ಭಾಗ Ⅴ. ಒಕ್ಕೂಟ THE UNION
ಅಧ್ಯಾಯ I. CHAPTER I
ಕಾರ್ಯಾಂಗ ಉಪರಾಷ್ಟ್ರಪತಿ . THE EXECUTIVE THE VICE-PRESIDENT .
63 . ಭಾರತದ ಉಪರಾಷ್ಟ್ರಪತಿ.-
ಭಾರತಕ್ಕೆ ಒಬ್ಬ ಉಪರಾಷ್ಟ್ರಪತಿ ಇರತಕ್ಕದ್ದು.
64 . ಉಪರಾಷ್ಟ್ರಪತಿಯು ರಾಜ್ಯಸಭೆಯ ಪದನಿಮಿತ್ತ ಸಭಾಪತಿಯಾಗಿರತಕ್ಕದ್ದು.
ಉಪರಾಷ್ಟ್ರಪತಿಯು ರಾಜ್ಯಸಭೆಯ ಪದನಿಮಿತ್ತ ಸಭಾಪತಿಯಾಗಿರತಕ್ಕದ್ದು ಮತ್ತು ಅವನು ಮತ್ತಾವುದೇ ಲಾಭದಾಯಕ ಪದದಲ್ಲಿ ಇರತಕ್ಕದ್ದಲ್ಲ: ಉಪರಾಷ್ಟ್ರಪತಿಯು 65ನೆಯ ಅನುಚ್ಛೇದದ ಮೇರೆಗೆ, ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸುವ ಅಥವಾ ರಾಷ್ಟ್ರಪತಿಯ ಪ್ರಕಾರ್ಯಗಳನ್ನು ನಿರ್ವಹಿಸುವ ಯಾವುದೇ ಅವಧಿಯಲ್ಲಿ, ರಾಜ್ಯಸಭೆಯ ಸಭಾಪತಿಯ ಪದದ ಕರ್ತವ್ಯಗಳನ್ನು ನೆರವೇರಿಸತಕ್ಕದ್ದಲ್ಲ ಮತ್ತು 97ನೇಯ ಅನುಚ್ಛೇದದ ಮೇರೆಗೆ ರಾಜ್ಯಸಭೆಯ ಸಭಾಪತಿಗೆ ಸಂದಾಯವಾಗಬೇಕಾದ ಯಾವುದೇ ವೇತನಕ್ಕಾಗಲಿ ಅಥವಾ ಭತ್ಯೆಗಾಗಲಿ ಹಕ್ಕುಳ್ಳವನಾಗಿರತಕ್ಕದ್ದಲ್ಲ.
65 . ರಾಷ್ಟ್ರಪತಿಯ ಪದವು ಆಕಸ್ಮಿಕವಾಗಿ ಖಾಲಿಯಾದಲ್ಲಿ ಅಥವಾ ರಾಷ್ಟ್ರಪತಿಯ ಗೈರುಹಾಜರಿಯಲ್ಲಿ ಉಪರಾಷ್ಟ್ರಪತಿಯು ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸುವುದು ಅಥವಾ ಅವನ ಪ್ರಕಾರ್ಯಗಳನ್ನು ನಿರ್ವಹಿಸುವುದು.
1 . ರಾಷ್ಟ್ರಪತಿಯ ಮರಣದಿಂದ, ರಾಜೀನಾಮೆಯಿಂದ ಅಥವಾ ಅವನನ್ನು ತೆಗೆದುಹಾಕುವುದರಿಂದ ಅಥವಾ ಅನ್ಯಥಾ ರಾಷ್ಟ್ರಪತಿಯ ಪದದಲ್ಲಿ ಯಾವುದೇ ಖಾಲಿಸ್ಥಾನ ಉಂಟಾದ ಸಂದರ್ಭದಲ್ಲಿ, ಅಂಥ ಖಾಲಿಸ್ಥಾನವನ್ನು ಭರ್ತಿ ಮಾಡುವುದಕ್ಕೆ ಈ ಅಧ್ಯಾಯದ ಉಪಬಂಧಗಳಿಗನುಸಾರವಾಗಿ ಚುನಾಯಿತನಾದ ಹೊಸ ರಾಷ್ಟ್ರಪತಿಯು, ತನ್ನ ಪದವನ್ನು ವಹಿಸಿಕೊಳ್ಳುವ ದಿನಾಂಕದವರೆಗೆ ಉಪರಾಷ್ಟ್ರಪತಿಯು ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸತಕ್ಕದ್ದು.
2 . ಗೈರುಹಾಜರಿಯಿಂದ, ಕಾಯಿಲೆಯಿಂದ ಅಥವಾ ಇತರ ಯಾವುದೇ ಕಾರಣದಿಂದ ರಾಷ್ಟ್ರಪತಿಯು ತನ್ನ ಪ್ರಕಾರ್ಯಗಳನ್ನು ನಿರ್ವಹಿಸಲು ಅಸಮರ್ಥನಾದಾಗ, ಅವನು ತನ್ನ ಕರ್ತವ್ಯಗಳನ್ನು ಮತ್ತೆ ವಹಿಸಿಕೊಳ್ಳುವ ದಿನಾಂಕದವರೆಗೆ ಉಪರಾಷ್ಟ್ರಪತಿಯು ರಾಷ್ಟ್ರಪತಿಯ ಪ್ರಕಾರ್ಯಗಳನ್ನು ನಿರ್ವಹಿಸತಕ್ಕದ್ದು.
3 . ಉಪರಾಷ್ಟ್ರಪತಿಯು, ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸುವ ಅಥವಾ ರಾಷ್ಟ್ರಪತಿಯ ಪ್ರಕಾರ್ಯಗಳನ್ನು ನಿರ್ವಹಿಸುವ ಅವಧಿಯಲ್ಲಿ ಮತ್ತು ಆ ಅವಧಿಗೆ ಸಂಬಂಧಿಸಿದಂತೆ, ರಾಷ್ಟ್ರಪತಿಯ ಎಲ್ಲ ಅಧಿಕಾರಗಳನ್ನು ಮತ್ತು ಉನ್ನುಕ್ತಿಗಳನ್ನು ಹೊಂದಿರತಕ್ಕದ್ದು ಮತ್ತು ಸಂಸತ್ತು ಕಾನೂನಿನ ಮೂಲಕ ನಿರ್ಧರಿಸಬಹುದಾದಂಥ ಉಪಲಬ್ಬಿಗಳಿಗೆ, ಭತ್ಯೆಗಳಿಗೆ ಮತ್ತು ವಿಶೇಷಾಧಿಕಾರಗಳಿಗೆ ಮತ್ತು ಆ ಬಗ್ಗೆ ಹಾಗೆ ಉಪಬಂಧಿಸುವವರೆಗೆ ಎರಡನೆಯ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವಂಥ ಉಪಲಬ್ಬಿಗಳಿಗೆ, ಭತ್ಯೆಗಳಿಗೆ ಮತ್ತು ವಿಶೇಷಾಧಿಕಾರಗಳಿಗೆ ಅವನು ಹಕ್ಕುಳ್ಳವನಾಗಿರತಕ್ಕದ್ದು,
66 . ಉಪರಾಷ್ಟ್ರಪತಿಯ ಚುನಾವಣೆ.-
1 . [ಸಂಸತ್ತಿನ ಉಭಯ ಸದನಗಳ ಸದಸ್ಯರನ್ನು ಒಳಗೊಂಡ ಒಂದು ಚುನಾಯಕ ಗಣದ ಸದಸ್ಯರುಗಳ] ಮೂಲಕ ಏಕವರ್ಗಾವಣೀಯ ಮತದ ವಿಧಾನದ ಮೂಲಕ ಪ್ರಮಾಣಾನುಸಾರ ಪ್ರಾತಿನಿಧ್ಯ ಪದ್ಧತಿಗನುಸಾರವಾಗಿ ಉಪರಾಷ್ಟ್ರಪತಿಯು ಚುನಾಯಿತನಾಗತಕ್ಕದ್ದು ಮತ್ತು ಅಂಥ ಚುನಾವಣೆಯಲ್ಲಿ ಮತದಾನವು ರಹಸ್ಯ ಮತದಾನದ ಮೂಲಕ ನಡೆಯತಕ್ಕದ್ದು.
