾರವನ್ನು ನಡೆಸಲು ಅವಶ್ಯವಾದ ವೃತ್ತೀಯ ಅಥವಾ ತಾಂತ್ರಿಕ ಅರ್ಹತೆಗಳಿಗೆ; ಅಥವಾ
(ii) ಯಾವುದಾದರೂ ವ್ಯಾಪಾರವನ್ನು, ವ್ಯವಹಾರವನ್ನು, ಕೈಗಾರಿಕೆಯನ್ನು ಅಥವಾ ಸೇವೆಯನ್ನು, ರಾಜ್ಯವೇ ಆಗಲಿ ಅಥವಾ ರಾಜ್ಯದ ಒಡೆತನದಲ್ಲಿರುವ ಅಥವಾ ನಿಯಂತ್ರಣದಲ್ಲಿರುವ ನಿಗಮವೇ ಆಗಲಿ, ಪೂರ್ಣವಾಗಿ ಅಥವಾ ಭಾಗಶಃ ನಾಗರಿಕರನ್ನು ಸೇರಿಸಿಕೊಳ್ಳದೆ ಅಥವಾ ಅನ್ಯಥಾ ನಡೆಸಿಕೊಂಡು ಬರುವುದಕ್ಕೆ ಸಂಬಂಧಪಡುವಷ್ಟರ ಮಟ್ಟಿಗೆ ಆಸ್ತಿತ್ವದಲ್ಲಿರುವ ಯಾವುದೇ ಕಾನೂನಿನ ಜಾರಿಯ ಮೇಲೆ [ಪರಿಣಾಮ ಬೀರತಕ್ಕದ್ದಲ್ಲ ಅಥವಾ ಅವುಗಳಿಗೆ ಸಂಬಂಧಪಟ್ಟಂತೆ ಯಾವುದೇ ಕಾನೂನನ್ನು ಮಾಡದಂತೆ ರಾಜ್ಯವನ್ನು ಪ್ರತಿಬಂಧಿಸತಕ್ಕದ್ದಲ್ಲ.

20 . ಅಪರಾಧಗಳ ಬಗ್ಗೆ ಅಪರಾಧಿಯೆಂದು ನಿರ್ಣಯಿಸುವ ಸಂಬಂಧದಲ್ಲಿ ಸಂರಕ್ಷಣೆ.

1 . ಯಾವ ಕೃತ್ಯ ಎಸಗಿರುವುದನ್ನು ಅಪರಾಧವೆಂದು ಆರೋಪಿಸಲಾಗಿದೆಯೋ ಆ ಕೃತ್ಯವನ್ನು ಎಸಗಿದ ಕಾಲದಲ್ಲಿ ಜಾರಿಯಲ್ಲಿರುವ ಕಾನೂನಿನ ಉಲ್ಲಂಘನೆ ಮಾಡಿದ ಯಾರೇ ವ್ಯಕ್ತಿಯನ್ನು ಆ ಅಪರಾಧದ ಬಗ್ಗೆ ಮಾತ್ರ ಅಪರಾಧಿಯೆಂದು ನಿರ್ಣಯಿಸತಕ್ಕದ್ದೇ ಹೊರತು ಮತ್ತಾವುದೇ ಅಪರಾಧದ ಬಗ್ಗೆ ಅಪರಾಧಿಯೆಂದು ನಿರ್ಣಯಿಸತಕ್ಕದ್ದಲ್ಲ ಮತ್ತು ಆ ಅಪರಾಧವು ನಡೆದ ಕಾಲದಲ್ಲಿ ಜಾರಿಯಲ್ಲಿರತಕ್ಕ ಕಾನೂನಿನ ಮೇರೆಗೆ ವಿಧಿಸಬಹುದಾಗಿದ್ದ ದಂಡನೆಗಿಂತ ಹೆಚ್ಚಿನ ದಂಡನೆಗೆ ಅವನನ್ನು ಗುರಿಪಡಿಸತಕ್ಕದ್ದಲ್ಲ.
2 . ಯಾರೇ ವ್ಯಕ್ತಿಯನ್ನು ಒಂದೇ ಅಪರಾಧಕ್ಕಾಗಿ ಒಂದಕ್ಕಿಂತ ಹೆಚ್ಚು ಸಲ ಪ್ರಾಸಿಕ್ಯೂಷನ್‌ಗೆ ಗುರಿಪಡಿಸತಕ್ಕದ್ದಲ್ಲ ಹಾಗೂ ದಂಡಿಸತಕ್ಕದ್ದಲ್ಲ.
3 . ಯಾವುದೇ ಅಪರಾಧದ ಸಂಬಂಧದಲ್ಲಿ ಆರೋಪಿತನಾಗಿರುವ ಯಾರೇ ವ್ಯಕ್ತಿಯನ್ನು ತನ್ನ ವಿರುದ್ಧವಾಗಿ ತಾನೇ ಸಾಕ್ಷಿಯಾಗುವಂತೆ ಒತ್ತಾಯಿಸತಕ್ಕದ್ದಲ್ಲ.

