ಅದ್ಯಾಯ Ⅱ . ಸಂಸತ್ತು . Introduction to Parliament of India
ಸಾಮಾನ್ಯ . General
79 . ಸಂಸತ್ತಿನ ರಚನೆ.
ಒಕ್ಕೂಟವು ಒಂದು ಸಂಸತ್ತನ್ನು ಹೊಂದಿರತಕ್ಕದ್ದು ಮತ್ತು ಆ ಸಂಸತ್ತು ರಾಷ್ಟ್ರಪತಿಯನ್ನು ಹಾಗೂ ಅನುಕ್ರಮವಾಗಿ ರಾಜ್ಯಸಭೆ ಮತ್ತು ಲೋಕಸಭೆ ಎಂಬ ಹೆಸರುಗಳನ್ನುಳ್ಳ ಎರಡು ಸದನಗಳನ್ನು ಹೊಂದಿರತಕ್ಕದ್ದು.
80 .ರಾಜ್ಯಸಭೆಯ ರಚನೆ.-
1 . ರಾಜ್ಯಸಭೆಯು-
(a) (3)ನೆಯ ಖಂಡದ ಉಪಬಂಧಗಳಿಗನುಸಾರ ರಾಷ್ಟ್ರಪತಿಯು ನಾಮನಿರ್ದೆಶನ ಮಾಡತಕ್ಕ ಹನ್ನೆರಡು ಜನ ಸದಸ್ಯರನ್ನು: ಮತ್ತು
(b) ರಾಜ್ಯಗಳಿಂದ [ಮತ್ತು ಒಕ್ಕೂಟ ರಾಜ್ಯಕ್ಷೇತ್ರಗಳಿಂದ] ಇನ್ನೂರ ಮೂವತ್ತೆಂಟಕ್ಕೆ ಮೀರದಷ್ಟು ಪ್ರತಿನಿಧಿಗಳನ್ನು ಒಳಗೊಂಡಿರತಕ್ಕದ್ದು.
2 . ರಾಜ್ಯಗಳ [ಮತ್ತು ಒಕ್ಕೂಟ ರಾಜ್ಯಕ್ಷೇತ್ರಗಳ ಪ್ರತಿನಿಧಿಗಳಿಂದ ಭರ್ತಿಯಾಗಬೇಕಾದ ರಾಜ್ಯಸಭೆಯಲ್ಲಿನ ಸ್ಥಾನಗಳ ಹಂಚಿಕೆಯನ್ನು ನಾಲ್ಕನೆಯ ಅನುಸೂಚಿಯಲ್ಲಿ ಅಡಕವಾಗಿರುವ ಆ ಬಗೆಗಿನ ಉಪಬಂಧಗಳಿಗನುಸಾರ ಮಾಡತಕ್ಕದ್ದು.
3 . (1)ನೆಯ ಖಂಡದ (a) ಉಪಖಂಡದ ಮೇರೆಗೆ ರಾಷ್ಟ್ರಪತಿಯು, ನಾಮನಿರ್ದೆಶನ ಮಾಡುವ ಸದಸ್ಯರು, ಈ ಮುಂದಿನ ವಿಷಯಗಳಿಗೆ ಸಂಬಂಧಿಸಿದಂತೆ, ಎಂದರೆ:- ಸಾಹಿತ್ಯ, ವಿಜ್ಞಾನ, ಕಲೆ ಮತ್ತು ಸಮಾಜ ಸೇವೆಗಳಲ್ಲಿ ವಿಶೇಷ ಜ್ಞಾನವನ್ನು ಅಥವಾ ವ್ಯಾವಹಾರಿಕ ಅನುಭವವನ್ನು ಪಡೆದವರಾಗಿರತಕ್ಕದ್ದು.
4 . ರಾಜ್ಯಸಭೆಯಲ್ಲಿನ ಪ್ರತಿಯೊಂದು ರಾಜ್ಯದ ಪ್ರತಿನಿಧಿಗಳು ಆಯಾ ರಾಜ್ಯದ ವಿಧಾನಸಭೆಯ ಚುನಾಯಿತ ಸದಸ್ಯರಿಂದ ಏಕವರ್ಗಾವಣೀಯ ಮತದ ವಿಧಾನದ ಮೂಲಕ ಪ್ರಮಾಣಾನುಸಾರ ಪ್ರಾತಿನಿಧ್ಯ ಪದ್ಧತಿಗನುಸಾರ ಚುನಾಯಿತರಾಗತಕ್ಕದ್ದು.
5 . ರಾಜ್ಯಸಭೆಯಲ್ಲಿನ [ಒಕ್ಕೂಟ ರಾಜ್ಯಕ್ಷೇತ್ರಗಳ] ಪ್ರತಿನಿಧಿಗಳು, ಸಂಸತ್ತು ಕಾನೂನಿನ ಮೂಲಕ ನಿಯಮಿಸಬಹುದಾದಂಥ ರೀತಿಯಲ್ಲಿ ಆಯ್ಕೆ ಆಗತಕ್ಕದ್ದು.
81 . . ಲೋಕಸಭೆಯ ರಚನೆ.
