ಭಾಗ Ⅲ ( part 3 )
ಮೂಲಭೂತ ಹಕ್ಕುಗಳು ( fundamental rights )
ಸಾಮಾನ್ಯ ( general )
12 . ಪರಿಭಾಷೆ.
ಈ ಭಾಗದಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು. “ರಾಜ್ಯ” ಎಂಬ ಪದವು ಭಾರತದ ಸರ್ಕಾರವನ್ನು ಮತ್ತು ಸಂಸತ್ತನ್ನು ಮತ್ತು ರಾಜ್ಯಗಳಿಗೆ ಸಂಬಂಧಿಸಿದಂತೆ ಪ್ರತಿಯೊಂದು ರಾಜ್ಯದ ಸರ್ಕಾರವನ್ನು ಮತ್ತು ವಿಧಾನಮಂಡಲವನ್ನು ಹಾಗೂ ಭಾರತದ ರಾಜ್ಯಕ್ಷೇತ್ರದೊಳಗಿರುವ ಅಥವಾ ಭಾರತ ಸರ್ಕಾರದ ನಿಯಂತ್ರಣದಲ್ಲಿರುವ ಎಲ್ಲ ಸ್ಥಳೀಯ ಪ್ರಾಧಿಕಾರಗಳನ್ನು ಅಥವಾ ಇತರ ಪ್ರಾಧಿಕಾರಗಳನ್ನು ಒಳಗೊಳ್ಳುತ್ತದೆ.
13 . ಮೂಲಭೂತ ಹಕ್ಕುಗಳಿಗೆ ಅಸಂಗತವಾದ ಅಥವಾ ಅವುಗಳನ್ನು ಅಲ್ಲೀಕರಿಸುವಂಥ ಕಾನೂನುಗಳು
(1) ಈ ಸಂವಿಧಾನವು ಪ್ರಾರಂಭವಾಗುವುದಕ್ಕೆ ನಿಕಟಪೂರ್ವದಲ್ಲಿ ಭಾರತದ ರಾಜ್ಯಕ್ಷೇತ್ರದಲ್ಲಿ ಜಾರಿಯಲ್ಲಿರುವ ಎಲ್ಲಾ ಕಾನೂನುಗಳು. ಈ ಭಾಗದ ಉಪಬಂಧಗಳಿಗೆ ಅಸಂಗತವಾಗಿರುವಷ್ಟರ ಮಟ್ಟಿಗೆ ಅನೂರ್ಜಿತವಾಗತಕ್ಕದ್ದು.
(2) ಈ ಭಾಗದಿಂದ ಪ್ರದತ್ತವಾದ ಹಕ್ಕುಗಳನ್ನು ಕಸಿದುಕೊಳ್ಳುವ ಅಥವಾ ಮೊಟಕುಗೊಳಿಸುವ ಯಾವುದೇ ಕಾನೂನನ್ನು ರಾಜ್ಯವು ಮಾಡತಕ್ಕದ್ದಲ್ಲ ಮತ್ತು ಈ ಖಂಡವನ್ನು ಉಲ್ಲಂಘಿಸಿ ಮಾಡಲಾದ ಯಾವುದೇ ಕಾನೂನು, ಆ ಉಲ್ಲಂಘನೆಯಷ್ಟರ ಮಟ್ಟಿಗೆ ಅನೂರ್ಜಿತವಾಗತಕ್ಕದ್ದು.