2 . ಉಪರಾಷ್ಟ್ರಪತಿಯು ಸಂಸತ್ತಿನ ಯಾವುದೇ ಸದನದ ಅಥವಾ ಯಾವುದೇ ರಾಜ್ಯದ ವಿಧಾನಮಂಡಲದ ಯಾವುದೇ ಸದನದ ಸದಸ್ಯನಾಗಿರತಕ್ಕದ್ದಲ್ಲ ಮತ್ತು ಸಂಸತ್ತಿನ ಯಾವುದೇ ಸದನದ ಅಥವಾ ಯಾವುದೇ ರಾಜ್ಯದ ವಿಧಾನಮಂಡಲದ ಯಾವುದೇ ಸದನದ ಸದಸ್ಯನೊಬ್ಬನು ಉಪರಾಷ್ಟ್ರಪತಿಯಾಗಿ ಚುನಾಯಿತನಾದರೆ, ಅವನು ಉಪರಾಷ್ಟ್ರಪತಿಯಾಗಿ ಪದವನ್ನು ವಹಿಸಿಕೊಂಡ ದಿನಾಂಕದಂದು ಆ ಸದನದಲ್ಲಿನ ತನ್ನ ಸ್ಥಾನವನ್ನು ಖಾಲಿ ಮಾಡಿರುವುದಾಗಿ ಭಾವಿಸತಕ್ಕದ್ದು.
3 . ಯಾರೇ ವ್ಯಕ್ತಿಯು,-
(a) ಅವನು ಭಾರತದ ನಾಗರಿಕನಾಗಿರುವ ಹೊರತು;
(b) ಅವನಿಗೆ ಮೂವತ್ತೈದು ವರ್ಷ ವಯಸ್ಸು ಪೂರ್ತಿಯಾಗಿರುವ ಹೊರತು; ಮತ್ತು
(c) ರಾಜ್ಯಸಭೆಯ ಸದಸ್ಯನಾಗಿ ಚುನಾಯಿತನಾಗಲು ಅವನಿಗೆ ಅರ್ಹತೆಯಿರುವ ಹೊರತು ಉಪರಾಷ್ಟ್ರಪತಿಯಾಗಿ ಚುನಾಯಿತನಾಗಲು ಅರ್ಹನಾಗತಕ್ಕದ್ದಲ್ಲ.
4 . ಯಾರೇ ವ್ಯಕ್ತಿಯು, ಭಾರತ ಸರ್ಕಾರದ ಅಥವಾ ಯಾವುದೇ ರಾಜ್ಯ ಸರ್ಕಾರದ ಅಧೀನದಲ್ಲಿ ಅಥವಾ ಆ ಯಾವುದೇ ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿರುವ ಯಾವುದೇ ಸ್ಥಳೀಯ ಅಥವಾ ಇತರ ಪ್ರಾಧಿಕಾರದ ಅಧೀನದಲ್ಲಿ ಯಾವುದೇ ಲಾಭದಾಯಕ ಪದವನ್ನು ಧಾರಣ ಮಾಡಿದ್ದರೆ ಅವನು ಉಪರಾಷ್ಟ್ರಪತಿಯಾಗಿ ಚುನಾಯಿತನಾಗಲು ಅರ್ಹನಾಗತಕ್ಕದ್ದಲ್ಲ.
ವಿವರಣೆ.- ಈ ಅನುಚ್ಛೇದದ ಉದ್ದೇಶಗಳಿಗಾಗಿ, ಯಾರೇ ವ್ಯಕ್ತಿಯು. ಒಕ್ಕೂಟದ ರಾಷ್ಟ್ರಪತಿಯಾಗಿ ಅಥವಾ ಉಪರಾಷ್ಟ್ರಪತಿಯಾಗಿ ಅಥವಾ ಯಾವುದೇ ರಾಜ್ಯದ ರಾಜ್ಯಪಾಲನಾಗಿ ಅಥವಾ ಒಕ್ಕೂಟದ ಅಥವಾ ಯಾವುದೇ ರಾಜ್ಯದ ಮಂತ್ರಿಯಾಗಿ ಇರುವ ಕಾರಣ ಮಾತ್ರದಿಂದಲೇ ಅವನು ಲಾಭದಾಯಕ ಪದವನ್ನು ಧಾರಣ ಮಾಡಿರುವುದಾಗಿ ಭಾವಿಸತಕ್ಕದ್ದಲ್ಲ.
⩥ ಸಂವಿಧಾನ (ಹನ್ನೊಂದನೆಯ ತಿದ್ದುಪಡಿ) ಅಧಿನಿಯಮ, 1961ರ 2ನೆಯ ಪ್ರಕರಣದ ಮೂಲಕ “ಜಂಟಿ ಅಧಿವೇಶನದಲ್ಲಿ ಸಭೆ ಸೇರಿದ ಸಂಸತ್ತಿನ ಉಭಯ ಸದಸ್ಯರುಗಳಿಂದ” ಎಂಬ ಪದಗಳಿಗೆ ಬದಲಾಗಿ (19.02.1961 ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ.