1 . [331ನೆಯ ಅನುಚ್ಛೇದದ ಉಪಬಂಧಗಳಿಗೊಳಪಟ್ಟು]
ಲೋಕಸಭೆಯು,-
(a) ರಾಜ್ಯಗಳಲ್ಲಿನ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಂದ ನೇರ ಚುನಾವಣೆಯ ಮೂಲಕ ಆಯ್ಕೆಯಾದ [ಐನೂರ ಮೂವತ್ತಕ್ಕಿಂತ] ಹೆಚ್ಚಲ್ಲದಷ್ಟು ಸದಸ್ಯರನ್ನು: ಮತ್ತು
(b) ಒಕ್ಕೂಟ ರಾಜ್ಯಕ್ಷೇತ್ರಗಳನ್ನು ಪ್ರತಿನಿಧಿಸಲು, ಸಂಸತ್ತು ಕಾನೂನಿನ ಉಪಬಂಧಿಸಬಹುದಾದಂಥ ರೀತಿಯಲ್ಲಿ ಆಯ್ಕೆಯಾದ [ಇಪ್ಪತ್ತಕ್ಕಿಂತ] ಹೆಚ್ಚಲ್ಲದಷ್ಟು ಸದಸ್ಯರನ್ನು ಮೂಲಕ ಒಳಗೊಂಡಿರತಕ್ಕದ್ದು.
2 . (1)ನೆಯ ಖಂಡದ (ಎ) ಉಪಖಂಡದ ಉದ್ದೇಶಗಳಿಗಾಗಿ.
(a) ಲೋಕಸಭೆಯಲ್ಲಿ ಪ್ರತಿಯೊಂದು ರಾಜ್ಯಕ್ಕೆ ಇರಬೇಕಾದ ಸ್ಥಾನಗಳ ಸಂಖ್ಯೆಯನ್ನು, ಆ ಸಂಖ್ಯೆ ಮತ್ತು ಆ ರಾಜ್ಯದ ಜನಸಂಖ್ಯೆ ಇವೆರಡರ ನಡುವಣ ಅನುಪಾತವು, ಕಾರ್ಯಸಾಧ್ಯವಾಗುವಷ್ಟರ ಮಟ್ಟಿಗೆ, ಎಲ್ಲ ರಾಜ್ಯಗಳಿಗೂ ಒಂದೇ ಆಗಿರುವಂಥ ರೀತಿಯಲ್ಲಿ ಹಂಚಿಕೆ ಮಾಡತಕ್ಕದ್ದು; ಮತ್ತು
(b) ಪ್ರತಿಯೊಂದು ಚುನಾವಣಾ ಕ್ಷೇತ್ರದ ಜನಸಂಖ್ಯೆ ಮತ್ತು ಅದಕ್ಕೆ ಹಂಚಲಾದ ಸ್ಥಾನಗಳ ಸಂಖ್ಯೆ ಇವೆರಡರ ನಡುವಣ ಅನುಪಾತವು, ಕಾರ್ಯಸಾಧ್ಯವಾಗುವಷ್ಟರ ಮಟ್ಟಿಗೆ. ರಾಜ್ಯದಾದ್ಯಂತ ಒಂದೇ ಆಗಿರುವಂಥ ರೀತಿಯಲ್ಲಿ ಪ್ರತಿಯೊಂದು ರಾಜ್ಯವನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಾಗಿ ವಿಭಾಗಿಸತಕ್ಕದ್ದು: ಲೋಕಸಭೆಯಲ್ಲಿ ಸ್ಥಾನಗಳನ್ನು ಹಂಚಿಕೆ ಮಾಡುವ ಉದ್ದೇಶಕ್ಕಾಗಿ ಯಾವುದೇ ರಾಜ್ಯಕ್ಕೆ, ಆ ರಾಜ್ಯದ ಜನಸಂಖ್ಯೆಯು, ಅರವತ್ತು ಲಕ್ಷ ಮೀರದಿರುವವರೆಗೆ ಈ ಖಂಡದ (a) ಉಪಖಂಡದ ಉಪಬಂಧಗಳು ಆ ರಾಜ್ಯಕ್ಕೆ ಅನ್ವಯವಾಗತಕ್ಕದ್ದಲ್ಲ.]
3 . ಈ ಅನುಚ್ಛೇದದಲ್ಲಿ “ಜನಸಂಖ್ಯೆ” ಎಂದರೆ, ಯಾವ ಹಿಂದಿನ ಕೊನೆಯ ಜನಗಣತಿಯ ಸುಸಂಗತ ಅಂಕಿಗಳನ್ನು ಪ್ರಕಟಿಸಲಾಗಿದೆಯೋ ಆ ಹಿಂದಿನ ಕೊನೆಯ ಜನಗಣತಿಯಲ್ಲಿ ಖಚಿತಪಡಿಸಿಕೊಂಡ ಜನಸಂಖ್ಯೆ: ಈ ಖಂಡದಲ್ಲಿ ಯಾವ ಹಿಂದಿನ ಕೊನೆಯ ಜನಗಣತಿಯ ಸುಸಂಗತ ಅಂಕಿಗಳನ್ನು ಪ್ರಕಟಿಸಲಾಗಿದೆಯೋ ಆ ಜನಗಣತಿಗೆ ಮಾಡಿದ ಉಲ್ಲೇಖವನ್ನು [2026 ನೆಯ] ಇಸವಿಯ ತರುವಾಯ ಮೊದಲನೇ ಸಲ ನಡೆಸಲಾಗುವ ಜನಗಣತಿಯ ಸುಸಂಗತ ಅಂಕಿಗಳು ಪ್ರಕಟವಾಗುವವರೆಗೆ,-
[(1) (2)ನೇ ಖಂಡದ (a) ಉಪಖಂಡದ ಮತ್ತು ಆ ಖಂಡದ ಪರಂತುಕದ ಉದ್ದೇಶಗಳಿಗಾಗಿ, 1971ರ ಜನಗಣತಿಗೆ ಮಾಡಿದ ಉಲ್ಲೇಖವೆಂದು; ಮತ್ತು
(ii) (2)ನೇ ಖಂಡದ (b) ಉಪಖಂಡದ ಉದ್ದೇಶಗಳಿಗಾಗಿ, [2001ರ ಜನಗಣತಿಗೆ ಮಾಡಿದ ಉಲ್ಲೇಖವೆಂದು ಅರ್ಥೈಸತಕ್ಕದ್ದು.]]
