ಭಾರತೀಯ ಸಂಸತ್ತಿನ ಕಾರ್ಯಕಲಾಪ, ಅನರ್ಹತೆಗಳು ಮತ್ತು ವಿಧಾಯಿ ಪ್ರಕ್ರಿಯೆ (Article 99–111) ಸಂಪೂರ್ಣ ಮಾರ್ಗದರ್ಶಿ . Complete Guide to Indian Parliament Procedures & Disqualifications (Articles 99–111 Explained).

ಕಾರ್ಯಕಲಾಪ ನಿರ್ವಹಣೆ Conduct of business

( ಅದ್ಯಾಯ Ⅱ ಸಂಸತ್ತು . article 79 ರಿಂದ 98ರಲ್ಲಿ ಬರುವ ಸಂಸತ್ತಿನ ರಚನೆ ಮತ್ತು ಪಾರ್ಲಿಮೆಂಟಿನ ಅಧಿಕಾರಿಗಳು. ಈ ಹಿಂದಿನ ಪೋಸ್ಟ್ ಅಲ್ಲಿ ತಿಳಿಸಲಾಗಿದೆ . )

99 . ಸದಸ್ಯರಿಂದ ಪ್ರಮಾಣವಚನ ಅಥವಾ ಪ್ರತಿಜ್ಞಾ ವಚನ.

ಸಂಸತ್ತಿನ ಉಭಯ ಸದನಗಳ ಪ್ರತಿಯೊಬ್ಬ ಸದಸ್ಯನು ತನ್ನ ಸ್ಥಾನವನ್ನು ವಹಿಸಿಕೊಳ್ಳುವುದಕ್ಕೆ ಮುನ್ನ, ರಾಷ್ಟ್ರಪತಿಯ ಸಮಕ್ಷಮ ಅಥವಾ ರಾಷ್ಟ್ರಪತಿಯಿಂದ ಆ ಬಗ್ಗೆ ನೇಮಕಗೊಂಡ ವ್ಯಕ್ತಿಯ ಸಮಕ್ಷಮ ಆ ಉದ್ದೇಶಕ್ಕಾಗಿ ಮೂರನೆಯ ಅನುಸೂಚಿಯಲ್ಲಿ ಕೊಡಲಾಗಿರುವ ನಮೂನೆಗೆ ಅನುಸಾರವಾಗಿ ಪ್ರಮಾಣ ಅಥವಾ ಪ್ರತಿಜ್ಞೆ ಮಾಡತಕ್ಕದ್ದು ಮತ್ತು ಅದಕ್ಕೆ ತನ್ನ ರುಜು ಹಾಕತಕ್ಕದ್ದು.

100 . ಸದನಗಳಲ್ಲಿ ಮತದಾನ, ಖಾಲಿಸ್ಥಾನಗಳು ಏನೇ ಇದ್ದಾಗ್ಯೂ ಕಾರ್ಯನಿರ್ವಹಿಸಲು ಸದನಗಳ ಅಧಿಕಾರ ಮತ್ತು ಕೋರಂ .

1 . ಈ ಸಂವಿಧಾನದಲ್ಲಿ ಅನ್ಯಥಾ ಉಪಬಂಧಿಸಿರುವುದನ್ನು ಹೊರತುಪಡಿಸಿ, ಪ್ರತಿಯೊಂದು ಸದನದ ಯಾವುದೇ ಉಪವೇಶನದಲ್ಲಿ ಅಥವಾ ಉಭಯ ಸದನಗಳ ಸಂಯುಕ್ತ ಉಪವೇಶನದಲ್ಲಿ, ಅಧ್ಯಕ್ಷನನ್ನು ಅಥವಾ ಸಭಾಪತಿಯಾಗಿ ಅಥವಾ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುವ ವ್ಯಕ್ತಿಯನ್ನು ಹೊರತುಪಡಿಸಿ, ಹಾಜರಿರುವ ಹಾಗೂ ಮತ ನೀಡುವ ಸದಸ್ಯರ ಬಹುಮತದ ಮೂಲಕ ಎಲ್ಲ ಪ್ರಶ್ನೆಗಳನ್ನು ನಿರ್ಧರಿಸತಕ್ಕದ್ದು.
ಸಭಾಪತಿಯು ಅಥವಾ ಅಧ್ಯಕ್ಷನು ಅಥವಾ ಸಭಾಪತಿಯಾಗಿ ಅಥವಾ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುವ ವ್ಯಕ್ತಿಯು ಪ್ರಥಮತಃ ಮತ ನೀಡತಕ್ಕದ್ದಲ್ಲ, ಆದರೆ ಮತಗಳು ಸಮನಾಗಿರುವ ಸಂದರ್ಭದಲ್ಲಿ ನಿರ್ಣಾಯಕ ಮತ ನೀಡಲು ಅವನಿಗೆ ಅಧಿಕಾರವಿರತಕ್ಕದ್ದು ಮತ್ತು ಅದನ್ನು ಅವನು ಚಲಾಯಿಸತಕ್ಕದ್ದು,
2 . ಸಂಸತ್ತಿನ ಯಾವುದೇ ಒಂದು ಸದನದಲ್ಲಿ ಯಾವುದೇ ಸದಸ್ಯ ಸ್ಥಾನವು ಖಾಲಿಯಾಗಿದ್ದಾಗ್ಯೂ, ಆ ಸದನವು ಕಾರ್ಯನಿರ್ವಹಿಸಲು ಅಧಿಕಾರ ಹೊಂದಿರತಕ್ಕದ್ದು ಮತ್ತು ಸಂಸತ್ತಿನಲ್ಲಿ ಯಾವುದೇ ಕಾರ್ಯಕಲಾಪಗಳು ನಡೆಯುತ್ತಿರುವಾಗ, ಅಲ್ಲಿ ಕುಳಿತಿರಲು, ಮತ ನೀಡಲು ಅಥವಾ ಅನ್ಯಥಾ ಆ ವ್ಯವಹರಣೆಗಳಲ್ಲಿ ಭಾಗವಹಿಸಲು ಹಕ್ಕಿಲ್ಲದ ಯಾರೇ ವ್ಯಕ್ತಿಯು ಹಾಗೆ ಮಾಡಿರುವುದು ಆ ತರುವಾಯ ಕಂಡುಬಂದಾಗ್ಯೂ, ಆ ವ್ಯವಹರಣೆಗಳು ಸಿಂಧುವಾಗತಕ್ಕದ್ದು.
3 . ಸಂಸತ್ತು ಕಾನೂನಿನ ಮೂಲಕ ಅನ್ಯಥಾ ಉಪಬಂಧಿಸುವವರೆಗೆ, ಸಂಸತ್ತಿನ ಯಾವುದೇ ಸದನದ ಸಭೆಯು ನಡೆಯಲು ಆ ಸದನದ ಸದಸ್ಯರ ಒಟ್ಟು ಸಂಖ್ಯೆಯ ಹತ್ತನೆಯ ಒಂದು ಭಾಗವು ಆ ಸದನದ ಸಭೆಗೆ ಅಗತ್ಯವಾದ ಕೋರಂ ಆಗತಕ್ಕದ್ದು.
4 . ಯಾವುದೇ ಸದನದ ಸಭೆಯು ನಡೆಯುತ್ತಿರುವ ಯಾವುದೇ ಕಾಲದಲ್ಲಿ ಕೋರಂ ಇಲ್ಲದಿದ್ದರೆ, ಕೋರಂ ಆಗುವವರೆಗೆ ಸದನವನ್ನು ಮುಂದೂಡುವುದು ಅಥವಾ ಸಭೆಯನ್ನು ಸ್ಥಗಿತಗೊಳಿಸುವುದು ಸಭಾಪತಿಯ ಅಥವಾ ಅಧ್ಯಕ್ಷನ ಅಥವಾ ಸಭಾಪತಿಯಾಗಿ ಅಥವಾ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಯ ಕರ್ತವ್ಯವಾಗಿರತಕ್ಕದ್ದು.]

