ಭಾಗ Ⅴ. ಒಕ್ಕೂಟ THE UNION
ಅಧ್ಯಾಯ I. – ಕಾರ್ಯಾಂಗ ರಾಷ್ಟ್ರಪತಿ . CHAPTER I – THE EXECUTIVE THE PRESIDENT .
52 . ಭಾರತದ ರಾಷ್ಟ್ರಪತಿ- ಭಾರತಕ್ಕೆ ಒಬ್ಬ ರಾಷ್ಟ್ರಪತಿಯಿರತಕ್ಕದ್ದು.
53 . ಒಕ್ಕೂಟದ ಕಾರ್ಯಾಂಗ ಅಧಿಕಾರ .
1 . ಒಕ್ಕೂಟದ ಕಾರ್ಯಾಂಗ ಅಧಿಕಾರವು ರಾಷ್ಟ್ರಪತಿಯಲ್ಲಿ ನಿಹಿತವಾಗಿರತಕ್ಕದ್ದು ಮತ್ತು ಅಂಥ ಅಧಿಕಾರವನ್ನು ಈ ಸಂವಿಧಾನಕ್ಕನುಸಾರವಾಗಿ ರಾಷ್ಟ್ರಪತಿಯು ನೇರವಾಗಿಯಾಗಲಿ ಅಥವಾ ತನಗೆ ಅಧೀನರಾದ ಅಧಿಕಾರಿಗಳ ಮೂಲಕವಾಗಿಯಾಗಲಿ ಚಲಾಯಿಸತಕ್ಕದ್ದು.
2 . ಮೇಲೆ ಹೇಳಿದ ಉಪಬಂಧದ ಸಾಮಾನ್ಯ ಅನ್ವಯಕ್ಕೆ ಬಾಧಕವಾಗದಂತೆ. ಒಕ್ಕೂಟದ ರಕ್ಷಣಾ ಬಲಗಳ ಸರ್ವೋಚ್ಚ ಅಧಿಪತ್ಯವು ರಾಷ್ಟ್ರಪತಿಯಲ್ಲಿ ನಿಹಿತವಾಗಿರತಕ್ಕದ್ದು ಮತ್ತು ಅದರ ಚಲಾವಣೆಯು ಕಾನೂನಿನ ಮೂಲಕ ವಿನಿಯಮಿತವಾಗತಕ್ಕದ್ದು.
3 . ಈ ಅನುಚ್ಛೇದದಲ್ಲಿರುವುದು ಯಾವುದೂ.-
(a) ಅಸ್ತಿತ್ವದಲ್ಲಿರುವ ಯಾವುದೇ ಕಾನೂನಿನಿಂದ ಯಾವುದೇ ರಾಜ್ಯದ ಸರ್ಕಾರಕ್ಕೆ ಅಥವಾ ಇತರ ಪ್ರಾಧಿಕಾರಕ್ಕೆ ಪ್ರದತ್ತವಾದ ಯಾವುದೇ ಪ್ರಕಾರ್ಯಗಳನ್ನು ರಾಷ್ಟ್ರಪತಿಗೆ ವರ್ಗಾಯಿಸುವುದಾಗಿ ಭಾವಿಸತಕ್ಕದ್ದಲ್ಲ; ಅಥವಾ
(b) ರಾಷ್ಟ್ರಪತಿಯನ್ನು ಹೊರತುಪಡಿಸಿ ಇತರ ಪ್ರಾಧಿಕಾರಗಳಿಗೆ, ಕಾನೂನಿನ ಮೂಲಕ ಪ್ರಕಾರ್ಯಗಳನ್ನು ಪ್ರದಾನ ಮಾಡದಂತೆ ಸಂಸತ್ತನ್ನು ಪ್ರತಿಬಂಧಿಸತಕ್ಕದ್ದಲ್ಲ.
54 . ರಾಷ್ಟ್ರಪತಿಯ ಚುನಾವಣೆ. ರಾಷ್ಟ್ರಪತಿಯು –
(a) ಸಂಸತ್ತಿನ ಉಭಯ ಸದನಗಳ ಚುನಾಯಿತ ಸದಸ್ಯರಿಂದ: ಮತ್ತು
(b) ರಾಜ್ಯಗಳ ವಿಧಾನಸಭೆಗಳ ಚುನಾಯಿತ ಸದಸ್ಯರಿಂದಕೂಡಿದ ಚುನಾಯಕ ಗಣದ ಸದಸ್ಯರಿಂದ ಚುನಾಯಿತನಾಗತಕ್ಕದ್ದು.