82 . ಪ್ರತಿಯೊಂದು ಜನಗಣತಿಯ ತರುವಾಯ ಮರುಹೊಂದಾಣಿಕೆ.
ಪ್ರತಿಯೊಂದು ಜನಗಣತಿಯು ಪೂರ್ಣಗೊಂಡ ಮೇಲೆ, ಲೋಕಸಭೆಯಲ್ಲಿ ಸ್ಥಾನಗಳನ್ನು ರಾಜ್ಯಗಳಿಗೆ ಹಂಚಲು ಮತ್ತು ಪ್ರತಿಯೊಂದು ರಾಜ್ಯವನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಾಗಿ ವಿಭಾಗಿಸಲು ಸಂಸತ್ತು ಕಾನೂನು ಮೂಲಕ ನಿರ್ಧರಿಸಬಹುದಾದಂಥ ಪ್ರಾಧಿಕಾರವು ಮತ್ತು ಅಂಥ ರೀತಿಯಲ್ಲಿ ಮರು ಹೊಂದಾಣಿಕೆ ಮಾಡತಕ್ಕದ್ದು: ಅಂಥ ಮರುಹೊಂದಾಣಿಕೆಯು ಆಗ ಅಸ್ತಿತ್ವದಲ್ಲಿರುವ ಲೋಕಸಭೆಯು ವಿಸರ್ಜನೆಯಾಗುವವರೆಗೆ ಆ ಸಭೆಯಲ್ಲಿನ ಪ್ರಾತಿನಿಧ್ಯಕ್ಕೆ ಬಾಧಕವನ್ನುಂಟುಮಾಡತಕ್ಕದ್ದಲ್ಲ:
[ಮತ್ತು ಅಂಥ ಮರುಹೊಂದಾಣಿಕೆಯು ರಾಷ್ಟ್ರಪತಿಯು ಆದೇಶದ ಮೂಲಕ ನಿರ್ದಿಷ್ಟಪಡಿಸಬಹುದಾದಂಥ ದಿನಾಂಕದಿಂದ ಜಾರಿಗೆ ಬರತಕ್ಕದ್ದು ಮತ್ತು ಅಂಥ ಮರುಹೊಂದಾಣಿಕೆಯು ಜಾರಿಗೆ ಬರುವವರೆಗೆ, ಆ ಸಭೆಗೆ ಯಾವುದೇ ಚುನಾವಣೆಯನ್ನು ಅಂಥ ಮರುಹೊಂದಾಣಿಕೆಗೆ ಮೊದಲು ಅಸ್ತಿತ್ವದಲ್ಲಿರುವ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಆಧಾರದ ಮೇಲೆ ನಡೆಸಬಹುದು:
ಮತ್ತೂ , [2026 ನೆಯ] ಇಸವಿಯ ತರುವಾಯ ಮೊದಲ ಸಲ ನಡೆಸಲಾಗುವ ಜನಗಣತಿಯ ಸುಸಂಗತ ಅಂಕಿಗಳು ಪ್ರಕಟವಾಗುವವರೆಗೆ, [-
(i) 1971ರ ಜನಗಣತಿಯ ಆಧಾರದ ಮೇಲೆ ಮರುಹೊಂದಾಣಿಕೆ ಮಾಡಿರುವಂತೆ ಲೋಕಸಭೆಯಲ್ಲಿನ ಸ್ಥಾನಗಳನ್ನು ರಾಜ್ಯಗಳಿಗೆ ಹಂಚಿಕೆ ಮಾಡಿರುವುದನ್ನು; ಮತ್ತು
(ii) [2001ರ ಜನಗಣತಿಯ ಆಧಾರದ ಮೇಲೆ ಮರುಹೊಂದಾಣಿಕೆ ಮಾಡಬಹುದಾದಂತೆ ಪ್ರತಿಯೊಂದು ರಾಜ್ಯವನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಭಾಗಿಸುವುದನ್ನು ಮರು ಹೊಂದಾಣಿಕೆ ಮಾಡುವುದು ಈ ಅನುಚ್ಛೇದದ ಮೇರೆಗೆ ಅವಶ್ಯವಾಗಿರತಕ್ಕದ್ದಲ್ಲ.]]
83 . ಸಂಸತ್ತಿನ ಸದನಗಳ ಅವಧಿ.-
1 . ರಾಜ್ಯಸಭೆಯು ವಿಸರ್ಜನೆಗೆ ಒಳಪಡತಕ್ಕದ್ದಲ್ಲ. ಆದರೆ ಅದರ ಸದಸ್ಯರಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಮೂರನೆಯ ಒಂದು ಭಾಗದಷ್ಟು ಸದಸ್ಯರು. ಸಂಸತ್ತು ಕಾನೂನಿನ ಮೂಲಕ ಆ ಬಗ್ಗೆ ಮಾಡಿದ ಉಪಬಂಧಗಳಿಗನುಸಾರವಾಗಿ, ಪ್ರತಿ ಎರಡನೆ ವರ್ಷ ಮುಕ್ತಾಯವಾದ ಮೇಲೆ ಆದಷ್ಟು ಬೇಗನೆ ನಿವೃತ್ತರಾಗತಕ್ಕದ್ದು.
