ಅದ್ಯಾಯ Ⅲ – ರಾಷ್ಟ್ರಪತಿಯ ವಿಧಾಯೀ ಅಧಿಕಾರಗಳು
Legislative Powers of the President – Chapter Ⅲ
123 . ಸಂಸತ್ತಿನ ವಿರಾಮ ಕಾಲದಲ್ಲಿ ಅಧ್ಯಾದೇಶಗಳನ್ನು ಹೊರಡಿಸಲು ರಾಷ್ಟ್ರಪತಿಯ ಅಧಿಕಾರ .
1 . ಸಂಸತ್ತಿನ ಉಭಯ ಸದನಗಳು ಅಧಿವೇಶನದಲ್ಲಿರುವ ಕಾಲವನ್ನು ಹೊರತುಪಡಿಸಿ, ಯಾವುದೇ ಕಾಲದಲ್ಲಿ ತಾನು ಕೂಡಲೇ ಕ್ರಮವನ್ನು ಕೈಗೊಳ್ಳುವುದು ಅವಶ್ಯವಾಗಿರುವಂಥ ಸನ್ನಿವೇಶಗಳು ಇರುವುದಾಗಿ ರಾಷ್ಟ್ರಪತಿಗೆ ಮನದಟ್ಟಾದರೆ, ಅವನು ಆ ಸನ್ನಿವೇಶಗಳಲ್ಲಿ ಆಗತ್ಯವೆಂದು ತನಗೆ ತೋರುವಂಥ ಅಧ್ಯಾದೇಶಗಳನ್ನು ಹೊರಡಿಸಬಹುದು.
2 . ಅನುಚ್ಛೇದದ ಮೇರೆಗೆ ಹೊರಡಿಸಲಾದ ಅಧ್ಯಾದೇಶವು ಸಂಸತ್ತಿನ ಅಧಿನಿಯಮದಂತೆಯೇ ಬಲವುಳ್ಳದ್ದಾಗಿಯೂ ಮತ್ತು ಪರಿಣಾಮವುಳ್ಳದ್ದಾಗಿಯೂ ಇರತಕ್ಕದ್ದು, ಆದರೆ ಅಂಥ ಪ್ರತಿಯೊಂದು ಅಧ್ಯಾದೇಶವನ್ನು,-
(a) ಸಂಸತ್ತಿನ ಉಭಯ ಸದನಗಳ ಮುಂದೆ ಇಡತಕ್ಕದ್ದು ಮತ್ತು ಸಂಸತ್ತು ಪುನಃ ಸಭೆ ಸೇರಿದಾಗಿನಿಂದ ಆರು ವಾರಗಳು ಮುಕ್ತಾಯವಾದ ಆನಂತರ ಅಥವಾ ಆ ಅವಧಿಯು ಮುಕ್ತಾಯವಾಗುವುದಕ್ಕೆ ಮುಂಚೆ, ಆ ಆಧ್ಯಾದೇಶವನ್ನು ಅನುಮೋದಿಸದೆ ಇರುವ ನಿರ್ಣಯಗಳು ಉಭಯ ಸದನಗಳಿಂದಲೂ ಅಂಗೀಕೃತವಾದರೆ ಎರಡನೆಯ ನಿರ್ಣಯವು ಅಂಗೀಕೃತವಾದೊಡನೆಯೇ ಅಧ್ಯಾದೇಶವು ಜಾರಿಯಲ್ಲಿರುವುದು ನಿಂತು ಹೋಗತಕ್ಕದ್ದು; ಮತ್ತು
(b) ಯಾವುದೇ ಕಾಲದಲ್ಲಿ ರಾಷ್ಟ್ರಪತಿಯು ಹಿಂತೆಗೆದುಕೊಳ್ಳಬಹುದು.
ವಿವರಣೆ– ಸಂಸತ್ತಿನ ಸದನಗಳನ್ನು ಬೇರೆ ಬೇರೆ ದಿನಾಂಕಗಳಲ್ಲಿ ಪುನಃ ಸಮಾವೇಶಗೊಳ್ಳುವಂತೆ ಕರೆದಿರುವ ಸಂದರ್ಭದಲ್ಲಿ, ಈ ಖಂಡದ ಉದ್ದೇಶಗಳಿಗಾಗಿ ಆ ದಿನಾಂಕಗಳಲ್ಲಿ ಆನಂತರದ ದಿನಾಂಕದಿಂದ ಆರು ವಾರಗಳ ಅವಧಿಯನ್ನು ಲೆಕ್ಕಹಾಕತಕ್ಕದ್ದು.
3 . ಯಾವ ಉಪಬಂಧವನ್ನು ಈ ಸಂವಿಧಾನದ ಮೇರೆಗೆ ಅಧಿನಿಯಮಿಸಲು ಸಂಸತ್ತು ಸಕ್ಷಮವಾಗಿಲ್ಲವೋ ಅಂಥ ಯಾವುದೇ ಉಪಬಂಧವನ್ನು ಈ ಅನುಚ್ಛೇದದ ಮೇರೆಗಿನ ಯಾವುದೇ ಅಧ್ಯಾದೇಶವು ಕಲ್ಪಿಸಿದರೆ, ಅಂಥ ಅಧ್ಯಾದೇಶವು ಅಷ್ಟರ ಮಟ್ಟಿಗೆ ಅನೂರ್ಜಿತವಾಗತಕ್ಕದ್ದು.
ಅದ್ಯಾಯ Ⅳ – ಒಕ್ಕೂಟ ನ್ಯಾಯಾಂಗ
The Union Judiciary – Chapter Ⅳ .
124 . ಸರ್ವೋಚ್ಚ ನ್ಯಾಯಾಲಯದ ಸ್ಥಾಪನೆ ಮತ್ತು ರಚನೆ.-
1 . ಭಾರತಕ್ಕೆ ಒಂದು ಸರ್ವೋಚ್ಚ ನ್ಯಾಯಾಲಯವಿರತಕ್ಕದ್ದು ಮತ್ತು ಅದು ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಸಂಸತ್ತು ಕಾನೂನಿನ ಮೂಲಕ ಇನ್ನೂ ಅಧಿಕ ಸಂಖ್ಯೆಯನ್ನು ಗೊತ್ತುಪಡಿಸುವವರೆಗೆ [ಏಳ]ಕ್ಕಿಂತ ಹೆಚ್ಚಾಗಿಲ್ಲದಷ್ಟು ಇತರ ನ್ಯಾಯಾಧೀಶರನ್ನು ಒಳಗೊಂಡಿರತಕ್ಕದ್ದು,
2 . ರಾಷ್ಟ್ರಪತಿಯು, ಸರ್ವೋಚ್ಚ ನ್ಯಾಯಾಲಯದ ಪ್ರತಿಯೊಬ್ಬರು ನ್ಯಾಯಾಧೀಶನನ್ನು [124a ಅನುಚ್ಛೇದದಲ್ಲಿ ಉಲ್ಲೇಖಿಸಿರುವ ರಾಷ್ಟ್ರೀಯ ನ್ಯಾಯಾಂಗ ನೇಮಕಗಳ ಆಯೋಗದ ಶಿಫಾರಸ್ಸಿನ ಮೇಲೆ] ತನ್ನ ಸಹಿ ಮತ್ತು ಮೊಹರು ಇರುವ ವಾರಂಟಿನ ಮೂಲಕ ನೇಮಕ ಮಾಡತಕ್ಕದ್ದು ಮತ್ತು ಆ ನ್ಯಾಯಾಧೀಶನು ತನಗೆ ಅರವತ್ತೈದು ವರ್ಷಗಳ ವಯಸ್ಸು ತುಂಬುವವರೆಗೂ ಆ ಪದವನ್ನು ಧಾರಣ ಮಾಡತಕ್ಕದ್ದು:
(a) ನ್ಯಾಯಾಧೀಶನು ರಾಷ್ಟ್ರಪತಿಗೆ ಪತ್ರ ಬರೆದು, ಸಹಿ ಮಾಡಿ, ಕಳುಹಿಸಿ ತನ್ನ ಪದಕ್ಕೆ ರಾಜೀನಾಮೆ ಕೊಡಬಹುದು:
(b) ಖಂಡ (4)ರಲ್ಲಿ ಉಪಬಂಧಿಸಲಾದ ರೀತಿಯಲ್ಲಿ ನ್ಯಾಯಾಧೀಶನನ್ನು ಅವನ ಪದದಿಂದ ತೆಗೆದುಹಾಕಬಹುದು.
2A . ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶನ ನೇಮಕಕ್ಕೆ ವಯಸ್ಸನ್ನು, ಸಂಸತ್ತು ಕಾನೂನಿನ ಮೂಲಕ ಉಪಬಂಧಿಸಬಹುದಾದಂಥ ಪ್ರಾಧಿಕಾರವು ಮತ್ತು ಉಪಬಂಧಿಸಬಹುದಾದಂಥ ರೀತಿಯಲ್ಲಿ ನಿರ್ಧರಿಸತಕ್ಕದ್ದು.]
3 . ಯಾರೇ ವ್ಯಕ್ತಿಯು ಭಾರತದ ನಾಗರಿಕನಾಗಿರುವ ಹೊರತು; ಮತ್ತು
(a) ಒಂದು ಉಚ್ಚ ನ್ಯಾಯಾಲಯದಲ್ಲಿ ಅಥವಾ ನಿರಂತರವಾಗಿ ಎರಡು ಅಥವಾ ಇನ್ನೂ ಹೆಚ್ಚು ಉಚ್ಚ ನ್ಯಾಯಾಲಯಗಳಲ್ಲಿ ಕನಿಷ್ಠ ಪಕ್ಷ ಐದು ವರ್ಷಗಳ ಕಾಲ ನ್ಯಾಯಾಧೀಶನಾಗಿದ್ದ ಹೊರತು; ಅಥವಾ
(b) ಒಂದು ಉಚ್ಚ ನ್ಯಾಯಾಲಯದಲ್ಲಿ ಅಥವಾ ನಿರಂತರವಾಗಿ ಎರಡು ಅಥವಾ ಹೆಚ್ಚು ಉಚ್ಚ ನ್ಯಾಯಾಲಯಗಳಲ್ಲಿ ಕನಿಷ್ಠಪಕ್ಷ ಹತ್ತು ವರ್ಷಗಳ ಕಾಲ ನ್ಯಾಯವಾದಿ ಆಗಿದ್ದ ಹೊರತು; ಅಥವಾ
(c) ರಾಷ್ಟ್ರಪತಿಯ ಅಭಿಪ್ರಾಯದಲ್ಲಿ ಅವನು ಪ್ರಸಿದ್ಧ ನ್ಯಾಯವೇತ್ತನಾಗಿದ್ದ ಹೊರತು ಅವನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶನಾಗಿ ನೇಮಕಗೊಳ್ಳಲು ಅರ್ಹನಾಗಿರತಕ್ಕದ್ದಲ್ಲ.
ವಿವರಣೆ I– ಈ ಖಂಡದಲ್ಲಿ “ಉಚ್ಚ ನ್ಯಾಯಾಲಯ” ಎಂದರೆ, ಭಾರತದ ರಾಜ್ಯಕ್ಷೇತ್ರದ ಯಾವುದೇ ಭಾಗದಲ್ಲಿ ಅಧಿಕಾರವ್ಯಾಪ್ತಿಯನ್ನು ಚಲಾಯಿಸುತ್ತಿರುವ ಅಥವಾ ಈ ಸಂವಿಧಾನದ ಪ್ರಾರಂಭಕ್ಕೆ ಮುಂಚೆ ಯಾವುದೇ ಕಾಲದಲ್ಲಿ ಅದನ್ನು ಚಲಾಯಿಸಿದ್ದ ಉಚ್ಚ ನ್ಯಾಯಾಲಯ.
ವಿವರಣೆ II– ಈ ಖಂಡದ ಉದ್ದೇಶಕ್ಕಾಗಿ, ಯಾರೇ ವ್ಯಕ್ತಿಯು ನ್ಯಾಯವಾದಿ ಆಗಿರುವ ಅವಧಿಯನ್ನು ಲೆಕ್ಕ ಹಾಕುವಲ್ಲಿ, ಅವನು ನ್ಯಾಯವಾದಿ ಆದ ಮೇಲೆ ಜಿಲ್ಲಾ ನ್ಯಾಯಾಧೀಶನ ಪದಕ್ಕೆ ಕಡಿಮೆಯಿಲ್ಲದ ನ್ಯಾಯಿಕ ಪದವನ್ನು ಧಾರಣ ಮಾಡಿದ್ದ ಅವಧಿಯನ್ನೂ ಸೇರಿಸತಕ್ಕದ್ದು.
4 . ಸರ್ವೋಚ್ಚ ನ್ಯಾಯಾಲಯದ ಯಾರೇ ನ್ಯಾಯಾಧೀಶನನ್ನು, ಅವನ ವಿಷಯದಲ್ಲಿ ರುಜುವಾತಾದ ದುರ್ವತ್ರನೆಯ ಅಥವಾ ಅಸಾಮರ್ಥ್ಯದ ಕಾರಣದ ಮೇಲೆ ತೆಗೆದು ಹಾಕಬೇಕೆಂಬುದಾಗಿ ಸಂಸತ್ತಿನ ಪ್ರತಿಯೊಂದು ಸದನದಿಂದ ಆ ಸದನದ ಒಟ್ಟು ಸದಸ್ಯ ಸಂಖ್ಯೆಯ ಬಹುಮತದ ಮೂಲಕ ಮತ್ತು ಹಾಜರಿದ್ದು ಮತ ಕೊಡುವ ಆ ಸದನದ ಸದಸ್ಯರಲ್ಲಿ ಮೂರನೆಯ ಎರಡು ಭಾಗಕ್ಕೆ ಕಡಿಮೆಯಿಲ್ಲದ ಬಹುಮತದ ಮೂಲಕ ಸಮರ್ಥಿತವಾದ ಕೋರಿಕೆಯನ್ನು ರಾಷ್ಟ್ರಪತಿಗೆ ಅದೇ ಅಧಿವೇಶನದಲ್ಲಿ ಒಪ್ಪಿಸಿದ ತರುವಾಯ ರಾಷ್ಟ್ರಪತಿಯು ಹೊರಡಿಸಿದ ಆದೇಶದ ಹೊರತು ತೆಗೆದು ಹಾಕತಕ್ಕದ್ದಲ್ಲ.