21 . ಜೀವದ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಸಂರಕ್ಷಣೆ .

ಕಾನೂನಿನ ಮೂಲಕ ಸ್ಥಾಪಿತವಾಗಿರುವ ಪ್ರಕ್ರಿಯೆಗೆ ಅನುಸಾರವಾಗಿ ಹೊರತು, ಯಾರೇ ವ್ಯಕ್ತಿಯ ಜೀವವನ್ನು ಅಥವಾ ವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡತಕ್ಕದ್ದಲ್ಲ.

21A . ಶಿಕ್ಷಣದ ಹಕ್ಕು

ರಾಜ್ಯವು, ಕಾನೂನಿನ ಮೂಲಕ ತಾನು ನಿರ್ಧರಿಸಬಹುದಾದಂಥ ರೀತಿಯಲ್ಲಿ ಆರರಿಂದ ಹದಿನಾಲ್ಕು ವರ್ಷಗಳ ವಯಸ್ಸಿನ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸತಕ್ಕದ್ದು.

22 . ಕೆಲವು ಸಂದರ್ಭಗಳಲ್ಲಿ ದಸ್ತಗಿರಿಯಿಂದ ಮತ್ತು ಸ್ಥಾನಬದ್ಧತೆಯಿಂದ ಸಂರಕ್ಷಣೆ.