67 . ಉಪರಾಷ್ಟ್ರಪತಿಯ ಪದಾವಧಿ.-
ಉಪರಾಷ್ಟ್ರಪತಿಯು, ತನ್ನ ಪದವನ್ನು ವಹಿಸಿಕೊಂಡ ದಿನಾಂಕದಿಂದ ಐದು ವರ್ಷಗಳ ಅವಧಿಯವರೆಗೆ ಪದಧಾರಣ ಮಾಡತಕ್ಕದ್ದು:
(a) ಉಪರಾಷ್ಟ್ರಪತಿಯು ತಾನು ಸಹಿ ಮಾಡಿದ ಪತ್ರವನ್ನು ರಾಷ್ಟ್ರಪತಿಗೆ ಬರೆದು ತನ್ನ ಪದಕ್ಕೆ ರಾಜೀನಾಮೆ ಕೊಡಬಹುದು;
(b) ಉಪರಾಷ್ಟ್ರಪತಿಯನ್ನು ರಾಜ್ಯಸಭೆಯ ಆಗಿನ ಎಲ್ಲಾ ಸದಸ್ಯರ ಬಹುಮತದ ಮೂಲಕ ಅಂಗೀಕೃತವಾಗಿ ಲೋಕಸಭೆಯ ಒಪ್ಪಿಗೆ ಪಡೆದ ನಿರ್ಣಯದ ಮೂಲಕ ಅವನ ಪದದಿಂದ ತೆಗೆದು ಹಾಕಬಹುದು; ಆದರೆ, ಈ ಖಂಡದ ಉದ್ದೇಶಕ್ಕಾಗಿ ಯಾವುದೇ ನಿರ್ಣಯವನ್ನು ಮಂಡಿಸುವ ಉದ್ದೇಶದ ನೋಟೀಸನ್ನು ಕನಿಷ್ಠ ಪಕ್ಷ ಹದಿನಾಲ್ಕು ದಿನಗಳ ಮುಂಚಿತವಾಗಿ ಕೊಟ್ಟಿದ್ದ ಹೊರತು. ಅಂಥ ನಿರ್ಣಯವನ್ನು ಮಂಡಿಸತಕ್ಕದ್ದಲ್ಲ:
(c) ಉಪರಾಷ್ಟ್ರಪತಿಯ ಪದಾವಧಿಯು ಮುಕ್ತಾಯವಾಗಿದ್ದಾಗ್ಯೂ, ಅವನ ಉತ್ತರಾಧಿಕಾರಿಯು ಪದವನ್ನು ವಹಿಸಿಕೊಳ್ಳುವವರೆಗೆ ಅವನು ತನ್ನ ಪದದಲ್ಲಿ ಮುಂದುವರಿಯತಕ್ಕದ್ದು.
68 . ಉಪರಾಷ್ಟ್ರಪತಿಯ ಪದವು ಖಾಲಿಯಾದಲ್ಲಿ ಅದನ್ನು ಭರ್ತಿಮಾಡಲು ಚುನಾವಣೆ ನಡೆಸುವ ಕಾಲ ಮತ್ತು ಆಕಸ್ಮಿಕ ಖಾಲಿಸ್ಥಾನವನ್ನು ಭರ್ತಿಮಾಡಲು ಚುನಾಯಿತನಾದ ವ್ಯಕ್ತಿಯ ಪದಾವಧಿ.-
1 . ಉಪರಾಷ್ಟ್ರಪತಿಯ ಪದಾವಧಿಯು ಮುಕ್ತಾಯಗೊಳ್ಳುವುದರಿಂದ ಉಂಟಾಗುವ ಖಾಲಿಸ್ಥಾನವನ್ನು ಭರ್ತಿ ಮಾಡುವುದಕ್ಕೆ ನಡೆಸಬೇಕಾದ ಚುನಾವಣೆಯು ಆ ಅವಧಿಯು ಮುಕ್ತಾಯವಾಗುವುದರೊಳಗಾಗಿ ಪೂರ್ತಿಯಾಗತಕ್ಕದ್ದು.
2 . ಉಪರಾಷ್ಟ್ರಪತಿಯ ಮರಣದಿಂದ, ರಾಜೀನಾಮೆಯಿಂದ ಅಥವಾ ಅವನನ್ನು ತೆಗೆದುಹಾಕುವುದರಿಂದ ಅಥವಾ ಅನ್ಯಥಾ ಉಂಟಾಗುವ ಉಪರಾಷ್ಟ್ರಪತಿಯ ಪದದಲ್ಲಿನ ಖಾಲಿಸ್ಥಾನವನ್ನು ಭರ್ತಿ ಮಾಡುವುದಕ್ಕೆ ಚುನಾವಣೆಯನ್ನು, ಸ್ಥಾನವು ಖಾಲಿಯಾದ ದಿನಾಂಕದ ತರುವಾಯ ಸಾಧ್ಯವಾದಷ್ಟು ಬೇಗನೆ ನಡೆಸತಕ್ಕದ್ದು ಮತ್ತು ಆ ಖಾಲಿಸ್ಥಾನವನ್ನು ಭರ್ತಿ ಮಾಡುವುದಕ್ಕೆ ಚುನಾಯಿತನಾದ ವ್ಯಕ್ತಿಯು ತನ್ನ ಪದವನ್ನು ವಹಿಸಿಕೊಂಡ ದಿನಾಂಕದಿಂದ. 67ನೆಯ ಅನುಚ್ಛೇದದ ಉಪಬಂಧಗಳಿಗೊಳಪಟ್ಟು, ಐದು ವರ್ಷಗಳ ಪೂರ್ತಿ ಅವಧಿಯವರೆಗೆ ಪದಧಾರಣ ಮಾಡಲು ಹಕ್ಕುಳ್ಳವನಾಗಿರತಕ್ಕದ್ದು.
⩥ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮ, 1956ರ 29ನೆಯ ಪ್ರಕರಣ ಮತ್ತು ಅನುಸೂಚಿಯ ಮೂಲಕ, “ಅಥವಾ ರಾಜಪ್ರಮುಖ ಅಥವಾ ಉಪರಾಜಪ್ರಮುಖ” ಎಂಬ ಪದಗಳನ್ನು (1-11-1956 ರಿಂದ ಜಾರಿಗೆ ಬರುವಂತೆ) ಬಿಟ್ಟುಬಿಡಲಾಗಿದೆ.