[ವಿವರಣೆ.- ಈ ಅನುಚ್ಛೇದದಲ್ಲಿ ಮತ್ತು 55ನೇ ಅನುಚ್ಛೇದದಲ್ಲಿನ “ರಾಜ್ಯ” ಎಂಬ ಪದವು ದೆಹಲಿ ರಾಷ್ಟ್ರೀಯ ರಾಜಧಾನಿ ರಾಜ್ಯಕ್ಷೇತ್ರವನ್ನು ಮತ್ತು ‘ಪುದುಚೇರಿ ಒಕ್ಕೂಟ ರಾಜ್ಯಕ್ಷೇತ್ರವನ್ನು ಒಳಗೊಳ್ಳುತ್ತದೆ.]

55 . ರಾಷ್ಟ್ರಪತಿಯ ಚುನಾವಣೆಯ ರೀತಿ.-
1 . ರಾಷ್ಟ್ರಪತಿಯ ಚುನಾವಣೆಯಲ್ಲಿ ವಿವಿಧ ರಾಜ್ಯಗಳ ಪ್ರಾತಿನಿಧ್ಯದ ಪ್ರಮಾಣದಲ್ಲಿ ಕಾರ್ಯಸಾಧ್ಯವಾಗುವಷ್ಟರ ಮಟ್ಟಿಗೆ ಏಕರೂಪತೆ ಇರತಕ್ಕದ್ದು.
2 . ರಾಜ್ಯಗಳಲ್ಲಿ ಪರಸ್ಪರ ಅಂಥ ಏಕರೂಪತೆಯನ್ನು ಮತ್ತು ಸಮಸ್ತ ರಾಜ್ಯಗಳ ಮತ್ತು ಒಕ್ಕೂಟದ ನಡುವೆ ಸಮತೆಯನ್ನುಂಟು ಮಾಡುವ ಉದ್ದೇಶಕ್ಕಾಗಿ, ಅಂಥ ಚುನಾವಣೆಯಲ್ಲಿ, ಸಂಸತ್ತಿನ ಪ್ರತಿಯೊಬ್ಬ ಚುನಾಯಿತ ಸದಸ್ಯನು ಮತ್ತು ಪ್ರತಿಯೊಂದು ರಾಜ್ಯದ ವಿಧಾನಸಭೆಯ ಪ್ರತಿಯೊಬ್ಬ ಚುನಾಯಿತ ಸದಸ್ಯನು ಎಷ್ಟು ಮತಗಳನ್ನು ಕೊಡಲು ಹಕ್ಕುಳ್ಳವನಾಗಿರುತ್ತಾನೆಂಬುದನ್ನು ಕೆಳಕಂಡ ರೀತಿಯಲ್ಲಿ ನಿರ್ಧರಿಸತಕ್ಕದ್ದು.-
(a) ಒಂದು ರಾಜ್ಯದ ವಿಧಾನಸಭೆಯ ಪ್ರತಿಯೊಬ್ಬ ಚುನಾಯಿತ ಸದಸ್ಯನಿಗೆ, ಆ ರಾಜ್ಯದ ಜನಸಂಖ್ಯೆಯನ್ನು ಆ ಸಭೆಯ ಚುನಾಯಿತ ಸದಸ್ಯರ ಒಟ್ಟು ಸಂಖ್ಯೆಯಿಂದ ಭಾಗಿಸಿದರೆ ಬರುವ ಭಾಗಲಬ್ಬದಲ್ಲಿ ಒಂದು ಸಾವಿರದ ಗುಣಕಗಳು ಎಷ್ಟಿವೆಯೋ ಅಷ್ಟು ಮತಗಳಿರತಕ್ಕದ್ದು;
(b) ಸದರಿ ಒಂದು ಸಾವಿರದ ಗುಣಕಗಳನ್ನು ತೆಗೆದುಕೊಂಡ ಮೇಲೆ, ಶೇಷವು ಐನೂರಕ್ಕಿಂತಲೂ ಕಡಿಮೆಯಿಲ್ಲದಿದ್ದರೆ, (ಎ) ಉಪಖಂಡದಲ್ಲಿ ಉಲ್ಲೇಖಿತವಾಗಿರುವ ಪ್ರತಿಯೊಬ್ಬ ಸದಸ್ಯನ ಮತಗಳ ಸಂಖ್ಯೆಗೆ ಇನ್ನೂ ಒಂದು ಮತವನ್ನು ಸೇರಿಸತಕ್ಕದ್ದು;