5 . (4)ನೆಯ ಖಂಡದ ಮೇರೆಗೆ ಕೋರಿಕೆಯನ್ನು ಒಪ್ಪಿಸುವ ಬಗ್ಗೆ ಮತ್ತು ಯಾರೇ ನ್ಯಾಯಾಧೀಶನ ದುರ್ವತ್ರನೆಯನ್ನು ಅಥವಾ ಅಸಾಮರ್ಥ್ಯವನ್ನು ತನಿಖೆ ಮಾಡಿ ರುಜುವಾತು ಮಾಡುವ ಬಗ್ಗೆ ಪ್ರಕ್ರಿಯೆಯನ್ನು ಸಂಸತ್ತು ಕಾನೂನಿನ ಮೂಲಕ ವಿನಿಯಮಿಸಬಹುದು.
6 . ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶನಾಗಿ ನೇಮಕಗೊಂಡ ಪ್ರತಿಯೊಬ್ಬ ವ್ಯಕ್ತಿಯು, ತನ್ನ ಪದವನ್ನು ವಹಿಸಿಕೊಳ್ಳುವುದಕ್ಕೆ ಮುಂಚೆ ರಾಷ್ಟ್ರಪತಿಯ ಸಮಕ್ಷಮ ಅಥವಾ ಆ ಬಗ್ಗೆ ಅವನಿಂದ ನೇಮಕಗೊಂಡ ಒಬ್ಬ ವ್ಯಕ್ತಿಯ ಸಮಕ್ಷಮ. ಮೂರನೆಯ ಅನುಸೂಚಿಯಲ್ಲಿ ಆ ಉದ್ದೇಶಕ್ಕಾಗಿ ಕೊಟ್ಟಿರುವ ನಮೂನೆಗೆ ಅನುಸಾರವಾಗಿ ಪ್ರಮಾಣ ಅಥವಾ ಪ್ರತಿಜ್ಞೆ ಮಾಡತಕ್ಕದ್ದು ಮತ್ತು ಅದಕ್ಕೆ ತನ್ನ ಸಹಿ ಹಾಕತಕ್ಕದ್ದು.
7 . ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶನಾಗಿ ಪದಧಾರಣ ಮಾಡಿರುವ ಯಾರೇ ವ್ಯಕ್ತಿಯು, ಭಾರತದ ರಾಜ್ಯಕ್ಷೇತ್ರದಲ್ಲಿ ಇರುವ ಯಾವುದೇ ನ್ಯಾಯಾಲಯದಲ್ಲಿ ಅಥವಾ ಯಾವುದೇ ಪ್ರಾಧಿಕಾರದ ಮುಂದೆ ವಾದಿಸತಕ್ಕದ್ದಲ್ಲ ಅಥವಾ ಕಾರ್ಯನಿರ್ವಹಿಸತಕ್ಕದ್ದಲ್ಲ.
124A . ರಾಷ್ಟ್ರೀಯ ನ್ಯಾಯಾಂಗ ನೇಮಕಗಳ ಆಯೋಗ-
1 . ರಾಷ್ಟ್ರೀಯ ನ್ಯಾಯಾಂಗ ನೇಮಕಗಳ ಆಯೋಗ ಎಂಬ ಆಯೋಗವು ಇರತಕ್ಕದ್ದು. ಅದು ಈ ಕೆಳಕಂಡವರುಗಳನ್ನು ಒಳಗೊಂಡಿರತಕ್ಕದ್ದು ಎಂದರೆ:-
(a) ಭಾರತದ ಮುಖ್ಯ ನ್ಯಾಯಮೂರ್ತಿ, ಅಧ್ಯಕ್ಷರು, ಪದನಿಮಿತ್ತ;
(b) ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯ ನಿಕಟ ತರುವಾಯದ ಇತರ ಇಬ್ಬರು ಹಿರಿಯ ನ್ಯಾಯಾಧೀಶರು – ಸದಸ್ಯರುಗಳು, ಪದನಿಮಿತ್ತ:
(c) ಕಾನೂನು ಮತ್ತು ನ್ಯಾಯ ಮಂತ್ರಾಲಯದ ಪ್ರಭಾರ ಹೊಂದಿರುವ ಕೇಂದ್ರ ಮಂತ್ರಿ ಸದಸ್ಯ, ಪದನಿಮಿತ್ತ;
(d) ಪ್ರಧಾನಮಂತ್ರಿ, ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಲೋಕಸಭೆಯಲ್ಲಿನ ವಿರೋಧಪಕ್ಷದ ನಾಯಕ ಅಥವಾ ಲೋಕಸಭೆಯಲ್ಲಿ ಅಂಥ ವಿರೋಧಪಕ್ಷದ ನಾಯಕ ಇಲ್ಲದೆ ಇದ್ದಲ್ಲಿ, ಲೋಕಸಭೆಯಲ್ಲಿ ಏಕೈಕ ಬಹುದೊಡ್ಡ ವಿರೋಧ ಪಕ್ಷದ ನಾಯಕ ಇವರುಗಳನ್ನು ಒಳಗೊಂಡಿರುವ ಸಮಿತಿಯಿಂದ ನಾಮನಿರ್ದೇಶಿತರಾಗುವ ಇಬ್ಬರು ಪ್ರಖ್ಯಾತ ವ್ಯಕ್ತಿಗಳು – ಸದಸ್ಯರು:
ಒಬ್ಬರು ಪ್ರಖ್ಯಾತ ವ್ಯಕ್ತಿಯನ್ನು ಅನುಸೂಚಿತ ಜಾತಿಗಳ, ಅನುಸೂಚಿತ ಬುಡಕಟ್ಟುಗಳ, ಇತರೆ ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತ ಅಥವಾ ಮಹಿಳೆ ವ್ಯಕ್ತಿಗಳ ಪೈಕಿಯಿಂದ ನಾಮನಿರ್ದೇಶನ ಮಾಡತಕ್ಕದ್ದು:
ಮತ್ತು ಪ್ರಖ್ಯಾತ ವ್ಯಕ್ತಿಯನ್ನು ಮೂರು ವರ್ಷಗಳ ಅವಧಿಯವರೆಗೆ ನಾಮನಿರ್ದೇಶನ ಮಾಡತಕ್ಕದ್ದು ಮತ್ತು ಆ ವ್ಯಕ್ತಿಯು ಪುನರ್ ನಾಮನಿರ್ದೇಶನಕ್ಕೆ ಅರ್ಹನಾಗಿರತಕ್ಕದ್ದಲ್ಲ.
2 . ರಾಷ್ಟ್ರೀಯ ನ್ಯಾಯಾಂಗ ನೇಮಕಗಳ ಆಯೋಗದ ಯಾವುದೇ ಕಾರ್ಯವನ್ನು ಅಥವಾ ವ್ಯವಹರಣೆಗಳನ್ನು ಆಯೋಗದ ರಚನೆಯಲ್ಲಿ ಅಸ್ತಿತ್ವದಲ್ಲಿರುವ ಯಾವುದೇ ಖಾಲಿ ಸ್ಥಾನ ಅಥವಾ ನ್ಯೂನತೆಯ ಕಾರಣ ಮಾತ್ರದಿಂದಲೇ ಪ್ರಶ್ನಿಸತಕ್ಕದ್ದಲ್ಲ ಅಥವಾ ಅಸಿಂಧುಗೊಳ್ಳತಕ್ಕದ್ದಲ್ಲ.
124B . ಆಯೋಗದ ಪ್ರಕಾರ್ಯಗಳು,
ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗದ ಕರ್ತವ್ಯಗಳೆಂದರೆ:-
(a) ಭಾರತದ ಮುಖ್ಯ ನ್ಯಾಯಮೂರ್ತಿಯನ್ನು, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳನ್ನು, ಉಚ್ಚ ನ್ಯಾಯಾಲಯಗಳ ಮುಖ್ಯ ನ್ಯಾಯಮೂರ್ತಿಗಳನ್ನು ಮತ್ತು ಉಚ್ಚ ನ್ಯಾಯಾಲಯಗಳ ಇತರೆ ನ್ಯಾಯಾಧೀಶರನ್ನು ನೇಮಕ ಮಾಡುವುದಕ್ಕಾಗಿ ವ್ಯಕ್ತಿಗಳನ್ನು ಶಿಫಾರಸ್ಸು ಮಾಡುವುದು;
(b) ಒಂದು ಉಚ್ಚ ನ್ಯಾಯಾಲಯದಿಂದ ಇತರ ಯಾವುದೇ ಉಚ್ಚ ನ್ಯಾಯಾಲಯಕ್ಕೆ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳನ್ನು ಮತ್ತು ಇತರ ನ್ಯಾಯಾಧೀಶರನ್ನು ವರ್ಗಾವಣೆ ಮಾಡಲು ಶಿಫಾರಸ್ಸು ಮಾಡುವುದು; ಮತ್ತು
(c) ಸಕ್ಷಮತೆ ಮತ್ತು ನಿಷ್ಠೆ ಉಳ್ಳ ವ್ಯಕ್ತಿಯನ್ನೇ ಶಿಫಾರಸ್ಸು ಮಾಡಲಾಗಿದೆಯೆಂಬುದನ್ನು ಖಚಿತಪಡಿಸಿಕೊಳ್ಳುವುದು.
124C . ಕಾನೂನನ್ನು ರಚಿಸಲು ಸಂಸತ್ತಿನ ಅಧಿಕಾರ,
ಸಂಸತ್ತು, ಕಾನೂನಿನ ಮೂಲಕ, ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯನ್ನು ಮತ್ತು ಇತರ ನ್ಯಾಯಾಧೀಶರುಗಳನ್ನು ಮತ್ತು ಉಚ್ಚ ನ್ಯಾಯಾಲಯಗಳ ಮುಖ್ಯ ನ್ಯಾಯಮೂರ್ತಿಯನ್ನು ಮತ್ತು ಇತರ ನ್ಯಾಯಾಧೀಶರನ್ನು ನೇಮಕ ಮಾಡುವುದಕ್ಕಾಗಿ ಕಾರ್ಯವಿಧಾನವನ್ನು ವಿನಿಯಮಿಸಬಹುದು ಮತ್ತು ಆಯೋಗವು ತನ್ನ ಪ್ರಕಾರ್ಯಗಳನ್ನು ನಿರ್ವಹಿಸುವುದಕ್ಕಾಗಿ ಕಾರ್ಯವಿಧಾನವನ್ನು, ನೇಮಕ ಮಾಡುವುದಕ್ಕಾಗಿ ವ್ಯಕ್ತಿಗಳ ಆಯ್ಕೆ ವಿಧಾನವನ್ನು ಮತ್ತು ಅದು ಅವಶ್ಯವೆಂದು ಪರಿಗಣಿಸಬಹುದಾದಂತಹ ಇತರ ವಿಷಯಗಳನ್ನು ವಿನಿಯಮಗಳ ಮೂಲಕ ಗೊತ್ತುಪಡಿಸಲು ಆಯೋಗಕ್ಕೆ ಅಧಿಕಾರ ಕೊಡಬಹುದು.
125 . ನ್ಯಾಯಾಧೀಶರ ಸಂಬಳಗಳು, ಇತ್ಯಾದಿ.
1 . ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ ಕಾನೂನಿನ ಮೂಲಕ ಸಂಸತ್ತು ನಿರ್ಧರಿಸಬಹುದಾದಂಥ ಸಂಬಳಗಳನ್ನು ಸಂದಾಯ ಮಾಡತಕ್ಕದ್ದು ಮತ್ತು ಆ ಬಗ್ಗೆ ಉಪಬಂಧವನ್ನು ಹಾಗೆ ಕಲ್ಪಿಸುವವರೆಗೆ ಎರಡನೇ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದಂಥ ಸಂಬಳಗಳನ್ನು ಸಂದಾಯ ಮಾಡತಕ್ಕದ್ದು.