69 . ಉಪರಾಷ್ಟ್ರಪತಿಯಿಂದ ಪ್ರಮಾಣವಚನ ಅಥವಾ ಪ್ರತಿಜ್ಞಾ ವಚನ –
ಪ್ರತಿಯೊಬ್ಬ ಉಪರಾಷ್ಟ್ರಪತಿಯು ತನ್ನ ಪದವನ್ನು ವಹಿಸಿಕೊಳ್ಳುವುದಕ್ಕೆ ಮೊದಲು ರಾಷ್ಟ್ರಪತಿಯ ಮುಂದೆ ಅಥವಾ ರಾಷ್ಟ್ರಪತಿಯು ಆ ಬಗ್ಗೆ ನೇಮಿಸಿದ ಯಾರೇ ವ್ಯಕ್ತಿಯ ಮುಂದೆ ಈ ಕೆಳಕಂಡ ನಮೂನೆಯಲ್ಲಿ ಪ್ರಮಾಣ ಅಥವಾ ಪ್ರತಿಜ್ಞೆ ಮಾಡತಕ್ಕದ್ದು ಮತ್ತು ತನ್ನ ರುಜು ಹಾಕತಕ್ಕದ್ದು, ಎಂದರೆ.-
…………… ಎಂಬ ಹೆಸರಿನ ನಾನು ಕಾನೂನಿನ ಮೂಲಕ ಸ್ಥಾಪಿತವಾದ ಭಾರತದ ಸಂವಿಧಾನಕ್ಕೆ ನಿಜವಾದ ಶ್ರದ್ದೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆಂದು ಮತ್ತು ಈಗ ನಾನು ವಹಿಸಿಕೊಳ್ಳಲಿರುವ ಕರ್ತವ್ಯವನ್ನು ನಿಷ್ಠಾಪೂರ್ವಕವಾಗಿ ನಿರ್ವಹಿಸುತ್ತೇನೆಂದು ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ
ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡುತ್ತೇನೆ.”
70 . ಇತರ ಆಕಸ್ಮಿಕ ಸಂದರ್ಭಗಳಲ್ಲಿ ರಾಷ್ಟ್ರಪತಿಯ ಪ್ರಕಾರ್ಯಗಳ ನಿರ್ವಹಣೆ.-
ಈ ಅಧ್ಯಾಯದಲ್ಲಿ ಉಪಬಂಧಿಸಿರದ ಯಾವುದೇ ಆಕಸ್ಮಿಕ ಸಂದರ್ಭದಲ್ಲಿ ಸಂಸತ್ತು ರಾಷ್ಟ್ರಪತಿಯ ಪ್ರಕಾರ್ಯಗಳ ನಿರ್ವಹಣೆಗಾಗಿ ತಾನು ಸೂಕ್ತವೆಂದು ಭಾವಿಸುವಂಥ ಉಪಬಂಧಗಳನ್ನು ಮಾಡಬಹುದು.
71 . ರಾಷ್ಟ್ರಪತಿಯ ಅಥವಾ ಉಪರಾಷ್ಟ್ರಪತಿಯ ಚುನಾವಣೆಗೆ ಸಂಬಂಧಿಸಿದ ಅಥವಾ ಸೇರಿದ ವಿಷಯಗಳು:-
1 . ರಾಷ್ಟ್ರಪತಿಯ ಅಥವಾ ಉಪರಾಷ್ಟ್ರಪತಿಯ ಚುನಾವಣೆಯಿಂದ ಉದ್ಭವಿಸುವ ಅಥವಾ ಅದಕ್ಕೆ ಸಂಬಂಧಪಟ್ಟ ಎಲ್ಲ ಸಂದೇಹಗಳನ್ನು ಮತ್ತು ವಿವಾದಗಳನ್ನು ಸರ್ವೋಚ್ಚ ನ್ಯಾಯಾಲಯವು ವಿಚಾರಣೆ ಮಾಡತಕ್ಕದ್ದು ಹಾಗೂ ತೀರ್ಮಾನಿಸತಕ್ಕದ್ದು ಮತ್ತು ಅದರ ತೀರ್ಮಾನವು ಅಂತಿಮವಾಗಿರತಕ್ಕದ್ದು.
2 . ರಾಷ್ಟ್ರಪತಿಯಾಗಿ ಅಥವಾ ಉಪರಾಷ್ಟ್ರಪತಿಯಾಗಿ ಚುನಾಯಿತನಾದ ಯಾರೇ ವ್ಯಕ್ತಿಯ ಚುನಾವಣೆಯು ಅನೂರ್ಜಿತವಾಗಿದೆಯೆಂದು ಸರ್ವೋಚ್ಚ ನ್ಯಾಯಾಲಯವು ಘೋಷಿಸಿದಲ್ಲಿ, ಸರ್ವೋಚ್ಚ ನ್ಯಾಯಾಲಯದ ತೀರ್ಮಾನದ ದಿನಾಂಕದಂದು ಅಥವಾ ಅದಕ್ಕೆ ಮುಂಚೆ ರಾಷ್ಟ್ರಪತಿಯ ಪದದ ಅಥವಾ ಸಂದರ್ಭಾನುಸಾರ ಉಪರಾಷ್ಟ್ರಪತಿಯ ಪದದ ಅಧಿಕಾರಗಳನ್ನು ಚಲಾಯಿಸುವಲ್ಲಿ ಮತ್ತು ಕರ್ತವ್ಯಗಳ ನೆರವೇರಿಕೆಯಲ್ಲಿ ಅವನು ಮಾಡಿರುವ ಕಾರಗಳು ಆ ಘೋಷಣೆಯ ಕಾರಣದಿಂದಾಗಿ ಅಸಿಂಧುವಾಗತಕ್ಕದ್ದಲ್ಲ.
3 . ಸಂಸತ್ತು ಈ ಸಂವಿಧಾನದ ಉಪಬಂಧಗಳಿಗೆ ಒಳಪಟ್ಟು, ರಾಷ್ಟ್ರಪತಿಯ ಅಥವಾ ಉಪರಾಷ್ಟ್ರಪತಿಯ ಚುನಾವಣೆಗೆ ಸಂಬಂಧಿಸಿದ ಆಥವಾ ಸೇರಿದ ಯಾವುದೇ ವಿಷಯವನ್ನು ಕಾನೂನಿನ ಮೂಲಕ ವಿನಿಯಮಿಸಬಹುದು.
4 . ಒಬ್ಬ ವ್ಯಕ್ತಿಯನ್ನು ರಾಷ್ಟ್ರಪತಿಯಾಗಿ ಅಥವಾ ಉಪರಾಷ್ಟ್ರಪತಿಯಾಗಿ ಚುನಾಯಿಸಿರುವ ಚುನಾಯಕ ಗಣದ ಸದಸ್ಯರ ಪೈಕಿ ಯಾವುದೇ ಕಾರಣದಿಂದ ಯಾವುದೇ ಸ್ಥಾನವು ಖಾಲಿಯಿತ್ತೆಂಬ ಕಾರಣದ ಮೇಲೆ ಅಂಥ ವ್ಯಕ್ತಿಯ ಚುನಾವಣೆಯನ್ನು ಪ್ರಶ್ನಿಸತಕ್ಕದ್ದಲ್ಲ.