(3) ಈ ಅನುಚ್ಛೇದದಲ್ಲಿ, ಸಂದರ್ಭವು ಅನ್ಯಥಾ ಆಗತ್ಯಪಡಿಸಿದ ಹೊರತು,-
(a) “ಕಾನೂನು” ಎಂಬುದು ಯಾವುದೇ ಅಧ್ಯಾದೇಶ, ಆದೇಶ, ಉಪವಿಧಿ, ನಿಯಮ, ವಿನಿಯಮ, ಅಧಿಸೂಚನೆ, ಅಥವಾ ಭಾರತದ ರಾಜ್ಯಕ್ಷೇತ್ರದಲ್ಲಿ ಕಾನೂನಿನ ಬಲವುಳ್ಳ ರೂಢಿ ಅಥವಾ ಆಚರಣೆಯನ್ನು ಒಳಗೊಳ್ಳುತ್ತದೆ;
(b) “ಜಾರಿಯಲ್ಲಿರುವ ಕಾನೂನುಗಳು” ಎಂಬುದು ಭಾರತದ ರಾಜ್ಯಕ್ಷೇತ್ರದಲ್ಲಿನ ಯಾವುದೇ ವಿಧಾನಮಂಡಲದಿಂದ ಅಥವಾ ಇತರ ಸಕ್ಷಮ ಪ್ರಾಧಿಕಾರದಿಂದ ಈ ಸಂವಿಧಾನವು ಪ್ರಾರಂಭವಾಗುವುದಕ್ಕೆ ಮುಂಚೆ ಅಂಗೀಕೃತವಾಗಿದ್ದ ಅಥವಾ ಮಾಡಲಾಗಿದ್ದ ಮತ್ತು ಈ ಹಿಂದೆ ನಿರಸಿತವಾಗಿರದ ಕಾನೂನುಗಳನ್ನು, ಅಂಥ ಯಾವುದೇ ಕಾನೂನು ಅಥವಾ ಅವುಗಳ ಯಾವುದೇ ಭಾಗವು, ಆಗ ಎಲ್ಲ ಪ್ರದೇಶಗಳಲ್ಲಿ ಅಥವಾ ನಿರ್ದಿಷ್ಟ ಪ್ರದೇಶಗಳಲ್ಲಿ ಜಾರಿಯಲ್ಲಿ ಇಲ್ಲದಿದ್ದಾಗ್ಯೂ, ಒಳಗೊಳ್ಳುತ್ತದೆ.
(4) ಈ ಅನುಚ್ಛೇದದಲ್ಲಿ ಇರುವುದು ಯಾವುದೂ, 368ನೆಯ ಅನುಚ್ಛೇದದ ಮೇರೆಗೆ ಮಾಡಲಾದ ಈ ಸಂವಿಧಾನದ ಯಾವುದೇ ತಿದ್ದುಪಡಿಗೆ ಅನ್ವಯವಾಗತಕ್ಕದ್ದಲ್ಲ,
ಸಮಾನತೆಯ ಹಕ್ಕು ( rights of equality )
14 . ಕಾನೂನಿನ ಮುಂದೆ ಸಮಾನತೆ .
ಭಾರತದ ರಾಜ್ಯಕ್ಷೇತ್ರದಲ್ಲಿ ಯಾರೇ ವ್ಯಕ್ತಿಗೆ ಕಾನೂನಿನ ಮುಂದೆ ಸಮಾನತೆಯನ್ನು ಅಥವಾ ಕಾನೂನುಗಳಿಂದ ಸಮಾನ ಸಂರಕ್ಷಣೆಯನ್ನು ರಾಜ್ಯವು ನಿರಾಕರಿಸತಕ್ಕದ್ದಲ್ಲ.
15 . ಧರ್ಮ, ಮೂಲವಂತ, ಜಾತಿ, ಲಿಂಗ ಅಥವಾ ಜನ್ಮಸ್ಥಳದ ಆಧಾರಗಳ ಮೇಲೆ ತಾರತಮ್ಯದ ನಿಷೇಧ.
(1) ರಾಜ್ಯವು ಯಾರೇ ನಾಗರಿಕನ ವಿರುದ್ಧ ಧರ್ಮ, ಮೂಲವಂಶ, ಜಾತಿ, ಲಿಂಗ, ಜನ್ಮಸ್ಥಳದ ಅಥವಾ ಅವುಗಳಲ್ಲಿ ಯಾವುದೇ ಒಂದರ ಆಧಾರದ ಮೇಲೆ ಮಾತ್ರವೇ ಯಾವುದೇ ತಾರತಮ್ಯವನ್ನು ಮಾಡತಕ್ಕದ್ದಲ್ಲ.
(2) ಧರ್ಮ, ಮೂಲವಂಶ, ಜಾತಿ, ಲಿಂಗ, ಜನ್ಮಸ್ಥಳ ಅಥವಾ ಇವುಗಳಲ್ಲಿ ಯಾವುದೇ ಒಂದರ ಆಧಾರದ ಮೇಲೆ ಮಾತ್ರವೇ ಯಾರೇ ನಾಗರಿಕನು.