2 . ಲೋಕಸಭೆಯು, ಅದರ ಮೊದಲನೆಯ ಸಭೆಗೆ ಗೊತ್ತುಮಾಡಿರುವ ದಿನಾಂಕದಿಂದ [ಐದು ವರ್ಷಗಳ ಅವಧಿಗೆ ಮುಂಚಿತವಾಗಿ ವಿಸರ್ಜಿತವಾದ ಹೊರತು. ಅದು ಐದು ವರ್ಷಗಳ ಅವಧಿಯವರೆಗೆ ಮುಂದುವರಿಯತಕ್ಕದ್ದು. ಆದರೆ ಅದಕ್ಕಿಂತ ಹೆಚ್ಚುಕಾಲ ಮುಂದುವರಿಯತಕ್ಕದ್ದಲ್ಲ ಮತ್ತು ಸದರಿ [ಐದು ವರ್ಷಗಳ ಅವಧಿಯ ಮುಕ್ತಾಯವು ಆ ಸದನವು ವಿಸರ್ಜನೆಯಾದಂತೆ ಪರಿಣಾಮವುಳ್ಳದ್ದಾಗಿರತಕ್ಕದ್ದು: ತುರ್ತುಪರಿಸ್ಥಿತಿಯ ಉದ್ವೇಷಣೆಯು ಜಾರಿಯಲ್ಲಿರುವಾಗ ಸಂಸತ್ತು ಕಾನೂನಿನ ಮೂಲಕ ಒಂದು ಸಲಕ್ಕೆ ಒಂದು ವರ್ಷಕ್ಕೆ ಮೀರದ ಅವಧಿಯವರೆಗೆ ಸದರಿ ಅವಧಿಯನ್ನು ವಿಸ್ತರಿಸಬಹುದು ಮತ್ತು ಆ ಉದ್ಯೋಷಣೆಯು ಜಾರಿಯಲ್ಲಿರುವುದು ನಿಂತುಹೋದ ತರುವಾಯ ಯಾವುದೇ ಸಂದರ್ಭದಲ್ಲಿ ಆರು ತಿಂಗಳಿಗೆ ಮೀರಿ ಅವಧಿಯವರೆಗೆ ವಿಸ್ತರಿಸತಕ್ಕದ್ದಲ್ಲ.
84 . ಸಂಸತ್ತಿನ ಸದಸ್ಯತ್ವಕ್ಕೆ ಅರ್ಹತೆ.-
ಯಾರೇ ವ್ಯಕ್ತಿಯು.
(a) ಭಾರತದ ನಾಗರಿಕನಾಗಿರುವ ಹೊರತು ಮತ್ತು ಚುನಾವಣಾ ಆಯೋಗವು ಆ ಬಗ್ಗೆ ಅಧಿಕೃತಗೊಳಿಸಿರುವ ಯಾರೇ ವ್ಯಕ್ತಿಯ ಮುಂದೆ ಮೂರನೆಯ ಅನುಸೂಚಿಯಲ್ಲಿ ಆ ಉದ್ದೇಶಕ್ಕಾಗಿ ಕೊಟ್ಟಿರುವ ನಮೂನೆಯಲ್ಲಿ ಪ್ರಮಾಣ ವಚನ ಅಥವಾ ದೃಢೀಕರಣವನ್ನು ಮಾಡಿರುವ ಹೊರತು ಹಾಗೂ ಅದಕ್ಕೆ ರುಜು ಹಾಕಿರುವ ಹೊರತು;
(b) ರಾಜ್ಯಸಭೆಯ ಸ್ಥಾನದ ಸಂದರ್ಭದಲ್ಲಿ ಮೂವತ್ತು ವರ್ಷಗಳಿಗಿಂತ ಕಡಿಮೆಯಿಲ್ಲದಷ್ಟು ವಯಸ್ಸಿನವನಾಗಿರುವ ಹೊರತು ಮತ್ತು ಲೋಕಸಭೆಯ ಸ್ಥಾನದ ಸಂದರ್ಭದಲ್ಲಿ ಇಪ್ಪತ್ತೈದು ವರ್ಷಗಳಿಗಿಂತ ಕಡಿಮೆಯಿಲ್ಲದಷ್ಟು ವಯಸ್ಸಿನವನಾಗಿರುವ ಹೊರತು; ಮತ್ತು
(c) ಸಂಸತ್ತು ಮಾಡಿದ ಯಾವುದೇ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ನಿಯಮಿಸಬಹುದಾದಂಥ ಇತರ ಅರ್ಹತೆಗಳನ್ನು ಹೊಂದಿರುವ ಹೊರತು ಸಂಸತ್ತಿನ ಸ್ಥಾನವನ್ನು ಭರ್ತಿ ಮಾಡುವುದಕ್ಕಾಗಿ ಆಯ್ಕೆ ಹೊಂದಲು ಅವನು ಅರ್ಹನಾಗಿರತಕ್ಕದ್ದಲ್ಲ.