72 . ಕೆಲವು ಪ್ರಕರಣಗಳಲ್ಲಿ ಕ್ಷಮಾದಾನ ಮುಂತಾದವುಗಳನ್ನು ಮಾಡಲು, ಶಿಕ್ಷೆಯನ್ನು ಅಮಾನತ್ತಿನಲ್ಲಿಡಲು, ಮಾಫಿ ಮಾಡಲು ಅಥವಾ ಪರಿವರ್ತನೆ ಮಾಡಲು ರಾಷ್ಟ್ರಪತಿಯ ಅಧಿಕಾರ.-
1 . ಯಾವುದೇ ಅಪರಾಧದ ಬಗ್ಗೆ ಅಪರಾಧಿಯೆಂದು ನಿರ್ಣಿತನಾದ ಯಾರೇ ವ್ಯಕ್ತಿಗೆ.-
(a) ಸೇನಾ ನ್ಯಾಯಾಲಯವು ದಂಡನೆಯನ್ನು ಅಥವಾ ಶಿಕ್ಷೆಯನ್ನು ವಿಧಿಸಿದ ಎಲ್ಲ ಪ್ರಕರಣಗಳಲ್ಲಿ;
(b) ಒಕ್ಕೂಟದ ಕಾರ್ಯಾಂಗ ಅಧಿಕಾರವು ವಿಸ್ತ್ರತವಾಗುವ ಯಾವುದೇ ವಿಷಯಕ್ಕೆ ಸಂಬಂಧಪಟ್ಟಂಥ ಯಾವುದೇ ಕಾನೂನಿನ ವಿರುದ್ಧವಾದ ಅಪರಾಧಕ್ಕಾಗಿ ದಂಡನೆಯನ್ನು ಅಥವಾ ಶಿಕ್ಷೆಯನ್ನು ವಿಧಿಸಿರುವ ಎಲ್ಲ ಪ್ರಕರಣಗಳಲ್ಲಿ:
(c) ಶಿಕ್ಷೆಯು ಮರಣದಂಡನೆಯ ಶಿಕ್ಷೆಯಾಗಿರುವ ಎಲ್ಲ ಪ್ರಕರಣಗಳಲ್ಲಿ ವಿಧಿಸಿರುವ ದಂಡನೆಯ ಸಂಬಂಧದಲ್ಲಿ ಕ್ಷಮಾದಾನವನ್ನು, ಪ್ರವಿಲಂಬನವನ್ನು, ಮುಂದೂಡುವಿಕೆಯನ್ನು ಅಥವಾ ಮಾಫಿಯನ್ನು ಮಾಡಲು ಅಥವಾ ಶಿಕ್ಷೆಯನ್ನು ಅಮಾನತ್ತುಗೊಳಿಸಲು, ಮಾಫಿ ಮಾಡಲು ಅಥವಾ ಪರಿವರ್ತಿಸಲು ರಾಷ್ಟ್ರಪತಿಯು ಅಧಿಕಾರ ಹೊಂದಿರತಕ್ಕದ್ದು.
2 . (1)ನೆಯ ಖಂಡದ (a) ಉಪಖಂಡದಲ್ಲಿ ಇರುವುದು ಯಾವುದೂ, ಯಾವುದೇ ಸೇನಾ ನ್ಯಾಯಾಲಯವು ವಿಧಿಸಿರುವ ಶಿಕ್ಷೆಯನ್ನು ಅಮಾನತ್ತುಗೊಳಿಸಲು. ಮಾಫಿ ಮಾಡಲು ಅಥವಾ ಪರಿವರ್ತನೆ ಮಾಡಲು ಒಕ್ಕೂಟದ ಸಶಸ್ತ್ರ ಬಲಗಳ ಯಾರೇ ಅಧಿಕಾರಿಗೆ ಕಾನೂನಿನ ಮೂಲಕ ಪ್ರದಾನ ಮಾಡಲಾಗಿರುವ ಅಧಿಕಾರವನ್ನು ಬಾಧಕಗೊಳಿಸತಕ್ಕದ್ದಲ್ಲ.
3 . (1)ನೆಯ ಖಂಡದ (c) ಉಪಖಂಡದಲ್ಲಿ ಇರುವುದು ಯಾವುದೂ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೇರೆಗೆ ರಾಜ್ಯದ ರಾಜ್ಯಪಾಲನು ಮರಣದಂಡನೆಯ ಶಿಕ್ಷೆಯನ್ನು ಅಮಾನತ್ತುಗೊಳಿಸಲು. ಮಾಫಿಮಾಡಲು, ಅಥವಾ ಪರಿವರ್ತನೆ ಮಾಡಲು ಚಲಾಯಿಸಬಹುದಾದ ಯಾವುದೇ ಅಧಿಕಾರವನ್ನು ಬಾಧಕಗೊಳಿಸತಕ್ಕದ್ದಲ್ಲ.
73 . ಒಕ್ಕೂಟದ ಕಾರ್ಯಾಂಗ ಅಧಿಕಾರವ್ಯಾಪ್ತಿ-
(1) ಈ ಸಂವಿಧಾನದ ಉಪಬಂಧಗಳಿಗೆ ಒಳಪಟ್ಟು, ಒಕ್ಕೂಟದ ಕಾರ್ಯಾಂಗ ಅಧಿಕಾರವನ್ನು.
(a) ಸಂಸತ್ತು ಕಾನೂನುಗಳನ್ನು ಮಾಡಲು ಅಧಿಕಾರವನ್ನು ಹೊಂದಿರತಕ್ಕ ವಿಷಯಗಳಿಗೆ; ಮತ್ತು
(b) ಯಾವುದೇ ಕೌಲಿನ ಅಥವಾ ಒಪ್ಪಂದದ ಕಾರಣದಿಂದಾಗಿ ಭಾರತ ಚಲಾಯಿಸಬಹುದಾದಂಥ ಹಕ್ಕುಗಳ, ಪ್ರಾಧಿಕಾರದ ಮತ್ತು ಅಧಿಕಾರವ್ಯಾಪ್ತಿಯ ಚಲಾವಣೆಗೆ ಸರ್ಕಾರವು ವಿಸ್ತರಿಸತಕ್ಕದ್ದು: . ಈ ಸಂವಿಧಾನದಲ್ಲಿ ಅಥವಾ ಸಂಸತ್ತು ಮಾಡಿದ ಯಾವುದೇ ಕಾನೂನಿನಲ್ಲಿ ಸ್ಪಷ್ಟವಾಗಿ ಉಪಬಂಧಿಸಿರುವುದನ್ನು ಉಳಿದ ಯಾವುದೇ ರಾಜ್ಯದ ವಿಧಾನಮಂಡಲವು ಸಹ ಕಾನೂನುಗಳನ್ನು ಮಾಡಲು ಅಧಿಕಾರ ಹೊಂದಿರುವ ವಿಷಯಗಳಿಗೆ ಸಂಬಂಧಪಟ್ಟಂತೆ, ಆ ಯಾವುದೇ ರಾಜ್ಯಕ್ಕೆ (a) ಉಪಖಂಡದಲ್ಲಿ ಉಲ್ಲೇಖಿತವಾಗಿರುವ ಕಾರ್ಯಾಂಗ ಅಧಿಕಾರವನ್ನು ವಿಸ್ತರಿಸತಕ್ಕದ್ದಲ್ಲ.