1 . ದಸ್ತಗಿರಿಯಾದ ಯಾರೆ ವ್ಯಕ್ತಿಗೆ, ಅಂಥ ದಸ್ತಗಿರಿಯ ಕಾರಣಗಳನ್ನು ಆದಷ್ಟು ಬೇಗನೆ ತಿಳಿಸದೆ ಅವನನ್ನು ಅಭಿರಕ್ಷೆಯಲ್ಲಿ ಸ್ಥಾನಬದ್ಧಗೊಳಿಸಿ ಇಡತಕ್ಕದ್ದಲ್ಲ ಮತ್ತು ತನಗೆ ಇಷ್ಟವಾದ ನ್ಯಾಯವಾದಿಯೊಡನೆ ಸಮಾಲೋಚಿಸುವ ಮತ್ತು ಅವನ ಮೂಲಕ ಪ್ರತಿರಕ್ಷಿಸಿಕೊಳ್ಳುವ ಹಕ್ಕನ್ನು ಆ ವ್ಯಕ್ತಿಗೆ ನಿರಾಕರಿಸತಕ್ಕದ್ದಲ್ಲ.
2 . ದಸ್ತಗಿರಿಯಾದ ಹಾಗೂ ಅಭಿರಕ್ಷೆಯಲ್ಲಿ ಸ್ಥಾನಬದ್ಧಗೊಳಿಸಲಾದ ಪ್ರತಿಯೊಬ್ಬ ವ್ಯಕ್ತಿಯನ್ನು, ದಸ್ತಗಿರಿಯಾದ ಸ್ಥಳದಿಂದ ಮ್ಯಾಜಿಸ್ಟ್ರೇಟನ ನ್ಯಾಯಾಲಯಕ್ಕೆ ಹೋಗುವುದಕ್ಕೆ ಅವಶ್ಯವಾದ ಕಾಲವನ್ನು ಹೊರತುಪಡಿಸಿ, ದಸ್ತಗಿರಿಯ ತರುವಾಯ ಇಪ್ಪತ್ತನಾಲ್ಕು ಗಂಟೆಗಳ ಅವಧಿಯೊಳಗಾಗಿ ಅತ್ಯಂತ ಸಮೀಪದ ಮ್ಯಾಜಿಸ್ಟ್ರೇಟನ ಮುಂದೆ ಹಾಜರುಪಡಿಸತಕ್ಕದ್ದು ಮತ್ತು ಮ್ಯಾಜಿಸ್ಟ್ರೇಟನಿಂದ ಅಧಿಕಾರವನ್ನು ಪಡೆಯದೆ ಅಂಥ ಯಾರೇ ವ್ಯಕ್ತಿಯನ್ನು ಸದರಿ ಅವಧಿಗಿಂತ ಹೆಚ್ಚಾಗಿ ಅಭಿರಕ್ಷೆಯಲ್ಲಿ ಸ್ಥಾನಬದ್ದಗೊಳಿಸತಕ್ಕದ್ದಲ್ಲ.
(3) (1)ನೆಯ ಮತ್ತು (2)ನೆಯ ಖಂಡಗಳಲ್ಲಿ ಇರುವುದು ಯಾವುದೂ.-
(a) ತತ್ಕಾಲದಲ್ಲಿ ಅನ್ಯದೇಶೀಯ ಶತ್ರುವಾಗಿರುವ ಯಾರೇ ವ್ಯಕ್ತಿಗೆ; ಅಥವಾ
(b) ಪ್ರತಿಬಂಧಕ ಸ್ಥಾನಬದ್ಧತೆಗೆ ಅವಕಾಶ ಕಲ್ಪಿಸುವ ಯಾವುದೇ ಕಾನೂನಿನ ಮೇರೆಗೆ ದಸ್ತಗಿರಿಯಾದ ಅಥವಾ ಸ್ಥಾನಬದ್ಧಗೊಳಿಸಿದ ಯಾರೇ ವ್ಯಕ್ತಿಗೆ ಅನ್ವಯಿಸತಕ್ಕದ್ದಲ್ಲ.
(4) ಪ್ರತಿಬಂಧಕ ಸ್ಥಾನಬದ್ಧತೆಗೆ ಅವಕಾಶ ಕಲ್ಪಿಸುವ ಯಾವುದೇ ಕಾನೂನು ಯಾರೇ ವ್ಯಕ್ತಿಯನ್ನು.
(a) ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿರುವವರನ್ನು ಅಥವಾ ಆಗಿದ್ದವರನ್ನು ಅಥವಾ ಅಂಥ ನ್ಯಾಯಾಧೀಶರಾಗಿ ನೇಮಕಗೊಳ್ಳಲು ಅರ್ಹತೆ ಪಡೆದಿರುವವರನ್ನು ಒಳಗೊಂಡ ಸಲಹಾ ಮಂಡಳಿಯು, ಸದರಿ ಮೂರು ತಿಂಗಳ ಅವಧಿಯು ಪೂರೈಸುವುದಕ್ಕೆ ಮುಂಚಿತವಾಗಿ, ತನ್ನ ಅಭಿಪ್ರಾಯದಲ್ಲಿ ಅಂಥ ಸ್ಥಾನಬದ್ಧತೆಗೆ ಸಾಕಷ್ಟು ಕಾರಣವಿರುವುದಾಗಿ ವರದಿ ಮಾಡಿದ ಸಂದರ್ಭದಲ್ಲಿ ಹೊರತು:

———————————————————-

{ ಸಂವಿಧಾನ (ನಲವತ್ತನಾಲ್ಕನೆಯ ತಿದ್ದುಪಡಿ) ಅಧಿನಿಯಮ, 1978ರ 3ನೇ ಪ್ರಕರಣದ ಮೂಲಕ (4)ನೇ ಖಂಡವನ್ನು ಈ ಮುಂದಿನಂತೆ ಪ್ರತ್ಯಾಯೋಜಿಸಲಾಗಿದೆ. (ಇದು ಇನ್ನೂ ಜಾರಿಗೆ ಬಂದಿರುವುದಿಲ್ಲ. ದಿನಾಂಕವನ್ನು ನಂತರ ಅಧಿಸೂಚಿಸಲಾಗುವುದು.)