(a) ಅಂಗಡಿಗಳು, ಸಾರ್ವಜನಿಕ ಉಪಾಹಾರ ಗೃಹಗಳು, ಹೋಟೆಲುಗಳು ಮತ್ತು ಸಾರ್ವಜನಿಕ ಮನೋರಂಜನ ಸ್ಥಳಗಳಿಗೆ ಪ್ರವೇಶಿಸುವ ಸಂಬಂಧದಲ್ಲಿ; ಅಥವಾ
(b) ಪೂರ್ಣವಾಗಿ ಅಥವಾ ಭಾಗಶಃ ರಾಜ್ಯನಿಧಿಗಳಿಂದ ಪೋಷಿತವಾದ ಅಥವಾ ಸಾರ್ವಜನಿಕರ ಉಪಯೋಗಕ್ಕಾಗಿ ಸಮರ್ಪಿತವಾದ ಬಾವಿಗಳನ್ನು, ಕೆರೆಗಳನ್ನು, ಸ್ನಾನಘಟ್ಟಗಳನ್ನು, ರಸ್ತೆಗಳನ್ನು ಮತ್ತು ಸಾರ್ವಜನಿಕರು ಸೇರುವ ಸ್ಥಳಗಳನ್ನು ಉಪಯೋಗಿಸುವ ಸಂಬಂಧದಲ್ಲಿ ಯಾವುದೇ ಅಸಮರ್ಥತೆಗೆ, ಹೊಣೆಗಾರಿಕೆಗೆ, ನಿರ್ಬಂಧಕ್ಕೆ ಅಥವಾ ಷರತ್ತಿಗೆ ಒಳಪಟ್ಟಿರತಕ್ಕದ್ದಲ್ಲ.
(3) ಈ ಅನುಚ್ಛೇದದಲ್ಲಿ ಇರುವುದು ಯಾವುದೂ, ಹೆಂಗಸರು ಮತ್ತು ಮಕ್ಕಳಿಗಾಗಿ ವಿಶೇಷ ಉಪಬಂಧವನ್ನು ಮಾಡದಂತೆ ರಾಜ್ಯವನ್ನು ಪ್ರತಿಬಂಧಿಸತಕ್ಕದ್ದಲ್ಲ.
[(4) ಈ ಅನುಚ್ಛೇದದಲ್ಲಿ ಅಥವಾ 29ನೆಯ ಅನುಚ್ಛೇದದ (2)ನೆಯ ಖಂಡದಲ್ಲಿ ಇರುವುದು ಯಾವುದೂ,
ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ನಾಗರಿಕರ ಯಾವುದೇ ವರ್ಗಗಳ ಪುರೋಭಿವೃದ್ಧಿಗಾಗಿ ಅಥವಾ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ಸಲುವಾಗಿ ರಾಜ್ಯವು ಯಾವುದೇ ವಿಶೇಷ ಉಪಬಂಧವನ್ನು ಮಾಡದಂತೆ ಪ್ರತಿಬಂಧಿಸತಕ್ಕದ್ದಲ್ಲ.]
[(5) ಈ ಅನುಚ್ಛೇದದಲ್ಲಿ ಅಥವಾ 19ನೇ ಅನುಚ್ಛೇದದ (1)ನೇ ಖಂಡದ (ಜಿ) ಉಪಖಂಡದಲ್ಲಿರುವುದಾವುದೂ,
ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ನಾಗರಿಕರ ಯಾವುದೇ ವರ್ಗಗಳ ಪುರೋಭಿವೃದ್ಧಿಗಾಗಿ ಅಥವಾ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ಸಲುವಾಗಿ ಕಾನೂನಿನ ಮೂಲಕ ಯಾವುದೇ ವಿಶೇಷ ಉಪಬಂಧಗಳನ್ನು ಮಾಡದಂತೆ, ಆ ವಿಶೇಷ ಉಪಬಂಧಗಳು 30ನೇ ಅನುಚ್ಛೇದದ (1)ನೇ ಖಂಡದಲ್ಲಿ ಹೇಳಿರುವ ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳನ್ನು ಹೊರತುಪಡಿಸಿ ರಾಜ್ಯದಿಂದ ಅನುದಾನ ಪಡೆದಿರುವ ಅಥವಾ ಅನುದಾನ ಪಡೆಯದಿರುವ ಖಾಸಗಿ ಶೈಕ್ಷಣಿಕ ಸಂಸ್ಥೆಗಳೂ ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶಕ್ಕೆ ಸಂಬಂಧಿಸಿರುವಷ್ಟರ ಮಟ್ಟಿಗೆ. ರಾಜ್ಯವನ್ನು ಪ್ರತಿಬಂಧಿಸತಕ್ಕದ್ದಲ್ಲ.]
