ಹಣಕಾಸು ವಿಷಯಗಳ ಬಗ್ಗೆ ಪ್ರಕ್ರಿಯೆ Procedure in Financial matters
( ಅದ್ಯಾಯ Ⅱ ಸಂಸತ್ತು . article 79 ರಿಂದ 111ರಲ್ಲಿ ಬರುವ ಸಂಸತ್ತಿನ ರಚನೆ ಮತ್ತು ಪಾರ್ಲಿಮೆಂಟಿನ ಅಧಿಕಾರಿಗಳು , ಭಾರತೀಯ ಸಂಸತ್ತಿನ ಕಾರ್ಯಕಲಾಪ, ಅನರ್ಹತೆಗಳು ಮತ್ತು ವಿಧಾಯಿ ಪ್ರಕ್ರಿಯೆ, ಈ ಹಿಂದಿನ ಪೋಸ್ಟ್ ಅಲ್ಲಿ ತಿಳಿಸಲಾಗಿದೆ . )
112 . ವಾರ್ಷಿಕ ಹಣಕಾಸು ವಿವರಪತ್ರ,-
1 . ರಾಷ್ಟ್ರಪತಿಯು, ಪ್ರತಿ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರದ ಅಂದಾಜು ಜಮೆಗಳ ಮತ್ತು ವೆಚ್ಚದ ವಿವರಣೆಯನ್ನು ಸಂಸತ್ತಿನ ಉಭಯ ಸದನಗಳ ಮುಂದೆ ಇಡುವಂತೆ ಮಾಡತಕ್ಕದ್ದು; ಈ ಭಾಗದಲ್ಲಿ ಅದನ್ನು “ವಾರ್ಷಿಕ ಹಣಕಾಸು ವಿವರಪತ್ರ” ಎಂದು ಉಲ್ಲೇಖಿಸಲಾಗಿದೆ.
2 . ವಾರ್ಷಿಕ ಹಣಕಾಸು ವಿವರಪತ್ರದಲ್ಲಿ ಆಡಕವಾಗಿರುವ ವೆಚ್ಚದ ಅಂದಾಜುಗಳಲ್ಲಿ,
(a) ಭಾರತದ ಸಂಚಿತ ನಿಧಿಯ ಮೇಲೆ ಹೊರಿಸಲಾದ ವೆಚ್ಚವೆಂದು ಈ ಸಂವಿಧಾನದಲ್ಲಿ ವಿವರಿಸಿರುವ ವೆಚ್ಚವನ್ನು ಭರಿಸಲು ಬೇಕಾದ ಮೊಬಲಗುಗಳನ್ನು: ಮತ್ತು
(b) ಭಾರತದ ಸಂಚಿತ ನಿಧಿಯಿಂದ ಖರ್ಚು ಮಾಡಬೇಕೆಂದು ಉದ್ದೇಶಿಸಿರುವ ಇತರ ವೆಚ್ಚವನ್ನು ಭರಿಸಲು ಬೇಕಾದ ಮೊಬಲಗುಗಳನ್ನು ಪ್ರತ್ಯೇಕವಾಗಿ ತೋರಿಸತಕ್ಕದ್ದು ಮತ್ತು ರಾಜಸ್ವ ಲೆಕ್ಕಕ್ಕೆ ಖರ್ಚು ಬೀಳುವ ವೆಚ್ಚವನ್ನು ಇತರ ವೆಚ್ಚದಿಂದ ಪ್ರತ್ಯೇಕಿಸಿ ತೋರಿಸತಕ್ಕದ್ದು.
3 . ಈ ಕೆಳಕಂಡ ವೆಚ್ಚವು ಭಾರತದ ಸಂಚಿತ ನಿಧಿಗೆ ಖರ್ಚು ಹಾಕಿದ ವೆಚ್ಚವಾಗಿರತಕ್ಕದ್ದು,-
(a) ರಾಷ್ಟ್ರಪತಿಯ ಉಪಲಬ್ಬಿಗಳು ಮತ್ತು ಭತ್ಯೆಗಳು ಹಾಗೂ ಅವನ ಪದಕ್ಕೆ ಸಂಬಂಧಪಟ್ಟ ಇತರ ವೆಚ್ಚ:
(b) ರಾಜ್ಯಸಭೆಯ ಸಭಾಪತಿಯ ಮತ್ತು ಉಪಸಭಾಪತಿಯ ಹಾಗೂ ಲೋಕಸಭೆಯ ಅಧ್ಯಕ್ಷನ ಮತ್ತು ಉಪಾಧ್ಯಕ್ಷನ ಸಂಬಳಗಳು ಮತ್ತು ಭತ್ಯೆಗಳು;
(c) ಬಡ್ಡಿ, ಸಾಲ ತೀರುವೆ ನಿಧಿಯ ಭಾರಗಳು ಮತ್ತು ಋಣ ವಿಮೋಚನೆ ಭಾರಗಳೂ ಸೇರಿದಂತೆ ಭಾರತ ಸರ್ಕಾರವು ಹೊಣೆಯಾಗಿರುವ ಋಣಭಾರಗಳು ಮತ್ತು ಸಾಲಗಳನ್ನು ಎತ್ತುವುದಕ್ಕೆ ಮತ್ತು ಋಣ ತೀರಿಕೆ ಸೇವೆಗೆ ಮತ್ತು ಋಣ ವಿಮೋಚನೆಗೆ ಸಂಬಂಧಪಟ್ಟ ಇತರ ವೆಚ್ಚ:
(d) (i) ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ ಅಥವಾ ಅವರಿಗೆ ಸಂಬಂಧಿಸಿದಂತೆ ಸಂದಾಯವಾಗಬೇಕಾದ ಸಂಬಳಗಳು, ಭತ್ಯೆಗಳು ಮತ್ತು ನಿವೃತ್ತಿವೇತನಗಳು;