2 . ಪ್ರತಿಯೊಬ್ಬ ನ್ಯಾಯಾಧೀಶನು ಸಂಸತ್ತು ಮಾಡಿದ ಕಾನೂನಿನ ಮೂಲಕ ಅಥವಾ ಮೇರೆಗೆ ಕಾಲಕಾಲಕ್ಕೆ ನಿರ್ಧರಿಸಬಹುದಾದಂಥ ವಿಶೇಷಾಧಿಕಾರಗಳಿಗೆ ಮತ್ತು ಭತ್ಯೆಗಳಿಗೆ, ಗೈರುಹಾಜರಿ ರಜೆಗೆ ಮತ್ತು ನಿವೃತ್ತಿವೇತನಕ್ಕೆ ಸಂಬಂಧಿಸಿದಂಥ ಹಕ್ಕುಗಳಿಗೆ ಮತ್ತು ಅವುಗಳನ್ನು ಹಾಗೆ ನಿರ್ಧಾರ ಮಾಡುವವರೆಗೆ ಎರಡನೆಯ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದಂಥ ವಿಶೇಷಾಧಿಕಾರಗಳಿಗೆ, ಭತ್ಯೆಗಳಿಗೆ ಮತ್ತು ಹಕ್ಕುಗಳಿಗೆ ಹಕ್ಕುಳ್ಳವನಾಗಿರತಕ್ಕದ್ದು: ನ್ಯಾಯಾಧೀಶನ ವಿಶೇಷಾಧಿಕಾರಗಳು, ಭತ್ಯೆಗಳು, ಗೈರುಹಾಜರಿ ರಜೆಗೆ ಅಥವಾ ನಿವೃತ್ತಿವೇತನಕ್ಕೆ ಸಂಬಂಧಿಸಿದಂತೆ ಅವನ ಹಕ್ಕುಗಳು, ಅವನ ನೇಮಕದ ತರುವಾಯ. ಅವನಿಗೆ ಅನಾನುಕೂಲವಾಗುವಂತೆ ವ್ಯತ್ಯಸ್ತಗೊಳ್ಳತಕ್ಕದ್ದಲ್ಲ.
126 . ಕಾರ್ಯಾರ್ಥ ಮುಖ್ಯ ನ್ಯಾಯಮೂರ್ತಿಯ ನೇಮಕ .
ಭಾರತದ ಮುಖ್ಯ ನ್ಯಾಯಮೂರ್ತಿಯ ಪದವು ಖಾಲಿ ಆದಾಗ ಅಥವಾ ಮುಖ್ಯ ನ್ಯಾಯಮೂರ್ತಿಯು ಗೈರುಹಾಜರಾದ ಕಾರಣದಿಂದ ಅಥವಾ ಇತರ ಕಾರಣಗಳಿಂದ ತನ್ನ ಪದದ ಕರ್ತವ್ಯಗಳನ್ನು ನೆರವೇರಿಸಲು ಅವನು ಅಸಮರ್ಥನಾದಾಗ, ಆ ನ್ಯಾಯಾಲಯದ ಇತರ ನ್ಯಾಯಾಧೀಶರ ಪೈಕಿ ಆ ಉದ್ದೇಶಕ್ಕಾಗಿ ರಾಷ್ಟ್ರಪತಿಯು ನೇಮಕ ಮಾಡಬಹುದಾದಂಥ ನ್ಯಾಯಾಧೀಶನು ಪದದ ಕರ್ತವ್ಯಗಳನ್ನು ನೆರವೇರಿಸತಕ್ಕದ್ದು.
127 . ಅಡ್ಹಾಕ್ ನ್ಯಾಯಾಧೀಶರ ನೇಮಕ.-
1 . ಯಾವುದೇ ಕಾಲದಲ್ಲಿ ಸರ್ವೋಚ್ಚ ನ್ಯಾಯಾಲಯದ ಯಾವುದೇ ಅಧಿವೇಶನವನ್ನು ನಡೆಸಲು ಅಥವಾ ಮುಂದುವರಿಸಲು, ಆ ನ್ಯಾಯಾಲಯದ ನ್ಯಾಯಾಧೀಶರ ಕೋರಂ ಇಲ್ಲದಿರುವಲ್ಲಿ [ರಾಷ್ಟ್ರೀಯ ನ್ಯಾಯಾಂಗ ನೇಮಕಗಳ ಆಯೋಗವು, ಭಾರತದ ಮುಖ್ಯ ನ್ಯಾಯಮೂರ್ತಿಯು ತನಗೆ ಉಲ್ಲೇಖ ಮಾಡಿದಾಗ ರಾಷ್ಟ್ರಪತಿಯ ಪೂರ್ವಸಮ್ಮತಿ ಪಡೆದು] ಮತ್ತು ಸಂಬಂಧಪಟ್ಟ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯೊಡನೆ ಸಮಾಲೋಚನೆ ನಡೆಸಿದ ತರುವಾಯ, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶನಾಗಿ ನೇಮಕಗೊಳ್ಳುವುದಕ್ಕೆ ತಕ್ಕ ಅರ್ಹತೆ ಪಡೆದಿರುವ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಯು ಹೆಸರಿಸಿದ ಉಚ್ಚ ನ್ಯಾಯಾಲಯದ ನ್ಯಾಯಾಧೀಶನೊಬ್ಬನನ್ನು ಅವಶ್ಯವಾಗಬಹುದಾದಷ್ಟು ಅವಧಿಯವರೆಗೆ, ಸರ್ವೋಚ್ಚ ನ್ಯಾಯಾಲಯದ ಉಪವೇಶನಗಳಲ್ಲಿ ಅಡ್ಹಾಕ್ ನ್ಯಾಯಾಧೀಶನಾಗಿ ಹಾಜರಿರುವಂತೆ ಲಿಖಿತದ ಮೂಲಕ ಕೋರಬಹುದು.
2 . ಹಾಗೆ ಹೆಸರಿಸಲಾದ ನ್ಯಾಯಾಧೀಶನು ಸರ್ವೋಚ್ಚ ನ್ಯಾಯಾಲಯದ ಉಪವೇಶನಗಳಲ್ಲಿ, ಅವನ ಹಾಜರಾತಿಯು ಅವಶ್ಯವಿರುವ ಕಾಲದಲ್ಲಿ ಮತ್ತು ಅವಶ್ಯವಿರುವ ಅವಧಿಯವರೆಗೆ ಹಾಜರಾಗಿ ಕೆಲಸ ಮಾಡಲು ತನ್ನ ಪದದ ಇತರ ಕರ್ತವ್ಯಗಳಿಗಿಂತ ಹೆಚ್ಚು ಆದ್ಯತೆ ಕೊಡುವುದು ಅವನ ಕರ್ತವ್ಯವಾಗಿರತಕ್ಕದ್ದು ಮತ್ತು ಅವನು ಹಾಗೆ ಹಾಜರಾಗಿ ಕೆಲಸ ಮಾಡುವಾಗ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶನ ಎಲ್ಲ ಅಧಿಕಾರವ್ಯಾಪ್ತಿಯನ್ನು, ಅಧಿಕಾರಗಳನ್ನು ಮತ್ತು ವಿಶೇಷಾಧಿಕಾರಗಳನ್ನು ಹೊಂದಿರತಕ್ಕದ್ದು ಮತ್ತು ಅವನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶನಾಗಿ ಕರ್ತವ್ಯಗಳನ್ನು ನೆರವೇರಿಸತಕ್ಕದ್ದು.
128 . ಸರ್ವೋಚ್ಚ ನ್ಯಾಯಾಲಯದ ಉಪವೇಶನಗಳಲ್ಲಿ ನಿವೃತ್ತ ನ್ಯಾಯಾಧೀಶರ ಹಾಜರಾತಿ.-
ಈ ಅಧ್ಯಾಯದಲ್ಲಿ ಏನೇ ಇದ್ದಾಗ್ಯೂ, [ರಾಷ್ಟ್ರೀಯ ನ್ಯಾಯಾಂಗ ನೇಮಕಗಳ ಆಯೋಗವು ರಾಷ್ಟ್ರಪತಿಯ ಪೂರ್ವಸಮ್ಮತಿ ಪಡೆದು ಸರ್ವೋಚ್ಚ ನ್ಯಾಯಾಲಯದ ಅಥವಾ ಫೆಡರಲ್ ನ್ಯಾಯಾಲಯದ ನ್ಯಾಯಾಧೀಶನಾಗಿದ್ದ [ಅಥವಾ ಉಚ್ಚ ನ್ಯಾಯಾಲಯದ ನ್ಯಾಯಾಧೀಶನಾಗಿದ್ದ ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶನಾಗಿ ನೇಮಕಗೊಳ್ಳಲು ತಕ್ಕ ಅರ್ಹತೆಯುಳ್ಳ] ಯಾರೇ ವ್ಯಕ್ತಿಯನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶನಾಗಿ ಕುಳಿತು ಕಾರ್ಯನಿರ್ವಹಿಸುವಂತೆ ಯಾವುದೇ ಕಾಲದಲ್ಲಿ ಕೋರಬಹುದು ಮತ್ತು ಯಾವ ವ್ಯಕ್ತಿಯನ್ನು ಹಾಗೆ ಕೋರಲಾಗಿದೆಯೋ ಆ ಪ್ರತಿಯೊಬ್ಬ ವ್ಯಕ್ತಿಯು ಹಾಗೆ ಕಾರ್ಯನಿರ್ವಹಿಸುವಾಗ ರಾಷ್ಟ್ರಪತಿಯು ಆದೇಶದ ಮೂಲಕ ನಿರ್ಧರಿಸಬಹುದಾದಂಥ ಭತ್ಯೆಗಳನ್ನು ಪಡೆಯಲು ಹಕ್ಕುಳ್ಳವನಾಗಿರತಕ್ಕದ್ದು ಮತ್ತು ಅವನು ನ್ಯಾಯಾಲಯದ ನ್ಯಾಯಾಧೀಶನ ಎಲ್ಲ ಅಧಿಕಾರವ್ಯಾಪ್ತಿಯನ್ನು, ಅಧಿಕಾರಗಳನ್ನು ಮತ್ತು ವಿಶೇಷಾಧಿಕಾರಗಳನ್ನು ಹೊಂದಿರತಕ್ಕದ್ದು; ಆದರೆ, ಅವನನ್ನು ಆ ನ್ಯಾಯಾಲಯದ ನ್ಯಾಯಾಧೀಶನೆಂದು ಅನ್ಯಥಾ ಭಾವಿಸತಕ್ಕದ್ದಲ್ಲ:
ಈ ಅನುಚ್ಛೇದದಲ್ಲಿ ಇರುವುದು ಯಾವುದೂ, ಹಿಂದೆ ಹೇಳಿದ ಯಾರೇ ವ್ಯಕ್ತಿಯು, ಆ ನ್ಯಾಯಾಲಯದ ನ್ಯಾಯಾಧೀಶನಾಗಿ ಕುಳಿತು ಕಾರ್ಯನಿರ್ವಹಿಸಲು ಸಮ್ಮತಿಸಿದ ಹೊರತು, ಹಾಗೆ ಕಾರ್ಯನಿರ್ವಹಿಸಬೇಕೆಂದು ಅವನನ್ನು ಅಗತ್ಯಪಡಿಸುವುದಾಗಿ ಭಾವಿಸತಕ್ಕದ್ದಲ್ಲ.
129 . ಸರ್ವೋಚ್ಚ ನ್ಯಾಯಾಲಯವು ಅಭಿಲೇಖ ನ್ಯಾಯಾಲಯವಾಗಿರತಕ್ಕದ್ದು.
ಸರ್ವೋಚ್ಚ ನ್ಯಾಯಾಲಯವು ಅಭಿಲೇಖ ನ್ಯಾಯಾಲಯವಾಗಿರತಕ್ಕದ್ದು ಮತ್ತು ಅದಕ್ಕೆ ಆದ ನಿಂದನೆಗೆ ದಂಡಿಸುವ ಅಧಿಕಾರವನ್ನೂ ಒಳಗೊಂಡಂತೆ ಅಂಥ ನ್ಯಾಯಾಲಯದ ಎಲ್ಲ ಅಧಿಕಾರಗಳನ್ನು ಅದು ಹೊಂದಿರತಕ್ಕದ್ದು.

130 . ಸರ್ವೋಚ್ಚ ನ್ಯಾಯಾಲಯದ ಕಾರ್ಯಸ್ಥಾನ,-
ಸರ್ವೋಚ್ಚ ನ್ಯಾಯಾಲಯವು ದೆಹಲಿಯಲ್ಲಿ ಅಥವಾ ಭಾರತದ ಮುಖ್ಯ ನ್ಯಾಯಮೂರ್ತಿಯು ರಾಷ್ಟ್ರಪತಿಯ ಅನುಮೋದನೆ ಪಡೆದು ಕಾಲಕಾಲಕ್ಕೆ ಗೊತ್ತು ಮಾಡಬಹುದಾದಂಥ ಇತರ ಸ್ಥಳದಲ್ಲಿ ಅಥವಾ ಸ್ಥಳಗಳಲ್ಲಿ ಉಪವೇಶನಗೊಳ್ಳತಕ್ಕದ್ದು.
131 . .ಸರ್ವೋಚ್ಚ ನ್ಯಾಯಾಲಯದ ಮೂಲ ಅಧಿಕಾರವ್ಯಾಪ್ತಿ.