(c) ಸಂಸತ್ತಿನ ಪ್ರತಿಯೊಂದು ಸದನದ ಪ್ರತಿಯೊಬ್ಬ ಚುನಾಯಿತ ಸದಸ್ಯನು, (ಎ) ಮತ್ತು (ಬಿ) ಉಪಖಂಡಗಳ ಮೇರೆಗೆ ರಾಜ್ಯಗಳ ವಿಧಾನಸಭೆಗಳ ಸದಸ್ಯರಿಗೆ ನಿಗದಿಪಡಿಸಿರುವ ಮತಗಳ ಒಟ್ಟು ಸಂಖ್ಯೆಯನ್ನು, ಸಂಸತ್ತಿನ ಉಭಯ ಸದನಗಳ ಚುನಾಯಿತ ಸದಸ್ಯರ ಒಟ್ಟು ಸಂಖ್ಯೆಯಿಂದ ಭಾಗಿಸಿದರೆ ಬರುವ ಸಂಖ್ಯೆಯಷ್ಟು ಮತಗಳನ್ನು ಹೊಂದಿರತಕ್ಕದ್ದು; ಅರ್ಧಕ್ಕಿಂತ ಹೆಚ್ಚಾಗಿರುವ ಭಿನ್ನಾಂಕವನ್ನು ಒಂದು ಎಂದು ಎಣಿಸತಕ್ಕದ್ದು ಮತ್ತು ಇತರ ಭಿನ್ನಾಂಕಗಳನ್ನು ಎಣಿಸದೆ ಬಿಟ್ಟುಬಿಡತಕ್ಕದ್ದು.
3 . ರಾಷ್ಟ್ರಪತಿಯ ಚುನಾವಣೆಯನ್ನು ಏಕವರ್ಗಾವಣೀಯ ಮತದ ವಿಧಾನದ ಮೂಲಕ ಪ್ರಮಾಣಾನುಸಾರ ಪ್ರಾತಿನಿಧ್ಯ ಪದ್ಧತಿಗನುಸಾರ ನಡೆಸತಕ್ಕದ್ದು ಮತ್ತು ಅಂಥ ಚುನಾವಣೆಯಲ್ಲಿ ಮತದಾನವು ರಹಸ್ಯ ಮತದಾನದ ಮೂಲಕ ನಡೆಯತಕ್ಕದ್ದು.
[ವಿವರಣೆ.- ಈ ಅನುಚ್ಛೇದದಲ್ಲಿ “ಜನಸಂಖ್ಯೆ” ಎಂದರೆ, ಯಾವ ಹಿಂದಿನ ಕೊನೆಯ ಸಲದ ಜನಗಣತಿಯ ಸುಸಂಗತ ಅಂಕಿಗಳನ್ನು ಪ್ರಕಟಿಸಲಾಗಿದೆಯೋ ಆ ಜನಗಣತಿಯಲ್ಲಿ ಖಚಿತಪಡಿಸಿಕೊಂಡ ಜನಸಂಖ್ಯೆ: ಈ ವಿವರಣೆಯಲ್ಲಿ, ಯಾವ ಈ ಹಿಂದಿನ ಕೊನೆಯ ಜನಗಣತಿಯ ಸುಸಂಗತ ಅಂಕಿಗಳನ್ನು ಪ್ರಕಟಿಸಲಾಗಿದೆಯೋ ಆ ಜನಗಣತಿಗೆ ಮಾಡಿದ ಉಲ್ಲೇಖವನ್ನು, [2026 ನೆಯ] ಇಸವಿಯ ತರುವಾಯ ಮೊದಲನೇ ಸಲ ನಡೆಸಲಾಗುವ ಜನಗಣತಿಯ ಸುಸಂಗತ ಅಂಕಿಗಳು ಪ್ರಕಟವಾಗುವವರೆಗೆ, 1971ರ ಜನಗಣತಿಗೆ ಮಾಡಿದ ಉಲ್ಲೇಖವೆಂದು ಅರ್ಥೈಸತಕ್ಕದ್ದು.]
56 . ರಾಷ್ಟ್ರಪತಿಯ ಪದಾವಧಿ .