ಸದಸ್ಯರ ಅನರ್ಹತೆಗಳು Disqualifications of members

101 . ಸ್ಥಾನಗಳನ್ನು ತೆರವು ಮಾಡುವುದು.-

1 . ಯಾರೇ ವ್ಯಕ್ತಿಯು ಸಂಸತ್ತಿನ ಉಭಯ ಸದನಗಳ ಸದಸ್ಯನಾಗಿರತಕ್ಕದ್ದಲ್ಲ ಮತ್ತು ಉಭಯ ಸದನಗಳ ಸದಸ್ಯನಾಗಿ ಆಯ್ಕೆಯಾಗಿರುವ ಯಾರೇ ವ್ಯಕ್ತಿಯು, ಅವುಗಳಲ್ಲಿ ಯಾವುದಾದರೂ ಒಂದು ಸದನದಲ್ಲಿನ ತನ್ನ ಸ್ಥಾನವನ್ನು ತೆರವು ಮಾಡುವಂತೆ ಸಂಸತ್ತು ಕಾನೂನಿನ ಮೂಲಕ ಉಪಬಂಧವನ್ನು ಮಾಡತಕ್ಕದ್ದು.
2 . ಯಾರೇ ವ್ಯಕ್ತಿಯು ಸಂಸತ್ತು ಮತ್ತು ಒಂದು ರಾಜ್ಯದ ವಿಧಾನಮಂಡಲದ ಯಾವುದೇ ಸದನ ಇವೆರಡರ ಸದಸ್ಯನಾಗಿರತಕ್ಕದ್ದಲ್ಲ ಮತ್ತು ಯಾರೇ ವ್ಯಕ್ತಿಯು ಸಂಸತ್ತು ಮತ್ತು [ಒಂದು ರಾಜ್ಯದ ವಿಧಾನಮಂಡಲದ ಯಾವುದೇ ಸದನ – ಈ ಎರಡರ ಸದಸ್ಯನಾಗಿ ಆಯ್ಕೆಯಾದಲ್ಲಿ, ಆಗ, ರಾಷ್ಟ್ರಪತಿಯು ರಚಿಸಿದ ನಿಯಮಗಳಲಿ] ನಿರ್ದಿಷ್ಟಪಡಿಸಬಹುದಾದಂಥ ಅವಧಿಯು ಮುಕ್ತಾಯವಾಗುವುದಕ್ಕೆ ಮುಂಚಿತವಾಗಿ ಅವನು ಆ ರಾಜ್ಯದ ವಿಧಾನಮಂಡಲದಲ್ಲಿನ ತನ್ನ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರದಿದ್ದರೆ, ಆ ಅವಧಿಯು ಮುಕ್ತಾಯವಾದ ಮೇಲೆ ಸಂಸತ್ತಿನಲ್ಲಿನ ಅವನ ಸ್ಥಾನವು ಖಾಲಿಯಾಗತಕ್ಕದ್ದು.
(3) ಸಂಸತ್ತಿನ ಯಾವುದೇ ಸದನದ ಸದಸ್ಯನು.

(a) [102ನೆಯ ಅನುಚ್ಛೇದದ (1)ನೆಯ ಖಂಡದಲ್ಲಿ ಅಥವಾ (2)ನೆಯ ಖಂಡದಲ್ಲಿ ನಮೂದಿಸಿರುವ ಯಾವುದೇ ಅನರ್ಹತೆಗಳಿಗೆ ಒಳಗಾದರೆ; ಅಥವಾ

(b) ತಾನು ಸಹಿ ಮಾಡಿದ ಪತ್ರವನ್ನು ಸಭಾಪತಿಗೆ ಅಥವಾ ಸಂದರ್ಭಾನುಸಾರ ಅಧ್ಯಕ್ಷನಿಗೆ ಬರೆದು ಯಾವುದೇ ಕಾಲದಲ್ಲಿ ತನ್ನ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಮತ್ತು ಅವನ ರಾಜೀನಾಮೆಯನ್ನು ಸಭಾಪತಿಯು ಅಥವಾ ಸಂದರ್ಭಾನುಸಾರ ಅಧ್ಯಕ್ಷನು ಅಂಗೀಕರಿಸಿದರೆ , ‘ಆ ತರುವಾಯ ಅವನ ಸ್ಥಾನವು ಖಾಲಿಯಾಗತಕ್ಕದ್ದು:

[(b) ಉಪಖಂಡದಲ್ಲಿ ಉಲ್ಲೇಖಿತವಾಗಿರುವ ಯಾವುದೇ ರಾಜೀನಾಮೆಯ ಸಂದರ್ಭದಲ್ಲಿ, ಸಭಾಪತಿಯು ಅಥವಾ ಸಂದರ್ಭಾನುಸಾರ ಅಧ್ಯಕ್ಷನು ತನಗೆ ದೊರೆತಿರುವ ಮಾಹಿತಿಯ ಮೇಲೆ ಅಥವಾ ಅನ್ಯಥಾ ಮತ್ತು ತನಗೆ ಸೂಕ್ತವೆಂದು ತೋರುವಂಥ ವಿಚಾರಣೆಯನ್ನು ನಡೆಸಿದ ಬಳಿಕ ಆ ರಾಜೀನಾಮೆಯು ಸ್ವಯಿಚ್ಛೆಯಿಂದ ಕೊಟ್ಟಿರುವಂಥದ್ದಲ್ಲ ಎಂದು ಅಥವಾ ನೈಜವಾದುದಲ್ಲ ಎಂದು ಮನಗಂಡರೆ, ಅವನು ಅಂಥ ರಾಜೀನಾಮೆಯನ್ನು ಅಂಗೀಕರಿಸತಕ್ಕದ್ದಲ್ಲ.]
4 . ಸಂಸತ್ತಿನ ಯಾವುದೇ ಸದನದ ಸದಸ್ಯನು ಆ ಸದನದ ಅನುಮತಿಯಿಲ್ಲದೆ ಅರವತ್ತು ದಿನಗಳವರೆಗೆ ಅದರ ಎಲ್ಲ ಸಭೆಗಳಿಗೂ ಗೈರುಹಾಜರಾದರೆ, ಅವನ ಸ್ಥಾನವು ಖಾಲಿಯಾಗಿದೆ ಎಂದು ಆ ಸದನವು ಘೋಷಿಸಬಹುದು: ಸದರಿ ಅರವತ್ತು ದಿನಗಳ ಅವಧಿಯನ್ನು ಲೆಕ್ಕ ಹಾಕುವಲ್ಲಿ ಆ ಸದನದ ಅಧಿವೇಶನವನ್ನು ಮುಕ್ತಾಯಗೊಳಿಸಲಾದ ಅಥವಾ ನಿರಂತರ ನಾಲ್ಕು ದಿನಗಳಿಗಿಂತ ಹೆಚ್ಚು ಕಾಲ ಮುಂದೂಡಲಾದ ಯಾವುದೇ ಅವಧಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳತಕ್ಕದ್ದಲ್ಲ.

102 . ಸದಸ್ಯತ್ವಕ್ಕೆ ಅನರ್ಹತೆಗಳು.