ಈ ಸಂವಿಧಾನದ ಉಪಬಂಧಗಳಿಗೊಳಪಟ್ಟು,-
(a) ಭಾರತ ಸರ್ಕಾರದ ಮತ್ತು ಒಂದು ಅಥವಾ ಹೆಚ್ಚು ರಾಜ್ಯಗಳ ನಡುವೆ; ಅಥವಾ
(b) ಭಾರತ ಸರ್ಕಾರದ ಮತ್ತು ಯಾವುದೇ ರಾಜ್ಯ ಅಥವಾ ಯಾವುದೇ ರಾಜ್ಯಗಳು ಒಂದು ಕಡೆ ಹಾಗೂ ಒಂದು ಅಥವಾ ಹೆಚ್ಚು ಇತರ ರಾಜ್ಯಗಳು ಇನ್ನೊಂದು ಕಡೆ – ಇವುಗಳ ನಡುವೆ; ಅಥವಾ
(c) ಎರಡು ಅಥವಾ ಹೆಚ್ಚು ರಾಜ್ಯಗಳ ನಡುವೆ ಇರುವ ಯಾವುದೇ ವಿವಾದವು ಯಾವ ಪ್ರಶ್ನೆಯ ಮೇಲೆ (ಅದು ಕಾನೂನಿನದಾಗಿರಲಿ ಅಥವಾ ಸಂಗತಿಯದಾಗಿರಲಿ) ಕಾನೂನುಸಮ್ಮತ ಹಕ್ಕಿನ ಅಸ್ತಿತ್ವವು ಅಥವಾ ವ್ಯಾಪ್ತಿಯು ಅವಲಂಬಿತವಾಗಿರುವುದೋ ಆ ಯಾವುದೇ ಪ್ರಶ್ನೆಯನ್ನು ಒಳಗೊಂಡಿದ್ದರೆ ಮತ್ತು ಒಳಗೊಂಡಿರುವಷ್ಟರ ಮಟ್ಟಿಗೆ ಸರ್ವೋಚ್ಚ ನ್ಯಾಯಾಲಯವು ಇತರ ಯಾವುದೇ ನ್ಯಾಯಾಲಯವನ್ನು ಹೊರತುಪಡಿಸಿ ಅಂಥ ವಿವಾದದಲ್ಲಿ ಮೂಲ ಅಧಿಕಾರವ್ಯಾಪ್ತಿಯನ್ನು ಹೊಂದಿರತಕ್ಕದ್ದು:
ಸದರಿ ಅಧಿಕಾರವ್ಯಾಪ್ತಿಯು ಈ ಸಂವಿಧಾನವು ಪ್ರಾರಂಭವಾಗುವುದಕ್ಕೆ ಮುಂಚೆ ಮಾಡಿಕೊಂಡ ಅಥವಾ ಬರೆದುಕೊಟ್ಟ ಮತ್ತು ಈ ಸಂವಿಧಾನದ ಪ್ರಾರಂಭದ ನಂತರವೂ ಜಾರಿಯಲ್ಲಿರುವ ಅಥವಾ ಸದರಿ ಅಧಿಕಾರವ್ಯಾಪ್ತಿಯನ್ನು ಅಂಥ ವಿವಾದಕ್ಕೆ ವಿಸ್ತರಿಸತಕ್ಕದ್ದಲ್ಲವೆಂದು ಉಪಬಂಧಿಸುವ ಯಾವುದೇ ಕೌಲು, ಒಪ್ಪಂದ, ಒಡಂಬಡಿಕೆ, ವಚನಬಂಧ. ಸನದು ಅಥವಾ ಅಂಥದೇ ಇತರ ಲಿಖಿತಗಳಿಂದ ಉದ್ಭವಿಸುವ ವಿವಾದಕ್ಕೆ ವಿಸ್ತ್ರತವಾಗತಕ್ಕದ್ದಲ್ಲ.
131A . ಕೇಂದ್ರ ಕಾನೂನುಗಳ ಸಂವಿಧಾನಾತ್ಮಕ ಸಿಂಧುತ್ವದ ಬಗೆಗಿನ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯದ ಅನನ್ಯ ಅಧಿಕಾರವ್ಯಾಪ್ತಿ). ಸಂವಿಧಾನ (ನಲವತ್ತ ಮೂರನೆಯ ತಿದ್ದುಪಡಿ) ಅಧಿನಿಯಮ, 1977ರ 4ನೆಯ ಪ್ರಕರಣದ ಮೂಲಕ (13-4-1978ರಿಂದ ಜಾರಿಗೆ ಬರುವಂತೆ) ಬಿಟ್ಟುಬಿಡಲಾಗಿದೆ.
132 . ಕೆಲವು ಮೊಕದ್ದಮೆಗಳಲ್ಲಿ ಉಚ್ಚ ನ್ಯಾಯಾಲಯಗಳಿಂದ ಬರುವ ಅಪೀಲುಗಳಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ಅಪೀಲು ಅಧಿಕಾರವ್ಯಾಪ್ತಿ.
1 . ಭಾರತದ ರಾಜ್ಯಕ್ಷೇತ್ರದಲ್ಲಿರುವ ಯಾವುದೇ ಉಚ್ಚ ನ್ಯಾಯಾಲಯವು ಸಿವಿಲ್, ಕ್ರಿಮಿನಲ್ ಅಥವಾ ಇತರ ವ್ಯವಹರಣೆಯಲ್ಲಿ ನೀಡಿದ ಯಾವುದೇ ತೀರ್ಪು, ಡಿಕ್ರಿ ಅಥವಾ ಅಂತಿಮ ಆದೇಶಕ್ಕೆ ಸಂಬಂಧಪಟ್ಟ ಮೊಕದ್ದಮೆಯು ಈ ಸಂವಿಧಾನದ ಅರ್ಥ ವಿವರಣೆಗೆ ಸಂಬಂಧಿಸಿದ ಗಣನೀಯವಾದ ಕಾನೂನಿನ ಪ್ರಶ್ನೆಯನ್ನು ಒಳಗೊಂಡಿದೆಯೆಂದು [134A ಅನುಚ್ಛೇದದ ಮೇರೆಗೆ ಆ ಉಚ್ಚ ನ್ಯಾಯಾಲಯವು ಪ್ರಮಾಣೀಕರಿಸಿದರೆ] ಅಂಥ ತೀರ್ಪಿನ, ಡಿಕ್ರಿಯ ಅಥವಾ ಅಂತಿಮ ಆದೇಶದ ವಿರುದ್ಧ ಸರ್ವೋಚ್ಚ ನ್ಯಾಯಾಲಯಕ್ಕೆ ಅಪೀಲು ಹೂಡಲು ಅವಕಾಶವಿರತಕ್ಕದ್ದು.
ಅಂಥ ಪ್ರಮಾಣ ಪತ್ರವನ್ನು ಕೊಟ್ಟಿರುವಲ್ಲಿ ಹಿಂದೆ ಹೇಳಿರುವಂಥ ಯಾವುದೇ ಪ್ರಶ್ನೆಯನ್ನು ತಪ್ಪಾಗಿ ತೀರ್ಮಾನಿಸಲಾಗಿದೆಯೆಂಬ ಕಾರಣದ ಮೇಲೆ ಆ ಮೊಕದ್ದಮೆಯ ಯಾರೇ ಪಕ್ಷಕಾರನು ಸರ್ವೋಚ್ಚ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಬಹುದು
ವಿವರಣೆ.- ಈ ಅನುಚ್ಛೇದದ ಉದ್ದೇಶಗಳಿಗಾಗಿ “ಅಂತಿಮ ಆದೇಶ” ಎಂಬುದು, ವಿವಾದಾಂಶವನ್ನು ಅಪೀಲುದಾರನ ಪರವಾಗಿ ತೀರ್ಮಾನಿಸಿದರೆ, ಯಾವ ಆದೇಶವು ಆ ಅಂತಿಮ ಎಲೆಗೆ ಸಾಕಾಗಬಹುದೋ ಆ ಆದೇಶವನ್ನು ಒಳಗೊಳ್ಳುತ್ತದೆ.
133 . ಸಿವಿಲ್ ವಿಷಯಗಳ ಸಂಬಂಧದಲ್ಲಿ ಉಚ್ಚ ನ್ಯಾಯಾಲಯಗಳಿಂದ ಬರುವ ಅಪೀಲುಗಳಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ಅಪೀಲು ಅಧಿಕಾರವ್ಯಾಪ್ತಿ-
1 . ಭಾರತದ ರಾಜ್ಯಕ್ಷೇತ್ರದಲ್ಲಿರುವ ಒಂದು ಉಚ್ಚ ನ್ಯಾಯಾಲಯವು ಸಿವಿಲ್ ವ್ಯವಹರಣೆಯಲ್ಲಿ ನೀಡಿದ ಯಾವುದೇ ತೀರ್ಪು, ಡಿಕ್ಕಿ ಅಥವಾ ಅಂತಿಮ ಆದೇಶದ ಸಂಬಂಧದಲ್ಲಿ),
(a) ಆ ಮೊಕದ್ದಮೆಯು ಸಾರ್ವಜನಿಕ ಮಹತ್ವದ ಮುಖ್ಯವಾದ ಕಾನೂನು ಪ್ರಶ್ನೆಯನ್ನು ಒಳಗೊಂಡಿದೆ ಎಂದು; ಮತ್ತು
(b) ಉಚ್ಚ ನ್ಯಾಯಾಲಯದ ಅಭಿಪ್ರಾಯದಲ್ಲಿ ತೀರ್ಮಾನಿಸಬೇಕಾಗಿದೆ ಎಂದು ಸದರಿ ಪ್ರಶ್ನೆಯನ್ನು ಸರ್ವೋಚ್ಚ ನ್ಯಾಯಾಲಯವು
[ 134A ಅನುಚ್ಛೇದದ ಮೇರೆಗೆ ಆ ಉಚ್ಚ ನ್ಯಾಯಾಲಯವು ಪ್ರಮಾಣೀಕರಿಸಿದರೆ] ಅಂಥ ತೀರ್ಪಿನ, ಡಿಕ್ರಿಯ ಅಥವಾ ಅಂತಿಮ ಆದೇಶದ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಅಪೀಲು ಹೂಡಲು ಅವಕಾಶವಿರತಕ್ಕದ್ದು.]
2 . 132ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, (1)ನೇ ಖಂಡದ ಮೇರೆಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಅಪೀಲು ಮಾಡುವ ಯಾರೇ ಪಕ್ಷಕಾರನು ಈ ಸಂವಿಧಾನದ ಅರ್ಥ ವಿವರಣೆಗೆ ಸಂಬಂಧಿಸಿದ ಮುಖ್ಯವಾದ ಕಾನೂನು ಪ್ರಶ್ನೆಯನ್ನು ತಪ್ಪಾಗಿ ತೀರ್ಮಾನಿಸಿರುವುದು ಅಂಥ ಅಪೀಲಿನ ಕಾರಣಗಳಲ್ಲಿ ಒಂದು ಕಾರಣವಾಗಿದೆ ಎಂದು ವಾದವನ್ನು ಮಂಡಿಸಬಹುದು.
3 . ಈ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ಸಂಸತ್ತು ಕಾನೂನಿನ ಮೂಲಕ ಅನ್ಯಥಾ ಉಪಬಂಧಿಸಿದ ಹೊರತು, ಉಚ್ಚ ನ್ಯಾಯಾಲಯದ ಒಬ್ಬ ನ್ಯಾಯಾಧೀಶನು ನೀಡಿದ ತೀರ್ಪು. ಡಿಕ್ರಿ ಅಥವಾ ಅಂತಿಮ ಆದೇಶದ ವಿರುದ್ಧ ಸವೋಚ್ಚ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಲು ಅವಕಾಶವಿರತಕ್ಕದ್ದಲ್ಲ.
134 . ಕ್ರಿಮಿನಲ್ ವಿಷಯದ ಸಂಬಂಧದಲ್ಲಿ ಸರ್ವೋಚ್ಚ ನ್ಯಾಯಾಲಯದ ಅಪೀಲು ಅಧಿಕಾರವ್ಯಾಪ್ತಿ.
1 . ಭಾರತದ ರಾಜ್ಯಕ್ಷೇತ್ರದಲ್ಲಿರುವ ಒಂದು ಉಚ್ಚ ನ್ಯಾಯಾಲಯವು,
(a) ಆಪಾದಿತನನ್ನು ಖುಲಾಸೆ ಮಾಡುವ ಆದೇಶವನ್ನು ಅಪೀಲಿನಲ್ಲಿ ವಿಪರ್ಯಯಗೊಳಿಸಿ ಅವನಿಗೆ ಮರಣದಂಡನೆಯನ್ನು ವಿಧಿಸಿದ್ದರೆ; ಅಥವಾ
(b) ತನ್ನ ಅಧಿಕಾರಕ್ಕೆ ಅಧೀನವಾಗಿರುವ ಯಾವುದೇ ನ್ಯಾಯಾಲಯದಿಂದ ಯಾವುದೇ ಮೊಕದ್ದಮೆಯನ್ನು ತಾನೇ ಅಧಿವಿಚಾರಣೆ ಮಾಡಲು ತರಿಸಿಕೊಂಡು, ಅಂಥ ಅಧಿವಿಚಾರಣೆಯಲ್ಲಿ ಅಪರಾಧಿಯೆಂದು ನಿರ್ಣಯಿಸಿ ಅವನಿಗೆ ಮರಣದಂಡನೆಯನ್ನು ವಿಧಿಸಿದ್ದರೆ; ಅಥವಾ
(c) ಮೊಕದ್ದಮೆಯು ಸರ್ವೋಚ್ಚ ನ್ಯಾಯಾಲಯಕ್ಕೆ ಅಪೀಲು ಮಾಡಲು ಯೋಗ್ಯವಾಗಿದೆಯೆಂದು [134ಎ ಅನುಚ್ಛೇದದ ಮೇರೆಗೆ ಪ್ರಮಾಣೀಕರಿಸಿದರೆ] ಆ ಉಚ್ಚ ನ್ಯಾಯಾಲಯವು ಕ್ರಿಮಿನಲ್ ವ್ಯವಹರಣೆಯಲ್ಲಿ ನೀಡಿದ ತೀರ್ಪಿನ, ಅಂತಿಮ ಆದೇಶದ ಅಥವಾ ಶಿಕ್ಷೆಯ ಆದೇಶದ ವಿರುದ್ಧ ಸರ್ವೊಚ್ಚ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಲು ಅವಕಾಶವಿರತಕ್ಕದ್ದು:
145ನೆಯ ಅನುಚ್ಛೇದದ (1)ನೆಯ ಖಂಡದ ಮೇರೆಗೆ ಅಪೀಲು ಸಲ್ಲಿಸಲು ಕಲ್ಪಿಸಬಹುದಾದಂಥ ಉಪಬಂಧಗಳಿಗೆ ಮತ್ತು ಉಚ್ಚ ನ್ಯಾಯಾಲಯವು ವಿಧಿಸಬಹುದಾದಂಥ ಅಥವಾ ಅಗತ್ಯಪಡಿಸಬಹುದಾದಂಥ ಷರತ್ತುಗಳಿಗೆ ಒಳಪಟ್ಟು, (ಸಿ) ಉಪಖಂಡದ ಮೇರೆಗೆ ಅಪೀಲನ್ನು ಸಲ್ಲಿಸಲು ಅವಕಾಶವಿರತಕ್ಕದ್ದು,
2 . ಭಾರತದ ರಾಜ್ಯಕ್ಷೇತ್ರದಲ್ಲಿರುವ ಉಚ್ಚ ನ್ಯಾಯಾಲಯವು ಕ್ರಿಮಿನಲ್ ವ್ಯವಹರಣೆಯಲ್ಲಿ ನೀಡಿದ ಯಾವುದೇ ತೀರ್ಪಿನ, ಅಂತಿಮ ಆದೇಶದ ಅಥವಾ ಶಿಕ್ಷೆಯ ಆದೇಶದ ವಿರುದ್ಧ ಅಪೀಲುಗಳನ್ನು ಸ್ವೀಕರಿಸುವ ಮತ್ತು ಅಪೀಲುಗಳನ್ನು ಸುನಾವಣೆ ಮಾಡುವ ಸಂಬಂಧದಲ್ಲಿ ಸಂಸತ್ತು ಕಾನೂನಿನ ಮೂಲಕ, ಅಂಥ ಕಾನೂನಿನಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಷರತ್ತುಗಳಿಗೆ ಮತ್ತು ಪರಿಮಿತಿಗಳಿಗೆ ಒಳಪಟ್ಟು, ಸರ್ವೋಚ್ಚ ನ್ಯಾಯಾಲಯಕ್ಕೆ ಇನ್ನೂ ಯಾವುದೇ ಹೆಚ್ಚಿನ ಅಧಿಕಾರಗಳನ್ನು ಪ್ರದಾನ ಮಾಡಬಹುದು.