(ii) ಫೆಡರಲ್ ನ್ಯಾಯಾಲಯದ ನ್ಯಾಯಾಧೀಶರಿಗೆ ಅಥವಾ ಅವರಿಗೆ ಸಂಬಂಧಿಸಿದಂತೆ ಸಂದಾಯವಾಗಬೇಕಾದ ನಿವೃತ್ತಿವೇತನಗಳು:
(iii) ಭಾರತದ ರಾಜ್ಯಕ್ಷೇತ್ರದಲ್ಲಿ ಒಳಗೊಂಡಿರುವ ಯಾವುದೇ ಪ್ರದೇಶದ ಸಂಬಂಧದಲ್ಲಿ ಅಧಿಕಾರವ್ಯಾಪ್ತಿಯನ್ನು ಚಲಾಯಿಸುತ್ತಿರುವ ಅಥವಾ ‘[ಡೊಮಿನಿಯನ್ ಆಫ್ ಇಂಡಿಯಾದ ಗವರ್ನರನ ಪ್ರಾಂತದಲ್ಲಿ] ಒಳಗೊಂಡಿರುವ ಯಾವುದೇ ಪ್ರದೇಶದ ಸಂಬಂಧದಲ್ಲಿ ಈ ಸಂವಿಧಾನವು ಪ್ರಾರಂಭವಾಗುವುದಕ್ಕೆ ಮುಂಚೆ ಯಾವುದೇ ಕಾಲದಲ್ಲಿ ಅಧಿಕಾರವ್ಯಾಪ್ತಿಯನ್ನು ಚಲಾಯಿಸುತ್ತಿದ್ದ ಯಾವುದೇ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ ಅಥವಾ ಅವರಿಗೆ ಸಂಬಂಧಿಸಿದಂತೆ ಸಂದಾಯವಾಗಬೇಕಾದ ನಿವೃತ್ತಿವೇತನಗಳು;
(e) ಭಾರತದ ಲೆಕ್ಕನಿಯಂತ್ರಕ ಮತ್ತು ಮಹಾಲೆಕ್ಕಪರಿಶೋಧಕನಿಗೆ ಅಥವಾ ಅವನಿಗೆ ಸಂಬಂಧಿಸಿದಂತೆ ಸಂದಾಯವಾಗಬೇಕಾದ ಸಂಬಳ, ಭತ್ಯೆಗಳು ಮತ್ತು ನಿವೃತ್ತಿವೇತನ:
(f) ಯಾವುದೇ ನ್ಯಾಯಾಲಯದ ಅಥವಾ ಮಧ್ಯಸ್ಥಗಾರಿಕೆ ನ್ಯಾಯಾಧಿಕರಣದ ಯಾವುದೇ ತೀರ್ಪು. ಡಿಕ್ಕಿ ಅಥವಾ ಐತೀರ್ಪು ಇವುಗಳ ಮೇರೆಗೆ ಸಂದಾಯ ಮಾಡಲೇಬೇಕಾದ ಯಾವುದೇ ಮೊಬಲಗುಗಳು:
(g) ಹಾಗೆ ಹೊರಿಸತಕ್ಕದ್ದೆಂದು ಈ ಸಂವಿಧಾನದ ಮೂಲಕ ಅಥವಾ ಸಂಸತ್ತು ಕಾನೂನಿನ ಮೂಲಕ ಘೋಷಿಸಿದ ಇತರ ಯಾವುದೇ ವೆಚ್ಚ.
113 . ಅಂದಾಜುಗಳಿಗೆ ಸಂಬಂಧಪಟ್ಟಂತೆ ಸಂಸತ್ತಿನಲ್ಲಿ ಪ್ರಕ್ರಿಯೆ.
1 . ಅಂದಾಜುಗಳಲ್ಲಿ ಭಾರತದ ಸಂಚಿತ ನಿಧಿಯ ಮೇಲೆ ಹೊರಿಸಲಾದ ವೆಚ್ಚಕ್ಕೆ ಸಂಬಂಧಿಸಿದ ಅಂದಾಜುಗಳನ್ನು ಸಂಸತ್ತಿಗೆ ಮತಕ್ಕಾಗಿ ಒಪ್ಪಿಸತಕ್ಕದ್ದಲ್ಲ; ಆದರೆ, ಈ ಖಂಡದಲ್ಲಿ ಇರುವುದು ಯಾವುದೂ, ಅಂಥ ಅಂದಾಜುಗಳ ಪೈಕಿ ಯಾವುದೇ ಅಂದಾಜನ್ನು ಸಂಸತ್ತಿನ ಯಾವುದೇ ಸದನದಲ್ಲಾದರೂ ಚರ್ಚಿಸುವುದಕ್ಕೆ ಅಡ್ಡಿಯನ್ನುಂಟು ಮಾಡುತ್ತದೆ ಎಂದು ಅರ್ಥೈಸತಕ್ಕದ್ದಲ್ಲ.
2 . ಸದರಿ ಅಂದಾಜುಗಳಲ್ಲಿ ಇತರ ವೆಚ್ಚಕ್ಕೆ ಸಂಬಂಧಿಸಿದ ಅಂದಾಜುಗಳನ್ನು ಅನುದಾನಗಳಿಗಾಗಿ ಬೇಡಿಕೆಯ ರೂಪದಲ್ಲಿ ಲೋಕಸಭೆಗೆ ಒಪ್ಪಿಸತಕ್ಕದ್ದು ಮತ್ತು ಲೋಕಸಭೆಯು ಯಾವುದೇ ಬೇಡಿಕೆಗೆ ಅನುಮತಿಯನ್ನು ಕೊಡಲು ಅಥವಾ ಅನುಮತಿಯನ್ನು ನಿರಾಕರಿಸಲು ಅಥವಾ ಅನುದಾನಗಳ ಬೇಡಿಕೆಯಲ್ಲಿ ನಿರ್ದಿಷ್ಟಪಡಿಸಿದ ಮೊಬಲಗನ್ನು ಕಡಿಮೆ ಮಾಡುವುದಕ್ಕೆ ಒಳಪಟ್ಟು, ಯಾವುದೇ ಬೇಡಿಕೆಗೆ ಅನುಮತಿಯನ್ನು ಕೊಡಲು ಅಧಿಕಾರವನ್ನು ಹೊಂದಿರತಕ್ಕದ್ದು.