“(4) ಪ್ರತಿಬಂಧಕ ಸ್ಥಾನಬದ್ಧತೆಗೆ ಅವಕಾಶ ಕಲ್ಪಿಸುವ ಯಾವುದೇ ಕಾನೂನು ಯಾರೇ ವ್ಯಕ್ತಿಯನ್ನು ಎರಡು ತಿಂಗಳುಗಳಿಗಿಂತಲೂ ಹೆಚ್ಚಿನ ಅವಧಿಯವರೆಗೆ. ಸಮುಚಿತ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯವರ ಶಿಫಾರಸ್ಸುಗಳಿಗೆ ಅನುಸಾರವಾಗಿ ರಚಿತವಾದ ಸಲಹಾ ಮಂಡಳಿಯು ಸದರಿ ಎರಡು ತಿಂಗಳ ಅವಧಿಯನ್ನು ಪೂರೈಸುವುದಕ್ಕೆ ಮುಂಚಿತವಾಗಿ ತನ್ನ ಅಭಿಪ್ರಾಯದಲ್ಲಿ ಅಂಥ ಸ್ಥಾನಬದ್ಧತೆಗೆ ಸಾಕಷ್ಟು ಕಾರಣವಿರುವುದಾಗಿ ಮಾಡಿರುವಾಗ ಹೊರತು ಹಾಗೆ ಸ್ಥಾನಬದ್ಧತೆಯಲ್ಲಿಡುವುದನ್ನು ಅಧಿಕೃತಗೊಳಿಸತಕ್ಕದ್ದಲ್ಲ:

ವರದಿ ಸಲಹಾ ಮಂಡಳಿಯು, ಅಧ್ಯಕ್ಷನನ್ನು ಮತ್ತು ಇಬ್ಬರಿಗಿಂತ ಕಡಿಮೆ ಇಲ್ಲದ ಇತರೆ ಇಬ್ಬರು ಸದಸ್ಯರನ್ನು ಒಳಗೊಂಡಿರತಕ್ಕದ್ದು ಮತ್ತು ಅಧ್ಯಕ್ಷನು, ಸಮುಚಿತ ಉಚ್ಚ ನ್ಯಾಯಾಲಯದ ನ್ಯಾಯಾಧೀಶನಾಗಿ ಸೇವೆ ಸಲ್ಲಿಸುತ್ತಿರುವವರಾಗಿರತಕ್ಕದ್ದು ಮತ್ತು ಇತರ ಸದಸ್ಯರು ಯಾವುದೇ ಉಚ್ಚ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತ ನ್ಯಾಯಾಧೀಶರಾಗಿರತಕ್ಕದ್ದು:

ಮತ್ತು ಈ ಖಂಡದಲ್ಲಿರುವುದು ಯಾವುದೂ, ಯಾರೇ ವ್ಯಕ್ತಿಯನ್ನು 7ನೇ ಖಂಡದ (ಎ) ಉಪಖಂಡದ ಮೇರೆಗೆ, ಸಂಸತ್ತು ಮಾಡಿದ ಯಾವುದೇ ಕಾನೂನಿನ ಮೂಲಕ ನಿಯಮಿಸಲಾದ ಗರಿಷ್ಠ ಅವಧಿಯನ್ನ ಮೀರಿ ಸ್ಥಾನಬದ್ಧತೆಯಲ್ಲಿಡುವುದನ್ನು ಅಧಿಕೃತಗೊಳಿಸತಕ್ಕದ್ದಲ್ಲ.

ವಿವರಣೆ:- ಈ ಖಂಡದಲ್ಲಿ “ಸಮುಚಿತ ಉಚ್ಚ ನ್ಯಾಯಾಲಯ” ಎಂದರೆ.-

(1) ಭಾರತ ಸರ್ಕಾರವು ಅಥವಾ ಆ ಸರ್ಕಾರಕ್ಕೆ ಅಧೀನನಾಗಿರುವ ಒಬ್ಬ ಅಧಿಕಾರಿಯು ಅಥವಾ ಪ್ರಾಧಿಕಾರವು ಮಾಡಿದ ಸ್ಥಾನಬದ್ಧತೆಯ ಆದೇಶಕ್ಕೆ ಅನುಸಾರವಾಗಿ ವ್ಯಕ್ತಿಯನ್ನು ಸ್ಥಾನಬದ್ಧತೆಯಲ್ಲಿ ಇಡುವ ಸಂದರ್ಭದಲ್ಲಿ, ದೆಹಲಿ ಒಕ್ಕೂಟ ರಾಜ್ಯಕ್ಷೇತ್ರದ ಉಚ್ಚ ನ್ಯಾಯಾಲಯ:

(ii) ಯಾವುದೇ ರಾಜ್ಯ ಸರ್ಕಾರವು (ಒಕ್ಕೂಟ ರಾಜ್ಯಕ್ಷೇತ್ರವಲ್ಲದ) ಮಾಡಿದ ಸ್ಥಾನಬದ್ಧತೆಯ ಒಂದು ಆದೇಶದ ಅನುಸಾರವಾಗಿ ವ್ಯಕ್ತಿಯನ್ನು ಸ್ಥಾನಬದ್ಧತೆಯಲ್ಲಿ ಇಡುವ ಸಂದರ್ಭದಲ್ಲಿ ಆ ರಾಜ್ಯದ ಉಚ್ಚ ನ್ಯಾಯಾಲಯ; ಮತ್ತು

(iii) ಒಕ್ಕೂಟ ರಾಜ್ಯಕ್ಷೇತ್ರದ ಆಡಳಿತಾಧಿಕಾರಿಯು ಅಥವಾ ಅಂಥ ಆಡಳಿತಾಧಿಕಾರಿಗೆ ಅಧೀನನಾದ ಅಧಿಕಾರಿಯು ಅಥವಾ ಪ್ರಾಧಿಕಾರಿಯು ಮಾಡಿದ ಸ್ಥಾನಬದ್ಧತೆಯ ಒಂದು ಆದೇಶದ ಅನುಸಾರವಾಗಿ ವ್ಯಕ್ತಿಯನ್ನು ಸ್ಥಾನಬದ್ಧತೆಯಲ್ಲಿ ಇಡುವ ಸಂದರ್ಭದಲ್ಲಿ ಈ ಬಗ್ಗೆ ಸಂಸತ್ತು ಮಾಡಿದ ಯಾವುದೇ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ನಿರ್ದಿಷ್ಟಪಡಿಸಬಹುದಾದಂಥ ಉಚ್ಚ ನ್ಯಾಯಾಲಯ ಈ ಉಪಖಂಡದಲ್ಲಿ ಇರುವುದು ಯಾವುದೂ, ಯಾರೇ ವ್ಯಕ್ತಿಯನ್ನು (7)ನೆಯ ಖಂಡದ (b) ಉಪಖಂಡದ ಮೇರೆಗೆ, ಸಂಸತ್ತು ಮಾಡಿದ ಯಾವುದೇ ಕಾನೂನಿನ ಮೂಲಕ ನಿಯಮಿಸಲಾದ ಗರಿಷ್ಠ ಅವಧಿಯನ್ನು ಮೀರಿ ಸ್ಥಾನಬದ್ಧತೆಯಲ್ಲಿಡುವುದನ್ನು ಅಧಿಕೃತಗೊಳಿಸತಕ್ಕದ್ದಲ್ಲ; ಅಥವಾ

(b) ಅಂಥ ವ್ಯಕ್ತಿಯನ್ನು (7)ನೆಯ ಖಂಡದ (a) ಮತ್ತು (b) ಉಪಖಂಡಗಳ ಮೇರೆಗೆ ಸಂಸತ್ತು ಮಾಡಿದ ಯಾವುದೇ ಕಾನೂನಿನ ಉಪಬಂಧಗಳಿಗನುಸಾರವಾಗಿ ಸ್ಥಾನಬದ್ಧತೆಯಲ್ಲಿ ಇಟ್ಟಿರುವ ಸಂದರ್ಭದಲ್ಲಿ ಹೊರತು ಮೂರು ತಿಂಗಳುಗಳಿಗಿಂತಲೂ ಹೆಚ್ಚಿನ ಅವಧಿಯವರೆಗೆ ಸ್ಥಾನಬದ್ಧತೆಯಲ್ಲಿಡುವುದನ್ನು ಅಧಿಕೃತಗೊಳಿಸತಕ್ಕದ್ದಲ್ಲ. }

Fundamental Rights : Importance of Articles 19 to 24
Fundamental Rights : Importance of Articles 19 to 24