85 . ಸಂಸತ್ತಿನ ಅಧಿವೇಶನಗಳು, ಅಧಿವೇಶನದ ಮುಕ್ತಾಯ ಮತ್ತು ವಿಸರ್ಜನೆ.-
1 . ರಾಷ್ಟ್ರಪತಿಯು ಸೂಕ್ತವೆಂದು ಭಾವಿಸತಕ್ಕಂಥ ಕಾಲದಲ್ಲಿ ಮತ್ತು ಸ್ಥಳದಲ್ಲಿ ಸಭೆ ಸೇರುವಂತೆ ಸಂಸತ್ತಿನ ಪ್ರತಿಯೊಂದು ಸದನವನ್ನೂ ಅವನು ಕಾಲಕಾಲಕ್ಕೆ ಕರೆಯತಕ್ಕದ್ದು; ಆದರೆ ಒಂದು ಅಧಿವೇಶನದ ಕೊನೆಯ ಉಪವೇಶನ ಮತ್ತು ಮುಂದಿನ ಅಧಿವೇಶನದ ಮೊದಲನೆಯ ಉಪವೇಶನಕ್ಕೆ ಗೊತ್ತುಮಾಡಿರುವ ದಿನಾಂಕ ಇವುಗಳ ನಡುವೆ ಆರು ತಿಂಗಳ ಅಂತರವಿರತಕ್ಕದ್ದಲ್ಲ.
2 . ರಾಷ್ಟ್ರಪತಿಯು ಕಾಲಕಾಲಕ್ಕೆ,-
(a) ಎರಡೂ ಸದನಗಳ ಅಧಿವೇಶನವನ್ನು ಅಥವಾ ಯಾವುದೇ ಒಂದು ಸದನದ ಅಧಿವೇಶನವನ್ನು ಮುಕ್ತಾಯಗೊಳಿಸಬಹುದು;
(b) ಲೋಕಸಭೆಯನ್ನು ವಿಸರ್ಜಿಸಬಹುದು.
86 . ಸದನಗಳನ್ನು ಸಂಬೋಧಿಸಿ ಭಾಷಣ ಮಾಡಲು ಮತ್ತು ಸದನಗಳಿಗೆ ಸಂದೇಶಗಳನ್ನು ಕಳುಹಿಸಲು ರಾಷ್ಟ್ರಪತಿಗಿರುವ ಹಕ್ಕು.-
1 . ರಾಷ್ಟ್ರಪತಿಯು ಸಂಸತ್ತಿನ ಉಭಯ ಸದನಗಳಲ್ಲಿ ಯಾವುದೇ ಒಂದು ಸದನವನ್ನು ಅಥವಾ ಒಟ್ಟಿಗೆ ಸಭೆ ಸೇರಿರುವ ಉಭಯ ಸದನಗಳನ್ನು ಸಂಬೋಧಿಸಿ ಭಾಷಣ ಮಾಡಬಹುದು ಮತ್ತು ಆ ಉದ್ದೇಶಕ್ಕಾಗಿ ಸದಸ್ಯರ ಹಾಜರಾತಿಯನ್ನು ಅಗತ್ಯಪಡಿಸಬಹುದು.
2 . ಸಂಸತ್ತಿನಲ್ಲಿ ಆಗ ಇತ್ಯರ್ಥವಾಗದೆ ಉಳಿದಿರುವ ಯಾವುದೇ ವಿಧೇಯಕಕ್ಕೆ ಸಂಬಂಧಿಸಿದಂತೆ ಅಥವಾ ಬೇರೆ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿಯು ಸಂಸತ್ತಿನ ಉಭಯ ಸದನಗಳಲ್ಲಿ ಯಾವುದೇ ಸದನಕ್ಕಾದರೂ ಸಂದೇಶಗಳನ್ನು ಕಳುಹಿಸಬಹುದು ಮತ್ತು ಯಾವ ಸದನಕ್ಕೆ ಯಾವುದೇ ಸಂದೇಶವನ್ನು ಹಾಗೆ ಕಳುಹಿಸಲಾಗಿದೆಯೋ ಸದನವು, ಪರ್ಯಾಲೋಚನೆಗೆ ತೆಗೆದುಕೊಳ್ಳಬೇಕೆಂದು ಸಂದೇಶದ ಮೂಲಕ ಅಗತ್ಯಪಡಿಸಿರುವ ಯಾವುದೇ ವಿಷಯವನ್ನು ಅನುಕೂಲವಾದಷ್ಟು ಬೇಗನೆ ಪರ್ಯಾಲೋಚಿಸತಕ್ಕದ್ದು.
87 . ರಾಷ್ಟ್ರಪತಿಯಿಂದ ವಿಶೇಷ ಭಾಷಣ.-
1 . ಲೋಕಸಭೆಯ ಪ್ರತಿಯೊಂದು ಸಾರ್ವತ್ರಿಕ ಚುನಾವಣೆ ತರುವಾಯದ ಮೊದಲನೆಯ ಅಧಿವೇಶನದ ಪ್ರಾರಂಭದಲ್ಲಿ ಮತ್ತು ಪ್ರತಿವರ್ಷದ ಮೊದಲನೆಯ ಅಧಿವೇಶನದ ಪ್ರಾರಂಭದಲ್ಲಿ ರಾಷ್ಟ್ರಪತಿಯು ಒಟ್ಟಿಗೆ ಸಭೆ ಸೇರುವ ಸಂಸತ್ತಿನ ಉಭಯ ಸದನಗಳನ್ನು ಸಂಬೋಧಿಸಿ ಭಾಷಣ ಮಾಡತಕ್ಕದ್ದು ಮತ್ತು ಸಂಸತ್ತನ್ನು ಕರೆದಿರುವ ಕಾರಣವನ್ನು ಅದಕ್ಕೆ ತಿಳಿಸತಕ್ಕದ್ದು.