3 . ಅನುದಾನಕ್ಕೆ ಸಂಬಂಧಿಸಿದ ಯಾವುದೇ ಬೇಡಿಕೆಯನ್ನು ರಾಷ್ಟ್ರಪತಿಯ ಶಿಫಾರಸ್ಸಿನ ಹೊರತು, ಮಂಡಿಸತಕ್ಕದ್ದಲ್ಲ.
114 .ಧನ ವಿನಿಯೋಗ ವಿಧೇಯಕಗಳು.
1 . 113ನೆಯ ಅನುಚ್ಛೇದದ ಮೇರೆಗೆ ಲೋಕಸಭೆಯು ಅನುದಾನಗಳಿಗೆ ಒಪ್ಪಿಗೆ ಕೊಟ್ಟ ತರುವಾಯ ಆದಷ್ಟು ಬೇಗನೆ.
(a) ಲೋಕಸಭೆಯು ಆ ರೀತಿ ಒಪ್ಪಿಗೆ ಕೊಟ್ಟ ಅನುದಾನಗಳನ್ನು; ಮತ್ತು
(b) ಭಾರತದ ಸಂಚಿತ ನಿಧಿಯ ಮೇಲೆ ಹೊರಿಸಲಾದ, ಖರ್ಚುಹಾಕಲಾದ ಆದರೆ ಸಂಸತ್ತಿನ ಮುಂದೆ ಈ ಹಿಂದೆ ಇಡಲಾಗಿದ್ದ ವಾರ್ಷಿಕ ಹಣಕಾಸು ವಿವರ ಪತ್ರದಲ್ಲಿ ತೋರಿಸಿದ್ದ ಮೊಬಲಗಿಗೆ ಯಾವುದೇ ಸಂದರ್ಭದಲ್ಲಿ ಮೀರದಷ್ಟು ವೆಚ್ಚವನ್ನು ಭರಿಸಲು ಅಗತ್ಯವಾದ ಎಲ್ಲ ಹಣವನ್ನು ಭಾರತದ ಸಂಚಿತ ನಿಧಿಯಿಂದ ವಿನಿಯೋಗಿಸುವುದಕ್ಕೆ ಉಪಬಂಧಿಸುವ ವಿಧೇಯಕವನ್ನು ಮಂಡಿಸತಕ್ಕದ್ದು.
2 . ಹಾಗೆ ಒಪ್ಪಿಗೆ ಕೊಡಲಾದ ಯಾವುದೇ ಅನುದಾನದ ಮೊಬಲಗನ್ನು ವ್ಯತ್ಯಸ್ತಗೊಳಿಸುವ ಅಥವಾ ಅದರ ಗೊತ್ತುಗುರಿಯನ್ನು ಬದಲಾಯಿಸುವ ಅಥವಾ ಭಾರತದ ಸಂಚಿತ ನಿಧಿಯ ಮೇಲೆ ಹೊರಿಸಲಾಗುವ ಯಾವುದೇ ವೆಚ್ಚದ ಮೊಬಲಗನ್ನು ವ್ಯತ್ಯಸ್ತಗೊಳಿಸುವ ಪರಿಣಾಮವುಂಟುಮಾಡುವ ಯಾವುದೇ ತಿದ್ದುಪಡಿಯನ್ನು, ಅಂಥ ಯಾವುದೇ ವಿಧೇಯಕಕ್ಕೆ ಸಂಸತ್ತಿನ ಯಾವುದೇ ಸದನದಲ್ಲಾಗಲಿ ಸೂಚಿಸತಕ್ಕದ್ದಲ್ಲ ಮತ್ತು ಈ ಖಂಡದ ಮೇರೆಗೆ ತಿದ್ದುಪಡಿಯು ಅಂಗೀಕಾರಾರ್ಹವೇ ಹೇಗೆ ಎಂಬ ವಿಷಯದಲ್ಲಿ ಅಧ್ಯಕ್ಷತೆ ವಹಿಸಿರುವ ವ್ಯಕ್ತಿಯ ತೀರ್ಮಾನವೇ ಅಂತಿಮವಾದುದಾಗಿರತಕ್ಕದ್ದು.
3 . 115ನೆಯ ಮತ್ತು 116ನೆಯ ಅನುಚ್ಛೇದಗಳ ಉಪಬಂಧಗಳಿಗೊಳಪಟ್ಟು, ಭಾರತದ ಸಂಚಿತ ನಿಧಿಯಿಂದ ಯಾವುದೇ ಹಣವನ್ನು ಈ ಅನುಚ್ಛೇದದ ಉಪಬಂಧಗಳಿಗನುಸಾರ ಅಂಗೀಕೃತವಾದ ಕಾನೂನಿನ ಮೂಲಕ ಮಾಡಿದ ವಿನಿಯೋಗದ ಮೇರೆಗೆ ಹೊರತು ಇತರ ರೀತಿಯಲ್ಲಿ ಹಿಂತೆಗೆದುಕೊಳ್ಳತಕ್ಕದ್ದಲ್ಲ.