(1) ಯಾರೇ ವ್ಯಕ್ತಿಯು,

(a) ಭಾರತ ಸರ್ಕಾರದ ಅಥವಾ ಯಾವುದೇ ರಾಜ್ಯ ಸರ್ಕಾರದ ಅಧೀನದಲ್ಲಿರುವ ಯಾವ ಪದವನ್ನು ಧಾರಣ ಮಾಡಿದವನು ಅನರ್ಹನಾಗುವುದಿಲ್ಲವೆಂದು ಸಂಸತ್ತು ಕಾನೂನಿನ ಮೂಲಕ ಘೋಷಿಸಿದೆಯೋ ಅಂಥ ಪದವನ್ನು ಹೊರತುಪಡಿಸಿ, ಇತರ ಯಾವುದೇ ಲಾಭದಾಯಕ ಪದವನ್ನು ಅವನು ಧಾರಣ ಮಾಡಿದ್ದರೆ;]

(b) ಅಸ್ವಸ್ಥಚಿತ್ತನಾಗಿದ್ದರೆ ಮತ್ತು ಸಕ್ಷಮ ನ್ಯಾಯಾಲಯವು ಹಾಗೆಂದು ಘೋಷಿಸಿದ್ದರೆ;

(c) ಅವಿಮುಕ್ತ ದಿವಾಳಿಯಾಗಿದ್ದರೆ:

(d) ಭಾರತದ ನಾಗರಿಕನಾಗಿಲ್ಲದಿದ್ದರೆ ಅಥವಾ ಯಾವುದೇ ವಿದೇಶಿ ರಾಜ್ಯದ ನಾಗರಿಕತ್ವವನ್ನು ಸ್ವಇಚ್ಛೆಯಿಂದ ಆರ್ಜಿಸಿದ್ದರೆ ಅಥವಾ ಒಂದು ವಿದೇಶಿ ರಾಜ್ಯಕ್ಕೆ ನಿಷ್ಠೆ ಅಥವಾ ಅನುಸಕ್ತಿ ಹೊಂದಿರುವುದನ್ನು ಒಪ್ಪಿಕೊಂಡಿದ್ದರೆ;

(e) ಸಂಸತ್ತು ಮಾಡಿದ ಯಾವುದೇ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ಅವನನ್ನು ಹಾಗೆ ಅನರ್ಹಗೊಳಿಸಿದ್ದರೆ ಅವನು ಸಂಸತ್ತಿನ ಯಾವುದೇ ಸದನದ ಸದಸ್ಯನಾಗಿ ಆಯ್ಕೆಯಾಗಲು ಮತ್ತು ಅದರ ಸದಸ್ಯನಾಗಿರಲು ಅನರ್ಹನಾಗಿರತಕ್ಕದ್ದು.

[ವಿವರಣೆ.- ಈ ಖಂಡದ ಉದ್ದೇಶಗಳಿಗಾಗಿ] ಯಾರೇ ವ್ಯಕ್ತಿಯು ಒಕ್ಕೂಟದ ಅಥವಾ ಯಾವುದೇ ರಾಜ್ಯದ ಮಂತ್ರಿಯಾಗಿ ಇರುವ ಕಾರಣ ಮಾತ್ರದಿಂದಲೇ ಅವನು ಭಾರತ ಸರ್ಕಾರದ ಅಥವಾ ಅಂಥ ರಾಜ್ಯ ಸರ್ಕಾರದ ಅಧೀನದಲ್ಲಿ ಒಂದು ಲಾಭದಾಯಕ ಪದವನ್ನು ಧಾರಣ ಮಾಡಿರುವುದಾಗಿ ಭಾವಿಸತಕ್ಕದ್ದಲ್ಲ.
2 . ಯಾರೇ ವ್ಯಕ್ತಿಯನ್ನು ಹತ್ತನೆಯ ಅನುಸೂಚಿಯ ಮೇರೆಗೆ ಹಾಗೆ ಅನರ್ಹಗೊಳಿಸಲಾಗಿದ್ದರೆ ಅವನು ಸಂಸತ್ತಿನ ಯಾವುದೇ ಸದನದ ಸದಸ್ಯನಾಗಿರಲು ಅನರ್ಹನಾಗತಕ್ಕದ್ದು.

103 . ಸದಸ್ಯರ ಅನರ್ಹತೆಗಳನ್ನು ಕುರಿತ ಪ್ರಶ್ನೆಗಳ ತೀರ್ಮಾನ.-

1 . ಸಂಸತ್ತಿನ ಯಾವುದೇ ಸದನದ ಸದಸ್ಯನು 102ನೇ ಅನುಚ್ಛೇದದ (1)ನೇ ಖಂಡದಲ್ಲಿ ನಮೂದಾಗಿರುವ ಯಾವುದೇ ಅನರ್ಹತೆಗಳಿಗೆ ಒಳಪಟ್ಟಿದ್ದಾನೆಯೇ ಹೇಗೆ ಎಂಬ ಬಗ್ಗೆ ಯಾವುದೇ ಪ್ರಶ್ನೆಯು ಉದ್ಭವಿಸಿದರೆ, ಆ ಪ್ರಶ್ನೆಯನ್ನು ರಾಷ್ಟ್ರಪತಿಯ ತೀರ್ಮಾನಕ್ಕೆ ಒಪ್ಪಿಸತಕ್ಕದ್ದು ಮತ್ತು ಆ ಬಗ್ಗೆ ಅವನ ತೀರ್ಮಾನವೇ ಅಂತಿಮವಾಗಿರತಕ್ಕದ್ದು.
2 . ಅಂಥ ಯಾವುದೇ ಪ್ರಶ್ನೆಯ ಮೇಲೆ ಯಾವುದೇ ತೀರ್ಮಾನವನ್ನು ಕೊಡುವುದಕ್ಕೆ ಮುಂಚಿತವಾಗಿ, ರಾಷ್ಟ್ರಪತಿಯು ಚುನಾವಣಾ ಆಯೋಗದ ಅಭಿಪ್ರಾಯವನ್ನು ಪಡೆಯತಕ್ಕದ್ದು ಮತ್ತು ಆ ಅಭಿಪ್ರಾಯಕ್ಕನುಸಾರ ಕಾರ್ಯಪ್ರವೃತ್ತನಾಗತಕ್ಕದ್ದು.

104 . 99ನೆಯ ಅನುಚ್ಛೇದದ ಮೇರೆಗೆ ಪ್ರಮಾಣ ಅಥವಾ ಪ್ರತಿಜ್ಞೆ ಮಾಡುವುದಕ್ಕೆ ಮುಂಚೆ ಅಥವಾ ಅರ್ಹನಾಗಿಲ್ಲದಿರುವಾಗ ಅಥವಾ ಅನರ್ಹಗೊಳಿಸಿರುವಾಗ ಸದಸ್ಯನಾಗಿ ಕುಳಿತರೆ ಮತ್ತು ಮತ ಕೊಟ್ಟರೆ ದಂಡ.

ಯಾರೇ ವ್ಯಕ್ತಿಯು ಸಂಸತ್ತಿನ ಯಾವುದೇ ಸದನದ ಸದಸ್ಯನಾಗಿ 99ನೆಯ ಅನುಚ್ಛೇದದ ಅಗತ್ಯತೆಗಳನ್ನು ಪಾಲಿಸುವುದಕ್ಕೆ ಮುಂಚೆ ಅಥವಾ ಅದರ ಸದಸ್ಯತ್ವಕ್ಕೆ ತಾನು ಅರ್ಹನಾಗಿಲ್ಲವೆಂದು ತಿಳಿದೂ ಅಥವಾ ಸದಸ್ಯತ್ವಕ್ಕೆ ತಾನು ಅನರ್ಹನಾಗಿರುವೆನೆಂದು ತಿಳಿದೂ ಅಥವಾ ಸಂಸತ್ತು ಮಾಡಿದ ಯಾವುದೇ ಕಾನೂನಿನ ಉಪಬಂಧಗಳು ತಾನು ಸದನದಲ್ಲಿ ಕುಳಿತುಕೊಳ್ಳುವುದನ್ನು ಅಥವಾ ಮತ ಕೊಡುವುದನ್ನು ನಿಷೇಧಿಸಿರುವುದು ತನಗೆ ತಿಳಿದಿದ್ದೂ, ಅವನು ಸದನದಲ್ಲಿ ಕುಳಿತರೆ ಅಥವಾ ಮತ ಕೊಟ್ಟರೆ, ಅವನು ಹಾಗೆ ಕುಳಿತ ಅಥವಾ ಮತ ಕೊಟ್ಟ ಪ್ರತಿ ದಿನಕ್ಕೂ ಐನೂರು ರೂಪಾಯಿಗಳ ದಂಡವನ್ನು ಕೊಡಲು ಬದ್ಧನಾಗಿರತಕ್ಕದ್ದು ಮತ್ತು ಆ ದಂಡವನ್ನು ಒಕ್ಕೂಟಕ್ಕೆ ಬರಬೇಕಾದ ಸಾಲದಂತೆ ವಸೂಲು ಮಾಡತಕ್ಕದ್ದು.