134 A . ಸರ್ವೋಚ್ಚ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಲು ಪ್ರಮಾಣಪತ್ರ .
132ನೇ ಅನುಚ್ಛೇದದ (1)ನೇ ಖಂಡದಲ್ಲಿ ಅಥವಾ 133ನೇ ಅನುಚ್ಛೇದದ (1)ನೇ ಖಂಡದಲ್ಲಿ ಅಥವಾ 134ನೇ ಅನುಚ್ಛೇದದ (1)ನೇ ಖಂಡದಲ್ಲಿ ಉಲ್ಲೇಖಿಸಿದ ತೀರ್ಪು, ಡಿಕ್ಕಿ, ಅಂತಿಮ ಆದೇಶ ಅಥವಾ ಶಿಕ್ಷೆಯ ಆದೇಶವನ್ನು ಮಾಡುವ ಅಥವಾ ಕೊಡುವ ಪ್ರತಿಯೊಂದು ಉಚ್ಚ ನ್ಯಾಯಾಲಯವು ಹಾಗೆ ಮಾಡಿದ ಅಥವಾ ಕೊಟ್ಟ ತರುವಾಯ, ಸಾಧ್ಯವಾದಷ್ಟು ಬೇಗ ಸಂದರ್ಭಾನುಸಾರ 132ನೇ ಅನುಚ್ಛೇದದ (1)ನೇ ಖಂಡದಲ್ಲಿ ಅಥವಾ 133ನೇ ಅನುಚ್ಛೇದದ (1)ನೇ ಖಂಡದಲ್ಲಿ ಅಥವಾ 134ನೇ ಅನುಚ್ಛೇದದ (1)ನೇ ಖಂಡದ (ಸಿ) ಉಪಖಂಡದಲ್ಲಿ ಉಲ್ಲೇಖಿಸಲಾದ ಸ್ವರೂಪದ ಪ್ರಮಾಣಪತ್ರವನ್ನು ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಬಹುದೇ ಎಂಬ ಪ್ರಶ್ನೆಯನ್ನು.-
(a) ತನ್ನ ಸ್ವಪ್ರೇರಣೆಯಿಂದ ಹಾಗೆ ಮಾಡುವುದು ಯೋಗ್ಯವೆಂದು ಅದು ಭಾವಿಸಿದರೆ ನಿರ್ಧರಿಸಬಹುದು; ಮತ್ತು
(b) ಅಂಥ ತೀರ್ಪು, ಡಿಕ್ರಿ, ಅಂತಿಮ ಆದೇಶ ಅಥವಾ ಶಿಕ್ಷೆಯ ಆದೇಶವನ್ನು ಮಾಡಿದ ಅಥವಾ ಕೊಟ್ಟ ನಿಕಟೋತ್ತರದಲ್ಲಿ, ಬಾಧಿತ ಪಕ್ಷಕಾರನು ಅಥವಾ ಅವನ ಪರವಾಗಿ ಮೌಖಿಕವಾಗಿ ಮನವಿ ಮಾಡಿಕೊಂಡರೆ ನಿರ್ಧರಿಸತಕ್ಕದ್ದು.
135 . . ಅಸ್ತಿತ್ವದಲ್ಲಿರುವ ಕಾನೂನಿನ ಮೇರೆಗೆ ಫೆಡರಲ್ ನ್ಯಾಯಾಲಯದ ಅಧಿಕಾರವ್ಯಾಪ್ತಿಯನ್ನು ಮತ್ತು ಅಧಿಕಾರಗಳನ್ನು ಸರ್ವೋಚ್ಚ ನ್ಯಾಯಾಲಯವು ಚಲಾಯಿಸುವುದು.-
ಯಾವ ವಿಷಯಕ್ಕೆ ಸಂಬಂಧಿಸಿದಂತೆ ಈ ಸಂವಿಧಾನವು ಪ್ರಾರಂಭವಾಗುವುದಕ್ಕೆ ನಿಕಟಪೂರ್ವದಲ್ಲಿ ಅಸ್ತಿತ್ವದಲ್ಲಿದ್ದ ಯಾವುದೇ ಕಾನೂನಿನ ಮೇರೆಗೆ ಫೆಡರಲ್ ನ್ಯಾಯಾಲಯವು ಅಧಿಕಾರವ್ಯಾಪ್ತಿಯನ್ನು ಮತ್ತು ಅಧಿಕಾರಗಳನ್ನು ಚಲಾಯಿಸಬಹುದಾಗಿತ್ತೋ ಮತ್ತು ಯಾವ ವಿಷಯಕ್ಕೆ 133ನೆಯ ಅಥವಾ 134ನೆಯ ಅನುಚ್ಛೇದದ ಉಪಬಂಧಗಳು ಅನ್ವಯಿಸುವುದಿಲ್ಲವೋ ಆ ವಿಷಯಕ್ಕೆ ಸಂಬಂಧಿಸಿದಂತೆಯೂ ಸಂಸತ್ತು ಕಾನೂನಿನ ಮೂಲಕ ಅನ್ಯಥಾ ಉಪಬಂಧಿಸುವವರೆಗೆ ಸರ್ವೋಚ್ಚ ನ್ಯಾಯಾಲಯವು ಆ ಅಧಿಕಾರವ್ಯಾಪ್ತಿಯನ್ನು ಮತ್ತು ಅಧಿಕಾರಗಳನ್ನು ಹೊಂದಿರತಕ್ಕದ್ದು.
136 . ಅಪೀಲು ಸಲ್ಲಿಸಲು ಸರ್ವೋಚ್ಚ ನ್ಯಾಯಾಲಯದಿಂದ ವಿಶೇಷ ಅನುಮತಿ:-
1 . ಈ ಅಧ್ಯಾಯದಲ್ಲಿ ಏನೇ ಇದ್ದಾಗ್ಯೂ, ಭಾರತದ ರಾಜ್ಯಕ್ಷೇತ್ರದಲ್ಲಿರುವ ಯಾವುದೇ ನ್ಯಾಯಾಲಯವು ಅಥವಾ ನ್ಯಾಯಾಧಿಕರಣವು ಯಾವುದೇ ವ್ಯಾಜ್ಯದಲ್ಲಿ ಅಥವಾ ವಿಷಯದಲ್ಲಿ ಮಾಡಿದ ಅಥವಾ ಕೊಟ್ಟ ಯಾವುದೇ ತೀರ್ಪಿನ, ಡಿಕ್ರಿಯ, ನಿರ್ಧರಣೆಯ, ಶಿಕ್ಷೆಯ ಆದೇಶದ ಅಥವಾ ಆದೇಶದ ವಿರುದ್ಧ ಅಪೀಲು ಹೂಡಲು, ಸರ್ವೋಚ್ಚ ನ್ಯಾಯಾಲಯವು ತನ್ನ ವಿವೇಚನಾನುಸಾರ ವಿಶೇಷ ಅನುಮತಿಯನ್ನು ನೀಡಬಹುದು.
2 . (1)ನೆಯ ಖಂಡದಲ್ಲಿ ಇರುವುದು ಯಾವುದೂ, ಸಶಸ್ತ್ರ ಬಲಗಳಿಗೆ ಸಂಬಂಧಪಟ್ಟ ಯಾವುದೇ ಕಾನೂನಿನ ಮೂಲಕ ಅಥವಾ ಮೇರೆಗೆ ರಚಿಸಲಾದ ಯಾವುದೇ ನ್ಯಾಯಾಲಯವು ಅಥವಾ ನ್ಯಾಯಾಧಿಕರಣವು ಮಾಡಿದ ಅಥವಾ ಕೊಟ್ಟ ಯಾವುದೇ ತೀರ್ಪಿಗೆ, ನಿರ್ಧರಣೆಗೆ, ಶಿಕ್ಷೆಯ ಆದೇಶಕ್ಕೆ ಆಥವಾ ಆದೇಶಕ್ಕೆ ಅನ್ವಯಿಸತಕ್ಕದ್ದಲ್ಲ.
137 . ಸರ್ವೋಚ್ಚ ನ್ಯಾಯಾಲಯವು ತೀರ್ಪುಗಳನ್ನು ಅಥವಾ ಆದೇಶಗಳನ್ನು ಪುನರವಲೋಕನ ಮಾಡುವುದು.-
ಸಂಸತ್ತು ರಚಿಸಿದ ಯಾವುದೇ ಕಾನೂನಿನ ಉಪಬಂಧಗಳಿಗೆ ಅಥವಾ 145ನೆಯ ಅನುಚ್ಛೇದದ ಮೇರೆಗೆ ರಚಿತವಾದ ಯಾವುದೇ ನಿಯಮಗಳಿಗೆ ಒಳಪಟ್ಟು, ಸರ್ವೋಚ್ಚ ನ್ಯಾಯಾಲಯವು ತಾನು ನೀಡಿದ ತೀರ್ಪನ್ನು ಅಥವಾ ಮಾಡಿದ ಆದೇಶವನ್ನು ಪುನರವಲೋಕನ ಮಾಡಲು ಅಧಿಕಾರವನ್ನು ಹೊಂದಿರತಕ್ಕದ್ದು.
138 . ಸರ್ವೋಚ್ಚ ನ್ಯಾಯಾಲಯದ ಅಧಿಕಾರವ್ಯಾಪ್ತಿಯ ವಿಸ್ತರಣೆ,-
(1) ಒಕ್ಕೂಟ ಪಟ್ಟಿಯಲ್ಲಿರುವ ವಿಷಯಗಳಲ್ಲಿ ಯಾವುದೇ ವಿಷಯಕ್ಕೆ ಸಂಬಂಧಪಟ್ಟಂತೆ ಸಂಸತ್ತು ಕಾನೂನಿನ ಮೂಲಕ ಪ್ರದಾನ ಮಾಡಬಹುದಾದಂಥ ಇನ್ನೂ ಹೆಚ್ಚಿನ ಅಧಿಕಾರವ್ಯಾಪ್ತಿಯನ್ನು ಮತ್ತು ಅಧಿಕಾರಗಳನ್ನು ಸರ್ವೋಚ್ಚ ನ್ಯಾಯಾಲಯವು ಹೊಂದಿರತಕ್ಕದ್ದು.
(2) ಯಾವುದೇ ವಿಷಯಕ್ಕೆ ಸಂಬಂಧಪಟ್ಟಂತೆ ಭಾರತ ಸರ್ಕಾರವು ಮತ್ತು ಯಾವುದೇ ರಾಜ್ಯ ಸರ್ಕಾರವು ವಿಶೇಷ ಒಪ್ಪಂದದ ಮೂಲಕ ಪ್ರದಾನ ಮಾಡಬಹುದಾದಂಥ ಇನ್ನೂ ಹೆಚ್ಚಿನ ಅಧಿಕಾರವ್ಯಾಪ್ತಿಯನ್ನು ಮತ್ತು ಅಧಿಕಾರಗಳನ್ನು, ಸರ್ವೋಚ್ಚ ನ್ಯಾಯಾಲಯವು ಚಲಾಯಿಸಬೇಕೆಂದು ಸಂಸತ್ತು ಕಾನೂನಿನ ಮೂಲಕ ಉಪಬಂಧಿಸಿದರೆ, ಸರ್ವೋಚ್ಚ ನ್ಯಾಯಾಲಯವು ಅಂಥ ಅಧಿಕಾರವ್ಯಾಪ್ತಿಯನ್ನು ಮತ್ತು ಅಧಿಕಾರಗಳನ್ನು ಹೊಂದಿರತಕ್ಕದ್ದು.