115 . ಪೂರಕ, ಹೆಚ್ಚುವರಿ ಅಥವಾ ಅಧಿಕ ಅನುದಾನಗಳು.-
1 . ರಾಷ್ಟ್ರಪತಿಯು,-
(a) 114ನೆಯ ಅನುಚ್ಛೇದದ ಉಪಬಂಧಗಳಿಗನುಸಾರವಾಗಿ ಮಾಡಿದ ಯಾವುದೇ ಕಾನೂನಿನ ಮೂಲಕ ಚಾಲ್ತಿ ಹಣಕಾಸು ವರ್ಷದಲ್ಲಿ ನಿರ್ದಿಷ್ಟ ಸೇವೆಗೆ ವೆಚ್ಚ ಮಾಡುವುದಕ್ಕಾಗಿ ಅಧಿಕೃತಗೊಳಿಸಿದ ಮೊಬಲಗು ಆ ವರ್ಷದ ಉದ್ದೇಶಗಳಿಗೆ ಸಾಕಾಗುವುದಿಲ್ಲವೆಂದು ಕಂಡುಬಂದರೆ ಅಥವಾ ಆ ಚಾಲ್ತಿ ಹಣಕಾಸು ವರ್ಷದ ವಾರ್ಷಿಕ ಹಣಕಾಸು ವಿವರಪತ್ರದಲ್ಲಿ ಉದ್ದೇಶಿಸಿಲ್ಲದ ಯಾವುದೇ ಹೊಸ ಸೇವೆಯ ಸಂಬಂಧದಲ್ಲಿ ಆ ವರ್ಷದಲ್ಲಿ ಪೂರಕ ಅಥವಾ ಹೆಚ್ಚುವರಿ ವೆಚ್ಚದ ಅಗತ್ಯತೆ ಉಂಟಾದರೆ; ಅಥವಾ
(b) ಯಾವುದೇ ಸೇವೆಗಾಗಿ ಹಣಕಾಸು ವರ್ಷದಲ್ಲಿ ಆ ವರ್ಷಕ್ಕೆಂದು ಕೊಡಲಾದ ಮೊಬಲಗನ್ನು ಮೀರಿದ ಯಾವುದೇ ಹಣವು ಆ ಸೇವೆಗಾಗಿ ವೆಚ್ಚವಾಗಿದ್ದರೆ ಸಂದರ್ಭಾನುಸಾರ, ಆ ವೆಚ್ಚದ ಅಂದಾಜು ಮೊಬಲಗನ್ನು ತೋರಿಸುವ ಇನ್ನೊಂದು ವಿವರಪತ್ರವನ್ನು ಸಂಸತ್ತಿನ ಉಭಯ ಸದನಗಳ ಮುಂದೆ ಇಡುವಂತೆ ಅಥವಾ ಅಂಥ ಅಧಿಕ ಮೊಬಲಗಿಗೆ ಬೇಡಿಕೆಯನ್ನು ಲೋಕಸಭೆಯ ಮುಂದೆ ಇಡುವಂತೆ ಮಾಡತಕ್ಕದ್ದು.
2 . 112, 113 ಮತ್ತು 114ನೇ ಅನುಚ್ಛೇದಗಳ ಉಪಬಂಧಗಳು ವಾರ್ಷಿಕ ಹಣಕಾಸು ವಿವರಪತ್ರದ ಮತ್ತು ಆ ವಿವರಪತ್ರದಲ್ಲಿ ನಮೂದಿಸಿರುವ ವೆಚ್ಚ ಅಥವಾ ಅನುದಾನದ ಬೇಡಿಕೆ ಮತ್ತು ಅಂಥ ವೆಚ್ಚವನ್ನು ಅಥವಾ ಅನುದಾನವನ್ನು ಭರಿಸಲು ಭಾರತದ ಸಂಚಿತ ನಿಧಿಯಿಂದ ಹಣ ವಿನಿಯೋಗಿಸುವುದನ್ನು ಅಧಿಕೃತಗೊಳಿಸಲು ಮಾಡಬೇಕಾದ ಕಾನೂನಿನ ಸಂಬಂಧದಲ್ಲಿ ಪರಿಣಾಮಕಾರಿಯಾಗಿರುವಂತೆಯೇ, ಅಂಥ ಯಾವುದೇ ವಿವರಪತ್ರದ ಮತ್ತು ವೆಚ್ಚದ ಅಥವಾ ಬೇಡಿಕೆಯ ಹಾಗೂ ಅಂಥ ಬೇಡಿಕೆಗೆ ಸಂಬಂಧಿಸಿದ ಅಂಥ ವೆಚ್ಚವನ್ನು ಅಥವಾ ಅನುದಾನವನ್ನು ಭರಿಸಲು ಭಾರತದ ಸಂಚಿತ ನಿಧಿಯಿಂದ ಹಣ ವಿನಿಯೋಗಿಸುವುದನ್ನು ಅಧಿಕೃತಗೊಳಿಸುವ ಯಾವುದೇ ಕಾನೂನಿನ ಸಂಬಂಧದಲ್ಲಿಯೂ ಪರಿಣಾಮಕಾರಿಯಾಗತಕ್ಕದ್ದು.