ಸಂಸತ್ತಿನ ಮತ್ತು ಅದರ ಸದಸ್ಯರ ಅಧಿಕಾರಗಳು, ವಿಶೇಷಾಧಿಕಾರಗಳು ಮತ್ತು ಉನ್ಮುಕ್ತಿಗಳು

105 . ಸಂಸತ್ತಿನ ಸದನಗಳ ಮತ್ತು ಅವುಗಳ ಸದಸ್ಯರ ಮತ್ತು ಸಮಿತಿಗಳ ಅಧಿಕಾರಗಳು, ವಿಶೇಷಾಧಿಕಾರಗಳು, ಇತ್ಯಾದಿ.-

1 . ಈ ಸಂವಿಧಾನದ ಉಪಬಂಧಗಳಿಗೆ ಮತ್ತು ಸಂಸತ್ತಿನ ಪ್ರಕ್ರಿಯೆಯನ್ನು ವಿನಿಯಮಗೊಳಿಸುವ ನಿಯಮಗಳಿಗೆ ಮತ್ತು ಸ್ಥಾಯಿ ಆದೇಶಗಳಿಗೆ ಒಳಪಟ್ಟು, ಸಂಸತ್ತಿನಲ್ಲಿ ವಾಕ್ ಸ್ವಾತಂತ್ರ್ಯವಿರತಕ್ಕದ್ದು.
2 . ಸಂಸತ್ತಿನ ಯಾರೇ ಸದಸ್ಯನು ಸಂಸತ್ತಿನಲ್ಲಿ ಅಥವಾ ಅದರ ಯಾವುದೇ ಸಮಿತಿಯಲ್ಲಿ ತಾನು ಹೇಳಿದ ಯಾವುದೇ ವಿಚಾರಕ್ಕೆ ಅಥವಾ ತಾನು ಕೊಟ್ಟ ಯಾವುದೇ ಮತಕ್ಕೆ ಸಂಬಂಧಿಸಿದಂತೆ ಯಾವುದೇ ನ್ಯಾಯಾಲಯದಲ್ಲಿ ಯಾವುದೇ ವ್ಯವಹರಣೆಗಳಿಗೆ ಗುರಿಯಾಗತಕ್ಕದ್ದಲ್ಲ ಮತ್ತು ಯಾರೇ ವ್ಯಕ್ತಿಯು ಸಂಸತ್ತಿನ ಯಾವುದೇ ಸದನದ ಅಧಿಕಾರದ ಮೂಲಕ ಅಥವಾ ಅದರ ಮೇರೆಗೆ ಪ್ರಕಟವಾದ ಯಾವುದೇ ವರದಿಗೆ, ಪತ್ರಕ್ಕೆ, ಮತಗಳಿಗೆ ಅಥವಾ ನಡೆವಳಿಗಳಿಗೆ ಸಂಬಂಧಿಸಿದಂತೆ ಹಾಗೆ ಗುರಿಯಾಗತಕ್ಕದ್ದಲ್ಲ.
3 . ಇತರ ವಿಚಾರಗಳಿಗೆ ಸಂಬಂಧಪಟ್ಟಂತೆ, ಸಂಸತ್ತಿನ ಪ್ರತಿಯೊಂದು ಸದನದ ಮತ್ತು ಆ ಪ್ರತಿಯೊಂದು ಸದನದ ಸದಸ್ಯರ ಮತ್ತು ಸಮಿತಿಗಳ ಅಧಿಕಾರಗಳು, ವಿಶೇಷಾಧಿಕಾರಗಳು ಮತ್ತು ಉನ್ಮುಕ್ತಿಗಳು ಸಂಸತ್ತು ಕಾನೂನಿನ ಮೂಲಕ ಕಾಲಕಾಲಕ್ಕೆ ಪರಿಭಾಷಿಸಬಹುದಾದಂತೆ ಇರತಕ್ಕದ್ದು ಮತ್ತು ಹಾಗೆ ಪರಿಭಾಷಿಸುವವರೆಗೆ [ಸಂವಿಧಾನ (ನಲವತ್ತನಾಲ್ಕನೇ ತಿದ್ದುಪಡಿ) ಅಧಿನಿಯಮ, 1978ರ 15ನೇ ಪ್ರಕರಣವು ಜಾರಿಗೆ ಬರುವುದಕ್ಕೆ ನಿಕಟಪೂರ್ವದಲ್ಲಿ ಆ ಸದನಕ್ಕೆ. ಅದರ ಸದಸ್ಯರಿಗೆ ಮತ್ತು ಸಮಿತಿಗಳಿಗೆ ಇದ್ದಂತಹ ಅವೇ ಅಧಿಕಾರಗಳು, ವಿಶೇಷಾಧಿಕಾರಗಳು ಮತ್ತು ಉನ್ಮುಕ್ತಿಗಳು ಇರತಕ್ಕದ್ದು.
4 . (1), (2) ಮತ್ತು (3)ನೆಯ ಖಂಡಗಳ ಉಪಬಂಧಗಳು, ಸಂಸತ್ತಿನ ಸದಸ್ಯರ ಸಂಬಂಧದಲ್ಲಿ ಅನ್ವಯವಾಗುವಂತೆಯೇ ಈ ಸಂವಿಧಾನದ ಕಾರಣದಿಂದಾಗಿ ಸಂಸತ್ತಿನ ಸದನದಲ್ಲಿ ಅಥವಾ ಅದರ ಯಾವುದೇ ಸಮಿತಿಯಲ್ಲಿ ಮಾತನಾಡಲು ಮತ್ತು ಅದರ ವ್ಯವಹರಣೆಗಳಲ್ಲಿ ಅನ್ಯಥಾ ಭಾಗವಹಿಸಲು ಹಕ್ಕು ಹೊಂದಿರುವ ವ್ಯಕ್ತಿಗಳ ಸಂಬಂಧದಲ್ಲಿಯೂ ಅನ್ವಯವಾಗತಕ್ಕದ್ದು.

106 . ಸದಸ್ಯರ ಸಂಬಳಗಳು ಮತ್ತು ಭತ್ಯೆಗಳು.

ಸಂಸತ್ತಿನ ಯಾವುದೇ ಸದನದ ಸದಸ್ಯರು, ಸಂಸತ್ತು ಕಾನೂನಿನ ಮೂಲಕ ಕಾಲಕಾಲಕ್ಕೆ ನಿರ್ಧರಿಸಬಹುದಾದಂಥ ಸಂಬಳಗಳನ್ನು ಮತ್ತು ಭತ್ಯೆಗಳನ್ನು ಪಡೆಯಲು ಹಕ್ಕುಳ್ಳವರಾಗಿರತಕ್ಕದ್ದು ಮತ್ತು ಆ ಬಗ್ಗೆ ಉಪಬಂಧವನ್ನು ಮಾಡುವವರೆಗೆ, ಈ ಸಂವಿಧಾನದ ಪ್ರಾರಂಭಕ್ಕೆ ನಿಕಟಪೂರ್ವದಲ್ಲಿ ಡೊಮಿನಿಯನ್ ಆಫ್ ಇಂಡಿಯಾದ ಸಂವಿಧಾನ ಸಭೆಯ ಸದಸ್ಯರ ಸಂಬಂಧದಲ್ಲಿ ಅನ್ವಯಿಸುತ್ತಿದ್ದಂಥ ದರಗಳಲ್ಲಿ ಮತ್ತು ಷರತ್ತುಗಳ ಮೇಲೆ ಭತ್ಯೆಗಳನ್ನು ಪಡೆಯಲು ಅವರು ಹಕ್ಕುಳ್ಳವರಾಗಿರತಕ್ಕದ್ದು.
ಭಾರತೀಯ ಸಂಸತ್ತಿನ ಕಾರ್ಯಕಲಾಪ, ಅನರ್ಹತೆಗಳು ಮತ್ತು ವಿಧಾಯಿ ಪ್ರಕ್ರಿಯೆ (Article 99–111) ಸಂಪೂರ್ಣ ಮಾರ್ಗದರ್ಶಿ . Complete Guide to Indian Parliament Procedures & Disqualifications (Articles 99–111 Explained).
ಭಾರತೀಯ ಸಂಸತ್ತಿನ ಕಾರ್ಯಕಲಾಪ, ಅನರ್ಹತೆಗಳು ಮತ್ತು ವಿಧಾಯಿ ಪ್ರಕ್ರಿಯೆ (Article 99–111). Complete Guide to Indian Parliament Procedures & Disqualifications (Articles 99–111 Explained).