[(6) ಈ ಅನುಚ್ಛೇದದಲ್ಲಿ ಅಥವಾ 19ನೇ ಅನುಚ್ಛೇದದ (1)ನೇ ಖಂಡದ (ಜಿ) ಉಪ-ಖಂಡದಲ್ಲಿ ಅಥವಾ ಅನುಚ್ಛೇದ 29ರ ಖಂಡ (2)ರಲ್ಲಿ ಇರುವುದು ಯಾವುದೂ.
(ಎ) (4) ಮತ್ತು (5)ನೇ ಖಂಡಗಳಲ್ಲಿ ನಮೂದಿಸಿದ ವರ್ಗಗಳಲ್ಲದ, ಆರ್ಥಿಕವಾಗಿ ದುರ್ಬಲರಾದ ನಾಗರಿಕರ ಯಾವುದೇ ವರ್ಗಗಳ ಪುರೋಭಿವೃದ್ಧಿಗಾಗಿ ಯಾವುದೇ ವಿಶೇಷ ಉಪಬಂಧವನ್ನು: ಮತ್ತು
(ಬಿ) (4) ಮತ್ತು (5)ನೇ ಖಂಡಗಳಲ್ಲಿ ನಮೂದಿಸಿದ ವರ್ಗಗಳಲ್ಲದ, ಆರ್ಥಿಕವಾಗಿ ದುರ್ಬಲರಾದ
ನಾಗರಿಕರ ಯಾವುದೇ ವರ್ಗಗಳ ಪುರೋಭಿವೃದ್ಧಿಗಾಗಿ, 30ನೇ ಅನುಚ್ಛೇದದ (1)ನೇ ಖಂಡದಲ್ಲಿ ಉಲ್ಲೇಖಿಸಿರುವ ಅಲ್ಪಸಂಖ್ಯಾತರ ಶೈಕ್ಷಣಿಕ ಸಂಸ್ಥೆಗಳನ್ನು ಹೊರತುಪಡಿಸಿ, ರಾಜ್ಯದಿಂದ ಅನುದಾನ ಪಡೆಯುತ್ತಿರುವ ಅಥವಾ ಅನುದಾನ ಪಡೆಯದಿರುವ ಖಾಸಗಿ ಶೈಕ್ಷಣಿಕ ಸಂಸ್ಥೆಗಳು ಸೇರಿದಂತೆ, ಶೈಕ್ಷಣಿಕ ಸಂಸ್ಥೆಗಳ ಪ್ರವೇಶಾತಿಗಾಗಿ ಅಂತಹ ವಿಶೇಷ ಉಪಬಂಧಗಳು ಸಂಬಂಧಿಸಿರುವಷ್ಟರ ಮಟ್ಟಿಗೆ ಅಸ್ತಿತ್ವದಲ್ಲಿರುವ ಮೀಸಲಾತಿಗಳಿಗೆ ಹೆಚ್ಚುವರಿಯಾಗಿ ಆದರೆ ಗರಿಷ್ಠ ಶೇಕಡಾ ಹತ್ತರಷ್ಟಕ್ಕೆ ಒಳಪಟ್ಟು ಮೀಸಲಾತಿಯನ್ನು ಪ್ರತಿಯೊಂದು ಪ್ರವರ್ಗದಲ್ಲಿನ ಒಟ್ಟು ಸ್ಥಾನಗಳ ಗರಿತ ಒದಗಿಸುವುದಕ್ಕಾಗಿ ಯಾವುದೇ ವಿಶೇಷ ಉಪಬಂಧವನ್ನು ಮಾಡದಂತೆ ರಾಜ್ಯವನ್ನು ಪ್ರತಿಬಂಧಿಸತಕ್ಕದ್ದಲ್ಲ.
1 ಸಂವಿಧಾನ (ಮೊದಲನೆಯ ತಿದ್ದುಪಡಿ) ಅಧಿನಿಯಮ, 1951ರ 2ನೆಯ ಪ್ರಕರಣದ ಮೂಲಕ (18-6-1951ರಿಂದ ಜಾರಿಗೆ ಬರುವಂತೆ) ಸೇರಿಸಲಾಗಿದೆ.