1 . ರಾಷ್ಟ್ರಪತಿಯು ತನ್ನ ಪದವನ್ನು ವಹಿಸಿಕೊಂಡ ದಿನಾಂಕದಿಂದ ಐದು ವರ್ಷಗಳ ಅವಧಿಯವರೆಗೆ ಆ ಪದವನ್ನು ಧಾರಣಮಾಡತಕ್ಕದ್ದು:
(a) ರಾಷ್ಟ್ರಪತಿಯು, ತಾನು ಸಹಿ ಮಾಡಿದ ಪತ್ರವನ್ನು ಉಪರಾಷ್ಟ್ರಪತಿಗೆ ಬರೆದು ತನ್ನ ಪದಕ್ಕೆ ರಾಜೀನಾಮೆ ಕೊಡಬಹುದು;
(b) ರಾಷ್ಟ್ರಪತಿಯು ಈ ಸಂವಿಧಾನವನ್ನು ಉಲ್ಲಂಘಿಸಿದ ಸಂದರ್ಭದಲ್ಲಿ, ಅವನನ್ನು 61ನೆಯ ಅನುಚ್ಛೇದದಲ್ಲಿ ಉಪಬಂಧಿಸಿರುವ ರೀತಿಯಲ್ಲಿ ಮಹಾಭಿಯೋಗದ ಮೂಲಕ ಪದದಿಂದ ತೆಗೆದುಹಾಕಬಹುದು;
(c) ರಾಷ್ಟ್ರಪತಿಯ ಪದಾವಧಿಯು ಮುಕ್ತಾಯವಾಗಿದ್ದಾಗ್ಯೂ ಅವನ ಉತ್ತರಾಧಿಕಾರಿಯು ಆ ಪದವನ್ನು ವಹಿಸಿಕೊಳ್ಳುವವರೆಗೆ ಅವನು ತನ್ನ ಪದದಲ್ಲಿ ಮುಂದುವರಿಯತಕ್ಕದ್ದು.
(2) ಉಪರಾಷ್ಟ್ರಪತಿಯು, (1)ನೆಯ ಖಂಡದ ಪರಂತುಕದ (a) ಖಂಡದ ಮೇರೆಗೆ ತನಗೆ ಬರೆಯಲಾದ ಯಾವುದೇ ರಾಜೀನಾಮೆ ಬಗ್ಗೆ ತಕ್ಷಣವೇ ಲೋಕಸಭೆಯ ಅಧ್ಯಕ್ಷನಿಗೆ ತಿಳಿಸತಕ್ಕದ್ದು.
⩥ ಸಂವಿಧಾನ (ಎಪ್ಪತ್ತನೇ ತಿದ್ದುಪಡಿ) ಅಧಿನಿಯಮ, 1992ರ 2ನೆಯ ಪ್ರಕರಣದ ಮೂಲಕ (1.6.1995 ರಿಂದ ಜಾರಿಗೆ ಬರುವಂತೆ) ಸೇರಿಸಲಾಗಿದೆ. ಈಗ ಪುದುಚೆರಿಯಾಗಿದೆ. ಪಾಂಡಿಚೇರಿ (ಹೆಸರು ಬದಲಾವಣೆ) ಅಧಿನಿಯಮ, 2006 (2006ರ 44)ರ 3ನೇ ಪ್ರಕರಣವನ್ನು ನೋಡಿ.
⩥ ಸಂವಿಧಾನ (ನಲವತ್ತೆರಡನೆಯ ತಿದ್ದುಪಡಿ) ಅಧಿನಿಯಮ, 1976ರ 12ನೇ ಪ್ರಕರಣದ ಮೂಲಕ ವಿವರಣೆಗೆ ಬದಲಾಗಿ (3.1.1977 ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ.
⩥ ಸಂವಿಧಾನ (ಎಂಬತ್ನಾಲ್ಕನೆಯ ತಿದ್ದುಪಡಿ) ಅಧಿನಿಯಮ, 2001ರ 2ನೇ ಪ್ರಕರಣದ ಮೂಲಕ ‘2000 ದ’ ಎಂಬ ಅಂಕಿಗಳಿಗೆ ಮತ್ತು ಅಕ್ಷರಗಳಿಗೆ ಬದಲಾಗಿ (21.02.2002 ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ.

57 . ಮರು ಚುನಾವಣೆಗೆ ಅರ್ಹತೆ .
ರಾಷ್ಟ್ರಪತಿಯಾಗಿ ಪದಧಾರಣ ಮಾಡಿರುವ ಅಥವಾ ಮಾಡಿದ್ದ ವ್ಯಕ್ತಿಯು ಈ ಸಂವಿಧಾನದ ಇತರ ಉಪಬಂಧಗಳಿಗೆ ಒಳಪಟ್ಟು, ಆ ಪದಕ್ಕೆ ಮರುಚುನಾಯಿತನಾಗಲು ಅರ್ಹನಾಗಿರತಕ್ಕದ್ದು.
58 . ರಾಷ್ಟ್ರಪತಿಯಾಗಿ ಚುನಾಯಿತನಾಗಲು ಅರ್ಹತೆಗಳು.