ವಿಧಾಯೀ ಪ್ರಕ್ರಿಯೆ Legislative Procedure

107 . ವಿಧೇಯಕಗಳ ಮಂಡನೆಗೆ ಮತ್ತು ಅಂಗೀಕಾರಕ್ಕೆ ಸಂಬಂಧಿಸಿದ ಉಪಬಂಧಗಳು,-

1 . ಧನವಿಧೇಯಕಗಳಿಗೆ ಮತ್ತು ಇತರ ಹಣಕಾಸು ವಿಧೇಯಕಗಳಿಗೆ ಸಂಬಂಧಪಟ್ಟಂತೆ 109ನೆಯ ಮತ್ತು 117ನೆಯ ಅನುಚ್ಛೇದಗಳ ಉಪಬಂಧಗಳಿಗೆ ಒಳಪಟ್ಟು, ಯಾವುದೇ ವಿಧೇಯಕವನ್ನು ಸಂಸತ್ತಿನ ಯಾವುದೇ ಸದನದಲ್ಲಿ ಪ್ರಥಮತಃ ಮಂಡಿಸಬಹುದು.
2 . 108ನೆಯ ಮತ್ತು 109ನೆಯ ಅನುಚ್ಛೇದಗಳ ಉಪಬಂಧಗಳಿಗೊಳಪಟ್ಟು, ಉಭಯ ಸದನಗಳು ಒಂದು ವಿಧೇಯಕವನ್ನು ತಿದ್ದುಪಡಿಯಿಲ್ಲದೆ ಅಥವಾ ಸಂಸತ್ತಿನ ಉಭಯ ಸದನಗಳು ಒಪ್ಪಿರುವಂಥ ತಿದ್ದುಪಡಿಗಳ ಸಹಿತವಾಗಿ ಮಾತ್ರವೇ ಒಪ್ಪಿಕೊಂಡಿರುವ ಹೊರತು. ಅದನ್ನು ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿರುವುದಾಗಿ ಭಾವಿಸತಕ್ಕದ್ದಲ್ಲ
3 . ಸಂಸತ್ತಿನಲ್ಲಿ ಇತ್ಯರ್ಥದಲ್ಲಿರುವ ಯಾವುದೇ ವಿಧೇಯಕವು, ಸದನಗಳ ಅಧಿವೇಶನಗಳನ್ನು ಮುಕ್ತಾಯಗೊಳಿಸಿದ ಕಾರಣದಿಂದ ಅಂತ್ಯಗೊಳ್ಳತಕ್ಕದ್ದಲ್ಲ.
4 . ಲೋಕಸಭೆಯಿಂದ ಅಂಗೀಕೃತವಾಗಿಲ್ಲದ, ಆದರೆ ರಾಜ್ಯಸಭೆಯಲ್ಲಿ ಇತ್ಯರ್ಥದಲ್ಲಿರುವ ವಿಧೇಯಕವು ಲೋಕಸಭೆಯ ವಿಸರ್ಜನೆಯಿಂದಾಗಿ ಅಂತ್ಯಗೊಳ್ಳತಕ್ಕದ್ದಲ್ಲ.
5 . ಲೋಕಸಭೆಯಲ್ಲಿ ಇತ್ಯರ್ಥದಲ್ಲಿರುವ ಅಥವಾ ಲೋಕಸಭೆಯಿಂದ ಅಂಗೀಕೃತವಾಗಿ ರಾಜ್ಯಸಭೆಯಲ್ಲಿ ಇತ್ಯರ್ಥದಲ್ಲಿರುವ ವಿಧೇಯಕವು ಲೋಕಸಭೆಯ ಉಪಬಂಧಕ್ಕೊಳಪಟ್ಟು ಅಂತ್ಯಗೊಳ್ಳತಕ್ಕದ್ದು. ವಿಸರ್ಜನೆಯಿಂದಾಗಿ 108 ಅನುಚ್ಛೇದದ ಉಪಬಂದಕ್ಕೆ ಒಳಪಟ್ಟು ಅಂತ್ಯಗೊಳ್ಳತಕ್ಕದ್ದು .

108 . . ಕೆಲವು ಸಂದರ್ಭಗಳಲ್ಲಿ ಉಭಯ ಸದನಗಳ ಜಂಟಿ ಉಪವೇಶನ –

1 . ಒಂದು ವಿಧೇಯಕವು ಒಂದು ಸದನದಲ್ಲಿ ಅಂಗೀಕೃತವಾಗಿ ಅದನ್ನು ಮತ್ತೊಂದು ಸದನಕ್ಕೆ ಕಳುಹಿಸಿದ ತರುವಾಯ.-

(a) ಆ ವಿಧೇಯಕವನ್ನು ಆ ಮತ್ತೊಂದು ಸದನವು ತಿರಸ್ಕರಿಸಿದರೆ; ಅಥವಾ

(b) ಆ ವಿಧೇಯಕದಲ್ಲಿ ಮಾಡಬೇಕಾದ ತಿದ್ದುಪಡಿಗಳ ಬಗ್ಗೆ ಸದನಗಳು ಅಂತಿಮವಾಗಿ ಒಪ್ಪದಿದ್ದರೆ;

(c) ಆ ವಿಧೇಯಕವನ್ನು ಯಾವ ಸದನಕ್ಕೆ ಕಳುಹಿಸಲಾಗಿದೆಯೋ ಆ ಸದನಕ್ಕೆ ಅದು ತಲುಪಿದ ದಿನಾಂಕದಿಂದ ಆ ವಿಧೇಯಕವು ಅಂಗೀಕಾರವಾಗದೇ ಆರು ತಿಂಗಳುಗಳಿಗಿಂತಲೂ ಹೆಚ್ಚುಕಾಲವು ಗತಿಸಿದ್ದರೆ

ರಾಷ್ಟ್ರಪತಿಯು, ಲೋಕಸಭೆಯ ವಿಸರ್ಜನೆಯ ಕಾರಣದಿಂದ ಆ ವಿಧೇಯಕವು ಅಂತ್ಯಗೊಂಡಿದ್ದ ಹೊರತು, ಸದನಗಳ ಉಪವೇಶನವು ನಡೆಯುತ್ತಿದ್ದರೆ ಸಂದೇಶದ ಮೂಲಕ ಮತ್ತು ಅವುಗಳು ಉಪವೇಶನದಲ್ಲಿ ಇಲ್ಲದಿದ್ದರೆ ಸಾರ್ವಜನಿಕ ಅಧಿಸೂಚನೆಯ ಮೂಲಕ, ಆ ವಿಧೇಯಕವನ್ನು ಚರ್ಚಿಸುವ ಮತ್ತು ಅದರ ಮೇಲೆ ಮತ ಕೊಡುವ ಉದ್ದೇಶಕ್ಕಾಗಿ ಜಂಟಿ ಉಪವೇಶನದಲ್ಲಿ ಸಭೆ ಸೇರಬೇಕೆಂದು ಉಭಯ ಸದನಗಳಿಗೆ ಕರೆನೀಡುವ ತನ್ನ ಆಶಯವನ್ನು ಅಧಿಸೂಚಿಸಬಹುದು: ಈ ಖಂಡದಲ್ಲಿ ಇರುವುದು ಯಾವುದೂ ಧನವಿಧೇಯಕಕ್ಕೆ ಅನ್ವಯವಾಗತಕ್ಕದ್ದಲ್ಲ.