2 ಸಂವಿಧಾನ (ತೊಂಬತ್ತೂರನೆಯ ತಿದ್ದುಪಡಿ) ಅಧಿನಿಯಮ, 2005ರ 2ನೆಯ ಪ್ರಕರಣದ ಮೂಲಕ (20.1.2006 ರಿಂದ ಜಾರಿಗೆ ಬರುವಂತೆ) ಸೇರಿಸಲಾಗಿದೆ.
3 ಸಂವಿಧಾನ (ಒಂದು ನೂರಾ ಮೂರನೆಯ ತಿದ್ದುಪಡಿ) ಅಧಿನಿಯಮ, 2019ರ 2ನೆಯ ಪ್ರಕರಣದ ಮೂಲಕ (14-1-2019ರಿಂದ ಜಾರಿಗೆ ಬರುವಂತೆ) ಸೇರಿಸಲಾಗಿದೆ.
ವಿವರಣೆ .
ಈ ಅನುಚ್ಛೇದದ ಮತ್ತು 16ನೇ ಅನುಚ್ಛೇದದ ಉದ್ದೇಶಗಳಿಗಾಗಿ “ಆರ್ಥಿಕವಾಗಿ ದುರ್ಬಲ ವರ್ಗಗಳು” ಯಾವುವೆಂದರೆ ಕುಟುಂಬದ ಆದಾಯದ ಮತ್ತು ಅವರ ಆರ್ಥಿಕ ಅನಾನುಕೂಲತೆ ಇತರೆ ಸೂಚಿಗಳ ಆಧಾರದ ಮೇಲೆ ಕಾಲಕಾಲಕ್ಕೆ ರಾಜ್ಯವು ಅಧಿಸೂಚಿಸಬಹುದಾದಂಥವುಗಳಾಗಿರತಕ್ಕದ್ದು.]

16 . ಸಾರ್ವಜನಿಕ ನಿಯೋಜನೆಯ ವಿಷಯದಲ್ಲಿ ಸಮಾನಾವಕಾಶ.
(1) ರಾಜ್ಯದ ಅಧೀನದಲ್ಲಿರುವ ಯಾವುದೇ ಪದಕ್ಕೆ ಸಂಬಂಧಿಸಿದಂತೆ ನಿಯೋಜನೆ ಅಥವಾ ನೇಮಕದ ವಿಷಯದಲ್ಲಿ ಎಲ್ಲ ನಾಗರಿಕರಿಗೂ ಸಮಾನ ಅವಕಾಶವಿರತಕ್ಕದ್ದು.
(2) ಧರ್ಮ, ಮೂಲವಂಶ, ಜಾತಿ, ಲಿಂಗ, ಸಂತತಿ, ಜನ್ಮಸ್ಥಳ, ನಿವಾಸದ ಅಥವಾ ಇವುಗಳಲ್ಲಿ ಯಾವುದೇ ಒಂದರ ಆಧಾರದ ಮೇಲೆ ಮಾತ್ರವೇ ಯಾರೇ ನಾಗರಿಕನು ರಾಜ್ಯದ ಅಧೀನದಲ್ಲಿರುವ ಯಾವುದೇ ನಿಯೋಜನೆಗೆ ಅಥವಾ ಪದಕ್ಕೆ ಸಂಬಂಧಿಸಿದಂತೆ ಅನರ್ಹತೆಗೆ ಒಳಗಾಗತಕ್ಕದ್ದಲ್ಲ ಅಥವಾ ಅವನ ವಿರುದ್ಧ ತಾರತಮ್ಯವನ್ನು ಮಾಡತಕ್ಕದ್ದಲ್ಲ.