2 . ಈ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ಯಾವ ರಾಜ್ಯಕ್ಕಾಗಿ ಯಾವ ವಿಷಯಗಳ ಬಗ್ಗೆ ಕಾನೂನುಗಳನ್ನು ಮಾಡಲು ಸಂಸತ್ತಿಗೆ ಅಧಿಕಾರವಿದೆಯೋ ಆ ವಿಷಯಗಳ ಬಗ್ಗೆ ಆ ರಾಜ್ಯವು ಮತ್ತು ಆ ರಾಜ್ಯದ ಯಾರೇ ಅಧಿಕಾರಿಯು ಅಥವಾ ಪ್ರಾಧಿಕಾರವು ಈ ಸಂವಿಧಾನವು ಆರಂಭವಾಗುವುದಕ್ಕೆ ನಿಕಟಪೂರ್ವದಲ್ಲಿ ಚಲಾಯಿಸುತ್ತಿದ್ದ ಕಾರ್ಯಾಂಗ ಅಧಿಕಾರವನ್ನು ಅಥವಾ ಪ್ರಕಾರ್ಯಗಳನ್ನು ಚಲಾಯಿಸುವುದನ್ನು. ಸಂಸತ್ತು ಅನ್ಯಥಾ ಉಪಬಂಧಿಸುವವರೆಗೆ ಮುಂದುವರಿಸಿಕೊಂಡು ಹೋಗಬಹುದು
⩥ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮ, 1956ರ 29ನೆಯ ಪ್ರಕರಣ ಮತ್ತು ಅನುಸೂಚಿಯ ಮೂಲಕ “ಅಥವಾ ರಾಜಪ್ರಮುಖ” ಎಂಬ ಪದಗಳನ್ನು (1-11-1956ರಿಂದ ಜಾರಿಗೆ ಬರುವಂತೆ) ಬಿಟ್ಟುಬಿಡಲಾಗಿದೆ.
⩥ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮ, 1956ರ 29ನೆಯ ಪ್ರಕರಣ ಹಾಗೂ ಅನುಸೂಚಿಯ ಮೇರೆಗೆ “ಮೊದಲನೆಯ ಅನುಸೂಚಿಯ a ಭಾಗ ಅಥವಾ b ಭಾಗದಲ್ಲಿ ನಿರ್ದಿಷ್ಟಪಡಿಸಿರುವ” ಎಂಬ ಪದಗಳನ್ನು ಮತ್ತು ಅಕ್ಷರಗಳನ್ನು (1-11-1956ರಿಂದ ಜಾರಿಗೆ ಬರುವಂತೆ) ಬಿಟ್ಟುಬಿಡಲಾಗಿದೆ.

ಮಂತ್ರಿಮಂಡಲ . COUNCIL OF MINISTERS
74 . ರಾಷ್ಟ್ರಪತಿಗೆ ನೆರವು ಮತ್ತು ಸಲಹೆ ನೀಡಲು ಮಂತ್ರಿಮಂಡಲ.-
1 . [ ರಾಷ್ಟ್ರಪತಿಗೆ ನೆರವು ಮತ್ತು ಸಲಹೆಯನ್ನು ನೀಡಲು ಪ್ರಧಾನಮಂತ್ರಿಯ ನೇತೃತ್ವದಲ್ಲಿ ಒಂದು ಮಂತ್ರಿಮಂಡಲವು ಇರತಕ್ಕದ್ದು ಮತ್ತು ರಾಷ್ಟ್ರಪತಿಯು ತನ್ನ ಪ್ರಕಾರ್ಯಗಳನ್ನು ನಿರ್ವಹಿಸುವಾಗ ಮಂತ್ರಿಮಂಡಲದ ಸಲಹೆಗನುಸಾರ ಕಾರ್ಯನಿರ್ವಹಿಸತಕ್ಕದ್ದು:] , [ಅಂಥ ಸಲಹೆಯನ್ನು ಸಾಮಾನ್ಯವಾಗಿ ಅಥವಾ ಅನ್ಯಥಾ ಪುನರ್‌ಪರಿಶೀಲಿಸುವಂತೆ ರಾಷ್ಟ್ರಪತಿಯು ಮಂತ್ರಿಮಂಡಲವನ್ನು ಅಗತ್ಯಪಡಿಸಬಹುದು ಮತ್ತು ಅಂಥ ಪುನರ್‌ಪರಿಶೀಲನೆಯ ತರುವಾಯ ನೀಡಿದ ಸಲಹೆಗನುಸಾರ ರಾಷ್ಟ್ರಪತಿಯು ಕಾರ್ಯನಿರ್ವಹಿಸತಕ್ಕದ್ದು.]
2 . ಮಂತ್ರಿಗಳು ರಾಷ್ಟ್ರಪತಿಗೆ ಯಾವುದೇ ಸಲಹೆಯನ್ನು ನೀಡಿದ್ದರೆ ಮತ್ತು ಹಾಗೆ ನೀಡಿದ್ದರೆ ಯಾವ ಸಲಹೆಯನ್ನು ನೀಡಿದ್ದರು ಎಂಬ ಪ್ರಶ್ನೆಯನ್ನು ಕುರಿತು ಯಾವುದೇ ನ್ಯಾಯಾಲಯದಲ್ಲಿ ವಿಚಾರಣೆ ಮಾಡತಕ್ಕದ್ದಲ್ಲ.
75 . ಮಂತ್ರಿಗಳ ಬಗ್ಗೆ ಇತರ ಉಪಬಂಧಗಳು.-
1 . ರಾಷ್ಟ್ರಪತಿಯು ಪ್ರಧಾನಮಂತ್ರಿಯನ್ನು ನೇಮಕ ಮಾಡತಕ್ಕದ್ದು ಮತ್ತು ಪ್ರಧಾನಮಂತ್ರಿಯ ಸಲಹೆಗನುಸಾರ ರಾಷ್ಟ್ರಪತಿಯು ಇತರ ಮಂತ್ರಿಗಳನ್ನು ನೇಮಕ ಮಾಡತಕ್ಕದ್ದು.
[(1a) ಮಂತ್ರಿಮಂಡಲದಲ್ಲಿ, ಪ್ರಧಾನಮಂತ್ರಿಯೂ ಸೇರಿದಂತೆ, ಮಂತ್ರಿಗಳ ಒಟ್ಟು ಸಂಖ್ಯೆಯು, ಲೋಕಸಭೆಯ ಸದಸ್ಯರ ಒಟ್ಟು ಸಂಖ್ಯೆಯ ಶೇಕಡ ಹದಿನೈದನ್ನು ಮೀರತಕ್ಕದ್ದಲ್ಲ.