116 . ಲೇಖಾನುದಾನಗಳು, ಪತ್ತಿನ ಅನುದಾನಗಳು ಮತ್ತು ಅಸಾಧಾರಣ ಅನುದಾನಗಳು.-
(1) ಈ ಅಧ್ಯಾಯದ ಈ ಹಿಂದೆ ಹೇಳಿದ ಉಪಬಂಧಗಳಲ್ಲಿ ಏನೇ ಇದ್ದಾಗ್ಯೂ, ಲೋಕಸಭೆಯು,-
(a) ಯಾವುದೇ ಅನುದಾನವನ್ನು ಮತಕ್ಕೆ ಹಾಕುವ ವಿಷಯದಲ್ಲಿ 113ನೆಯ ಅನುಚ್ಛೇದದಲ್ಲಿ ನಿಯಮಿಸಿದ ಕಾರ್ಯವಿಧಾನವನ್ನು ಪೂರ್ಣಗೊಳಿಸುವವರೆಗೆ ಮತ್ತು ಆ ವೆಚ್ಚದ ಸಂಬಂಧದಲ್ಲಿ 114ನೆಯ ಅನುಚ್ಛೇದದ ಉಪಬಂಧಗಳಿಗನುಸಾರವಾಗಿ ಕಾನೂನನ್ನು ಅಂಗೀಕರಿಸುವವರೆಗೆ ಯಾವುದೇ ಹಣಕಾಸು ವರ್ಷದ ಭಾಗಕ್ಕೆ ಅಂದಾಜು ಮಾಡಲಾದ ವೆಚ್ಚಕ್ಕೆ ಸಂಬಂಧಿಸಿದಂತೆ ಮುಂಚಿತವಾಗಿ ಅಂಥ ಅನುದಾನಕ್ಕೆ ಒಪ್ಪಿಗೆ ಕೊಡಲು:
(b) ಸೇವೆಯು ಭಾರೀ ಪ್ರಮಾಣದ್ದಾಗಿರುವ ಅಥವಾ ಅನಿಶ್ಚಿತ ಸ್ವರೂಪದ್ದಾಗಿರುವ ಕಾರಣದಿಂದ ವಾರ್ಷಿಕ ಹಣಕಾಸು ವಿವರಪತ್ರದಲ್ಲಿ ಸಾಮಾನ್ಯವಾಗಿ ಕೊಡುವ ವಿವರಗಳೊಂದಿಗೆ ಆ ಬೇಡಿಕೆಯನ್ನು ನಮೂದಿಸಲು ಆಗದೆ ಇದ್ದರೆ ಭಾರತದ ಸಂಪನ್ಮೂಲಗಳಿಂದ ಅನಿರೀಕ್ಷಿತ ಬೇಡಿಕೆಯನ್ನು ಈಡೇರಿಸಲು ಅನುದಾನಕ್ಕೆ ಒಪ್ಪಿಗೆ ಕೊಡಲು;
(c) ಯಾವುದೇ ಹಣಕಾಸು ವರ್ಷದಲ್ಲಿ ಚಾಲ್ತಿ ಸೇವೆಗೆ ಸೇರಿಲ್ಲದ ಅಸಾಧಾರಣ ಅನುದಾನಕ್ಕೆ ಒಪ್ಪಿಗೆ ಕೊಡಲು ಅಧಿಕಾರವನ್ನು ಹೊಂದಿರತಕ್ಕದ್ದು ಮತ್ತು ಯಾವ ಉದ್ದೇಶಗಳಿಗಾಗಿ ಸದರಿ ಅನುದಾನಗಳಿಗೆ ಒಪ್ಪಿಗೆ ಕೊಡಲಾಗಿದೆಯೋ ಆ ಉದ್ದೇಶಗಳಿಗಾಗಿ, ಭಾರತದ ಸಂಚಿತ ನಿಧಿಯಿಂದ ಹಣವನ್ನು ತೆಗೆದುಕೊಳ್ಳುವುದನ್ನು ಕಾನೂನಿನ ಮೂಲಕ ಅಧಿಕೃತಗೊಳಿಸಲು ಸಂಸತ್ತಿಗೆ ಅಧಿಕಾರವಿರತಕ್ಕದ್ದು.
2 . 113ನೆಯ ಮತ್ತು 114ನೆಯ ಅನುಚ್ಛೇದಗಳ ಉಪಬಂಧಗಳು ವಾರ್ಷಿಕ ಹಣಕಾಸು ವಿವರಪತ್ರದಲ್ಲಿ ನಮೂದಿಸಿರುವ ಯಾವುದೇ ವೆಚ್ಚಕ್ಕೆ ಸಂಬಂಧಿಸಿದಂತೆ ಅನುದಾನಕ್ಕೆ ಒಪ್ಪಿಗೆ ಕೊಡುವ ಮತ್ತು ಅಂಥ ವೆಚ್ಚವನ್ನು ಭರಿಸಲು ಭಾರತದ ಸಂಚಿತ ನಿಧಿಯಿಂದ ಹಣವನ್ನು ವಿನಿಯೋಗಿಸುವುದನ್ನು ಅಧಿಕೃತಗೊಳಿಸಲು ಮಾಡಬೇಕಾದ ಕಾನೂನಿನ ಸಂಬಂಧದಲ್ಲಿ ಪರಿಣಾಮಕಾರಿಯಾಗಿರುವಂತೆಯೇ (1)ನೆಯ ಖಂಡದ ಮೇರೆಗೆ ಯಾವುದೇ ಅನುದಾನಕ್ಕೆ ಒಪ್ಪಿಗೆ ಕೊಡುವ ಮತ್ತು ಆ ಖಂಡದ ಮೇರೆಗೆ ಯಾವುದೇ ಕಾನೂನನ್ನು ಮಾಡುವುದರ ಸಂಬಂಧದಲ್ಲಿಯೂ ಪರಿಣಾಮಕಾರಿಯಾಗಿರತಕ್ಕದ್ದು.
117 . ಹಣಕಾಸು ವಿಧೇಯಕಗಳ ಬಗ್ಗೆ ವಿಶೇಷ ಉಪಬಂಧಗಳು-
1 . 110ನೆಯ ಅನುಚ್ಛೇದದ (1)ನೆಯ ಖಂಡದ (a) ಯಿಂದ (f) ವರೆಗಿನ ಉಪಖಂಡಗಳಲ್ಲಿ ನಿರ್ದಿಷ್ಟಪಡಿಸಿರುವ ಯಾವುದೇ ವಿಷಯಗಳ ಬಗ್ಗೆ ಉಪಬಂಧ ಕಲ್ಪಿಸುವ ವಿಧೇಯಕವನ್ನು ಅಥವಾ ತಿದ್ದುಪಡಿಯನ್ನು, ರಾಷ್ಟ್ರಪತಿಯ ಶಿಫಾರಸ್ಸಿನ ಹೊರತು ಮಂಡಿಸತಕ್ಕದ್ದಲ್ಲ ಅಥವಾ ಸೂಚಿಸತಕ್ಕದ್ದಲ್ಲ ಮತ್ತು ಅಂಥ ಉಪಬಂಧ ಕಲ್ಪಿಸುವ ವಿಧೇಯಕವನ್ನು ರಾಜ್ಯಸಭೆಯಲ್ಲಿ ಮಂಡಿಸತಕ್ಕದ್ದಲ್ಲ:
ಯಾವುದೇ ತೆರಿಗೆಯನ್ನು ಕಡಿಮೆ ಮಾಡುವುದಕ್ಕೆ ಅಥವಾ ರದ್ದು ಮಾಡುವುದಕ್ಕೆ ಉಪಬಂಧ ಕಲ್ಪಿಸುವ ತಿದ್ದುಪಡಿಯನ್ನು ಮಂಡಿಸುವುದಕ್ಕಾಗಿ ಈ ಖಂಡದ ಮೇರೆಗೆ ಯಾವುದೇ ಶಿಫಾರಸ್ಸಿನ ಅಗತ್ಯವಿರತಕ್ಕದ್ದಲ್ಲ.