2 . (1)ನೆಯ ಖಂಡದಲ್ಲಿ ಉಲ್ಲೇಖಿಸಿರುವ ಆರು ತಿಂಗಳ ಯಾವುದೇ ಅವಧಿಯನ್ನು ಲೆಕ್ಕ ಹಾಕುವಲ್ಲಿ, ಅದೇ ಖಂಡದ (ಸಿ) ಉಪಖಂಡದಲ್ಲಿ ಉಲ್ಲೇಖಿಸಿರುವ ಸದನದ ಅಧಿವೇಶನವನ್ನು ಮುಕ್ತಾಯಗೊಳಿಸಲಾದ ಅಥವಾ ನಿರಂತರ ನಾಲ್ಕು ದಿನಗಳಿಗಿಂತಲೂ ಹೆಚ್ಚುಕಾಲ ಮುಂದೂಡಲಾದ ಯಾವುದೇ ಅವಧಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳತಕ್ಕದ್ದಲ್ಲ.
3 . ರಾಷ್ಟ್ರಪತಿಯು (1)ನೆಯ ಖಂಡದ ಮೇರೆಗೆ ಜಂಟಿ ಉಪವೇಶನದಲ್ಲಿ ಸಭೆ ಸೇರಲು ಸದನಗಳಿಗೆ ಕರೆ ನೀಡುವ ತನ್ನ ಆಶಯವನ್ನು ಅಧಿಸೂಚಿಸಿದ್ದರೆ, ಯಾವುದೇ ಸದನವು ಆ ವಿಧೇಯಕದ ಸಂಬಂಧದಲ್ಲಿ ಮುಂದುವರಿಯತಕ್ಕದ್ದಲ್ಲ. ಆದರೆ ರಾಷ್ಟ್ರಪತಿಯು ತನ್ನ ಅಧಿಸೂಚನೆಯ ದಿನಾಂಕದ ತರುವಾಯ ಯಾವುದೇ ಕಾಲದಲ್ಲಿ ಆ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಿದ ಉದ್ದೇಶಕ್ಕಾಗಿ ಜಂಟಿ ಉಪವೇಶನದಲ್ಲಿ ಸಭೆ ಸೇರುವಂತೆ ಆ ಸದನಗಳಿಗೆ ಕರೆ ನೀಡಬಹುದು ಮತ್ತು ಅವನು ಹಾಗೆ ಕರೆನೀಡಿದಲ್ಲಿ, ತದನುಸಾರ ಆ ಸದನಗಳು ಸಭೆ ಸೇರತಕ್ಕದ್ದು.
4 . ಜಂಟಿ ಉಪವೇಶನದಲ್ಲಿ ಒಪ್ಪಿಕೊಳ್ಳಲಾದಂಥ ತಿದ್ದುಪಡಿಗಳೇನಾದರೂ ಇದ್ದರೆ, ಆ ತಿದ್ದುಪಡಿಗಳ ಸಹಿತ ಆ ವಿಧೇಯಕವು ಉಭಯ ಸದನಗಳ ಜಂಟಿ ಉಪವೇಶನದಲ್ಲಿ ಅವುಗಳ ಒಟ್ಟು ಸದಸ್ಯರ ಪೈಕಿ ಹಾಜರಿದ್ದು ಮತ ನೀಡುವ ಸದಸ್ಯರ ಬಹುಮತದಿಂದ ಅಂಗೀಕೃತವಾಗಿದ್ದರೆ ಅದನ್ನು ಈ ಸಂವಿಧಾನದ ಉದ್ದೇಶಗಳಿಗಾಗಿ ಉಭಯ ಸದನಗಳು ಅಂಗೀಕರಿಸಿವೆ ಎಂದು ಭಾವಿಸತಕ್ಕದ್ದು: ಜಂಟಿ ಉಪವೇಶನದಲ್ಲಿ.-

(a) ಆ ವಿಧೇಯಕವು ಒಂದು ಸದನದಿಂದ ಅಂಗೀಕೃತವಾಗಿದ್ದು ತಿದ್ದುಪಡಿಗಳೊಡನೆ ಮತ್ತೊಂದು ಸದನದಿಂದ ಅಂಗೀಕೃತವಾಗದಿದ್ದರೆ ಮತ್ತು ಯಾವ ಸದನದಲ್ಲಿ ಅದನ್ನು ಪ್ರಥಮತಃ ಮಂಡಿಸಲಾಗಿತ್ತೋ ಆ ಸದನಕ್ಕೆ ಅದನ್ನು ಹಿಂದಕ್ಕೆ ಕಳುಹಿಸಿದ್ದರೆ, ಆ ವಿಧೇಯಕದ ಅಂಗೀಕಾರದಲ್ಲಿ ಉಂಟಾದ ವಿಳಂಬದಿಂದಾಗಿ ಅವಶ್ಯವಾಗಿ ಮಾಡಲೇಬೇಕಾದ ತಿದ್ದುಪಡಿಗಳು ಯಾವುದಾದರೂ ಇದ್ದರೆ, ಅವುಗಳನ್ನು ಹೊರತುಪಡಿಸಿ ಆ ವಿಧೇಯಕಕ್ಕೆ ಇತರ ಯಾವುದೇ ತಿದ್ದುಪಡಿಯನ್ನು ಸೂಚಿಸತಕ್ಕದ್ದಲ್ಲ;

(b) ವಿಧೇಯಕವನ್ನು ಹಾಗೆ ಅಂಗೀಕರಿಸಿ ಹಿಂದಕ್ಕೆ ಕಳುಹಿಸಿದ್ದರೆ, ಮೇಲೆ ಹೇಳಿದಂಥ ತಿದ್ದುಪಡಿಗಳನ್ನು ಮತ್ತು ಯಾವ ವಿಷಯಗಳನ್ನು ಸದನಗಳು ಒಪ್ಪಿಕೊಂಡಿಲ್ಲವೋ ಆ ವಿಷಯಗಳಿಗೆ ಸುಸಂಗತವಾಗಿರುವಂಥ ಇತರ ತಿದ್ದುಪಡಿಗಳನ್ನು ಮಾತ್ರ ಆ ವಿಧೇಯಕಕ್ಕೆ ಸೂಚಿಸತಕ್ಕದ್ದು;

ಮತ್ತು ಈ ಖಂಡದ ಮೇರೆಗೆ ಯಾವ ತಿದ್ದುಪಡಿಗಳು ಅಂಗೀಕಾರಾರ್ಹ ಎಂಬ ಬಗ್ಗೆ ಸಭೆಯ ಅಧ್ಯಕ್ಷತೆ ವಹಿಸಿರುವ ವ್ಯಕ್ತಿಯ ತೀರ್ಮಾನವೇ ಅಂತಿಮವಾದುದಾಗಿರತಕ್ಕದ್ದು.

5 . ರಾಷ್ಟ್ರಪತಿಯು ಜಂಟಿ ಉಪವೇಶನದಲ್ಲಿ ಸಭೆ ಸೇರಬೇಕೆಂದು ಉಭಯ ಸದನಗಳಿಗೆ ಕರೆನೀಡುವ ತನ್ನ ಆಶಯವನ್ನು ಅಧಿಸೂಚಿಸಿದ ತರುವಾಯ ಲೋಕಸಭೆಯು ವಿಸರ್ಜನೆಗೊಂಡಿದ್ದರೂ, ಈ ಅನುಚ್ಛೇದದ ಮೇರೆಗೆ ಜಂಟಿ ಉಪವೇಶನವು ನಡೆಯಬಹುದು ಮತ್ತು ಆ ಉಪವೇಶನದಲ್ಲಿ ವಿಧೇಯಕವನ್ನು ಅಂಗೀಕರಿಸಬಹುದು.