1 . ಯಾರೇ ವ್ಯಕ್ತಿಯು,
(a) ಅವನು ಭಾರತದ ನಾಗರಿಕನಾಗಿರುವ ಹೊರತು;
(b) ಅವನಿಗೆ ಮೂವತ್ತೈದು ವರ್ಷ ವಯಸ್ಸು ಪೂರ್ತಿಯಾಗಿರುವ ಹೊರತು; ಮತ್ತು
(c) ಲೋಕಸಭೆಯ ಸದಸ್ಯನಾಗಿ ಚುನಾಯಿತನಾಗಲು ಅವನಿಗೆ ಅರ್ಹತೆಯಿರುವ ಹೊರತು ರಾಷ್ಟ್ರಪತಿಯಾಗಿ ಚುನಾಯಿತನಾಗಲು ಅರ್ಹನಾಗತಕ್ಕದ್ದಲ್ಲ.
2 . ಯಾರೇ ವ್ಯಕ್ತಿಯು, ಭಾರತ ಸರ್ಕಾರದ ಅಥವಾ ಯಾವುದೇ ರಾಜ್ಯ ಸರ್ಕಾರದ ಅಧೀನದಲ್ಲಿ ಅಥವಾ ಆ ಯಾವುದೇ ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿರುವ ಯಾವುದೇ ಸ್ಥಳೀಯ ಪ್ರಾಧಿಕಾರದ ಅಥವಾ ಇತರ ಪ್ರಾಧಿಕಾರದ ಆಧೀನದಲ್ಲಿ ಯಾವುದೇ ಲಾಭದಾಯಕ ಪದವನ್ನು ಧಾರಣ ಮಾಡಿದ್ದರೆ ಅವನು ರಾಷ್ಟ್ರಪತಿಯಾಗಿ ಚುನಾಯಿತನಾಗಲು ಅರ್ಹನಾಗಿರತಕ್ಕದ್ದಲ್ಲ.
ವಿವರಣೆ.- ಈ ಅನುಚ್ಛೇದದ ಉದ್ದೇಶಗಳಿಗಾಗಿ, ಯಾರೇ ವ್ಯಕ್ತಿಯು ಒಕ್ಕೂಟದ ರಾಷ್ಟ್ರಪತಿಯಾಗಿ ಅಥವಾ ಉಪರಾಷ್ಟ್ರಪತಿಯಾಗಿ ಅಥವಾ ಯಾವುದೇ ರಾಜ್ಯದ ರಾಜ್ಯಪಾಲನಾಗಿ ಅಥವಾ ಒಕ್ಕೂಟದ ಅಥವಾ ಯಾವುದೇ ರಾಜ್ಯದ ಮಂತ್ರಿಯಾಗಿ ಇರುವ ಕಾರಣ ಮಾತ್ರದಿಂದಲೇ ಅವನು ಲಾಭದಾಯಕ ಪದವನ್ನು ಧಾರಣ ಮಾಡಿರುವುದಾಗಿ ಭಾವಿಸತಕ್ಕದ್ದಲ್ಲ.
59 . ರಾಷ್ಟ್ರಪತಿಯ ಪದದ ಷರತ್ತುಗಳು.
1 . ರಾಷ್ಟ್ರಪತಿಯು ಸಂಸತ್ತಿನ ಯಾವುದೇ ಸದನದ ಅಥವಾ ಯಾವುದೇ ರಾಜ್ಯದ ವಿಧಾನಮಂಡಲದ ಯಾವುದೇ ಸದನದ ಸದಸ್ಯನಾಗಿರತಕ್ಕದ್ದಲ್ಲ ಮತ್ತು ಸಂಸತ್ತಿನ ಯಾವುದೇ ಒಂದು ಸದನದ ಅಥವಾ ಯಾವುದೇ ರಾಜ್ಯದ ವಿಧಾನಮಂಡಲದ ಒಂದು ಸದನದ ಸದಸ್ಯನೊಬ್ಬನು ರಾಷ್ಟ್ರಪತಿಯಾಗಿ ಚುನಾಯಿತನಾದರೆ, ಅವನು ರಾಷ್ಟ್ರಪತಿಯಾಗಿ ಪದವನ್ನು ವಹಿಸಿಕೊಂಡ ದಿನಾಂಕದಂದು ಆ ಸದನದಲ್ಲಿನ ತನ್ನ ಸ್ಥಾನವನ್ನು ಖಾಲಿ ಮಾಡಿರುವುದಾಗಿ ಭಾವಿಸತಕ್ಕದ್ದು.
2 . ರಾಷ್ಟ್ರಪತಿಯು ಇತರ ಯಾವುದೇ ಲಾಭದಾಯಕ ಪದವನ್ನು ಧಾರಣ ಮಾಡತಕ್ಕದ್ದಲ್ಲ.