139 . ಸರ್ವೋಚ್ಚ ನ್ಯಾಯಾಲಯಕ್ಕೆ ಕೆಲವು ರಿಟ್ಗಳನ್ನು ಹೊರಡಿಸುವ ಅಧಿಕಾರಗಳನ್ನು ನೀಡುವುದು.
32ನೆಯ ಅನುಚ್ಛೇದದ (2)ನೆಯ ಖಂಡದಲ್ಲಿ ನಮೂದಿಸಿರುವ ಉದ್ದೇಶಗಳನ್ನು ಹೊರತುಪಡಿಸಿ ಯಾವುದೇ ಉದ್ದೇಶಗಳಿಗಾಗಿ ನಿರ್ದೇಶನಗಳನ್ನು, ಆದೇಶಗಳನ್ನು ಅಥವಾ ಹೇಬಿಯಸ್ ಕಾರ್ಪಸ್, ಮ್ಯಾಂಡಮಸ್, ಪ್ರೊಹಿಬಿಷನ್, ಕೋವಾರಂಟೊ ಮತ್ತು ಸರ್ಶಿಯೋರರಿ ಸ್ವರೂಪದ ರಿಟ್ಗಳೂ ಒಳಗೊಂಡಂತೆ ರಿಟ್ಗಳನ್ನು ಅಥವಾ ಅವುಗಳ ಪೈಕಿ ಯಾವುದನ್ನಾದರೂ ಹೊರಡಿಸಲು ಸಂಸತ್ತು, ಕಾನೂನಿನ ಮೂಲಕ ಸರ್ವೋಚ್ಚ ನ್ಯಾಯಾಲಯಕ್ಕೆ ಅಧಿಕಾರವನ್ನು ಪ್ರದಾನ ಮಾಡಬಹುದು.
139A . ಕೆಲವು ಮೊಕದ್ದಮೆಗಳ ವರ್ಗಾವಣೆ.-
1 . ಒಂದೇ ಬಗೆಯ ಅಥವಾ ಬಹುಮಟ್ಟಿಗೆ ಒಂದೇ ಬಗೆಯ ಕಾನೂನು ಪ್ರಶ್ನೆಗಳನ್ನು ಒಳಗೊಂಡಿರುವ ಮೊಕದ್ದಮೆಗಳು ಸರ್ವೋಚ್ಚ ನ್ಯಾಯಾಲಯದ ಮುಂದೆ ಮತ್ತು ಒಂದು ಅಥವಾ ಹೆಚ್ಚು ಉಚ್ಚ ನ್ಯಾಯಾಲಯಗಳ ಮುಂದೆ ಅಥವಾ ಎರಡು ಅಥವಾ ಹೆಚ್ಚು ಉಚ್ಚ ನ್ಯಾಯಾಲಯಗಳ ಮುಂದೆ ಇತ್ಯರ್ಥದಲ್ಲಿರುವಲ್ಲಿ ಮತ್ತು ಅಂಥ ಪ್ರಶ್ನೆಗಳು ಸಾರ್ವಜನಿಕ ಮಹತ್ವದ ಮುಖ್ಯ ಪ್ರಶ್ನೆಗಳಾಗಿವೆ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಸ್ವತಃ ಮನದಟ್ಟಾದರೆ ಅಥವಾ ಭಾರತದ ಅಟಾರ್ನಿ ಜನರಲನು ಅಥವಾ ಅಂಥ ಯಾವುದೇ ಮೊಕದ್ದಮೆಯ ಪಕ್ಷಕಾರನು ಅರ್ಜಿಯನ್ನು ಸಲ್ಲಿಸಿದ ತರುವಾಯ ಮನದಟ್ಟಾದರೆ, ಸರ್ವೋಚ್ಚ ನ್ಯಾಯಾಲಯವು ಉಚ್ಚ ನ್ಯಾಯಾಲಯದ ಅಥವಾ ಉಚ್ಚ ನ್ಯಾಯಾಲಯಗಳ ಮುಂದೆ ಇತ್ಯರ್ಥದಲ್ಲಿರುವ ಆ ಮೊಕದ್ದಮೆಯನ್ನು ಅಥವಾ ಮೊಕದ್ದಮೆಗಳನ್ನು ತರಿಸಿಕೊಳ್ಳಬಹುದು ಮತ್ತು ತಾನೇ ಆ ಎಲ್ಲ ಮೊಕದ್ದಮೆಗಳನ್ನು ಎಲೆ ಮಾಡಬಹುದು:
ಸರ್ವೋಚ್ಚ ನ್ಯಾಯಾಲಯವು, ಸದರಿ ಕಾನೂನು ಪ್ರಶ್ನೆಗಳನ್ನು ನಿರ್ಧರಿಸಿದ ತರುವಾಯ ಯಾವ ಉಚ್ಚ ನ್ಯಾಯಾಲಯದಿಂದ ಆ ಮೊಕದ್ದಮೆಯನ್ನು ತರಿಸಿಕೊಳ್ಳಲಾಗಿತ್ತೋ ಆ ಉಚ್ಚ ನ್ಯಾಯಾಲಯಕ್ಕೆ ಹಾಗೆ ತರಿಸಿಕೊಂಡಿದ್ದ ಯಾವುದೇ ಮೊಕದ್ದಮೆಯನ್ನು ಅಂಥ ಪ್ರಶ್ನೆಗಳ ಬಗ್ಗೆ ತನ್ನ ತೀರ್ಪಿನ ಒಂದು ಪ್ರತಿಯೊಡನೆ ವಾಪಸ್ಸು ಕಳುಹಿಸಬಹುದು ಮತ್ತು ಆ ಉಚ್ಚ ನ್ಯಾಯಾಲಯವು ಅದನ್ನು ಸ್ವೀಕರಿಸಿದ ಮೇಲೆ ಅಂಥ ತೀರ್ಪಿಗನುಸಾರವಾಗಿ ಮೊಕದ್ದಮೆಯನ್ನು ವಿಲೆ ಮಾಡಲು ಕ್ರಮ ಕೈಗೊಳ್ಳತಕ್ಕದ್ದು.]
2 . ಸರ್ವೋಚ್ಚ ನ್ಯಾಯಾಲಯವು, ಯಾವುದೇ ಉಚ್ಚ ನ್ಯಾಯಾಲಯದ ಮುಂದೆ ಇತ್ಯರ್ಥದಲ್ಲಿರುವ ಯಾವುದೇ ಮೊಕದ್ದಮೆಯನ್ನು, ಅಪೀಲನ್ನು ಅಥವಾ ಇತರ ವ್ಯವಹರಣೆಗಳನ್ನು ಇತರ ಯಾವುದೇ ಉಚ್ಚ ನ್ಯಾಯಾಲಯಕ್ಕೆ ವರ್ಗಾವಣೆ ಮಾಡುವುದು ನ್ಯಾಯೋದ್ದೇಶದಿಂದ ವಿಹಿತವೆಂದು ಭಾವಿಸಿದರೆ ಹಾಗೆ ವರ್ಗಾವಣೆ ಮಾಡಬಹುದು.
140 . ಸರ್ವೋಚ್ಚ ನ್ಯಾಯಾಲಯದ ಪೂರಕ ಅಧಿಕಾರಗಳು –
ಈ ಸಂವಿಧಾನದ ಮೂಲಕ ಅಥವಾ ಅದರ ಮೇರೆಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಪ್ರದಾನ ಮಾಡಿರುವ ಅಧಿಕಾರವ್ಯಾಪ್ತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಚಲಾಯಿಸಲು ಸಾಧ್ಯವಾಗುವಂತೆ ಮಾಡುವ ಉದ್ದೇಶಕ್ಕಾಗಿ ಅವಶ್ಯವೆಂದು ಅಥವಾ ಅಪೇಕ್ಷಣೀಯವೆಂದು ತೋರಬಹುದಾದಂಥ ಮತ್ತು ಈ ಸಂವಿಧಾನದ ಯಾವುದೇ ಉಪಬಂಧಗಳಿಗೆ ಅಸಂಗತವಾಗಿಲ್ಲದಂಥ ಪೂರಕ ಅಧಿಕಾರಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಪ್ರದಾನ ಮಾಡಲು ಸಂಸತ್ತು ಕಾನೂನು ಮೂಲಕ ಉಪಬಂಧಿಸಬಹುದು.
141 . ಸರ್ವೋಚ್ಚ ನ್ಯಾಯಾಲಯವು ಘೋಷಿಸಿದ ಕಾನೂನಿಗೆ ಎಲ್ಲ ನ್ಯಾಯಾಲಯಗಳು ಬದ್ಧವಾಗಿರುವುದು.
ಸರ್ವೋಚ್ಚ ನ್ಯಾಯಾಲಯವು ಘೋಷಿಸಿದ ಕಾನೂನಿಗೆ ಭಾರತದ ರಾಜ್ಯಕ್ಷೇತ್ರದಲ್ಲಿರುವ ಎಲ್ಲ ನ್ಯಾಯಾಲಯಗಳು ಬದ್ಧವಾಗಿರತಕ್ಕದ್ದು.
142 . ಸರ್ವೋಚ್ಚ ನ್ಯಾಯಾಲಯದ ಡಿಗ್ರಿಗಳ ಮತ್ತು ಆದೇಶಗಳ ಜಾರಿ ಮತ್ತು ಬಹಿರಂಗಪಡಿಸುವಿಕೆ, ಇತ್ಯಾದಿಗಳ ಬಗ್ಗೆ ಆದೇಶಗಳು.
1 . ಸರ್ವೋಚ್ಚ ನ್ಯಾಯಾಲಯವು ತನ್ನ ಅಧಿಕಾರವ್ಯಾಪ್ತಿಯನ್ನು ಚಲಾಯಿಸಿ, ತನ್ನ ಮುಂದೆ ಇತ್ಯರ್ಥದಲ್ಲಿರುವ ಯಾವುದೇ ವ್ಯಾಜ್ಯದ ಬಗ್ಗೆ ಅಥವಾ ಇತರ ವಿಷಯದ ಬಗ್ಗೆ ಪೂರ್ಣನ್ಯಾಯವನ್ನು ದೊರಕಿಸುವುದಕ್ಕೆ ಅವಶ್ಯವಾದಂಥ ಡಿಕ್ಕಿಯನ್ನು ಹೊರಡಿಸಬಹುದು ಅಥವಾ ಆದೇಶವನ್ನು ನೀಡಬಹುದು ಮತ್ತು ಹಾಗೆ ಹೊರಡಿಸಿದ ಡಿಕ್ರಿ ಅಥವಾ ಹಾಗೆ ನೀಡಿದ ಆದೇಶವು, ಸಂಸತ್ತು ಮಾಡಿದ ಯಾವುದೇ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ನಿಯಮಿಸಬಹುದಾದಂಥ ರೀತಿಯಲ್ಲಿ ಮತ್ತು ಹಾಗೆ ಉಪಬಂಧವನ್ನು ಮಾಡುವವರೆಗೆ ರಾಷ್ಟ್ರಪತಿಯು [ಆದೇಶ]ದ ಮೂಲಕ ನಿಯಮಿಸಬಹುದಾದಂಥ ರೀತಿಯಲ್ಲಿ ಭಾರತದ ರಾಜ್ಯಕ್ಷೇತ್ರದಾದ್ಯಂತ ಜಾರಿಗೊಳಿಸುವಂಥದ್ದಾಗಿರತಕ್ಕದ್ದು.
2 . ಸಂಸತ್ತು ಈ ಬಗ್ಗೆ ಯಾವುದೇ ಕಾನೂನಿನ ಮೂಲಕ ಮಾಡಿದ ಉಪಬಂಧಗಳಿಗೊಳಪಟ್ಟು, ಭಾರತದ ಸಮಸ್ತ ರಾಜ್ಯಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾರೇ ವ್ಯಕ್ತಿಯ ಹಾಜರಾತಿಯನ್ನು ಮತ್ತು ಯಾವುದೇ ದಸ್ತಾವೇಜುಗಳನ್ನು ಬಹಿರಂಗಪಡಿಸುವುದನ್ನು ಅಥವಾ ಹಾಜರುಪಡಿಸುವುದನ್ನು ಸುನಿಶ್ಚಿತಗೊಳಿಸುವ ಉದ್ದೇಶಕ್ಕಾಗಿ ಅಥವಾ ತನ್ನ ಯಾವುದೇ ನಿಂದನೆಯ ತನಿಖೆಯ ಅಥವಾ ದಂಡನೆಯ ಉದ್ದೇಶಕ್ಕಾಗಿ ಯಾವುದೇ ಆದೇಶ ಮಾಡಲು ಸರ್ವೋಚ್ಚ ನ್ಯಾಯಾಲಯವು ಎಲ್ಲ ಮತ್ತು ಪ್ರತಿಯೊಂದು ಅಧಿಕಾರವನ್ನು ಹೊಂದಿರತಕ್ಕದ್ದು,
143 . ಸರ್ವೋಚ್ಚ ನ್ಯಾಯಾಲಯದೊಡನೆ ಸಮಾಲೋಚಿಸಲು ರಾಷ್ಟ್ರಪತಿಯ ಅಧಿಕಾರ.-
(1) ಸರ್ವೋಚ್ಚ ನ್ಯಾಯಾಲಯದ ಅಭಿಪ್ರಾಯವನ್ನು ಪಡೆದುಕೊಳ್ಳುವುದು ವಿಹಿತವೆನಿಸುವಂಥ ಸ್ವರೂಪದ ಮತ್ತು ಸಾರ್ವಜನಿಕ ಮಹತ್ವವುಳ್ಳಂಥ ಕಾನೂನಿನ ಅಥವಾ ಸಂಗತಿಯ ಪ್ರಶ್ನೆಯು ಉದ್ಭವಿಸಿದೆ ಎಂದು ಅಥವಾ ಉದ್ಭವಿಸುವ ಸಂಭವ ಇದೆಯೆಂದು ಯಾವುದೇ ಕಾಲದಲ್ಲಿ ರಾಷ್ಟ್ರಪತಿಗೆ ಕಂಡುಬಂದರೆ, ಅವನು ಅದನ್ನು ನ್ಯಾಯಾಲಯದ ಪರ್ಯಾಲೋಚನೆಗಾಗಿ ಕಳುಹಿಸಬಹುದು ಮತ್ತು ಆ ನ್ಯಾಯಾಲಯವು ಸೂಕ್ತವೆಂದು ಭಾವಿಸುವಂಥ ಸುನಾವಣೆ ಮಾಡಿದ ನಂತರ ಅದರ ಮೇಲೆ ತನ್ನ ಅಭಿಪ್ರಾಯವನ್ನು ರಾಷ್ಟ್ರಪತಿಗೆ ವರದಿ ಮಾಡಬಹುದು.