(3) ಈ ಅನುಚ್ಛೇದದಲ್ಲಿ ಇರುವುದು ಯಾವುದೂ, [ಒಂದು ರಾಜ್ಯ ಸರ್ಕಾರದ ಅಥವಾ ಒಕ್ಕೂಟ ರಾಜ್ಯಕ್ಷೇತ್ರದ ಅಧೀನದಲ್ಲಿರುವ ಅಥವಾ ಯಾವುದೇ ರಾಜ್ಯದ ಅಥವಾ ಒಕ್ಕೂಟ ರಾಜ್ಯಕ್ಷೇತ್ರದೊಳಗಿರುವ ಯಾವುದೇ ಸ್ಥಳೀಯ ಅಥವಾ ಇತರ ಪ್ರಾಧಿಕಾರದ ಅಧೀನದಲ್ಲಿರುವ ಯಾವುದೇ ವರ್ಗದ ಅಥವಾ ವರ್ಗಗಳ ಪದಕ್ಕೆ, ನಿಯೋಜನೆಗೆ ಅಥವಾ ನೇಮಕಕ್ಕೆ ಸಂಬಂಧಿಸಿದಂತೆ ಅಂಥ ನಿಯೋಜನೆಗೆ ಅಥವಾ ನೇಮಕಕ್ಕೆ ಮುಂಚೆ ಆ ರಾಜ್ಯದಲ್ಲಿ ಅಥವಾ ಆ ಒಕ್ಕೂಟ ರಾಜ್ಯಕ್ಷೇತ್ರದಲ್ಲಿ ನಿವಾಸದ ಯಾವುದೇ ಅಗತ್ಯತೆಯನ್ನು) ನಿಯಮಿಸುವ ಯಾವುದೇ ಕಾನೂನನ್ನು ಮಾಡದಂತೆ ಸಂಸತ್ತನ್ನು ಪ್ರತಿಬಂಧಿಸತಕ್ಕದ್ದಲ್ಲ.
(4) ಈ ಅನುಚ್ಛೇದದಲ್ಲಿ ಇರುವುದು ಯಾವುದೂ, ಯಾವುದೇ ಹಿಂದುಳಿದ ವರ್ಗದ ನಾಗರಿಕರು ರಾಜ್ಯದ ಅಧೀನದಲ್ಲಿರುವ ಸೇವೆಗಳಲ್ಲಿ ಸಾಕಷ್ಟು ಪ್ರಾತಿನಿಧ್ಯವನ್ನು ಹೊಂದಿಲ್ಲವೆಂದು ರಾಜ್ಯವು ಅಭಿಪ್ರಾಯಪಟ್ಟಲ್ಲಿ ಅಂಥವರಿಗಾಗಿ ನೇಮಕಗಳನ್ನು ಅಥವಾ ಹುದ್ದೆಗಳನ್ನು ಮೀಸಲಿಡುವುದಕ್ಕಾಗಿ ಯಾವುದೇ ಉಪಬಂಧವನ್ನು ಮಾಡದಂತೆ ರಾಜ್ಯವನ್ನು ಪ್ರತಿಬಂಧಿಸತಕ್ಕದ್ದಲ್ಲ.
[(4a) ಈ ಅನುಚ್ಛೇದದಲ್ಲಿರುವುದು ಯಾವುದೂ, ರಾಜ್ಯದ ಅಧೀನದಲ್ಲಿರುವ ಸೇವೆಗಳಲ್ಲಿ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳವರು ಸಾಕಷ್ಟು ಪ್ರಾತಿನಿಧ್ಯವನ್ನು ಹೊಂದಿಲ್ಲವೆಂದು ರಾಜ್ಯವು ಅಭಿಪ್ರಾಯಪಟ್ಟಲ್ಲಿ, ರಾಜ್ಯದ ಅಧೀನದ ಸೇವೆಗಳಲ್ಲಿನ ಯಾವುದೇ ವರ್ಗದ ಅಥವಾ ವರ್ಗಗಳ ಹುದ್ದೆಗಳಿಗೆ, ತತ್ಪರಿಣಾಮದ ಜೇಷ್ಠತೆಯೊಂದಿಗೆ, ಬಡ್ತಿ ವಿಷಯದಲ್ಲಿ] ಅಂಥವರಿಗಾಗಿ ಮೀಸಲಾತಿಯ ಯಾವುದೇ ಉಪಬಂಧವನ್ನು ಮಾಡದಂತೆ ರಾಜ್ಯವನ್ನು ಪ್ರತಿಬಂಧಿಸತಕ್ಕದ್ದಲ್ಲ.]