3 . ರಾಷ್ಟ್ರಪತಿಯು ಬಾಡಿಗೆಯನ್ನು ಸಂದಾಯ ಮಾಡದೆ ತನ್ನ ಅಧಿಕೃತ ನಿವಾಸಗಳ ಉಪಯೋಗಕ್ಕೆ ಹಕ್ಕುಳ್ಳವನಾಗಿರತಕ್ಕದ್ದು ಮತ್ತು ಸಂಸತ್ತು ಕಾನೂನಿನ ಮೂಲಕ ನಿರ್ಧರಿಸಬಹುದಾದಂಥ ಉಪಲಬ್ಬಿಗಳಿಗೆ, ಭತ್ಯೆಗಳಿಗೆ ಮತ್ತು ವಿಶೇಷಾಧಿಕಾರಗಳಿಗೆ ಮತ್ತು ಆ ಬಗ್ಗೆ ಹಾಗೆ ಉಪಬಂಧಿಸುವವರೆಗೆ, ಅವನು ಎರಡನೆಯ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವಂಥ ಉಪಲಬ್ಬಿಗಳಿಗೆ, ಭತ್ಯೆಗಳಿಗೆ ಮತ್ತು ವಿಶೇಷಾಧಿಕಾರಗಳಿಗೆ ಸಹ ಹಕ್ಕುಳ್ಳವನಾಗಿರತಕ್ಕದ್ದು.
4 . ರಾಷ್ಟ್ರಪತಿಯ ಪದಾವಧಿಯಲ್ಲಿ ಅವನ ಉಪಲಬ್ಬಿಗಳನ್ನು ಮತ್ತು ಭತ್ಯೆಗಳನ್ನು ಕಡಿಮೆ ಮಾಡತಕ್ಕದ್ದಲ್ಲ.
60 . ರಾಷ್ಟ್ರಪತಿಯಿಂದ ಪ್ರಮಾಣವಚನ ಅಥವಾ ಪ್ರತಿಜ್ಞಾ ವಚನ .
ಪ್ರತಿಯೊಬ್ಬ ರಾಷ್ಟ್ರಪತಿಯು ಮತ್ತು ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸುವ ಅಥವಾ ರಾಷ್ಟ್ರಪತಿಯ ಪ್ರಕಾರ್ಯಗಳನ್ನು ನಿರ್ವಹಿಸುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ಪದವನ್ನು ವಹಿಸಿಕೊಳ್ಳುವುದಕ್ಕೆ ಮುಂಚೆ ಭಾರತದ ಮುಖ್ಯ ನ್ಯಾಯಮೂರ್ತಿಯ ಸಮಕ್ಷಮದಲ್ಲಿ ಅಥವಾ ಅವನ ಗೈರುಹಾಜರಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳ ಪೈಕಿ ಲಭ್ಯವಿರುವ ಜೇಷ್ಠತಮ ನ್ಯಾಯಾಧೀಶನ ಸಮಕ್ಷಮದಲ್ಲಿ, ಈ ಕೆಳಕಂಡ ನಮೂನೆಯಲ್ಲಿ ಪ್ರಮಾಣ ಅಥವಾ ಪ್ರತಿಜ್ಞೆ ಮಾಡತಕ್ಕದ್ದು ಮತ್ತು ಅದಕ್ಕೆ ತನ್ನ ರುಜು ಹಾಕತಕ್ಕದ್ದು, ಎಂದರೆ:-
“ …………. ಎಂಬ ಹೆಸರಿನ ನಾನು. ಭಾರತದ ರಾಷ್ಟ್ರಪತಿ ಪದದ ಕಾರ್ಯಪಾಲನೆಯನ್ನು (ಅಥವಾ ರಾಷ್ಟ್ರಪತಿಯ ಪ್ರಕಾರ್ಯಗಳ ನಿರ್ವಹಣೆಯನ್ನು) ನಿಷ್ಠಾಪೂರ್ವಕವಾಗಿ ಮಾಡುತ್ತೇನೆಂದು ಮತ್ತು ನನಗೆ ಸಾಮರ್ಥ್ಯವಿದ್ದಷ್ಟೂ ಭಾರತದ ಸಂವಿಧಾನದ ಮತ್ತು ಕಾನೂನಿನ ಪರಿರಕ್ಷಣೆ, ಸಂರಕ್ಷಣೆ ಮತ್ತು ಪ್ರತಿರಕ್ಷಣೆ ಮಾಡುತ್ತೇನೆಂದು ಮತ್ತು ಭಾರತದ ಜನತೆಯ ಸೇವೆಯಲ್ಲಿ ಮತ್ತು ಯೋಗಕ್ಷೇಮ ಸಾಧನೆಯಲ್ಲಿ ನಿರತನಾಗಿರುತ್ತೇನೆಂದೂ, ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡುತ್ತೇನೆ.”