(2) ಅಂಥ ಭಾಷಣದಲ್ಲಿ ಉಲ್ಲೇಖಿಸಿದ ವಿಷಯಗಳ ಚರ್ಚೆಗಾಗಿ ಕಾಲವನ್ನು ಗೊತ್ತುಪಡಿಸುವ ಬಗ್ಗೆ ಎರಡೂ ಸದನಗಳ ಕಾರ್ಯವಿಧಾನವನ್ನು ವಿನಿಯಮಗೊಳಿಸುವಂಥ ನಿಯಮಗಳ ಮೂಲಕ ಉಪಬಂಧವನ್ನು ಮಾಡತಕ್ಕದ್ದು.
88 . ಸದನಗಳ ಸಂಬಂಧದಲ್ಲಿ ಮಂತ್ರಿಗಳ ಮತ್ತು ಆಟಾರ್ನಿ ಜನರಲ್‌ನ ಹಕ್ಕುಗಳು.
ಪ್ರತಿಯೊಬ್ಬ ಮಂತ್ರಿಯು ಮತ್ತು ಭಾರತದ ಅಟಾರ್ನಿ ಜನರಲ್‌ು ಉಭಯ ಸದನಗಳ ಪೈಕಿ ಯಾವುದೇ ಸದನದಲ್ಲಿ ಅಥವಾ ಉಭಯ ಸದನಗಳ ಯಾವುದೇ ಜಂಟಿ ಸಭೆಯಲ್ಲಿ ಮತ್ತು ಅವನನ್ನು ಸದಸ್ಯನಾಗಿ ಹೆಸರಿಸಬಹುದಾದ ಸಂಸತ್ತಿನ ಯಾವುದೇ ಸಮಿತಿಯಲ್ಲಿ ಮಾತನಾಡುವುದಕ್ಕೆ ಮತ್ತು ಅವುಗಳ ವ್ಯವಹರಣೆಗಳಲ್ಲಿ ಭಾಗವಹಿಸುವುದಕ್ಕೆ ಹಕ್ಕು ಹೊಂದಿರತಕ್ಕದ್ದು. ಆದರೆ ಈ ಅನುಚ್ಛೇದದ ಕಾರಣದಿಂದಲೇ ಮತ ನೀಡಲು ಹಕ್ಕುಳ್ಳವನಾಗಿರತಕ್ಕದ್ದಲ್ಲ.

ಸಂಸತ್ತಿನ ಅಧಿಕಾರಿಗಳು Officers of Parliament
89 . ರಾಜ್ಯ ಸಭೆಯ ಸಭಾಪತಿ ಮತ್ತು ಉಪಸಭಾಪತಿ.-
1 . ಭಾರತದ ಉಪರಾಷ್ಟ್ರಪತಿಯು ರಾಜ್ಯಸಭೆಯ ಪದನಿಮಿತ್ತ ಸಭಾಪತಿಯಾಗಿರತಕ್ಕದ್ದು,
2 . ರಾಜ್ಯಸಭೆಯು ಆದಷ್ಟು ಬೇಗನೆ ಆ ಸದನದ ಒಬ್ಬ ಸದಸ್ಯನನ್ನು ಅದರ ಉಪಸಭಾಪತಿಯಾಗಿ ಆಯ್ಕೆ ಮಾಡತಕ್ಕದ್ದು ಮತ್ತು ಉಪಸಭಾಪತಿಯ ಪದವು ಖಾಲಿ ಆದಾಗಲೆಲ್ಲಾ ರಾಜ್ಯ ಸಭೆಯು ಮತ್ತೊಬ್ಬ ಸದಸ್ಯನನ್ನು ಅದರ ಉಪಸಭಾಪತಿಯಾಗಿ ಆಯ್ಕೆ ಮಾಡತಕ್ಕದ್ದು.
90 . ಉಪಸಭಾಪತಿಯು ಪದವನ್ನು ಖಾಲಿ ಮಾಡುವುದು ಮತ್ತು ಪದಕ್ಕೆ ರಾಜೀನಾಮೆ ನೀಡುವುದು ಮತ್ತು ಪದದಿಂದ ಅವನನ್ನು ತೆಗೆದುಹಾಕುವುದು.
ರಾಜ್ಯಸಭೆಯ ಉಪಸಭಾಪತಿಯಾಗಿ ಪದಧಾರಣ ಮಾಡಿರುವ ಸದಸ್ಯನು,
(a) ರಾಜ್ಯಸಭೆಯ ಸದಸ್ಯನಾಗಿರುವುದು ನಿಂತುಹೋದಲ್ಲಿ ತನ್ನ ಪದವನ್ನು ಖಾಲಿ ಮಾಡತಕ್ಕದ್ದು;
(b) ತಾನು ಸಹಿ ಮಾಡಿದ ಪತ್ರವನ್ನು ಸಭಾಪತಿಗೆ ಬರೆದು ಯಾವುದೇ ಕಾಲದಲ್ಲಿ ತನ್ನ ಪದಕ್ಕೆ ರಾಜೀನಾಮೆ ಕೊಡಬಹುದು; ಮತ್ತು
(c) ರಾಜ್ಯಸಭೆಯ ಆಗಿನ ಎಲ್ಲ ಸದಸ್ಯರ ಬಹುಮತದಿಂದ ಅಂಗೀಕೃತವಾದ ರಾಜ್ಯಸಭೆಯ ನಿರ್ಣಯದ ಮೂಲಕ ಪದದಿಂದ ತೆಗೆದುಹಾಕಲ್ಪಡಬಹುದು:
[ (c) ಖಂಡದ ಉದ್ದೇಶಕ್ಕಾಗಿ ಯಾವುದೇ ನಿರ್ಣಯವನ್ನು ಮಂಡಿಸುವ ಆಶಯದ ನೋಟೀಸನ್ನು ಕನಿಷ್ಠಪಕ್ಷ ಹದಿನಾಲ್ಕು ದಿನಗಳ ಮುಂಚಿತವಾಗಿ ಕೊಟ್ಟಿದ್ದ ಹೊರತು ಅಂಥ ನಿರ್ಣಯವನ್ನು ಮಂಡಿಸತಕ್ಕದ್ದಲ್ಲ.]