2 . ಒಂದು ವಿಧೇಯಕವು ಅಥವಾ ತಿದ್ದುಪಡಿಯು. ಜುಲ್ಮಾನೆಗಳನ್ನು ಅಥವಾ ಇತರ ಆರ್ಥಿಕ ದಂಡಗಳನ್ನು ವಿಧಿಸುವುದಕ್ಕೆ ಅಥವಾ ಲೈಸೆನ್ಸುಗಳಿಗೆ ಅಥವಾ ಸಲ್ಲಿಸಿದ ಸೇವೆಗಳಿಗೆ ಫೀಜನ್ನು ಕೇಳುವುದಕ್ಕೆ ಅಥವಾ ಸಂದಾಯ ಮಾಡುವುದಕ್ಕೆ ಉಪಬಂಧ ಕಲ್ಪಿಸುತ್ತದೆ ಎಂಬ ಕಾರಣಮಾತ್ರದಿಂದ ಅಥವಾ ಯಾವುದೇ ಸ್ಥಳೀಯ ಪ್ರಾಧಿಕಾರವು ಅಥವಾ ನಿಕಾಯವು ಸ್ಥಳೀಯ ಉದ್ದೇಶಗಳಿಗಾಗಿ ಯಾವುದೇ ತೆರಿಗೆಯನ್ನು ವಿಧಿಸುವುದಕ್ಕೆ, ರದ್ದು ಮಾಡುವುದಕ್ಕೆ, ಮಾಫಿ ಮಾಡುವುದಕ್ಕೆ, ಬದಲಾವಣೆ ಮಾಡುವುದಕ್ಕೆ ಅಥವಾ ವಿನಿಯಮಗೊಳಿಸುವುದಕ್ಕೆ ಅದು ಉಪಬಂಧ ಕಲ್ಪಿಸುತ್ತದೆ ಎಂಬ ಕಾರಣದಿಂದ ಆ ವಿಧೇಯಕವು ಅಥವಾ ತಿದ್ದುಪಡಿಯು ಹಿಂದೆ ಹೇಳಿದ ಯಾವುದೇ ವಿಷಯಗಳಿಗೆ ಉಪಬಂಧ ಕಲ್ಪಿಸುತ್ತದೆ ಎಂದು ಭಾವಿಸತಕ್ಕದ್ದಲ್ಲ.
3 . ಯಾವ ವಿಧೇಯಕವನ್ನು ಅಧಿನಿಯಮಿತಗೊಳಿಸಿ ಜಾರಿಗೆ ತಂದರೆ, ಭಾರತದ ಸಂಚಿತ ನಿಧಿಯಿಂದ ಹಣವನ್ನು ವೆಚ್ಚ ಮಾಡಬೇಕಾಗಿ ಬರುವುದೋ ಆ ವಿಧೇಯಕವನ್ನು ಸಂಸತ್ತಿನ ಯಾವುದೇ ಸದನವು ಪರ್ಯಾಲೋಚಿಸಬೇಕೆಂದು ರಾಷ್ಟ್ರಪತಿಯು ಆ ಸದನಕ್ಕೆ ಶಿಫಾರಸ್ಸು ಮಾಡಿದ ಹೊರತು, ಆ ವಿಧೇಯಕವನ್ನು ಆ ಸದನವು ಅಂಗೀಕರಿಸತಕ್ಕದ್ದಲ್ಲ.

ಸಾಮಾನ್ಯತಃ ಪ್ರಕ್ರಿಯೆ Procedure Generally
118 . ಪ್ರಕ್ರಿಯಾ ನಿಯಮಗಳು.-
1 . ಸಂಸತ್ತಿನ ಪ್ರತಿಯೊಂದು ಸದನವು ತನ್ನ ‘ಪ್ರಕ್ರಿಯೆಯನ್ನು ಮತ್ತು ತನ್ನ ಕಾರ್ಯಕಲಾಪ ನಡೆಸುವುದನ್ನು ವಿನಿಯಮಗೊಳಿಸುವುದಕ್ಕಾಗಿ ಈ ಸಂವಿಧಾನದ ಉಪಬಂಧಗಳಿಗೊಳಪಟ್ಟು ನಿಯಮಗಳನ್ನು ರಚಿಸಬಹುದು.
2 . (1)ನೆಯ ಖಂಡದ ಮೇರೆಗೆ ನಿಯಮಗಳನ್ನು ರಚಿಸುವವರೆಗೆ, ಈ ಸಂವಿಧಾನವು ಪ್ರಾರಂಭವಾಗುವುದಕ್ಕೆ ನಿಕಟಪೂರ್ವದಲ್ಲಿ ಡೊಮಿನಿಯನ್ ಆಫ್ ಇಂಡಿಯಾದ ವಿಧಾನಮಂಡಲದ ಸಂಬಂಧದಲ್ಲಿ ಯಾವ ಪ್ರಕ್ರಿಯಾ ನಿಯಮಗಳು ಮತ್ತು ಸ್ಥಾಯೀ ಆದೇಶಗಳು ಜಾರಿಯಲ್ಲಿದ್ದುವೋ ಅವೇ ನಿಯಮಗಳು ಮತ್ತು ಸ್ಥಾಯೀ ಆದೇಶಗಳು, ರಾಜ್ಯ ಸಭೆಯ ಸಭಾಪತಿಯು ಅಥವಾ ಸಂದರ್ಭಾನುಸಾರ, ಲೋಕಸಭೆಯ ಅಧ್ಯಕ್ಷನು ಅವುಗಳಲ್ಲಿ ಮಾಡಬಹುದಾದಂಥ ಮಾರ್ಪಾಡುಗಳಿಗೆ ಮತ್ತು ಅಳವಡಿಕೆಗಳಿಗೆ ಒಳಪಟ್ಟು, ಸಂಸತ್ತಿಗೆ ಸಂಬಂಧಪಟ್ಟಂತೆ ಪರಿಣಾಮಕಾರಿಯಾಗತಕ್ಕದ್ದು.