61 . ರಾಷ್ಟ್ರಪತಿಯ ಮಹಾಭಿಯೋಗದ ಬಗ್ಗೆ ಕಾರ್ಯವಿಧಾನ.-
1 . ರಾಷ್ಟ್ರಪತಿಯು ಈ ಸಂವಿಧಾನವನ್ನು ಉಲ್ಲಂಘಿಸಿದ ಸಂದರ್ಭದಲ್ಲಿ ಅವನನ್ನು ಮಹಾಭಿಯೋಗಕ್ಕೆ ಗುರಿಪಡಿಸಬೇಕಾದಾಗ, ಸಂಸತ್ತಿನ ಯಾವುದೇ ಒಂದು ಸದನವು ದೋಷಾರೋಪವನ್ನು ಮಾಡತಕ್ಕದ್ದು.
2 . ಅಂಥ ಯಾವುದೇ ದೋಷಾರೋಪವನ್ನು,
(a) ಅಂಥ ದೋಷಾರೋಪವನ್ನು ಮಾಡುವ ಪ್ರಸ್ತಾವವು ಒಂದು ನಿರ್ಣಯದಲ್ಲಿ ಅಡಕವಾಗಿದ್ದು ಅದನ್ನು ಮಂಡಿಸುವ ತಮ್ಮ ಉದ್ದೇಶವನ್ನು ತಿಳಿಸಿ ಆ ಸದನದ ಒಟ್ಟು ಸದಸ್ಯರ ಪೈಕಿ ನಾಲ್ಕನೆಯ ಒಂದು ಭಾಗಕ್ಕೆ ಕಡೆಮೆಯಿಲ್ಲದಷ್ಟು ಸದಸ್ಯರು ರುಜು ಹಾಕಿರುವ ಲಿಖಿತ ನೋಟೀಸನ್ನು ಕನಿಷ್ಠಪಕ್ಷ ಹದಿನಾಲ್ಕು ದಿನಗಳ ಮೊದಲು ಕೊಟ್ಟ ತರುವಾಯ ಆ ನಿರ್ಣಯವನ್ನು ಮಂಡಿಸಿದ್ದ ಹೊರತು; ಮತ್ತು
(b) ಆ ಸದನದ ಒಟ್ಟು ಸದಸ್ಯರಲ್ಲಿ ಮೂರನೆಯ ಎರಡು ಭಾಗಕ್ಕೆ ಕಡಿಮೆಯಿಲ್ಲದಷ್ಟು ಸದಸ್ಯರ ಬಹುಮತದಿಂದ ಅಂಥ ನಿರ್ಣಯವು ಅಂಗೀಕೃತವಾದ ಹೊರತು ಮಾಡತಕ್ಕದ್ದಲ್ಲ.
3 . ಸಂಸತ್ತಿನ ಯಾವುದೇ ಒಂದು ಸದನವು ಹಾಗೆ ದೋಷಾರೋಪವನ್ನು ಮಾಡಿರುವಾಗ, ಇನ್ನೊಂದು ಸದನವು ಆ ದೋಷಾರೋಪದ ಬಗ್ಗೆ ತನಿಖೆಯನ್ನು ಮಾಡತಕ್ಕದ್ದು ಅಥವಾ ಮಾಡಿಸತಕ್ಕದ್ದು ಮತ್ತು ಅಂಥ ತನಿಖೆಯಲ್ಲಿ ರಾಷ್ಟ್ರಪತಿಯು ಹಾಜರಾಗಲು ಮತ್ತು ತನ್ನನ್ನು ಪ್ರತಿನಿಧಿಸಲು ಹಕ್ಕು ಹೊಂದಿರತಕ್ಕದ್ದು.