[(4b) ಈ ಅನುಚ್ಛೇದದಲ್ಲಿ ಇರುವುದು ಯಾವುದೂ, ಒಂದು ವರ್ಷದಲ್ಲಿ, (4)ನೇ ಖಂಡದ ಅಥವಾ (4ಎ) ಖಂಡದ ಮೇರೆಗೆ ಮಾಡಿದ ಯಾವುದೇ ಮೀಸಲಾತಿ ಉಪಬಂಧಕ್ಕನುಸಾರವಾಗಿ, ಆ ವರ್ಷದಲ್ಲಿ ಭರ್ತಿ ಮಾಡುವುದಕ್ಕಾಗಿ ಯಾವುದೇ ಹುದ್ದೆಗಳನ್ನು ಮೀಸಲಾಗಿಟ್ಟಿದ್ದು, ಭರ್ತಿ ಮಾಡದೆ ಇರುವ ಆ ಹುದ್ದೆಗಳನ್ನು ಯಾವುದೇ ಮುಂಬರುವ ವರ್ಷದಲ್ಲಿ ಅಥವಾ ವರ್ಷಗಳಲ್ಲಿ ಭರ್ತಿ ಮಾಡಬೇಕಾದ ಪ್ರತ್ಯೇಕ ಹುದ್ದೆಗಳ ವರ್ಗವೆಂದು ಪರಿಗಣಿಸಲು ರಾಜ್ಯವನ್ನು ಪ್ರತಿಬಂಧಿಸತಕ್ಕದ್ದಲ್ಲ ಮತ್ತು ಅಂಥ ವರ್ಗದ ಖಾಲಿ ಹುದ್ದೆಗಳನ್ನು, ಯಾವ ವರ್ಷದಲ್ಲಿ ಅವುಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆಯೋ ಆ ವರ್ಷದಲ್ಲಿನ ಹುದ್ದೆಗಳೊಂದಿಗೆ, ಆ ವರ್ಷದ ಒಟ್ಟು ಸಂಖ್ಯೆಯ ಹುದ್ದೆಗಳ ಮೇಲಣ ಶೇ. 50ರ ಮೀಸಲಾತಿಯ ಪರಿಮಿತಿಯನ್ನು ನಿರ್ಧರಿಸುವಾಗ, ಗಣನೆಗೆ ತೆಗೆದುಕೊಳ್ಳತಕ್ಕದ್ದಲ್ಲ.]
(5) ಈ ಅನುಚ್ಛೇದದಲ್ಲಿ ಇರುವುದು ಯಾವುದೂ, ಯಾವುದೇ ಧಾರ್ಮಿಕ ಅಥವಾ ಸಾಂಪ್ರದಾಯಿಕ ಸಂಸ್ಥೆಯ ವ್ಯವಹಾರಗಳಿಗೆ ಸಂಬಂಧಪಟ್ಟ ಪದಧಾರಕನು ಅಥವಾ ಆ ಸಂಸ್ಥೆಯ ಕಾರ್ಯನಿರ್ವಾಹಕ ಮಂಡಳಿಯ ಯಾರೇ ಸದಸ್ಯನು ಒಂದು ನಿರ್ದಿಷ್ಟ ಧರ್ಮವನ್ನು ಒಪ್ಪಿಕೊಂಡವನಾಗಿರತಕ್ಕದ್ದು ಅಥವಾ ಒಂದು ನಿರ್ದಿಷ್ಟ ಸಂಪ್ರದಾಯಕ್ಕೆ ಸೇರಿದವನಾಗಿರತಕ್ಕದ್ದು ಎಂಬ ಉಪಬಂಧವನ್ನು ಮಾಡುವ ಯಾವುದೇ ಕಾನೂನಿನ ಜಾರಿಗೆ ಬಾಧಕವಾಗತಕ್ಕದ್ದಲ್ಲ.
[(6) ಈ ಅನುಚ್ಛೇದದಲ್ಲಿ ಇರುವುದು ಯಾವುದೂ, ಅಸ್ತಿತ್ವದಲ್ಲಿರುವ ಮೀಸಲಾತಿಗೆ ಹೆಚ್ಚುವರಿಯಾಗಿ, ಆದರೆ ಪ್ರತಿಯೊಂದು ಪ್ರವರ್ಗದಲ್ಲಿನ ಹುದ್ದೆಗಳಲ್ಲಿ ಗರಿಷ್ಠ ಶೇಕಡಾ ಹತ್ತರಷ್ಟಕ್ಕೆ ಒಳಪಟ್ಟು, (4)ನೇ ಖಂಡದಲ್ಲಿ ನಮೂದಿಸಲಾದ ವರ್ಗಗಳಲ್ಲದ, ಯಾವುದೇ ಆರ್ಥಿಕವಾಗಿ ದುರ್ಬಲವಾದ ನಾಗರಿಕರ ವರ್ಗಗಳಿಗೆ ನೇಮಕಾತಿಗಳಲ್ಲಿ ಅಥವಾ ಹುದ್ದೆಗಳಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಯಾವುದೇ ಉಪಬಂಧವನ್ನು ಮಾಡದಂತೆ ರಾಜ್ಯವನ್ನು ಪ್ರತಿಬಂಧಿಸತಕ್ಕದ್ದಲ್ಲ.]