(2) 131ನೆಯ ಅನುಚ್ಛೇದದ ? ಪರಂತುಕದಲ್ಲಿ ಏನೇ ಇದ್ದಾಗ್ಯೂ, [ಸದರಿ ಪರಂತುಕದಲ್ಲಿ) ನಮೂದಾಗಿರುವಂಥ ಬಗೆಯ ವಿವಾದವನ್ನು ಸರ್ವೋಚ್ಚ ನ್ಯಾಯಾಲಯದ ಅಭಿಪ್ರಾಯಕ್ಕಾಗಿ ರಾಷ್ಟ್ರಪತಿಯು ಕಳುಹಿಸಬಹುದು ಮತ್ತು ಸರ್ವೋಚ್ಚ ನ್ಯಾಯಾಲಯವು ಸೂಕ್ತವೆಂದು ಭಾವಿಸುವಂಥ ಸುನಾವಣೆ ಮಾಡಿದ ನಂತರ ಅದರ ಮೇಲೆ ತನ್ನ ಅಭಿಪ್ರಾಯವನ್ನು ರಾಷ್ಟ್ರಪತಿಗೆ ವರದಿ ಮಾಡತಕ್ಕದ್ದು.
144 . ಸಿವಿಲ್ ಮತ್ತು ನ್ಯಾಯಿಕ ಪ್ರಾಧಿಕಾರಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಸಹಾಯಕರಾಗಿ ಕೆಲಸ ಮಾಡುವುದು.
ಭಾರತದ ರಾಜ್ಯಕ್ಷೇತ್ರದ ಸಮಸ್ತ ಸಿವಿಲ್ ಮತ್ತು ನ್ಯಾಯಿಕ ಪ್ರಾಧಿಕಾರಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಸಹಾಯಕರಾಗಿ ಕೆಲಸ ಮಾಡತಕ್ಕದ್ದು.
144A . [(ಕಾನೂನುಗಳ ಸಂವಿಧಾನಾತ್ಮಕ ಸಿಂಧುತ್ವಕ್ಕೆ ಸಂಬಂಧಪಟ್ಟ ಪ್ರಶ್ನೆಗಳ ವಿಲೆಗೆ ಸಂಬಂಧಿಸಿದ ವಿಶೇಷ ಉಪಬಂಧಗಳು.-] ಸಂವಿಧಾನ (ನಲವತ್ತೂರನೆಯ ತಿದ್ದುಪಡಿ) ಅಧಿನಿಯಮ, 1977ರ 5ನೆಯ ಪ್ರಕರಣದ ಮೂಲಕ (13-4-1978ರಿಂದ ಜಾರಿಗೆ ಬರುವಂತೆ) ಬಿಟ್ಟುಬಿಡಲಾಗಿದೆ.
145 . ನ್ಯಾಯಾಲಯದ ನಿಯಮಗಳು, ಇತ್ಯಾದಿ.-
1 . ಸಂಸತ್ತು ಮಾಡಿದ ಯಾವುದೇ ಕಾನೂನಿನ ಉಪಬಂಧಗಳಿಗೆ ಒಳಪಟ್ಟು, ಸರ್ವೋಚ್ಚ ನ್ಯಾಯಾಲಯವು ಕಾಲಕಾಲಕ್ಕೆ ರಾಷ್ಟ್ರಪತಿಯ ಅನುಮೋದನೆ ಪಡೆದು ನ್ಯಾಯಾಲಯದ ಪದ್ಧತಿಯನ್ನು ಮತ್ತು ಪ್ರಕ್ರಿಯೆಯನ್ನು ಸಾಮಾನ್ಯವಾಗಿ ವಿನಿಯಮಗೊಳಿಸಲು ನಿಯಮಗಳನ್ನು ರಚಿಸಬಹುದು ಮತ್ತು ಆ ನಿಯಮಗಳಲ್ಲಿ ಈ ಕೆಳಕಂಡ ನಿಯಮಗಳೂ ಒಳಗೊಂಡಿರಬಹುದು,
(a) ಆ ನ್ಯಾಯಾಲಯದ ಮುಂದೆ ನ್ಯಾಯವಾದಿ ವೃತ್ತಿಯನ್ನು ನಡೆಸುವವರಿಗೆ ಸಂಬಂಧಿಸಿದ ನಿಯಮಗಳು;
(b) ಅಪೀಲುಗಳ ಸುನಾವಣೆಯ ಪ್ರಕ್ರಿಯೆಗೆ ಸಂಬಂಧಿಸಿದ ಮತ್ತು ಆ ನ್ಯಾಯಾಲಯಕ್ಕೆ ಅಪೀಲುಗಳನ್ನು ಯಾವ ಕಾಲದೊಳಗಾಗಿ ದಾಖಲು ಮಾಡಬೇಕೆಂಬುದೂ ಸೇರಿದಂತೆ ಅಪೀಲುಗಳಿಗೆ ಸಂಬಂಧಿಸಿದ ಇತರ ವಿಷಯಗಳ ಬಗ್ಗೆ ನಿಯಮಗಳು;
(c) IIIನೆಯ ಭಾಗದ ಮೂಲಕ ಪ್ರದಾನ ಮಾಡಲಾಗಿರುವ ಹಕ್ಕುಗಳಲ್ಲಿ ಯಾವುದೇ ಹಕ್ಕನ್ನು ಜಾರಿಗೊಳಿಸುವುದಕ್ಕಾಗಿ ಆ ನ್ಯಾಯಾಲಯದ ವ್ಯವಹರಣೆಗಳಿಗೆ ಸಂಬಂಧಿಸಿದ ನಿಯಮಗಳು;
[(c) [139A ಅನುಚ್ಛೇದದ] ಮೇರೆಗೆ ನ್ಯಾಯಾಲಯದ ವ್ಯವಹರಣೆಗಳಿಗೆ ಸಂಬಂಧಿಸಿದ ನಿಯಮಗಳು;
(d) 134ನೆಯ ಅನುಚ್ಛೇದದ (1)ನೆಯ ಖಂಡದ (c) ಉಪಖಂಡದ ಮೇರೆಗೆ ಅಪೀಲುಗಳನ್ನು ಸ್ವೀಕರಿಸುವುದಕ್ಕೆ ಸಂಬಂಧಪಟ್ಟ ನಿಯಮಗಳು;
(e) ಯಾವ ಷರತ್ತುಗಳಿಗೆ ಒಳಪಟ್ಟು, ನ್ಯಾಯಾಲಯವು ನೀಡಿದ ಯಾವುದೇ ತೀರ್ಪು ಅಥವಾ ಮಾಡಿದ ಆದೇಶವನ್ನು ಪುನರವಲೋಕನ ಮಾಡಬಹುದೋ ಆ ಷರತ್ತುಗಳಿಗೆ ಸಂಬಂಧಿಸಿದ ನಿಯಮಗಳು ಮತ್ತು ಅಂಥ ಪುನರವಲೋಕನಕ್ಕಾಗಿ ಯಾವ ಕಾಲದೊಳಗಾಗಿ ಅರ್ಜಿಗಳನ್ನು ನ್ಯಾಯಾಲಯಕ್ಕೆ ದಾಖಲು ಮಾಡಬೇಕೆಂಬುದೂ ಒಳಗೊಂಡಂತೆ, ಅಂಥ ಪುನರವಲೋಕನದ ಪ್ರಕ್ರಿಯೆಗೆ ಸಂಬಂಧಿಸಿದ ನಿಯಮಗಳು;
(f) ನ್ಯಾಯಾಲಯದಲ್ಲಿ ನಡೆಯುವ ಯಾವುದೇ ವ್ಯವಹರಣೆಗಳಿಗೆ ಮತ್ತು ಅವುಗಳಿಗೆ ಪ್ರಾಸಂಗಿಕವಾದ ಖರ್ಚುಗಳಿಗೆ ಸಂಬಂಧಪಟ್ಟ ಮತ್ತು ಅಲ್ಲಿನ ವ್ಯವಹರಣೆಗಳಿಗೆ ಸಂಬಂಧಿಸಿದಂತೆ ವಿಧಿಸಬೇಕಾದ ಫೀಜುಗಳಿಗೆ ಸಂಬಂಧಪಟ್ಟ ನಿಯಮಗಳು;
(g) ಜಾಮೀನಿನ ಮಂಜೂರಾತಿಗೆ ಸಂಬಂಧಿಸಿದ ನಿಯಮಗಳು;
(h) ವ್ಯವಹರಣೆಗಳ ತಡೆಗೆ ಸಂಬಂಧಿಸಿದ ನಿಯಮಗಳು:
(i) ಯಾವ ಅಪೀಲು ಕ್ಷುಲ್ಲಕವಾದುದೆಂದು ಅಥವಾ ಕಿರುಕುಳ ಕೊಡುವಂಥದ್ದಾಗಿದೆಯೆಂದು ಅಥವಾ ವಿಳಂಬಗೊಳಿಸುವ ಉದ್ದೇಶದಿಂದ ಸಲ್ಲಿಸಲಾದದ್ದೆಂದು ಆ ನ್ಯಾಯಾಲಯಕ್ಕೆ ತೋರಿಬರುವುದೋ ಆ ಯಾವುದೇ ಅಪೀಲಿನ ಕ್ಷಿಪ್ರ ನಿರ್ಧರಣೆಗೆ ಅವಕಾಶ ಮಾಡಿಕೊಡುವ ನಿಯಮಗಳು;
(j) 317ನೆಯ ಅನುಚ್ಛೇದದ (1)ನೆಯ ಖಂಡದಲ್ಲಿ ಉಲ್ಲೇಖಿಸಲಾಗಿರುವ ವಿಚಾರಣೆಗಳ ಪ್ರಕ್ರಿಯೆಗೆ ಸಂಬಂಧಿಸಿದ ನಿಯಮಗಳು.
2 . ‘[(3)ನೆಯ ಖಂಡದ ಉಪಬಂಧಗಳಿಗೆ] ಒಳಪಟ್ಟು, ಈ ಅನುಚ್ಛೇದದ ಮೇರೆಗೆ ರಚಿಸಿದ ನಿಯಮಗಳು, ಯಾವುದೇ ಉದ್ದೇಶಕ್ಕಾಗಿ ಉಪವೇಶನದಲ್ಲಿರಬೇಕಾದ ನ್ಯಾಯಾಧೀಶರ ಕನಿಷ್ಠ ಸಂಖ್ಯೆಯನ್ನು ಗೊತ್ತುಪಡಿಸಬಹುದು ಮತ್ತು ಏಕ ನ್ಯಾಯಾಧೀಶನ ಹಾಗೂ ವಿಭಾಗೀಯ ನ್ಯಾಯಾಲಯಗಳ ಅಧಿಕಾರಗಳ ಬಗ್ಗೆ ಉಪಬಂಧಿಸಬಹುದು.