109 . ಧನ ವಿಧೇಯಕಗಳಿಗೆ ಸಂಬಂಧಿಸಿದಂತೆ ವಿಶೇಷ ಪ್ರಕ್ರಿಯೆ.-

1 . ಧನವಿಧೇಯಕವನ್ನು ರಾಜ್ಯಸಭೆಯಲ್ಲಿ ಮಂಡಿಸತಕ್ಕದ್ದಲ್ಲ.
2 . ಧನವಿಧೇಯಕವನ್ನು ಲೋಕಸಭೆಯು ಅಂಗೀಕರಿಸಿದ ತರುವಾಯ ಶಿಫಾರಸ್ಸು ಕೋರಿ ಅದನ್ನು ರಾಜ್ಯಸಭೆಗೆ ಕಳುಹಿಸತಕ್ಕದ್ದು ಮತ್ತು ರಾಜ್ಯಸಭೆಯು ಆ ವಿಧೇಯಕವು ತನಗೆ ತಲುಪಿದ ದಿನಾಂಕದಿಂದ ಹದಿನಾಲ್ಕು ದಿನಗಳ ಅವಧಿಯೊಳಗಾಗಿ ತನ್ನ ಶಿಫಾರಸ್ಸುಗಳ ಸಹಿತ ಅದನ್ನು ಲೋಕಸಭೆಗೆ ಹಿಂದಕ್ಕೆ ಕಳುಹಿಸತಕ್ಕದ್ದು ಮತ್ತು ಲೋಕಸಭೆಯು ಆ ತರುವಾಯ ರಾಜ್ಯಸಭೆಯ ಎಲ್ಲ ಶಿಫಾರಸ್ಸುಗಳನ್ನು ಅಥವಾ ಅವುಗಳಲ್ಲಿ ಯಾವುದೇ ಶಿಫಾರಸ್ಸನ್ನು ಒಪ್ಪಬಹುದು ಅಥವಾ ತಿರಸ್ಕರಿಸಬಹುದು.
3 . ರಾಜ್ಯಸಭೆಯ ಯಾವುದೇ ಶಿಫಾರಸನ್ನು ಲೋಕಸಭೆಯು ಒಪ್ಪಿಕೊಂಡರೆ, ಆ ಧನವಿಧೇಯಕವು ರಾಜ್ಯಸಭೆಯು ಶಿಫಾರಸ್ಸು ಮಾಡಿದ ಮತ್ತು ಲೋಕಸಭೆಯು ಒಪ್ಪಿಕೊಂಡ ತಿದ್ದುಪಡಿಗಳ ಸಹಿತ, ಉಭಯ ಸದನಗಳಿಂದಲೂ ಅಂಗೀಕೃತವಾಗಿರುವುದಾಗಿ ಭಾವಿಸತಕ್ಕದ್ದು.
4 . ರಾಜ್ಯಸಭೆಯ ಯಾವ ಶಿಫಾರಸ್ಸುಗಳನ್ನೂ ಲೋಕಸಭೆಯು ಒಪ್ಪದಿದ್ದರೆ. ಆ ಧನವಿಧೇಯಕವು. ರಾಜ್ಯಸಭೆಯು ಶಿಫಾರಸ್ಸು ಮಾಡಿದ ಯಾವುದೇ ತಿದ್ದುಪಡಿಗಳೂ ಇಲ್ಲದೆಯೇ, ಲೋಕಸಭೆಯಿಂದ ಅಂಗೀಕೃತವಾದ ರೂಪದಲ್ಲಿಯೇ ಉಭಯ ಸದನಗಳಿಂದಲೂ ಅಂಗೀಕೃತವಾಗಿರುವುದಾಗಿ ಭಾವಿಸತಕ್ಕದ್ದು.
5 . ಲೋಕಸಭೆಯಿಂದ ಅಂಗೀಕೃತವಾಗಿ ರಾಜ್ಯಸಭೆಗೆ ಅದರ ಶಿಫಾರಸ್ಸುಗಳಿಗಾಗಿ ಕಳುಹಿಸಿಕೊಟ್ಟ ಧನವಿಧೇಯಕವನ್ನು ಮೇಲೆ ಹೇಳಿದ ಹದಿನಾಲ್ಕು ದಿನಗಳ ಅವಧಿಯೊಳಗಾಗಿ ಲೋಕಸಭೆಗೆ ಹಿಂದಕ್ಕೆ ಕಳುಹಿಸದಿದ್ದರೆ, ಆ ಅವಧಿಯು ಮುಕ್ತಾಯವಾದ ಮೇಲೆ, ಅದು ಲೋಕಸಭೆಯಿಂದ ಅಂಗೀಕೃತವಾದ ರೂಪದಲ್ಲಿಯೇ ಉಭಯ ಸದನಗಳಿಂದಲೂ ಅಂಗೀಕೃತವಾಗಿರುವುದಾಗಿ ಭಾವಿಸತಕ್ಕದ್ದು.

110 . “ಧನ ವಿಧೇಯಕಗಳು” ಎಂಬುದರ ಪರಿಭಾಷೆ.-

1 . ಈ ಅಧ್ಯಾಯದ ಉದ್ದೇಶಗಳಿಗಾಗಿ, ಒಂದು ವಿಧೇಯಕವು ಈ ಕೆಳಕಂಡ ಎಲ್ಲ ವಿಷಯಗಳಿಗೆ ಅಥವಾ ಅವುಗಳಲ್ಲಿ ಯಾವುದೇ ಒಂದು ವಿಷಯಕ್ಕೆ ಸಂಬಂಧಪಟ್ಟ ಉಪಬಂಧಗಳನ್ನು ಮಾತ್ರ ಒಳಗೊಂಡಿದ್ದರೆ ಅದನ್ನು ಧನವಿಧೇಯಕವೆಂದು ಭಾವಿಸತಕ್ಕದ್ದು, ಎಂದರೆ:-

(a) ಯಾವುದೇ ತೆರಿಗೆಯನ್ನು ವಿಧಿಸುವುದು, ರದ್ದು ಮಾಡುವುದು, ಮಾಫಿ ಮಾಡುವುದು, ಬದಲಾಯಿಸುವುದು ಅಥವಾ ವಿನಿಯಮಗೊಳಿಸುವುದು;

(b) ಭಾರತ ಸರ್ಕಾರವು ಹಣವನ್ನು ಸಾಲವಾಗಿ ತೆಗೆದುಕೊಳ್ಳುವುದನ್ನು ಅಥವಾ ಯಾವುದೇ ಖಾತ್ರಿ ಕೊಡುವುದನ್ನು ವಿನಿಯಮಗೊಳಿಸುವುದು ಅಥವಾ ಭಾರತ ಸರ್ಕಾರವು ವಹಿಸಿಕೊಂಡಿರುವ ಅಥವಾ ವಹಿಸಿಕೊಳ್ಳಬೇಕಾಗಿರುವ ಯಾವುದೇ ಹಣಕಾಸಿನ ಬಾಧ್ಯತೆಗಳಿಗೆ ಸಂಬಂಧಪಟ್ಟ ಕಾನೂನನ್ನು ತಿದ್ದುಪಡಿ ಮಾಡುವುದು;

(c) ಭಾರತದ ಸಂಚಿತ ನಿಧಿಯ ಅಥವಾ ಸಾದಿಲ್ವಾರು ನಿಧಿಯ ಅಭಿರಕ್ಷೆ ಮತ್ತು ಅಂಥ ಯಾವುದೇ ನಿಧಿಗೆ ಹಣವನ್ನು ಸಂದಾಯ ಮಾಡುವುದು ಅಥವಾ ಅದರಿಂದ ಹಣವನ್ನು ತೆಗೆದುಕೊಳ್ಳುವುದು;

(d) ಭಾರತದ ಸಂಚಿತ ನಿಧಿಯಿಂದ ಹಣವನ್ನು ವಿನಿಯೋಗಿಸುವುದು;

(e) ಯಾವುದೇ ವೆಚ್ಚವನ್ನು ಭಾರತದ ಸಂಚಿತ ನಿಧಿಯ ಮೇಲೆ ಹೊರಿಸಲಾದ ವೆಚ್ಚವೆಂದು ಘೋಷಿಸುವುದು ಅಥವಾ ಅಂಥ ಯಾವುದೇ ವೆಚ್ಚದ ಮೊಬಲಗನ್ನು ಹೆಚ್ಚಿಸುವುದು;

(f) ಭಾರತದ ಸಂಚಿತ ನಿಧಿಯ ಲೆಕ್ಕಕ್ಕೆ ಅಥವಾ ಭಾರತದ ಸರ್ಕಾರಿ ಲೆಕ್ಕಕ್ಕೆ ಹಣವನ್ನು ಜಮೆ ಮಾಡುವುದು ಅಥವಾ ಅಂಥ ಹಣವನ್ನು ಅಭಿರಕ್ಷಿಸುವುದು ಅಥವಾ ಕೊಡುವುದು ಅಥವಾ ಒಕ್ಕೂಟದ ಅಥವಾ ರಾಜ್ಯದ ಲೆಕ್ಕಗಳ ಲೆಕ್ಕಪರಿಶೋಧನೆ ಮಾಡುವುದು; ಅಥವಾ

(g) (a)ಯಿಂದ (f)ವರೆಗಿನ ಉಪಖಂಡಗಳಲ್ಲಿ ನಿರ್ದಿಷ್ಟಪಡಿಸಿದ ವಿಷಯಗಳಲ್ಲಿ ಯಾವುದೇ ವಿಷಯಕ್ಕೆ ಪ್ರಾಸಂಗಿಕವಾಗಿರುವ ಯಾವುದೇ ವಿಷಯ.