————————————————————–

5 . ಪ್ರತಿಬಂಧಕ ಸ್ಥಾನಬದ್ಧತೆಗೆ ಅವಕಾಶ ಕಲ್ಪಿಸುವ ಯಾವುದೇ ಕಾನೂನಿನ ಮೇರೆಗೆ ಮಾಡಲಾದ ಆದೇಶಕ್ಕೆ ಅನುಸಾರವಾಗಿ ಯಾರೇ ವ್ಯಕ್ತಿಯನ್ನು ಸ್ಥಾನಬದ್ಧತೆಯಲ್ಲಿಟ್ಟಿದ್ದರೆ, ಆ ಆದೇಶವನ್ನು ಮಾಡಿದ ಪ್ರಾಧಿಕಾರಿಯು ಆದಷ್ಟು ಬೇಗನೆ, ಆ ಆದೇಶವನ್ನು ಯಾವ ಆಧಾರದ ಮೇಲೆ ಮಾಡಲಾಯಿತೆಂಬುದನ್ನು ಆ ವ್ಯಕ್ತಿಗೆ ತಿಳಿಸತಕ್ಕದ್ದು ಮತ್ತು ಆ ಆದೇಶದ ವಿರುದ್ಧ ಶೀಘ್ರಾತಿಶೀಘ್ರವಾಗಿ ಮನವಿಯನ್ನು ಮಾಡಿಕೊಳ್ಳಲು ಆ ವ್ಯಕ್ತಿಗೆ ಅವಕಾಶ ಕೊಡತಕ್ಕದ್ದು.
6 . (5)ನೆಯ ಖಂಡದಲ್ಲಿ ಇರುವುದು ಯಾವುದೂ ಆ ಖಂಡದಲ್ಲಿ ಉಲ್ಲೇಖಿಸಿರುವ ಯಾವುದೇ ಆದೇಶವನ್ನು ಮಾಡುವ ಪ್ರಾಧಿಕಾರಿಯು, ಯಾವ ಸಂಗತಿಗಳನ್ನು ಬಹಿರಂಗಪಡಿಸುವುದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವೆಂದು ಅವನು ಪರ್ಯಾಲೋಚಿಸುತ್ತಾನೋ, ಆ ಸಂಗತಿಗಳನ್ನು ಬಹಿರಂಗಪಡಿಸುವಂತೆ ಅವನನ್ನು ಅಗತ್ಯಪಡಿಸತಕ್ಕದ್ದಲ್ಲ.
7 . ಸಂಸತ್ತು, ಕಾನೂನಿನ ಮೂಲಕ,-
(a) ಯಾವ ಸನ್ನಿವೇಶಗಳಲ್ಲಿ ಮತ್ತು ಯಾವ ವರ್ಗದ ಅಥವಾ ವರ್ಗಗಳ ಪ್ರಕರಣಗಳಲ್ಲಿ ಪ್ರತಿಬಂಧಕ ಸ್ಥಾನಬದ್ಧತೆಗೆ ಉಪಬಂಧ ಕಲ್ಪಿಸುವ ಯಾವುದೇ ಕಾನೂನಿನ ಮೇರೆಗೆ ಯಾರೇ ವ್ಯಕ್ತಿಯನ್ನು ಮೂರು ತಿಂಗಳಿಗಿಂತ ಹೆಚ್ಚಿನ ಅವಧಿಯವರೆಗೆ (4)ನೆಯ ಖಂಡದ (a) ಉಪಖಂಡದ ಉಪಬಂಧಗಳಿಗೆ ಅನುಸಾರವಾಗಿ ಸಲಹಾ ಮಂಡಳಿಯ ಅಭಿಪ್ರಾಯವನ್ನು ಪಡೆಯದೆ ಸ್ಥಾನಬದ್ಧತೆಯಲ್ಲಿ ಇಡಬಹುದು ಎಂಬುದನ್ನು ನಿಯಮಿಸಬಹುದು;
(b) ಪ್ರತಿಬಂಧಕ ಸ್ಥಾನಬದ್ಧತೆಗೆ ಉಪಬಂಧ ಕಲ್ಪಿಸುವ ಯಾವುದೇ ಕಾನೂನಿನ ಮೇರೆಗೆ ಯಾವ ವರ್ಗದ ಅಥವಾ ವರ್ಗಗಳ ಪ್ರಕರಣಗಳಲ್ಲಿ ಗರಿಷ್ಠ ಎಷ್ಟು ಅವಧಿಯವರೆಗೆ ಯಾರೇ ವ್ಯಕ್ತಿಯನ್ನು ಸ್ಥಾನಬದ್ಧತೆಯಲ್ಲಿಡಬಹುದೆಂಬುದನ್ನು ನಿಯಮಿಸಬಹುದು; ಮತ್ತು
(c) ಸಲಹಾ ಮಂಡಳಿಯು -1(4)ನೆಯ ಖಂಡದ (a) ಉಪಖಂಡದ ಮೇರೆಗೆ ನಡೆಸತಕ್ಕ ವಿಚಾರಣೆಯಲ್ಲಿ ಅನುಸರಿಸಬೇಕಾದ ಕಾರ್ಯವಿಧಾನವನ್ನು ನಿಯಮಿಸಬಹುದು] .