3 . ಈ ಸಂವಿಧಾನದ ಅರ್ಥವಿವರಣೆಗೆ ಸಂಬಂಧಿಸಿದಂತೆ ಮುಖ್ಯವಾದ ಕಾನೂನು ಪ್ರಶ್ನೆಯನ್ನು ಒಳಗೊಂಡಿರುವ ಯಾವುದೇ ಪ್ರಕರಣವನ್ನು ತೀರ್ಮಾನಿಸುವ ಉದ್ದೇಶಕ್ಕಾಗಿ ಉಪವೇಶನದಲ್ಲಿರಬೇಕಾದ ಅಥವಾ ಈ ಸಂವಿಧಾನದ 143ನೆಯ ಅನುಚ್ಛೇದದ ಮೇರೆಗಿನ ಯಾವುದೇ ಅಭಿಪ್ರಾಯ ಕೋರಿಕೆಯ ಸುನಾವಣೆಯ ಉದ್ದೇಶಕ್ಕಾಗಿ ಉಪವೇಶನದಲ್ಲಿರಬೇಕಾದ ನ್ಯಾಯಾಧೀಶರ ಕನಿಷ್ಠ ಸಂಖ್ಯೆಯು] ಐದು ಆಗಿರತಕ್ಕದ್ದು:
ಈ ಅಧ್ಯಾಯದ 132ನೆಯ ಅನುಚ್ಛೇದವನ್ನು ಹೊರತುಪಡಿಸಿ ಇತರ ಯಾವುದೇ ಉಪಬಂಧಗಳ ಮೇರೆಗೆ ಅಪೀಲನ್ನು ಸುನಾವಣೆ ಮಾಡುವ ಆ ನ್ಯಾಯಾಲಯದಲ್ಲಿ ಐದಕ್ಕಿಂತಲೂ ಕಡಿಮೆ ನ್ಯಾಯಾಧೀಶರಿದ್ದು ಅಪೀಲು ಸುನಾವಣೆ ಕಾಲದಲ್ಲಿ ಆ ಅಪೀಲು ಈ ಸಂವಿಧಾನದ ಅರ್ಥ ವಿವರಣೆಗೆ ಸಂಬಂಧಪಟ್ಟ ಮುಖ್ಯವಾದ ಕಾನೂನು ಪ್ರಶ್ನೆಯನ್ನು ಒಳಗೊಂಡಿದೆಯೆಂದು ಮತ್ತು ಅಪೀಲನ್ನು ವಿಲೆ ಮಾಡಲು ತನ್ನ ನಿರ್ಧರಣೆಯು ಅವಶ್ಯವೆಂದು ನ್ಯಾಯಾಲಯಕ್ಕೆ ಮನದಟ್ಟಾದರೆ, ಆ ನ್ಯಾಯಾಲಯವು ಅಂಥ ಪ್ರಶ್ನೆಯನ್ನು ಒಳಗೊಂಡಿರುವ ಯಾವುದೇ ಮೊಕದ್ದಮೆಯನ್ನು ತೀರ್ಮಾನ ಮಾಡುವ ಉದ್ದೇಶಕ್ಕಾಗಿ ಈ ಖಂಡವು ಅಗತ್ಯಪಡಿಸಿರುವಂತೆ ರಚಿತವಾಗಿರುವ ನ್ಯಾಯಾಲಯಕ್ಕೆ ಆ ಪ್ರಶ್ನೆಯನ್ನು ಅದರ ಅಭಿಪ್ರಾಯಕ್ಕಾಗಿ ಕಳುಹಿಸಿಕೊಡತಕ್ಕದ್ದು ಮತ್ತು ಆ ಅಭಿಪ್ರಾಯವು ತಲುಪಿದ ಮೇಲೆ ಅಂಥ ಅಭಿಪ್ರಾಯಕ್ಕನುಸಾರವಾಗಿ ಅಪೀಲನ್ನು ಎಲೆ ಮಾಡತಕ್ಕದ್ದು.
4 . ಸರ್ವೋಚ್ಚ ನ್ಯಾಯಾಲಯವು ಯಾವುದೇ ತೀರ್ಪನ್ನು ಬಹಿರಂಗ ನ್ಯಾಯಾಲಯದಲ್ಲಿ ಹೊರತು ಅನ್ಯಥಾ ಕೊಡತಕ್ಕದ್ದಲ್ಲ ಮತ್ತು ಬಹಿರಂಗ ನ್ಯಾಯಾಲಯದಲ್ಲಿ ಕೊಟ್ಟ ಅಭಿಪ್ರಾಯಕ್ಕೆ ಅನುಸಾರವಾಗಿಯಲ್ಲದೆ 143ನೆಯ ಅನುಚ್ಛೇದದ ಮೇರೆಗೆ ಯಾವುದೇ ವರದಿಯನ್ನು ಮಾಡತಕ್ಕದ್ದಲ್ಲ.
5 . ಸರ್ವೋಚ್ಚ ನ್ಯಾಯಾಲಯವು ಯಾವುದೇ ತೀರ್ಪನ್ನು ಮತ್ತು ಅಂಥ ಯಾವುದೇ ಅಭಿಪ್ರಾಯವನ್ನು, ಆ ಪ್ರಕರಣದ ಸುನಾವಣೆಯಲ್ಲಿ ಹಾಜರಿರುವ ನ್ಯಾಯಾಧೀಶರ ಬಹುಮತದ ಸಹಮತಿಯಿಂದ ಹೊರತು ಅನ್ಯಥಾ ಕೊಡತಕ್ಕದ್ದಲ್ಲ; ಆದರೆ ಈ ಖಂಡದಲ್ಲಿ ಇರುವುದು ಯಾವುದೂ ಸಹಮತಿಸದಿರುವ ನ್ಯಾಯಾಧೀಶನನ್ನು ತನ್ನ ಭಿನ್ನಾಭಿಪ್ರಾಯದ ತೀರ್ಪನ್ನು ಅಥವಾ ತನ್ನ ಭಿನ್ನಾಭಿಪ್ರಾಯವನ್ನು ಕೊಡದಂತೆ ಪ್ರತಿಬಂಧಿಸುತ್ತದೆ ಎಂದು ಭಾವಿಸತಕ್ಕದ್ದಲ್ಲ.
146 . ಸರ್ವೋಚ್ಚ ನ್ಯಾಯಾಲಯದ ಅಧಿಕಾರಿಗಳು ಮತ್ತು ನೌಕರರು ಹಾಗೂ ವೆಚ್ಚಗಳು.
1 . ಸರ್ವೋಚ್ಚ ನ್ಯಾಯಾಲಯದ ಅಧಿಕಾರಿಗಳ ಮತ್ತು ನೌಕರರ ನೇಮಕಗಳನ್ನು ಭಾರತದ ಮುಖ್ಯ ನ್ಯಾಯಮೂರ್ತಿಯು ಅಥವಾ ಅವನು ನಿರ್ದೇಶಿಸಬಹುದಾದಂಥ ಆ ನ್ಯಾಯಾಲಯದ ಇತರ ನ್ಯಾಯಾಧೀಶನು ಅಥವಾ ಅಧಿಕಾರಿಯು ಮಾಡತಕ್ಕದ್ದು:
, ರಾಷ್ಟ್ರಪತಿಯು ನಿಯಮದ ಮೂಲಕ, ಆ ನಿಯಮದಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಸಂದರ್ಭಗಳಲ್ಲಿ ಆ ನ್ಯಾಯಾಲಯಕ್ಕೆ ಆ ಮೊದಲೇ ಸೇರಿಲ್ಲದ ಯಾರೇ ವ್ಯಕ್ತಿಯನ್ನು, ಕೇಂದ್ರ ಲೋಕಸೇವಾ ಆಯೋಗದೊಡನೆ ನ್ಯಾಯಾಲಯಕ್ಕೆ ಸಂಬಂಧಪಟ್ಟ ಯಾವುದೇ ಪದಕ್ಕೆ ನೇಮಕ ಸಮಾಲೋಚನೆ ಮಾಡಿದ ಹೊರತು ಮಾಡತಕ್ಕದ್ದಲ್ಲವೆಂದು ಅಗತ್ಯಪಡಿಸಬಹುದು.
2 . ಸಂಸತ್ತು ಮಾಡಿದ ಯಾವುದೇ ಕಾನೂನಿನ ಉಪಬಂಧಗಳಿಗೊಳಪಟ್ಟು, ಸರ್ವೋಚ್ಚ ನ್ಯಾಯಾಲಯದ ಅಧಿಕಾರಿಗಳ ಮತ್ತು ನೌಕರರ ಸೇವಾ ಷರತ್ತುಗಳು, ಭಾರತದ ಮುಖ್ಯ ನ್ಯಾಯಮೂರ್ತಿಯು ಅಥವಾ ಆ ಉದ್ದೇಶಕ್ಕಾಗಿ ನಿಯಮಗಳನ್ನು ರಚಿಸಲು ಅವನು ಅಧಿಕೃತಗೊಳಿಸಿದ ಆ ನ್ಯಾಯಾಲಯದ ಇತರ ನ್ಯಾಯಾಧೀಶನು ಅಥವಾ ಅಧಿಕಾರಿಯು ರಚಿಸಿದ ನಿಯಮಗಳ ಮೂಲಕ ನಿಯಮಿಸಬಹುದಾದಂತೆ ಇರತಕ್ಕದ್ದು:
ಈ ಖಂಡದ ಮೇರೆಗೆ ರಚಿತವಾದ ನಿಯಮಗಳು ಸಂಬಳಗಳಿಗೆ, ಭತ್ಯೆಗಳಿಗೆ, ರಜೆಗೆ ಅಥವಾ ನಿವೃತ್ತಿವೇತನಗಳಿಗೆ ಸಂಬಂಧಪಡುವಷ್ಟರ ಮಟ್ಟಿಗೆ. ನಿಯಮಗಳಿಗೆ ರಾಷ್ಟ್ರಪತಿಯ ಅನುಮೋದನೆಯು ಅಗತ್ಯವಾಗಿರತಕ್ಕದ್ದು.
3 . ಸರ್ವೋಚ್ಚ ನ್ಯಾಯಾಲಯದ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಅಥವಾ ಅವರಿಗೆ ಸಂಬಂಧಿಸಿದಂತೆ ಸಂದಾಯವಾಗಬೇಕಾದ ಎಲ್ಲ ಸಂಬಳಗಳು, ಭತ್ಯೆಗಳು ಮತ್ತು ನಿವೃತ್ತಿವೇತನಗಳು ಸೇರಿದಂತೆ ಆ ನ್ಯಾಯಾಲಯದ ಆಡಳಿತ ವೆಚ್ಚವನ್ನು ಭಾರತದ ಸಂಚಿತ ನಿಧಿಯ ಮೇಲೆ ಹೊರಿಸತಕ್ಕದ್ದು ಮತ್ತು ಆ ನ್ಯಾಯಾಲಯವು ಸ್ವೀಕರಿಸುವ ಯಾವುದೇ ಫೀಜುಗಳು ಮತ್ತು ಇತರ ಹಣವು ಆ ನಿಧಿಯ ಭಾಗವಾಗಿರತಕ್ಕದ್ದು.
147 . ಅರ್ಥವಿವರಣೆ.-
ಈ ಅಧ್ಯಾಯದಲ್ಲಿ ಮತ್ತು VIನೇ ಭಾಗದ Vನೇ ಅಧ್ಯಾಯದಲ್ಲಿ ಈ ಸಂವಿಧಾನದ ಅರ್ಥವಿವರಣೆಗೆ ಸಂಬಂಧಿಸಿದ ಯಾವುದೇ ಮುಖ್ಯ ಕಾನೂನು ಪ್ರಶ್ನೆಯ ಉಲ್ಲೇಖಗಳು, 1935ನೆಯ ಇಸವಿಯ ಭಾರತ ಸರ್ಕಾರ ಅಧಿನಿಯಮದ (ಆ ಅಧಿನಿಯಮವನ್ನು ತಿದ್ದುಪಡಿ ಮಾಡುವ ಅಥವಾ ಅದಕ್ಕೆ ಸೇರ್ಪಡೆ ಮಾಡುವ ಯಾವುದೇ ಅಧಿನಿಯಮವೂ ಸೇರಿದಂತೆ) ಅಥವಾ ಅದರ ಮೇರೆಗೆ ಮಾಡಿದ ಯಾವುದೇ ಆದೇಶದ ಅಥವಾ ಮಂತ್ರಾಲೋಚನಾ ಸಭೆಯ ಯಾವುದೇ ಆದೇಶದ ಅಥವಾ 1947ರ ಭಾರತ ಸ್ವಾತಂತ್ರ್ಯ ಅಧಿನಿಯಮದ ಅಥವಾ ಅದರ ಮೇರೆಗೆ ಮಾಡಿದ ಯಾವುದೇ ಆದೇಶದ ಅರ್ಥ ವಿವರಣೆಗೆ ಸಂಬಂಧಪಟ್ಟ ಯಾವುದೇ ಮುಖ್ಯ ಕಾನೂನು ಪ್ರಶ್ನೆಯ ಉಲ್ಲೇಖಗಳನ್ನೂ ಒಳಗೊಂಡಿರುವ ಹಾಗೆ ಅವುಗಳನ್ನು ಅರ್ಥೈಸತಕ್ಕದ್ದು.
ಅದ್ಯಾಯ Ⅱ ಸಂಸತ್ತು . article 79 ರಿಂದ 98ರಲ್ಲಿ ಬರುವ ಸಂಸತ್ತಿನ ರಚನೆ ಮತ್ತು ಪಾರ್ಲಿಮೆಂಟಿನ ಅಧಿಕಾರಿಗಳು.
ಭಾರತೀಯ ಸಂಸತ್ತಿನ ಕಾರ್ಯಕಲಾಪ, ಅನರ್ಹತೆಗಳು ಮತ್ತು ವಿಧಾಯಿ ಪ್ರಕ್ರಿಯೆ (Article 99–111)
ಅದ್ಯಾಯ Ⅱ ಸಂಸತ್ತು : Article 112 ರಿಂದ 122ರಲ್ಲಿ ಬರುವ ಹಣಕಾಸು ಪ್ರಕ್ರಿಯೆ & ಸಾಮಾನ್ಯತಃ ಪ್ರಕ್ರಿಯೆ
1 thought on “ರಾಷ್ಟ್ರಪತಿಯ ವಿಧಾಯೀ ಅಧಿಕಾರಗಳು – ಅದ್ಯಾಯ Ⅲ ಮತ್ತು ಒಕ್ಕೂಟ ನ್ಯಾಯಾಂಗ- ಅದ್ಯಾಯ Ⅳ . (Articles 123–147) . “Step-by-Step Ultimate Guide to Legislative Powers of the President – Chapter Ⅲ & The Union Judiciary – Chapter Ⅳ .”