91 . ಸಭಾಪತಿಯ ಪದದ ಕರ್ತವ್ಯಗಳನ್ನು ನೆರವೇರಿಸಲು ಅಥವಾ ಸಭಾಪತಿಯಾಗಿ ಕಾರ್ಯನಿರ್ವಹಿಸಲು ಉಪಸಭಾಪತಿಯ ಅಥವಾ ಇತರ ವ್ಯಕ್ತಿಯ ಅಧಿಕಾರ.-
1 . ಸಭಾಪತಿಯ ಪದವು ಖಾಲಿಯಾಗಿರುವಾಗ ಅಥವಾ ಉಪರಾಷ್ಟ್ರಪತಿಯು ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸುತ್ತಿರುವ ಅಥವಾ ರಾಷ್ಟ್ರಪತಿಯ ಪ್ರಕಾರ್ಯಗಳನ್ನು ನಿರ್ವಹಿಸುತ್ತಿರುವ ಯಾವುದೇ ಅವಧಿಯಲ್ಲಿ ಉಪಸಭಾಪತಿಯು ಅಥವಾ ಉಪಸಭಾಪತಿಯ ಪದವೂ ಖಾಲಿಯಾಗಿರುವಲ್ಲಿ, ಸಭಾಪತಿಯ ಪದದ ಕರ್ತವ್ಯಗಳನ್ನು ನೆರವೇರಿಸುವ ಉದ್ದೇಶಕ್ಕಾಗಿ ರಾಷ್ಟ್ರಪತಿಯು ನೇಮಕ ಮಾಡಬಹುದಾದಂಥ ರಾಜ್ಯಸಭೆಯ ಸದಸ್ಯನು ಆ ಪದದ ಕರ್ತವ್ಯಗಳನ್ನು ನೆರವೇರಿಸತಕ್ಕದ್ದು.
2 . ರಾಜ್ಯಸಭೆಯ ಯಾವುದೇ ಉಪವೇಶನದಲ್ಲಿ ಸಭಾಪತಿಯು ಗೈರುಹಾಜರಾಗಿರುವಾಗ ಉಪಸಭಾಪತಿಯು ಅಥವಾ ಅವನೂ ಗೈರುಹಾಜರಾಗಿರುವಾಗ ರಾಜ್ಯಸಭೆಯ ಪ್ರಕ್ರಿಯಾ ನಿಯಮಗಳ ಮೂಲಕ ನಿರ್ಧರಿಸಬಹುದಾದಂಥ ವ್ಯಕ್ತಿಯು ಅಥವಾ ಅಂಥ ಯಾವ ವ್ಯಕ್ತಿಯೂ ಹಾಜರಿಲ್ಲದಿದ್ದರೆ ರಾಜ್ಯಸಭೆಯು ನಿರ್ಧರಿಸಬಹುದಾದಂಥ ಇತರ ಯಾರೇ ವ್ಯಕ್ತಿಯು ಸಭಾಪತಿಯಾಗಿ ಕಾರ್ಯನಿರ್ವಹಿಸತಕ್ಕದ್ದು.
92 . ಸಭಾಪತಿಯನ್ನು ಅಥವಾ ಉಪಸಭಾಪತಿಯನ್ನು ಪದದಿಂದ ತೆಗೆದುಹಾಕುವ ನಿರ್ಣಯವು ಪರ್ಯಾಲೋಚನೆಯಲ್ಲಿರುವಾಗ ಅವನು ಅಧ್ಯಕ್ಷತೆ ವಹಿಸಬಾರದು.-
1 . ರಾಜ್ಯಸಭೆಯ ಯಾವುದೇ ಉಪವೇಶನದಲ್ಲಿ ಉಪರಾಷ್ಟ್ರಪತಿಯನ್ನು ಅವನ ಪದದಿಂದ ತೆಗೆದುಹಾಕುವ ಯಾವುದೇ ನಿರ್ಣಯವು ಪರ್ಯಾಲೋಚನೆಯಲ್ಲಿರುವಾಗ ಸಭಾಪತಿಯು ಹಾಜರಿದ್ದರೂ ಅವನು, ಅಥವಾ ಉಪಸಭಾಪತಿಯನ್ನು ಅವನ ಪದದಿಂದ ತೆಗೆದುಹಾಕುವ ಯಾವುದೇ ನಿರ್ಣಯವು ಪರ್ಯಾಲೋಚನೆಯಲ್ಲಿರುವಾಗ ಉಪಸಭಾಪತಿಯು ಹಾಜರಿದ್ದರೂ ಅವನು, ಅಧ್ಯಕ್ಷತೆ ವಹಿಸತಕ್ಕದ್ದಲ್ಲ ಮತ್ತು 91ನೆಯ ಅನುಚ್ಛೇದದ (2)ನೆಯ ಖಂಡದ ಉಪಬಂಧಗಳು ಸಭಾಪತಿಯು ಅಥವಾ ಸಂದರ್ಭಾನುಸಾರ ಉಪಸಭಾಪತಿಯು ಗೈರುಹಾಜರಾಗಿರುವ ಉಪವೇಶನದ ಸಂಬಂಧದಲ್ಲಿ ಅನ್ವಯಿಸುವಂತೆಯೇ ಅಂಥ ಪ್ರತಿಯೊಂದು ಉಪವೇಶನದ ಸಂಬಂಧದಲ್ಲಿ ಅನ್ವಯಿಸತಕ್ಕದ್ದು.