4 . ತನಿಖೆಯ ಪರಿಣಾಮವಾಗಿ, ದೋಷಾರೋಪದ ತನಿಖೆಯನ್ನು ಮಾಡಿದ ಅಥವಾ ಮಾಡಿಸಿದ ಸದನದ ಒಟ್ಟು ಸದಸ್ಯರ ಮೂರನೆಯ ಎರಡು ಭಾಗಕ್ಕೆ ಕಡಿಮೆಯಿಲ್ಲದಷ್ಟು ಬಹುಮತದಿಂದ, ರಾಷ್ಟ್ರಪತಿಯ ವಿರುದ್ಧ ಮಾಡಿದ ದೋಷಾರೋಪವು ಸಮರ್ಥಿತವಾಗಿದೆಯೆಂದು ಘೋಷಿಸುವ ನಿರ್ಣಯವು ಅಂಗೀಕೃತವಾದರೆ, ಆ ನಿರ್ಣಯವು ಹಾಗೆ ಅಂಗೀಕೃತವಾದ ದಿನಾಂಕದಿಂದ ರಾಷ್ಟ್ರಪತಿಯನ್ನು ಅವನ ಪದದಿಂದ ತೆಗೆದು ಹಾಕುವಂಥ ಪರಿಣಾಮವುಳ್ಳದ್ದಾಗಿರತಕ್ಕದ್ದು.
62 . ರಾಷ್ಟ್ರಪತಿಯ ಪದವು ಖಾಲಿಯಾದಲ್ಲಿ ಅದನ್ನು ಭರ್ತಿ ಮಾಡಲು ಚುನಾವಣೆ ನಡೆಸುವ ಕಾಲ ಮತ್ತು ಆಕಸ್ಮಿಕ ಖಾಲಿ ಸ್ಥಾನವನ್ನು ಭರ್ತಿಮಾಡಲು ಚುನಾಯಿತನಾದ ವ್ಯಕ್ತಿಯ ಪದಾವಧಿ.-
1 . ರಾಷ್ಟ್ರಪತಿಯ ಪದಾವಧಿಯು ಮುಕ್ತಾಯಗೊಳ್ಳುವುದರಿಂದ ಉಂಟಾಗುವ ಖಾಲಿಸ್ಥಾನವನ್ನು ಭರ್ತಿ ಮಾಡುವುದಕ್ಕೆ ನಡೆಸಬೇಕಾದ ಚುನಾವಣೆಯು ಆ ಅವಧಿಯು ಕೊನೆಗೊಳ್ಳುವುದರೊಳಗಾಗಿ ಪೂರ್ತಿಯಾಗತಕ್ಕದ್ದು.
2 . ರಾಷ್ಟ್ರಪತಿಯ ಮರಣದಿಂದ, ರಾಜೀನಾಮೆಯಿಂದ ಅಥವಾ ಅವನನ್ನು ತೆಗೆದುಹಾಕುವುದರಿಂದ ಅಥವಾ ಅನ್ಯಥಾ ಉಂಟಾಗುವ ರಾಷ್ಟ್ರಪತಿಯ ಪದದಲ್ಲಿನ ಖಾಲಿಸ್ಥಾನವನ್ನು ಭರ್ತಿ ಮಾಡುವುದಕ್ಕೆ ಚುನಾವಣೆಯನ್ನು, ಆ ಸ್ಥಾನವು ಖಾಲಿಯಾದ ತರುವಾಯ ಸಾಧ್ಯವಾದಷ್ಟು ಬೇಗನೆ ಮತ್ತು ಯಾವುದೇ ಸಂದರ್ಭದಲ್ಲಿ ಸ್ಥಾನವು ಖಾಲಿಯಾದ ದಿನಾಂಕದಿಂದ ಆರು ತಿಂಗಳುಗಳಿಗೆ ಮೀರದಂತೆ ನಡೆಸತಕ್ಕದ್ದು ಮತ್ತು ಖಾಲಿಸ್ಥಾನವನ್ನು ಭರ್ತಿ ಮಾಡುವುದಕ್ಕೆ ಚುನಾಯಿತನಾದ ವ್ಯಕ್ತಿಯು, ತನ್ನ ಪದವನ್ನು ವಹಿಸಿಕೊಂಡ ದಿನಾಂಕದಿಂದ, 56ನೆಯ ಅನುಚ್ಛೇದದ ಉಪಬಂಧಗಳಿಗೊಳಪಟ್ಟು ಐದು ವರ್ಷಗಳ ಪೂರ್ತಿ ಅವಧಿಯವರೆಗೆ ಪದಧಾರಣ ಮಾಡಲು ಹಕ್ಕುಳ್ಳವನಾಗತಕ್ಕದ್ದು.
Directive Principles & Fundamental Duties (Articles 36 – 51A)”
1 thought on “ಭಾರತದ ರಾಷ್ಟ್ರಪತಿ (Article 52–62) ಸಂಪೂರ್ಣ ಮಾರ್ಗದರ್ಶಿ | ಭಾಗ Ⅴ ಒಕ್ಕೂಟ” . Must-Know Guide to the President of India (PART-V THE UNION – Articles 52–62 Explained ).”