(1b) ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿರುವ, ಸಂಸತ್ತಿನ ಸದನಗಳಲ್ಲಿ ಯಾವುದೇ ಒಂದು ಸದನದ ಸದಸ್ಯನು, ಹತ್ತನೇ ಅನುಸೂಚಿಯ 2ನೇ ಪ್ಯಾರಾದ ಅಡಿಯಲ್ಲಿ ಆ ಸದನದ ಸದಸ್ಯನಾಗಿರಲು ಅನರ್ಹನಾಗಿದ್ದಲ್ಲಿ, ಆತನು ಅನರ್ಹತೆ ಹೊಂದಿದ ದಿನಾಂಕದಿಂದ ಪ್ರಾರಂಭವಾಗಿ ಹಾಗೆ ಸದಸ್ಯನಾಗಿ ಆತನ ಪದಾವಧಿಯು ಮುಕ್ತಾಯಗೊಳ್ಳುವ ದಿನಾಂಕದವರೆಗೆ ಅಥವಾ ಅಂಥ ಅವಧಿಯು ಮುಕ್ತಾಯವಾಗುವ ಮೊದಲು ಆತನು ಸಂಸತ್ತಿನ ಸದನಗಳಲ್ಲಿ ಯಾವುದೇ ಒಂದು ಸದನಕ್ಕೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿದರೆ, ಆತನು ಚುನಾಯಿತನಾಗಿದ್ದಾನೆ ಎಂದು ಘೋಷಿಸುವ ದಿನಾಂಕದವರೆಗೆ, ಅವೆರಡರಲ್ಲಿ ಯಾವುದು ಮುಂಚೆಯೋ, ಅಲ್ಲಿಯವರೆಗೆ (1)ನೇ ಖಂಡದ ಅಡಿಯಲ್ಲಿ ಆತನು ಮಂತ್ರಿಯಾಗಿ ನೇಮಕಗೊಳ್ಳುವುದಕ್ಕೂ ಅನರ್ಹನಾಗತಕ್ಕದ್ದು.]
2 . ರಾಷ್ಟ್ರಪತಿಯ ಇಷ್ಟಪರ್ಯಂತ ಮಂತ್ರಿಗಳು ಪದಧಾರಣ ಮಾಡತಕ್ಕದ್ದು.
3 . ಮಂತ್ರಿಮಂಡಲವು ಲೋಕಸಭೆಗೆ ಸಾಮೂಹಿಕವಾಗಿ ಜವಾಬ್ದಾರಿಯಾಗಿರತಕ್ಕದ್ದು.
4 . ಯಾರೇ ಮಂತ್ರಿಯು ತನ್ನ ಪದವನ್ನು ವಹಿಸಿಕೊಳ್ಳುವುದಕ್ಕೆ ಮುಂಚೆ ರಾಷ್ಟ್ರಪತಿಯು ಅವನಿಗೆ ಪದದ ಮತ್ತು ಗೋಪ್ಯತಾ ಪಾಲನೆಯ ಪ್ರಮಾಣವಚನಗಳನ್ನು ಮೂರನೆಯ ಅನುಸೂಚಿಯಲ್ಲಿ ಆ ಉದ್ದೇಶಕ್ಕಾಗಿ ಕೊಡಲಾದ ನಮೂನೆಗಳಿಗೆ ಅನುಸಾರವಾಗಿ ಬೋಧಿಸತಕ್ಕದ್ದು.
5 . ಯಾರೇ ಮಂತ್ರಿಯು, ನಿರಂತರವಾಗಿ ಆರು ತಿಂಗಳ ಯಾವುದೇ ಅವಧಿಯವರೆಗೆ ಸಂಸತ್ತಿನ ಸದನಗಳ ಯಾವುದೇ ಸದನದ ಸದಸ್ಯನಾಗಿರದಿದ್ದರೆ ಆ ಅವಧಿಯು ಮುಕ್ತಾಯವಾದ ಮೇಲೆ ಅವನು ಮಂತ್ರಿಯಾಗಿರುವುದು ನಿಂತುಹೋಗತಕ್ಕದ್ದು.
6 . ಮಂತ್ರಿಗಳ ಸಂಬಳಗಳು ಹಾಗೂ ಭತ್ಯೆಗಳು ಕಾಲಕಾಲಕ್ಕೆ ಸಂಸತ್ತು ಕಾನೂನಿನ ಮೂಲಕ ನಿರ್ಧರಿಸಬಹುದಾದಂತೆ ಇರತಕ್ಕದ್ದು ಮತ್ತು ಸಂಸತ್ತು ಆ ರೀತಿ ನಿರ್ಧರಿಸುವವರೆಗೆ ಅವು ಎರಡನೆಯ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವಂತೆ ಇರತಕ್ಕದ್ದು.
⩥ ಸಂವಿಧಾನ (ನಲವತ್ತೆರಡನೆಯ ತಿದ್ದುಪಡಿ) ಅಧಿನಿಯಮ, 1976ರ 13ನೆಯ ಪ್ರಕರಣದ ಮೂಲಕ (1)ನೆಯ ಖಂಡಕ್ಕೆ ಬದಲಾಗಿ (3-1-1977ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ.
⩥ ಸಂವಿಧಾನ (ನಲವತ್ತನಾಲ್ಕನೆಯ ತಿದ್ದುಪಡಿ) ಅಧಿನಿಯಮ, 1978ರ 11ನೆಯ ಪ್ರಕರಣದ ಮೂಲಕ (20-6-1979ರಿಂದ ಜಾರಿಗೆ ಬರುವಂತೆ) ಸೇರಿಸಲಾಗಿದೆ.
⩥ ಸಂವಿಧಾನ (ತೊಂಬತ್ತೊಂದನೆಯ ತಿದ್ದುಪಡಿ) ಅಧಿನಿಯಮ, 2003ರ 2ನೆಯ ಪ್ರಕರಣದ ಮೂಲಕ (01-01-2004ರಿಂದ ಜಾರಿಗೆ ಬರುವಂತೆ) ಸೇರಿಸಲಾಗಿದೆ.
ಭಾರತದ ಅಟಾರ್ನಿ ಜನರಲ್ . THE ATTORNEY-GENERAL FOR INDIA
76 . ಭಾರತದ ಅಟಾರ್ನಿ ಜನರಲ್.-
1 . ರಾಷ್ಟ್ರಪತಿಯು, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶನಾಗಿ ನೇಮಕಗೊಳ್ಳಲು ಅರ್ಹತೆಯುಳ್ಳ ವ್ಯಕ್ತಿಯನ್ನು, ಭಾರತದ ಅಟಾರ್ನಿ ಜನರಲ್ ಆಗಿ ನೇಮಕ ಮಾಡತಕ್ಕದ್ದು.