2 . ಉಪರಾಷ್ಟ್ರಪತಿಯನ್ನು ಅವನ ಪದದಿಂದ ತೆಗೆದುಹಾಕುವ ಯಾವುದೇ ನಿರ್ಣಯವು ರಾಜ್ಯಸಭೆಯಲ್ಲಿ ಪರ್ಯಾಲೋಚನೆಯಲ್ಲಿರುವಾಗ, ಸಭಾಪತಿಯು ರಾಜ್ಯಸಭೆಯಲ್ಲಿ ಮಾತನಾಡುವ ಮತ್ತು ಅದರ ವ್ಯವಹರಣೆಗಳಲ್ಲಿ ಅನ್ಯಥಾ ಭಾಗವಹಿಸುವ ಹಕ್ಕನ್ನು ಹೊಂದಿರತಕ್ಕದ್ದು; ಆದರೆ 100ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ಅಂಥ ನಿರ್ಣಯದ ಮೇಲೆ ಅಥವಾ ಅಂಥ ವ್ಯವಹರಣೆಗಳ ಅವಧಿಯಲ್ಲಿ ಇತರ ಯಾವುದೇ ವಿಷಯದ ಮೇಲೆ ಮತ ನೀಡಲು ಅವನು ಹಕ್ಕನ್ನು ಹೊಂದಿರತಕ್ಕದ್ದಲ್ಲ.
93 . ಲೋಕಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ .
ಲೋಕಸಭೆಯು ತನ್ನ ಸದಸ್ಯರಲ್ಲಿ ಇಬ್ಬರನ್ನು ಅನುಕ್ರಮವಾಗಿ ಆ ಸದನದ ಅಧ್ಯಕ್ಷನಾಗಿ ಮತ್ತು ಉಪಾಧ್ಯಕ್ಷನಾಗಿ ಆದಷ್ಟು ಬೇಗನೆ ಆಯ್ಕೆ ಮಾಡತಕ್ಕದ್ದು ಮತ್ತು ಅಧ್ಯಕ್ಷನ ಅಥವಾ ಉಪಾಧ್ಯಕ್ಷನ ಪದವು ಖಾಲಿ ಆದಾಗಲೆಲ್ಲ ಅಧ್ಯಕ್ಷನಾಗಿ ಅಥವಾ ಸಂದರ್ಭಾನುಸಾರ ಉಪಾಧ್ಯಕ್ಷನಾಗಿ ಮತ್ತೊಬ್ಬ ಸದಸ್ಯನನ್ನು ಸದನವು ಆಯ್ಕೆ ಮಾಡತಕ್ಕದ್ದು.
94 .ಲೋಕಸಭೆಯ ಅಧ್ಯಕ್ಷನು ಮತ್ತು ಉಪಾಧ್ಯಕ್ಷನು ಪದಗಳನ್ನು ತೆರವು ಮಾಡುವುದು, ಅವುಗಳಿಗೆ ರಾಜೀನಾಮೆ ನೀಡುವುದು ಮತ್ತು ಆ ಪದಗಳಿಂದ ಅವರನ್ನು ತೆಗೆದುಹಾಕುವುದು.
ಲೋಕಸಭೆಯ ಅಧ್ಯಕ್ಷನಾಗಿ ಅಥವಾ ಉಪಾಧ್ಯಕ್ಷನಾಗಿ ಪದಧಾರಣ ಮಾಡಿರುವ ಸದಸ್ಯನು.
(a) ಲೋಕಸಭೆಯ ಸದಸ್ಯನಾಗಿರುವುದು ನಿಂತುಹೋದಲ್ಲಿ ತನ್ನ ಪದವನ್ನು ತೆರವು ಮಾಡತಕ್ಕದ್ದು;
(b) ಅಧ್ಯಕ್ಷನಾಗಿದ್ದರೆ ಉಪಾಧ್ಯಕ್ಷನಿಗೆ ಅಥವಾ ಅವನು ಉಪಾಧ್ಯಕ್ಷನಾಗಿದ್ದರೆ ಅಧ್ಯಕ್ಷನಿಗೆ ತಾನು ಸಹಿಮಾಡಿದ ಪತ್ರವನ್ನು ಬರೆದು ಯಾವುದೇ ಕಾಲದಲ್ಲಿ ತನ್ನ ಪದಕ್ಕೆ ರಾಜೀನಾಮೆ ಕೊಡಬಹುದು; ಮತ್ತು
(c) ಲೋಕಸಭೆಯ ಆಗಿನ ಎಲ್ಲ ಸದಸ್ಯರ ಬಹುಮತದಿಂದ ಅಂಗೀಕೃತವಾದ ನಿರ್ಣಯದ ಮೂಲಕ ಪದದಿಂದ ತೆಗೆದುಹಾಕಬಹುದು:
3 thoughts on “ಅದ್ಯಾಯ Ⅱ ಸಂಸತ್ತು . article 79 ರಿಂದ 98ರಲ್ಲಿ ಬರುವ ಸಂಸತ್ತಿನ ರಚನೆ ಮತ್ತು ಪಾರ್ಲಿಮೆಂಟಿನ ಅಧಿಕಾರಿಗಳು. Ultimate Guide to Parliament of India: Structure & Officers (Articles 79–98) Explained .”