17 . ಅಸ್ಪೃಶ್ಯತೆಯ ನಿರ್ಮೂಲನೆ .
“ಅಸ್ಪೃಶ್ಯತೆ”ಯನ್ನು ನಿರ್ಮೂಲನಗೊಳಿಸಲಾಗಿದೆ ಮತ್ತು ಯಾವುದೇ ರೂಪದಲ್ಲಿ ಅದರ ಆಚರಣೆಯನ್ನು ನಿಷೇಧಿಸಲಾಗಿದೆ. “ಅಸ್ಪೃಶ್ಯತೆ”ಯಿಂದ ಉದ್ಭವಿಸುವ ಯಾವುದೇ ಅಸಮರ್ಥತೆಯನ್ನು ಆಚರಣೆಗೆ ತರುವುದು ಕಾನೂನಿಗನುಸಾರವಾಗಿ ದಂಡನೀಯವಾದ ಅಪರಾಧವಾಗತಕ್ಕದ್ದು.
18 . ಬಿರುದುಗಳ ರದ್ದಿಯಾತಿ.
(1) ರಾಜ್ಯವು ಸೇನಾ ಅಥವಾ ವಿದ್ಯಾ ಸಂಬಂಧವಾದ ಪ್ರಶಸ್ತಿಯಲ್ಲದ ಯಾವುದೇ ಬಿರುದನ್ನು ಪ್ರಧಾನ ಮಾಡತಕ್ಕಡದಲ್ಲ.
(2) ಭಾರತದ ಯಾರೇ ನಾಗರಿಕನು ಯಾವುದೇ ವಿದೇಶಿ ರಾಜ್ಯದಿಂದ ಯಾವುದೇ ಬಿರುದನ್ನು ಸ್ವೀಕರಿಸತಕ್ಕದ್ದಲ್ಲ.
(3) ಭಾರತದ ನಾಗರಿಕನಲ್ಲದ ಯಾರೇ ವ್ಯಕ್ತಿಯು ರಾಜ್ಯದ ಅಧೀನದಲ್ಲಿನ ಯಾವುದೇ ಲಾಭದಾಯಕ ಅಥವಾ ನಂಬಿಕೆಯ ಪದದಲ್ಲಿರುವಾಗ ರಾಷ್ಟ್ರಪತಿಯ ಸಮ್ಮತಿಯಿಲ್ಲದೆ ಯಾವುದೇ ವಿದೇಶಿ ರಾಜ್ಯದಿಂದ ಯಾವುದೇ ಬಿರುದನ್ನು ಸ್ವೀಕರಿಸತಕ್ಕದ್ದಲ್ಲ.
(4) ರಾಜ್ಯದ ಅಧೀನದಲ್ಲಿನ ಯಾವುದೇ ಲಾಭದಾಯಕ ಅಥವಾ ನಂಬಿಕೆಯ ಪದದಲ್ಲಿರುವ ಯಾರೇ ವ್ಯಕ್ತಿಯು ರಾಷ್ಟ್ರಪತಿಯ ಸಮ್ಮತಿಯಿಲ್ಲದೆ ಯಾವುದೇ ವಿದೇಶಿ ರಾಜ್ಯದಿಂದ ಯಾವುದೇ ಪಾರಿತೋಷಕವನ್ನು, ಉಪಲಬ್ಬಿಯನ್ನು ಅಥವಾ ಯಾವುದೇ ವಿದೇಶಿ ರಾಜ್ಯದ ಅಧೀನದಲ್ಲಿನ ಯಾವುದೇ ವಿಧದ ಪದವನ್ನು ಸ್ವೀಕರಿಸತಕ್ಕದ್ದಲ್ಲ.
1 thought on “ಭಾರತೀಯ ಸಂವಿಧಾನದ ಮೂಲಭೂತ ಹಕ್ಕುಗಳು ವಿವರ. Indian constitution FUNDAMENTAL RIGHTS.( articles 12 to 18 )”