ಶೋಷಣೆಯ ವಿರುದ್ಧ ಹಕ್ಕು ( Right against Exploitation )

23 . ಮಾನವ ದುರ್ವ್ಯವಹಾರ ಮತ್ತು ಬಲಾತ್ಕಾರದ ದುಡಿಮೆಯ ನಿಷೇಧ.

1 . ಮಾನವ ದುರ್ವ್ಯವಹಾರವನ್ನು ಮತ್ತು ಬೇಗಾರ ಮತ್ತು ಅದೇ ಸ್ವರೂಪದ ಇತರ ಬಲಾತ್ಕಾರದ ದುಡಿಮೆಗಳನ್ನು ನಿಷೇಧಿಸಲಾಗಿದೆ ಮತ್ತು ಈ ಉಪಬಂಧದ ಯಾವುದೇ ಉಲ್ಲಂಘನೆಯು ಕಾನೂನಿಗೆ ಅನುಸಾರವಾಗಿ ದಂಡನೀಯವಾದ ಅಪರಾಧವಾಗತಕ್ಕದ್ದು.
2. ಈ ಅನುಚ್ಛೇದದಲ್ಲಿ ಇರುವುದು ಯಾವುದೂ, ಸಾರ್ವಜನಿಕ ಉದ್ದೇಶಗಳಿಗಾಗಿ ರಾಜ್ಯವು ಕಡ್ಡಾಯ ಸೇವೆಯನ್ನು ವಿಧಿಸುವುದನ್ನು ಪ್ರತಿಬಂಧಿಸತಕ್ಕದ್ದಲ್ಲ ಮತ್ತು ಅಂಥ ಸೇವೆಯನ್ನು ವಿಧಿಸುವಾಗ ರಾಜ್ಯವು ಧರ್ಮ, ಮೂಲವಂಶ, ಜಾತಿ ಅಥವಾ ವರ್ಗದ ಅಥವಾ ಅವುಗಳಲ್ಲಿ ಯಾವುದೇ ಒಂದರ ಆಧಾರದ ಮೇಲೆ ಮಾತ್ರವೇ ಯಾವುದೇ ತಾರತಮ್ಯ ಮಾಡತಕ್ಕದ್ದಲ್ಲ.

24 . ಕಾರ್ಖಾನೆಗಳು, ಮುಂತಾದವುಗಳಲ್ಲಿ ಮಕ್ಕಳ ನಿಯೋಜನೆಗೆ ನಿಷೇಧ.

ಹದಿನಾಲ್ಕು ವರ್ಷಗಳಿಗಿಂತ ಕಡಿಮೆ ವಯಸ್ಸಿನ ಯಾವುದೇ ಮಗುವನ್ನು ಯಾವುದೇ ಕಾರ್ಖಾನೆಯಲ್ಲಿ ಅಥವಾ ಗಣಿಯಲ್ಲಿ ಕೆಲಸ ಮಾಡಲು ನಿಯೋಜಿಸತಕ್ಕದ್ದಲ್ಲ ಅಥವಾ ಇತರ ಯಾವುದೇ ಅಪಾಯಕರವಾದ ಉದ್ಯೋಗದಲ್ಲಿ ತೊಡಗಿಸತಕ್ಕದ್ದಲ್ಲ.

indian constitutions govt.in

Indian constitution FUNDAMENTAL RIGHTS.( articles 12 to 18 )

Leave a Comment