2 . ಅಟಾರ್ನಿ ಜನರಲ್ , ರಾಷ್ಟ್ರಪತಿಯು ಕಾಲಕಾಲಕ್ಕೆ ತನಗೆ ಕಳುಹಿಸಬಹುದಾದಂಥ ಅಥವಾ ಒಪ್ಪಿಸಬಹುದಾದಂಥ ಕಾನೂನು ವಿಷಯಗಳ ಮೇಲೆ ಭಾರತ ಸರ್ಕಾರಕ್ಕೆ ಸಲಹೆ ಕೊಡುವುದು ಮತ್ತು ಕಾನೂನು ಸ್ವರೂಪದ ಅಂಥ ಇತರ ಕರ್ತವ್ಯಗಳನ್ನು ನೆರವೇರಿಸುವುದು ಹಾಗೂ ಈ ಸಂವಿಧಾನದ ಮೂಲಕ ಅಥವಾ ಅದರ ಮೇರೆಗೆ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಇತರ ಯಾವುದೇ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ತನಗೆ ಪ್ರದಾನ ಮಾಡಿದ ಪ್ರಕಾರ್ಯಗಳನ್ನು ನಿರ್ವಹಿಸುವುದು ಅವನ ಕರ್ತವ್ಯವಾಗಿರತಕ್ಕದ್ದು.
3 . ಅಟಾರ್ನಿ ಜನರಲನು, ತನ್ನ ಕರ್ತವ್ಯಗಳನ್ನು ನೆರವೇರಿಸುವಲ್ಲಿ ಭಾರತದ ರಾಜ್ಯಕ್ಷೇತ್ರದಲ್ಲಿನ ಎಲ್ಲ ನ್ಯಾಯಾಲಯಗಳಲ್ಲಿ ವಾದಿಸುವ ಹಕ್ಕನ್ನು ಹೊಂದಿರತಕ್ಕದ್ದು.
4 . ಅಟಾರ್ನಿ ಜನರಲನು ರಾಷ್ಟ್ರಪತಿಯ ಇಷ್ಟಪರ್ಯಂತ ಪದದಲ್ಲಿರತಕ್ಕದ್ದು ಮತ್ತು ರಾಷ್ಟ್ರಪತಿಯು ನಿರ್ಧರಿಸಬಹುದಾದಷ್ಟು ಸಂಭಾವನೆಯನ್ನು ಪಡೆಯತಕ್ಕದ್ದು.
ಸರ್ಕಾರಿ ವ್ಯವಹಾರ ನಿರ್ವಹಣೆ . CONDUCT OF GOVERNMENT BUSINESS
77 . ಭಾರತ ಸರ್ಕಾರದ ವ್ಯವಹಾರ ನಿರ್ವಹಣೆ.
1 . ಭಾರತ ಸರ್ಕಾರದ ಎಲ್ಲ ಕಾರ್ಯಾಂಗದ ಸಮಸ್ತ ಕಾರ್ಯವು . ರಾಷ್ಟ್ರಪತಿಯ ಹೆಸರಿನಲ್ಲಿ ನಡೆಯುತ್ತದೆಂದು ವ್ಯಕ್ತವಾಗತಕ್ಕದ್ದು.
2 . ರಾಷ್ಟ್ರಪತಿಯ ಹೆಸರಿನಲ್ಲಿ ಮಾಡಿದ ಆದೇಶಗಳನ್ನು ಮತ್ತು ಬರೆದುಕೊಟ್ಟ ಇತರ ಲಿಖಿತಗಳನ್ನು, ರಾಷ್ಟ್ರಪತಿಯು ರಚಿಸುವ ನಿಯಮಗಳಲ್ಲಿ ನಿರ್ದಿಷ್ಟಪಡಿಸಬಹುದಾದಂಥ ರೀತಿಯಲ್ಲಿ ಅಧಿಪ್ರಮಾಣನ ಮಾಡತಕ್ಕದ್ದು ಮತ್ತು ಹಾಗೆ ಅಧಿಪ್ರಮಾಣನ ಮಾಡಿದ ಆದೇಶದ ಅಥವಾ ಲಿಖಿತದ ಸಿಂಧುತ್ವವನ್ನು ಅದು ರಾಷ್ಟ್ರಪತಿಯು ಮಾಡಿದ ಆದೇಶವಲ್ಲವೆಂಬ ಅಥವಾ ಬರೆದು ಕೊಟ್ಟ ಲಿಖಿತವಲ್ಲವೆಂಬ ಕಾರಣದ ಮೇಲೆ ಅದನ್ನು ಪ್ರಶ್ನಿಸತಕ್ಕದ್ದಲ್ಲ.
(3) ಭಾರತ ಸರ್ಕಾರದ ವ್ಯವಹಾರವು ಹೆಚ್ಚು ಅನುಕೂಲಕರವಾಗಿ ನಡೆಯಲು ಮತ್ತು ಸದರಿ ವ್ಯವಹಾರವನ್ನು ಮಂತ್ರಿಗಳಲ್ಲಿ ಹಂಚುವುದಕ್ಕೆ ರಾಷ್ಟ್ರಪತಿಯು ನಿಯಮಗಳನ್ನು ರಚಿಸತಕ್ಕದ್ದು.
78 . ರಾಷ್ಟ್ರಪತಿಗೆ ಮಾಹಿತಿ, ಇತ್ಯಾದಿಗಳನ್ನು ಒದಗಿಸುವ ವಿಚಾರದಲ್ಲಿ ಪ್ರಧಾನಮಂತ್ರಿಯ ಕರ್ತವ್ಯಗಳು.-
1 . ಪ್ರಧಾನಮಂತ್ರಿಯು,
(a) ಒಕ್ಕೂಟದ ವ್ಯವಹಾರಗಳ ಆಡಳಿತಕ್ಕೆ ಮತ್ತು ಕಾನೂನು ರಚನೆಯ ಪ್ರಸ್ತಾವಗಳಿಗೆ ಸಂಬಂಧಿಸಿದಂತೆ ಮಂತ್ರಿಮಂಡಲದ ಎಲ್ಲ ತೀರ್ಮಾನಗಳನ್ನು ರಾಷ್ಟ್ರಪತಿಗೆ ತಿಳಿಸುವುದು;
(b) ಒಕ್ಕೂಟದ ವ್ಯವಹಾರಗಳ ಆಡಳಿತಕ್ಕೆ ಮತ್ತು ಕಾನೂನು ರಚನೆಯ ಪ್ರಸ್ತಾವಗಳಿಗೆ ಸಂಬಂಧಿಸಿದಂತೆ ರಾಷ್ಟ್ರಪತಿಯು ಕೇಳಬಹುದಾದಂಥ ಮಾಹಿತಿಯನ್ನು ಒದಗಿಸುವುದು; ಮತ್ತು
1 thought on “ಭಾರತದ ಉಪರಾಷ್ಟ್ರಪತಿ, ಮಂತ್ರಿಮಂಡಲ, ಭಾರತದ ಅಟಾರ್ನಿ ಜನರಲ್ & ಸರ್ಕಾರಿ ವ್ಯವಹಾರ ನಿರ್ವಹಣೆ. (Article 63–78) | ಭಾಗ Ⅴ ಒಕ್ಕೂಟ . Must-Know Guide to the Vice-President of India, Council of Ministers, The Attorney-General For India & Conduct of Government Business (PART-V THE UNION – Articles 63–78 Explained ).”