2 . ವಿಧೇಯಕವು, ಜುಲ್ಮಾನೆಗಳನ್ನು ಅಥವಾ ಇತರ ಆರ್ಥಿಕ ದಂಡಗಳನ್ನು ವಿಧಿಸುವುದಕ್ಕೆ ಅಥವಾ ಲೈಸೆನ್ಸ್‌ಗಳಿಗೆ ಅಥವಾ ಸಲ್ಲಿಸಿದ ಸೇವೆಗಳಿಗೆ ಫೀಜನ್ನು ಕೇಳುವುದಕ್ಕೆ ಅಥವಾ ಸಂದಾಯ ಮಾಡುವುದಕ್ಕೆ ಉಪಬಂಧ ಕಲ್ಪಿಸುತ್ತದೆ ಎಂಬ ಕಾರಣಮಾತ್ರದಿಂದ ಅಥವಾ ಯಾವುದೇ ಸ್ಥಳೀಯ ಪ್ರಾಧಿಕಾರ ಅಥವಾ ನಿಕಾಯವು ಸ್ಥಳೀಯ ಉದ್ದೇಶಗಳಿಗಾಗಿ ಯಾವುದೇ ತೆರಿಗೆಯನ್ನು ವಿಧಿಸುವುದಕ್ಕೆ, ರದ್ದುಪಡಿಸುವುದಕ್ಕೆ, ಮಾಫಿ ಮಾಡುವುದಕ್ಕೆ, ಬದಲಾವಣೆ ಮಾಡುವುದಕ್ಕೆ ಅಥವಾ ವಿನಿಯಮಗೊಳಿಸುವುದಕ್ಕೆ ಉಪಬಂಧ ಕಲ್ಪಿಸುತ್ತದೆ ಎಂಬ ಕಾರಣಮಾತ್ರದಿಂದ ಅದನ್ನು ಧನವಿಧೇಯಕವಾಗಿರುವುದಾಗಿ ಭಾವಿಸತಕ್ಕದ್ದಲ್ಲ.
3 . ಒಂದು ವಿಧೇಯಕವು ಧನವಿಧೇಯಕವೇ ಅಥವಾ ಅಲ್ಲವೇ ಎಂಬ ಯಾವುದೇ ಪ್ರಶ್ನೆ ಉದ್ಭವಿಸಿದರೆ ಆ ಬಗ್ಗೆ ಲೋಕಸಭೆಯ ಅಧ್ಯಕ್ಷನ ತೀರ್ಮಾನವೇ ಅಂತಿಮವಾದುದಾಗಿರತಕ್ಕದ್ದು.
4 . ಪ್ರತಿಯೊಂದು ಧನವಿಧೇಯಕವನ್ನು 109ನೆಯ ಅನುಚ್ಛೇದದ ಮೇರೆಗೆ ರಾಜ್ಯಸಭೆಗೆ ಕಳುಹಿಸುವಾಗ ಮತ್ತು 111ನೆಯ ಅನುಚ್ಛೇದದ ಮೇರೆಗೆ ರಾಷ್ಟ್ರಪತಿಯ ಅನುಮತಿಗಾಗಿ ಒಪ್ಪಿಸುವಾಗ, ಅದನ್ನು ಧನವಿಧೇಯಕವೆಂಬುದಾಗಿ ಲೋಕಸಭೆಯ ಅಧ್ಯಕ್ಷನು ಪ್ರಮಾಣೀಕರಿಸಿ, ತನ್ನ ಸಹಿ ಹಾಕತಕ್ಕದ್ದು.

111 . ವಿಧೇಯಕಗಳಿಗೆ ಅನುಮತಿ.-

ಒಂದು ವಿಧೇಯಕವು ಸಂಸತ್ತಿನ ಸದನಗಳಿಂದ ಅಂಗೀಕೃತವಾದಾಗ ಅದನ್ನು ರಾಷ್ಟ್ರಪತಿಗೆ ಒಪ್ಪಿಸತಕ್ಕದ್ದು ಮತ್ತು ರಾಷ್ಟ್ರಪತಿಯು ಆ ವಿಧೇಯಕಕ್ಕೆ ತನ್ನ ಅನುಮತಿಯನ್ನು ಕೊಟ್ಟಿರುವುದಾಗಿ ಅಥವಾ ಅದಕ್ಕೆ ತನ್ನ ಅನುಮತಿಯನ್ನು ತಡೆಹಿಡಿದಿರುವುದಾಗಿ ಘೋಷಿಸತಕ್ಕದ್ದು:
ವಿಧೇಯಕವನ್ನು ಅನುಮತಿಗಾಗಿ ರಾಷ್ಟ್ರಪತಿಗೆ ಒಪ್ಪಿಸಿದ ತರುವಾಯ, ಅವನು ಸಾಧ್ಯವಾದಷ್ಟು ಬೇಗನೆ. ಅದು ಧನವಿಧೇಯಕವಾಗಿಲ್ಲದಿದ್ದರೆ, ಸಂಸತ್ತಿನ ಸದನಗಳು ಆ ವಿಧೇಯಕವನ್ನು ಅಥವಾ ಅದರ ಯಾವುದೇ ನಿರ್ದಿಷ್ಟವಾದ ಉಪಬಂಧಗಳನ್ನು ಮತ್ತೊಮ್ಮೆ ಪರ್ಯಾಲೋಚಿಸಬೇಕೆಂದು ಮತ್ತು ವಿಶೇಷವಾಗಿ ಅವನು ತನ್ನ ಸಂದೇಶದಲ್ಲಿ ಶಿಫಾರಸ್ಸು ಮಾಡಬಹುದಾದಂಥ ಯಾವುದೇ ತಿದ್ದುಪಡಿಗಳನ್ನು ಮಂಡಿಸುವುದರ ಅಪೇಕ್ಷಣೀಯತೆಯನ್ನು ಪರ್ಯಾಲೋಚಿಸಬೇಕೆಂದು ಕೋರುವ ಸಂದೇಶದೊಡನೆ ಆ ವಿಧೇಯಕವನ್ನು ಆ ಸದನಗಳಿಗೆ ವಾಪಸು ಕಳುಹಿಸಬಹುದು ಮತ್ತು ವಿಧೇಯಕವನ್ನು ಹಾಗೆ ವಾಪಸು ಕಳುಹಿಸಿದಾಗ ಸದನಗಳು ಆ ವಿಧೇಯಕವನ್ನು ತದನುಸಾರವಾಗಿ ಪುನಃ ಪರ್ಯಾಲೋಚಿಸತಕ್ಕದ್ದು ಮತ್ತು ಆ ವಿಧೇಯಕವನ್ನು ಸದನಗಳು ತಿದ್ದುಪಡಿ ಸಹಿತವಾಗಿ ಅಥವಾ ತಿದ್ದುಪಡಿ ಇಲ್ಲದೆ ಪುನಃ ಅಂಗೀಕರಿಸಿ ರಾಷ್ಟ್ರಪತಿಯ ಅನುಮತಿಗಾಗಿ ಒಪ್ಪಿಸಿದರೆ ರಾಷ್ಟ್ರಪತಿಯು ಅದಕ್ಕೆ ಅನುಮತಿಯನ್ನು ತಡೆಹಿಡಿಯತಕ್ಕದ್ದಲ್ಲ.

constitutions of india.govt.in

article 79 ರಿಂದ 98ರಲ್ಲಿ ಬರುವ ಸಂಸತ್ತಿನ ರಚನೆ ಮತ್ತು ಪಾರ್ಲಿಮೆಂಟಿನ ಅಧಿಕಾರಿಗಳು.

Leave a Comment