3 . ರಾಷ್ಟ್ರಪತಿಯು ರಾಜ್ಯಸಭೆಯ ಸಭಾಪತಿಯೊಡನೆ ಮತ್ತು ಲೋಕಸಭೆಯ ಅಧ್ಯಕ್ಷನೊಡನೆ ಸಮಾಲೋಚನೆ ಮಾಡಿದ ತರುವಾಯ, ಆ ಉಭಯ ಸದನಗಳ ಜಂಟಿ ಉಪವೇಶನಗಳಿಗೆ ಮತ್ತು ಅವುಗಳ ನಡುವಣ ಸಂಪರ್ಕದ ಪ್ರಕ್ರಿಯೆಗೆ ಸಂಬಂಧಪಟ್ಟ ನಿಯಮಗಳನ್ನು ರಚಿಸಬಹುದು.
4 . ಉಭಯ ಸದನಗಳ ಜಂಟಿ ಉಪವೇಶನದಲ್ಲಿ ಲೋಕಸಭೆಯ ಅಧ್ಯಕ್ಷನು ಅಥವಾ ಅವನ ಗೈರುಹಾಜರಿಯಲ್ಲಿ (3)ನೆಯ ಖಂಡದ ಮೇರೆಗೆ ರಚಿತವಾದ ಪ್ರಕ್ರಿಯಾ ನಿಯಮಗಳ ಮೂಲಕ ನಿರ್ಧರಿಸಬಹುದಾದಂಥ ವ್ಯಕ್ತಿಯು ಅಧ್ಯಕ್ಷತೆ ವಹಿಸತಕ್ಕದ್ದು.
119 . ಸಂಸತ್ತಿನಲ್ಲಿ ಹಣಕಾಸು ಕಾರ್ಯಕಲಾಪಗಳಿಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ಕಾನೂನಿನ ಮೂಲಕ ವಿನಿಯಮಗೊಳಿಸುವುದು.-
ಹಣಕಾಸು ಕಾರ್ಯಕಲಾಪಗಳನ್ನು ಸಕಾಲದಲ್ಲಿ ಸಮಾಪ್ತಗೊಳಿಸುವ ಉದ್ದೇಶಕ್ಕಾಗಿ, ಸಂಸತ್ತು ಯಾವುದೇ ಹಣಕಾಸು ಕಾರ್ಯಕಲಾಪಗಳ ಬಗೆಗಿನ ಅಥವಾ ಭಾರತದ ಸಂಚಿತ ನಿಧಿಯಿಂದ ಹಣವನ್ನು ವಿನಿಯೋಗಿಸುವುದರ ಬಗೆಗಿನ ಯಾವುದೇ ವಿಧೇಯಕಕ್ಕೆ ಸಂಬಂಧಪಟ್ಟಂತೆ ಸಂಸತ್ತಿನ ಪ್ರತಿಯೊಂದು ಸದನದ ಕಾರ್ಯವಿಧಾನವನ್ನು ಮತ್ತು ಸದನದ ಕಾರ್ಯಕಲಾಪ ನಡೆಸುವುದನ್ನು ಕಾನೂನಿನ ಮೂಲಕ ವಿನಿಯಮಗೊಳಿಸಬಹುದು ಮತ್ತು ಹಾಗೆ ಮಾಡಿದ ಯಾವುದೇ ಕಾನೂನಿನ ಯಾವುದೇ ಉಪಬಂಧವು, 118ನೆಯ ಅನುಚ್ಛೇದದ (1)ನೆಯ ಖಂಡದ ಮೇರೆಗೆ ಸಂಸತ್ತಿನ ಸದನದಿಂದ ರಚಿತವಾದ ಯಾವುದೇ ನಿಯಮಕ್ಕೆ ಅಥವಾ ಆ ಅನುಚ್ಛೇದದ (2)ನೆಯ ಖಂಡದ ಮೇರೆಗೆ ಸಂಸತ್ತಿಗೆ ಸಂಬಂಧಪಟ್ಟಂತೆ ಪರಿಣಾಮವುಳ್ಳ ಯಾವುದೇ ನಿಯಮಕ್ಕೆ ಅಥವಾ ಸ್ಥಾಯೀ ಆದೇಶಕ್ಕೆ ಆಸಂಗತವಾಗಿದ್ದರೆ ಮತ್ತು ಹಾಗೆ ಅಸಂಗತವಾಗಿರುವಷ್ಟರ ಮಟ್ಟಿಗೆ ಅದು ಪ್ರಭಾವವುಳ್ಳದ್ದಾಗಿರತಕ್ಕದ್ದು.
120 . ಸಂಸತ್ತಿನಲ್ಲಿ ಬಳಸಬೇಕಾದ ಭಾಷೆ.-
1 . ಭಾಗ XVIIರಲ್ಲಿ ಏನೇ ಇದ್ದಾಗ್ಯೂ, 348ನೆಯ ಅನುಚ್ಛೇದದ ಉಪಬಂಧಗಳಿಗೆ ಒಳಪಟ್ಟು, ಸಂಸತ್ತಿನಲ್ಲಿ ಕಾರ್ಯಕಲಾಪವು ಹಿಂದಿಯಲ್ಲಿ ಅಥವಾ ಇಂಗ್ಲೀಷ್‌ನಲ್ಲಿ ನಡೆಯತಕ್ಕದ್ದು:
ಯಾರೇ ಸದಸ್ಯನಿಗೆ ಹಿಂದಿಯಲ್ಲಿ ಅಥವಾ ಇಂಗ್ಲೀಷ್‌ನಲ್ಲಿ ತನ್ನ ವಿಚಾರಗಳನ್ನು ಸಮರ್ಪಕವಾಗಿ ವ್ಯಕ್ತಗೊಳಿಸಲು ಆಗದಿರುವ ಪಕ್ಷದಲ್ಲಿ ಆ ವ್ಯಕ್ತಿಗೆ ಅವನ ಮಾತೃಭಾಷೆಯಲ್ಲಿ ಮಾತನಾಡಲು ರಾಜ್ಯಸಭೆಯ ಸಭಾಪತಿಯು ಅಥವಾ ಸಂದರ್ಭಾನುಸಾರ ಲೋಕಸಭೆಯ ಅಧ್ಯಕ್ಷನು ಅಥವಾ ಸಭಾಪತಿಯಾಗಿ ಅಥವಾ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಯು ಅನುಮತಿ ಕೊಡಬಹುದು.
2 . ಕಾನೂನಿನ ಮೂಲಕ ಅನ್ಯಥಾ ಉಪಬಂಧಿಸಿದ ಹೊರತು, ಸಂವಿಧಾನವು ಪ್ರಾರಂಭವಾದಾಗಿನಿಂದ ಹದಿನೈದು ವರ್ಷಗಳ ಅವಧಿಯು ಮುಕ್ತಾಯವಾದ ತರುವಾಯ. ಈ ಅನುಚ್ಛೇದದಲ್ಲಿರುವ “ಅಥವಾ ಇಂಗ್ಲೀಷ್‌ನಲ್ಲಿ” ಎಂಬ ಪದಗಳನ್ನು ಅದರಿಂದ ಬಿಟ್ಟುಬಿಡಲಾಗಿದ್ದರೆ ಹೇಗೋ ಹಾಗೆ ಈ ಅನುಚ್ಛೇದವು ಪರಿಣಾಮವುಳ್ಳದ್ದಾಗಿರತಕ್ಕದ್ದು.
121 . ಸಂಸತ್ತಿನಲ್ಲಿ ಚರ್ಚೆಯ ಮೇಲೆ ನಿರ್ಬಂಧ.-
ಸರ್ವೋಚ್ಚ ನ್ಯಾಯಾಲಯದ ಅಥವಾ ಉಚ್ಚ ನ್ಯಾಯಾಲಯದ ಯಾರೇ ನ್ಯಾಯಾಧೀಶನನ್ನು ತೆಗೆದುಹಾಕಬೇಕಾಗಿ ಪ್ರಾರ್ಥಿಸುವ ಕೋರಿಕೆಯನ್ನು ಇದರಲ್ಲಿ ಇನ್ನು ಮುಂದೆ ಉಪಬಂಧಿಸಲಾದಂತೆ ರಾಷ್ಟ್ರಪತಿಗೆ ಸಲ್ಲಿಸುವ ಸೂಚನೆಯ ಮೇಲಲ್ಲದೆ, ಅಂಥ ನ್ಯಾಯಾಧೀಶನ ಕರ್ತವ್ಯ ನಿರ್ವಹಣೆಯಲ್ಲಿ ಅವನ ವರ್ತನೆಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಯಾವ ಚರ್ಚೆಯೂ ನಡೆಯತಕ್ಕದ್ದಲ್ಲ.
122 . ನ್ಯಾಯಾಲಯಗಳು ಸಂಸತ್ತಿನ ವ್ಯವಹರಣೆಗಳ ಬಗ್ಗೆ ವಿಚಾರಣೆ ನಡೆಸದಿರುವುದು.-
1 . ಸಂಸತ್ತಿನಲ್ಲಿನ ಯಾವುದೇ ವ್ಯವಹರಣೆಗಳ ಸಿಂಧುತ್ವವನ್ನು, ಪ್ರಕ್ರಿಯೆಯಲ್ಲಿನ ಆಪಾದಿಸಲಾದ ಯಾವುದೇ ಕ್ರಮದೋಷದ ಆಧಾರದ ಮೇಲೆ ಪ್ರಶ್ನಿಸತಕ್ಕದ್ದಲ್ಲ.
2 . ಈ ಸಂವಿಧಾನದ ಮೂಲಕ ಅಥವಾ ಅದರ ಮೇರೆಗೆ ಸಂಸತ್ತಿನ ಪ್ರಕ್ರಿಯೆಯನ್ನು ಅಥವಾ ಕಾರ್ಯಕಲಾಪ ನಡೆಸುವುದನ್ನು ವಿನಿಯಮಿಸುವ ಅಥವಾ ಸಂಸತ್ತಿನಲ್ಲಿ ಸುವ್ಯವಸ್ಥೆಯನ್ನು ಕಾಪಾಡುವ ಅಧಿಕಾರಗಳು ಸಂಸತ್ತಿನ ಯಾವ ಅಧಿಕಾರಿಯಲ್ಲಿ ಅಥವಾ ಸದಸ್ಯನಲ್ಲಿ ನಿಹಿತವಾಗಿರುವವೋ, ಆ ಯಾರೇ ಅಧಿಕಾರಿಯು ಅಥವಾ ಸದಸ್ಯನು, ಆ ಅಧಿಕಾರಗಳನ್ನು ತಾನು ಚಲಾಯಿಸುವುದಕ್ಕೆ ಸಂಬಂಧಿಸಿದಂತೆ, ಯಾವುದೇ ನ್ಯಾಯಾಲಯದ ಅಧಿಕಾರವ್ಯಾಪ್ತಿಗೆ ಒಳಪಡತಕ್ಕದ್ದಲ್ಲ.
ಅದ್ಯಾಯ Ⅱ ಸಂಸತ್ತು . article 79 ರಿಂದ 98ರಲ್ಲಿ ಬರುವ ಸಂಸತ್ತಿನ ರಚನೆ ಮತ್ತು ಪಾರ್ಲಿಮೆಂಟಿನ ಅಧಿಕಾರಿಗಳು
ಭಾರತೀಯ ಸಂಸತ್ತಿನ ಕಾರ್ಯಕಲಾಪ, ಅನರ್ಹತೆಗಳು ಮತ್ತು ವಿಧಾಯಿ ಪ್ರಕ್ರಿಯೆ (Article 99–111)